ಯಾದಗಿರಿ: ‘ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರು ನಮ್ಮೆಲ್ಲರಿಗೂ ಮಾದರಿ. ಅವರ ಆದರ್ಶಗಳನ್ನು ಪಾಲಿಸಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸೋಮಶೇಖರ ಮಣ್ಣೂರ ಅಭಿಪ್ರಾಯಪಟ್ಟರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ವೀರಶೈವ ಸಮಾಜ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ತ್ರಿವಿಧ ದಾಸೋಹದ ಮೂಲಕ ಮನೆಮಾತಾಗಿದ್ದಾರೆ. ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿದ್ದಾರೆ. ಸಾವಿರಾರು ಮಕ್ಕಳಿಗೆ ನೆರವಾಗಿದ್ದಾರೆ. ಹೀಗಾಗಿ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು. ಹಾಗಾದರೆ ಮಾತ್ರ ಅವರ ಜಯಂತಿಗೆ ಅರ್ಥ ಬರುತ್ತದೆ ಎಂದರು.
ಸ್ವಾಮೀಜಿಗಳು ತಮ್ಮ ಜೀವಮಾನದುದ್ದಕ್ಕೂ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ಮಾರ್ಗದಲ್ಲಿ ನಾವು ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ,‘ಸಿದ್ಧಗಂಗಾ ಶ್ರೀಗಳು ಅನ್ನ, ಅಕ್ಷರದ ಮೂಲಕ ಸಾವಿರಾರು ಮಕ್ಕಳ ಬದುಕಿಗೆ ನೆರವಾಗಿದ್ದಾರೆ. ಅವರ ಮೂಲಕ ಅನೇಕರು ಪ್ರೇರಣೆ ಪಡೆದಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳ ಮಠದ ಭಕ್ತರ ವಿದ್ಯಾರ್ಥಿಗಳು ಇದ್ದಾರೆ’ ಎಂದರು.
ವೀರಶೈವ ಸಮಾಜದ ನಗರ ಘಟಕದ ಅಧ್ಯಕ್ಷ ಹುಂಡೇಕರ್, ಜಿಲ್ಲಾ ಘಟಕದ ಉಪಾಧ್ಯಕ್ಷ ಮಹೇಶ್ ಆನೆಗೊಂದಿ, ಅನ್ನಪೂರ್ಣ ಜವಳಿ, ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಮಹಾದೇವಪ್ಪ ಅಬ್ಬೆತುಮಕೂರು, ಡಾ.ಸುಭಾಶ್ಚಂದ್ರ ಕೌಲಗಿ, ವೀರಭದ್ರಯ್ಯ ಜಾಕಾಮಠ, ಮಹೇಶ್ ಹಿರೇಮಠ, ರಾಜು ಶಾಸ್ತ್ರಿ, ಬಸಯ್ಯಸ್ವಾಮಿ ಗವಿಮಠ, ನೂರಂದಪ್ಪ ಲೇವಡಿ, ಬಸವರಾಜ ಪಾಟೀಲ, ಬಸವರಾಜ್ ಮಗದಂಪುರ, ಸುಭಾಷ್ ರೆಡ್ಡಿ ಯಡ್ಡಳ್ಳಿ ಹಾಗೂ ಮಲ್ಲು ಅರಳಿಕಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.