ವಡಗೇರಾ: ಪಾಲಕರು, ಪೋಷಕರು ಹಾಗೂ ಸಮುದಾಯದ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ವಡಗೇರಾ ಗ್ರೇಡ್-2 ತಹಶೀಲ್ದಾರ್ ಪ್ರಕಾಶ ಹೊಸಮನಿ ಹೇಳಿದರು.
ವಡಗೇರಾ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಯಾದಗಿರಿ ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಸೊಸೈಟಿ ಮತ್ತು ಪುನರ್ವಸತಿ ಸಂಸ್ಥೆಯು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಒಂದು ಹೆಜ್ಜೆ’ ಎಂಬ ಹೆಸರಿನಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕಾರ್ಯಕಾರಿ ಸಮಿತಿ ಹಾಗೂ ತಾಲ್ಲೂಕು ಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
2024ರ ಅಕ್ಟೋಬರ್ 21ರಿಂದ ನವೆಂಬರ್20ರವರೆಗೆ ರಕ್ಷಣಾ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ, ಜಿಲ್ಲೆ ಮತ್ತು ತಾಲ್ಲೂಕನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನ-ಜಾಗೃತಿ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮ ಮೂಡಿಸಲಾಗುತ್ತಿದೆ. ಆದರೂ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿರುವುದು ಖಂಡಿನಿಯ ಎಂದರು.
ಒಂದು ವೇಳೆ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೆಮಿಸಿಕೊಂಡರೆ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ನಂತರ ವಡಗೇರಾ ಪಟ್ಟಣದಲ್ಲಿ ಇರುವ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳು, ಸಂಸ್ಥೆಗಳು, ಗ್ಯಾರೇಜ್ ಮತ್ತು ಹೊಟೇಲ್‌ಗಳಲ್ಲಿ ತಪಾಸಣೆ ನಡೆಸಿ, ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ ಮಕ್ಕಳನ್ನುಕೆಲಸಕ್ಕೆ ನೇಮಿಸಿಕೊಳ್ಳದಂತೆ ಭಿತ್ತಿಪತ್ರಗಳನ್ನು ಅಂಟಿಲಾಯಿತು.
ಉಪ ತಹಶೀಲ್ದಾರ್ ಸಂಗಮೇಶ ದೇಸಾಯಿ, ಶಿರಸ್ತೆದಾರ ಎಂ.ಪಿ ರಾಮುಲು, ಮಕ್ಕಳ ರಕ್ಷಣಾ ಘಟಕದ ತ್ರಿಶೂಲ್, ಮಕ್ಕಳ ರಕ್ಷಣ ಘಟಕ 1098ನ ಸಿಬ್ಬಂದಿ ವೆಂಕಟೇಶ, ಮಾರ್ಗದರ್ಶಿ ಸಂಸ್ಥೆಯ ಸಿಬ್ಬಂದಿಗಳಾದ ಬುಸೇನಿ ಬಸು, ಚನ್ನಮ್ಮ ಎಸ್, ಕಾರ್ಮಿಕ ಇಲಾಖೆಯ ಅಮೃತ್‌ರಾವ್ ಕೊತ್ವಾಲ್ ಹಾಗೂ ಇನ್ನಿತರರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.