ಯಾದಗಿರಿ: ‘ಸರ್ಕಾರದಿಂದ ಸಿದ್ದಗೊಂಡಿರುವ ಜನಗಣತಿ ವರದಿ ಪೂರಕವಾಗಿಲ್ಲ. ನಮ್ಮ ಸಮಾಜದವರು ಕೇವಲ 50 ಲಕ್ಷ ಜನರು ಇದ್ದೇವೆ ಎಂದು ಅದರಲ್ಲಿ ತೋರಿಸಲಾಗಿದೆ ಎಂಬ ಮಾಹಿತಿ ಇದೆ. ಮಹಾಸಭಾದಿಂದಲೇ ಜನಗಣತಿ ಆರಂಭಿಸಿ ಕೇವಲ ಮೂರು ತಿಂಗಳಲ್ಲಿ ಎಷ್ಟು ಜನರಿದ್ದೇವೆ ಎಂಬ ವರದಿ ಸಲ್ಲಿಸುತ್ತೇವೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.
ನಗರದ ಚಿತ್ತಾಪುರ ರಸ್ತೆಯಲ್ಲಿನ ಸಪ್ತಪದಿ ಕನ್ವೆಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಎಂದು ಜಗದ್ಗುರುಗಳು ಮತ್ತು ಸ್ವಾಮೀಜಿಗಳು ಹೇಳಿದ್ದಾರೆ. ಇದಕ್ಕೆ ಗೊಂದಲ ಬೇಡ, ವಿವಿಧ ಕಾಯಕ ಮಾಡುವ ಅನೇಕ ಸಣ್ಣ, ಸಣ್ಣ ಸಮುದಾಯಗಳು ಇವೆ. ಯಾವುದೇ ಲಾಭಕ್ಕಾಗಿ ಬೇರೆ ಎಂದು ಎಲ್ಲೂ ಬರೆಯಿಸಬೇಡಿ ಎಂದು ಹೇಳಿದರು.
ಬಸವಣ್ಣನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಎಲ್ಲ ತಾಲ್ಲೂಕುಗಳಲ್ಲಿ ನಮ್ಮ ಘಟಕ ಮಾಡಬೇಕು. ಪ್ರತಿ ಜಿಲ್ಲೆಯಿಂದ ಸಮಾಜದ ಗಣ್ಯರು ತಮ್ಮ ವಾರ್ಷಿಕ ಉತ್ಪಾದನೆ ಶೇ 2 ರಷ್ಟು ಹಣ ಸಮಾಜಕ್ಕೆ ನೀಡಬೇಕು. ಹೀಗೆ ಪ್ರತಿ ಜಿಲ್ಲೆಯಲ್ಲೂ ಸುಮಾರು ₹10 ಕೋಟಿ ಸಂಗ್ರಹಿಸಿ ಅದು ಬ್ಯಾಂಕ್‌ನಲ್ಲಿ ಠೇವಣಿ ಮಾಡಿ ಅದರಿಂದ ಬರುವ ಒಂದು ಕೋಟಿ ಬಡ್ಡಿ ಹಣದಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬಳಸಬೇಕು. ಸಮಾಜಕ್ಕಾಗಿ ದಾನ ಮಾಡಿ. ನೂತನ ಪದಾಧಿಕಾರಿಗಳು ಮಂದಿನ ಐದು ವರ್ಷ ಉತ್ತಮ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ತಾಲ್ಲೂಕು ಘಟಕದಲ್ಲಿಯೇ ಶೇ 80 ಹಣ ಇಟ್ಟುಕೊಂಡು, ಉಳಿದ ಶೇ 20ರಷ್ಡು ಹಣದಲ್ಲಿ ಜಿಲ್ಲಾ ಮತ್ತು ರಾಜ್ಯ ಘಟಕಕ್ಕೆ ತಲಾ ಶೇ7.5 ಹಾಗೂ ಉಳಿದ ಶೇ5 ರಷ್ಟು ಕೇಂದ್ರ ಸಮಿತಿಗೆ ಕಳುಹಿಸಬೇಕೆಂಬ ನಿಯಮಗಳು ಮಾಡಲಾಗಿದೆ ಎಂದರು.
ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಮಾತನಾಡಿ, ‘ಸಮಾಜದ ಬಗ್ಗೆ ಕರೆ ಕೊಟ್ಟಾಗ ಒಗ್ಗಟ್ಟಾಗಿ ಕೆಲಸ ಮಾಡಿದರೆ ಎಲ್ಲ ಸೌಲಭ್ಯ ಸಿಗುತ್ತದೆ. ಸಮಾಜದ ಬಗ್ಗೆ ಒಳ್ಳೆ ಭಾವನೆ ಬರಲಿ. ನಮ್ಮದು ಎತ್ತರದ ಸಮಾಜ’ ಎಂದು ಹೇಳಿದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಜಿಲ್ಲೆಯಲ್ಲಿ ಲಕ್ಷಾಂತರ ಜನರು ಸಮಾಜದವರು ಇದ್ದೇವೆ. ಆದರೆ, ಕೇವಲ ಎರಡು ಸಾವಿರ ಸದಸ್ವತ್ವ ಇದೆ. ನೂತನ ಪದಾಧಿಕಾರಿಗಳು ಪ್ರತಿ ತಾಲ್ಲೂಕಿನಲ್ಲಿ ₹25 ಸಾವಿರ ಸದಸ್ಯತ್ವ ಮಾಡಬೇಕು. ಪದಾಧಿಕಾರಿಗಳು ಮೊದಲು ದಾನಿಗಳಾಗಿ. ನಂತರ ಹಳ್ಳಿಹಳ್ಳಿಗಳಿಗೆ ಹೋಗಿ ಅಭಿಯಾನ ಮಾಡಿ ಎಂದರು.
ಜಿಲ್ಲಾ ಕೇಂದ್ರವಾದ ಯಾದಗಿರಿ ನಗರದಲ್ಲಿ ಬಸವೇಶ್ವರ ಮೂರ್ತಿ ಸ್ಥಾಪನೆಗೆ ಸಚಿವರು, ಶಾಸಕರಿಗೆ ಒತ್ತಾಯಿಸಿದ್ದೇನೆ. ಜಗತ್ತಿಗೆ ಸಂಸತ್ ಕಲ್ಪನೆ, ಅಕ್ಷರ, ಅನ್ನ ದಾಸೋಹ ಕಲ್ಪನೆ ಕೊಟ್ಟಿಟ್ಟವರು ನಮ್ಮ ಸಮಾಜದವರು ಎಂದರು.
ಇದಕ್ಕೂ ಮುನ್ನ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ನೇತೃತ್ವದಲ್ಲಿ ಪ್ರಮುಖ ನಾಲ್ಕು ಬೇಡಿಕೆಗಳ ಮನವಿಯನ್ನು ಸಚಿವ, ಶಾಸಕರಿಗೆ ಸಲ್ಲಿಸಲಾಯಿತು.
ಅಬ್ಬೆತುಮಕೂರು ವಿಶ್ವಾರಾಧ್ಯರ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ, ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಹೆಡಗಿಮದ್ರಾ ಶಾಂತಶಿವಯೋಗಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು.
ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ಪಾಟೀಲ ಚಾಮನಹಳ್ಳಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುರೇಶ ಜಾಕಾ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ವಿವಿಧ ತಾಲ್ಲೂಕಿನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಿದ್ದರಾಜರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ದಿ.ವೆಂಕಟರೆಡ್ಡಿ ಮುದ್ನಾಳ ಅವರಿಗೆ ಶ್ರದ್ಧಾಂಜಲಿ ಮತ್ತು ಅವರ ಪುತ್ರನ ಹೆಸರನ್ನು ಕೈಬಿಟ್ಟಿದ್ದರಿಂದ ಅವರ ಅಭಿಮಾನಿಗಳು ವೇದಿಕೆಯಲ್ಲಿ ಬಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಎಸ್.ಬಿ.