ಯಾದಗಿರಿ: ತಾಲ್ಲೂಕಿನ ಮೈಲಾಪುರ ಗ್ರಾಮದ ಹೊರವಲಯದಲ್ಲಿ ಚಿರತೆ ದಾಳಿ ಮಾಡಿ, ಒಂದು ವರ್ಷದ ಆಕಳ ಕರುವನ್ನು ಬಲಿ ಪಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಲ್ಲಪ್ಪ ಗುಡ್ಡೇರ್ ಅವರಿಗೆ ಸೇರಿದ ಕರುವನ್ನು ಚಿರತೆ ಹೊತ್ತೊಯ್ದು ಕೊಂದು ಹಾಕಿದೆ ಎಂದು ಗ್ರಾಮಸ್ಥ ಗುರು ಮೈಲಾಪುರ ತಿಳಿಸಿದ್ದಾರೆ.
ಜಮೀನನಲ್ಲಿ 10–12 ಆಕಳುಗಳಿದ್ದು, ಅದರಲ್ಲಿ ಒಂದು ಕರುವನ್ನು ಚಿರತೆ ಹೊತ್ತಿಯ್ದಿದೆ. ಕರುವಿನ ಒಂದು ಭಾಗವನ್ನು ತಿಂದು ಹಾಕಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
‘ಗ್ರಾಮದಲ್ಲಿ 6 ತಿಂಗಳಿಂದಲೂ ಚಿರತೆ ಕಾಟವಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ರಾತ್ರಿವೇಳೆ ತೋಟಗಳಿಗೆ ನೀರು ಹರಿಸಲು ಗ್ರಾಮಸ್ಥರು ಭಯಪಡುವಂತಾಗಿದೆ. ಕಳೆದ ಬಾರಿ ಎಮ್ಮೆ, ನಾಯಿಯನ್ನು ಚಿರತೆ ಬಲಿ ಪಡೆದಿತ್ತು. ಪಿಡಿಒ ಸೇರಿದಂತೆ ಅಧಿಕಾರಿಗಳು ಬಂದು ಹೋಗಿದ್ದರು. ಮತ್ತೆ ಈಗ ಚಿರತೆ ಭಯ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ’ ಎಂದು ಗ್ರಾಮದ ನಿವಾಸಿಗಳು ತಿಳಿಸಿದರು.
ಈ ಬಗ್ಗೆ ಮಾಹಿತಿ ಪಡೆಯಲು ಅರಣ್ಯ ಪ್ರಾದೇಶಿಕ ಉಪ ಸಂರಕ್ಷಣಾಧಿಕಾರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.