ಶಹಾಪುರ: ತಾಲ್ಲೂಕಿನ ರಸ್ತಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೌಡಿಶೀಟರ್ ಭಾಗಪ್ಪ ರಸ್ತಾಪುರ ಎಂಬ ಅತಿಥಿ ಶಿಕ್ಷಕನ ಪ್ರಕರಣದಿಂದ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕಾರಿಗಳು ಸದ್ಯ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ನಡತೆ ಪ್ರಮಾಣ ಪತ್ರವನ್ನು ಪಡೆಯಲು ಮುಂದಡಿ ಇಟ್ಟಿದ್ದಾರೆ.
‘ಸದ್ಯ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ಬಗ್ಗೆ ಮಾಹಿತಿ ಸಂಗ್ರಹಿಸುವುದು ಹಾಗೂ ಯಾವುದಾದರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಯಾಗಿದ್ದರೆ ಅದರ ಬಗ್ಗೆ ನಮೂದಿಸುವುದು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೆ ಸಂಪೂರ್ಣವಾದ ಮಾಹಿತಿಯನ್ನು ಆಯಾ ಪೊಲೀಸ್ ಠಾಣೆಯ ವ್ಯಾಪ್ತಿಯ ಅಧಿಕಾರಿಯಿಂದ ಪಡೆದುಕೊಂಡು ಸೇವೆ ಸಲ್ಲಿಸುತ್ತಿರುವ ಶಾಲಾ ಮುಖ್ಯಶಿಕ್ಷಕಗೆ ಪ್ರಮಾಣಪತ್ರ ನೀಡಬೇಕು ಎಂಬ ಷರತ್ತು ಹಾಕಲಾಗುತ್ತಿದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಉಂಟಾಗಿದ್ದರಿಂದ ಶಿಕ್ಷಕರ ವೃತ್ತಿ ತರಬೇತಿ ಪಡೆದ ಯುವಕರನ್ನು ಮೆರಿಟ್ ಆಧಾರದ ಮೇಲೆ ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದರಿಂದ ತಾಲ್ಲೂಕಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 444 ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳುವಾಗ ಪೂರ್ವಾನ್ವಯ ಷರತ್ತುಗಳನ್ನು ವಿಧಿಸದೆ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಆದರೆ ರೌಡಿಶೀಟರ್ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವುದು ಬೆಳಕಿಗೆ ಬಂದ ತಕ್ಷಣ ಶಿಕ್ಷಣ ಇಲಾಖೆ ಮುಜುಗರಕ್ಕೆ ಒಳಪಟ್ಟಿದೆ. ‘ಮಕ್ಕಳ ಸಂರಕ್ಷಣೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆಯು ಪಾಲಕರ ಆತಂಕವನ್ನು ಹೋಗಲಾಡಿಸಬೇಕು’ ಎಂದು ಬಿಜೆಪಿಯ ಹಿರಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.
‘ರೌಡಿಶೀಟರ್ ಸ್ಥಳೀಯ ಪತ್ರಿಕೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸುತ್ತಿರುವುದು ಪೊಲೀಸ್ ಇಲಾಖೆ ಗಮನಕ್ಕೆ ಬಂದ ತಕ್ಷಣ ತಾಲ್ಲೂಕಿನ ಪತ್ರಕರ್ತರ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಶುರುವಾಗಿದೆ. ಅಲ್ಲದೆ ನಕಲಿ ಪತ್ರಕರ್ತರ ಹಾವಳಿಯೂ ಹೆಚ್ಚಾದ ಬಗ್ಗೆ ವಿವಿಧ ಇಲಾಖೆಯಿಂದ ದೂರು ಕೇಳಿ ಬರುತ್ತಲಿವೆ. ಸಾರ್ವಜನಿಕ ಕೆಲಸಗಳಿಗೆ ಅಡ್ಡಿಪಡಿಸಿದ ಬಗ್ಗೆ ನೊಂದವರು ದೂರು ಸಲ್ಲಿಸಿದರೆ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಶಹಾಪುರ ಠಾಣೆಯ ಪಿ.ಐ ಎಸ್.ಎಂ.ಪಾಟೀಲ ತಿಳಿಸಿದರು.
ತಾಲ್ಲೂಕಿನಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿದ ಪತ್ರಕರ್ತರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನಕಲಿ ಪತ್ರಕರ್ತರು ಸಾರ್ವಜನಿಕ ಕಚೇರಿಗಳಿಗ ತೆರಳಿ ತೊಂದರೆ ನೀಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು–ಎಸ್.ಎಂ.ಪಾಟೀಲ ಪಿ.ಐ ಶಹಾಪುರ ಠಾಣೆ
ಅತಿಥಿ ಶಿಕ್ಷಕರ ನಡತೆ ಪ್ರಮಾಣಪತ್ರವನ್ನು ಆಯಾ ಠಾಣಾ ವ್ಯಾಪ್ತಿಯ ಪೊಲೀಸರಿಂದ ಪಡೆದುಕೊಳ್ಳಲು ಮುಖ್ಯಶಿಕ್ಷಕರಿಗೆ ಸೂಚಿಸುವ ಕುರಿತು ಗುರುವಾರ ಸಭೆ ನಡೆಯಲಿದೆ–ಜಾಹೇದಾ ಬೇಗಂ ಬಿಇಒ ಶಹಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.