ಪಾಟೀಲ, ಶರಣಪ್ಪಗೌಡ ಮಲ್ಹಾರ, ರಾಚನಗೌಡ ಮುದ್ನಾಳ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ಬಸವರಾಜ ಜೈನ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಮಹಾಸಭಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪಾರ್ವತಿ ಕರೆಡ್ಡಿ ಮಲ್ಹಾರ, ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ, ಮಹಾಸಭಾದ ನಿಕಟಪೂರ್ವ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಮಣ್ಣೂರ, ನಿಕಟಪೂರ್ವ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಮಹಾದೇವಪ್ಪ ಅಬ್ಬೆತುಮಕೂರು, ಮಹಾಸಭಾ ಶಹಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಣ್ಣ ಆರಬೋಳ, ಸುರಪುರ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ, ಕೋಶಾಧ್ಯಕ್ಷ ಬಸನಗೌಡ ಕನ್ಯಾಕೋಳೂರ, ಅನ್ನಪೂರ್ಣ ಜವಳಿ, ವೀರಭದ್ರಪ್ಪ ಮೋಟಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ವೀರಶೈವ ಲಿಂಗಾಯತ ಸಮಾಜವನ್ನು ಕೇಂದ್ರ ಸರ್ಕಾರ ಹಿಂದುಳಿದ ಸಮಾಜ ಎಂದು ಘೋಷಿಸುವ ಮೂಲಕ ಸೌಲಭ್ಯ ಕಲ್ಪಿಸಿ ಕೊಡಬೇಕುಶಂಕರ ಎಂ ಬಿದರಿ ರಾಜ್ಯ ಘಟಕದ ಅಧ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ
ಜಾತಿ ಜನಗಣತಿಗಾಗಿ ಅಧಿಕಾರಿ ಸಿಬ್ಬಂದಿ ಯಾರೂ ಬಂದಿಲ್ಲ. ಹೀಗಾಗಿ ಇದು ಒಪ್ಪತಕ್ಕದಲ್ಲ. ಮುಂದಿನ ಬಾರಿ ಎಲ್ಲರೂ ವೀರಶೈವ ಲಿಂಗಾಯತ ಎಂದು ಬರೆಯಿಸಿ. ಎಲ್ಲರೂ ಒಗ್ಗಟ್ಟಿನಿಂದ ಇರೋಣಚನ್ನಾರೆಡ್ಡಿ ಪಾಟೀಲ ತುನ್ನೂರ ಯಾದಗಿರಿ ಶಾಸಕ
‘ಸಮಾಜದ ಸಂಘಟನೆ ಅವಶ್ಯ’
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ ಮೊದಲು ನಮ್ಮ ಸಮಾಜದವರಲ್ಲಿ 200-300 ಎಕರೆ ಇತ್ತು. ಈಗ 2-3 ಎಕರೆಗೆ ಬಂದು ನಿಂತಿದ್ದೇವೆ. ಹೀಗಾಗಿ ಶಿಕ್ಷಣ ಅವಶ್ಯ. ಇದರ ಜತೆ ಸಮಾಜದ ಸಂಘಟನೆ ಅಗತ್ಯ ಎಂದು ಹೇಳಿದರು. ಸಂಘಟನೆ ಬಗ್ಗೆ ಚಿಂತನೆ ಮಾಡಬೇಕು. ಕುಳಿತು ಚರ್ಚೆ ಆಗಬೇಕು. ತನು ಮನದಿಂದ ಸಂಘಟನೆ ಮಾಡಬೇಕು. ಬಡ ವಿದ್ಯಾರ್ಥಿಗಳಿಗೆ ರಾಜ್ಯ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿ ವಸತಿ ನಿಲಯಬೇಕು. ಹಲವರು ಲಿಂಗಾಯತ ಜಾತಿ ಬರೆಸಿಲ್ಲ. ಜನಸಂಖ್ಯೆ ಹೆಚ್ಚಿದ್ದರೂ ಹರಿದು ಹಂಚಿ ಹೋಗಿದ್ದೇವೆ. ರೆಡ್ಡಿ ಬಣಜಿಗ ಹೀಗೆ ಬೇರೆ ಬೇರೆ ಮಾಡಿದ್ದೇವೆ. ಜಿಲ್ಲಾ ಪದಾಧಿಕಾರಿಗಳು ನೀಡಿರುವ ನಾಲ್ಕು ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು. ಬಸವೇಶ್ವರ ಮೂರ್ತಿ ಸ್ಥಾಪನೆಗೆ ನಾನು ಸೇರಿದಂತೆಯೇ ಶಾಸಕರಾದ ಚನ್ನಾರಡ್ಡಿ ಪಾಟೀಲ ಶರಣಗೌಡ ಕಂದಕೂರ ಮತ್ತು ಸಮಾಜದ ಪ್ರಮುಖರು ಮಾತನಾಡಿಕೊಂಡಿದ್ದೇವೆ. ಸಮಾಜದ ಸಮುದಾಯ ಭವನ ಹಾಸ್ಟೆಲ್ ಸೌಲಭ್ಯಕ್ಕಾಗಿ ಎರಡು ಎಕರೆ ಬೇಕು. ದಾನಿಗಳು ಮುಂದೆ ಬರಬೇಕು. ಯಾದಗಿರಿಯ ರಾಚೋಟಿ ವೀರಣ್ಣ ದೇವಸ್ಥಾನ ಜಾಗ ಒತ್ತುವರಿ ತಡೆಯಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.