ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಮೆಣಸಿನಕಾ ಯಿ ಅನ್ನು ಮಾರಾಟಕ್ಕೆ ತೆಗೆದುಕೊಂಡು ತೆರಳಬೇಕು ಎನ್ನುವಷ್ಟದರಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಇದರಿಂದ ಧಾರಣೆ ಕುಸಿತವಾಗಿದೆ. ರೈತರು ಅನಿವಾರ್ಯವಾಗಿ ಮಾರು ಕಟ್ಟೆಗೆ ತರೆದೆ ಶೈತ್ಯಾಗಾರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.
25 ದಿನದ ಹಿಂದೆ ಮೆಣಸಿನಕಾಯಿಯ ಗುಂಟೂರ ತಳಿಯ ಬೆಲೆ ₹10ರಿಂದ11 ಸಾವಿರ ಇತ್ತು. ಈಗ ₹7ರಿಂದ 8ಸಾವಿರಕ್ಕೆ ಕುಸಿತವಾಗಿದೆ. ಅಲ್ಲದೆ ಬ್ಯಾಡಗಿ ಮೆಣಸಿನಕಾಯಿ ಬೆಲೆ ₹24 ಸಾವಿರ ಇತ್ತು. ಈಗ ₹17 ಸಾವಿರಕ್ಕೆ ಕುಸಿತವಾಗಿದೆ. ಅದರಲ್ಲಿ ಎರಡನೇಯ ಅವಧಿಯಲ್ಲಿ ಬಂದಿರುವ ಮೆಣಸಿನಕಾಯಿ ಬೆಲೆ ಮತ್ತಷ್ಟು ಕುಸಿತವಾಗಿದೆ. ಸಂಗ್ರಹಿಸಿ ಇಟ್ಟಿರುವ ಮೆಣಸಿನಕಾಯಿ ಮಾರಾಟ ಮಾಡುವುದು ಸವಾಲಾಗಿದೆ. ಅಕಾಲಿಕ ಮಳೆ ಹಾಗೂ ಗುಡುಗು, ಸಿಡಿಲಿನ ಅಬ್ಬರದಿಂದ ರೈತರಲ್ಲಿ ಆತಂಕ ಮೂಡಿದೆ.
‘ಮಳೆಯಲ್ಲಿಯೆ ನೆನೆಯುತ್ತಾ ಮೆಣಸಿನಕಾಯಿಗೆ ಹೊದಿಕೆ ಹಾಕಿ ಮುಚ್ಚುತ್ತಿರುವೆ. ಕೊಳೆಯುವ ಭೀತಿ ಎದುರಾಗಿದೆ. ಎಕರೆಗೆ ಅಂದಾಜು ₹1 ಲಕ್ಷ ವೆಚ್ಚ ಮಾಡಿದ್ದೇವೆ. ಪ್ರಸಕ್ತ ಬಾರಿ ಇಳುವರಿ ಅಷ್ಟಾಗಿ ಬಂದಿಲ್ಲ. ಎಕರೆಗೆ 17ರಿಂದ18 ಕ್ವಿಂಟಾಲ್ ಬಂದಿದೆ. ಕೂಲಿ ಬೆಲೆಯು ಜಾಸ್ತಿ ಮಾಡಿದ್ದಾರೆ ₹ 200 ನಿಗದಿಪಡಿಸಿದ್ದಾರೆ. ಈಗ ಬೆಲೆ ಕುಸಿತ ಮೊತ್ತೊಂದು ಹೊಡೆತ ನಮ್ಮ ಮೇಲೆ ಬಿದ್ದಿರುವುದರಿಂದ ನಮ್ಮ ಕಣ್ಣಲ್ಲಿ ನೀರು ಬರುತ್ತಲಿದೆ’ ಎನ್ನುತ್ತಾರೆ ಮದ್ರಿಕಿ ಗ್ರಾಮದ ರೈತ ಮಹ್ಮದ ಚಾಂದಪಾಶ.
ಬೆಲೆ ಕುಸಿತವಾಗುತ್ತಿದ್ದಂತೆ ಜೇವರ್ಗಿ, ದೇವದುರ್ಗ, ಸುರಪುರ, ಶಹಾಪುರ, ಸಿಂದಗಿ ಮುಂತಾದ ಕಡೆಯಿಂದ ರೈತರು ಶೈತ್ಯಾಗಾರಕ್ಕೆ ಲಾರಿ, ಟ್ರ್ಯಾಕ್ಟರ್ ತೆಗೆದುಕೊಂಡು ಸರದಿಯಲ್ಲಿ ನಿಲ್ಲುವಂತೆ ಆಗಿದೆ. ಒಂದು ಚೀಲಕ್ಕೆ ₹180 ನಿಗದಿ ಮಾಡಿದ್ದಾರೆ. ಅನಿವಾರ್ಯವಾಗಿ ಇಡಬೇಕು. ಇಲ್ಲದೆ ಹೋದರೆ ನಷ್ಟ ಅನುಭವಿಸಬೇಕು’ ಎನ್ನುತ್ತಾರೆ ರೈತರೊಬ್ಬರು.
ಮೆಣಸಿಕಾಯಿ ಬೆಳೆಯುತ್ತೇವೆ. ಮಾರಾಟ ಮಾಡಲು ಮಾರುಕಟ್ಟೆ ಇಲ್ಲ. ಅನಿವಾರ್ಯವಾಗಿ ಕಲಬುರ್ಗಿ, ಬ್ಯಾಡಗಿ, ಗುಂಟೂರಿಗೆ ತೆಗೆದುಕೊಂಡು ಹೋಗಬೇಕು. ಇಂತಹ ಸಂಕಷ್ಟದಲ್ಲಿ ಸಾಗಾಣಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ರೈತರ ನೆರವಿಗೆ ಸರ್ಕಾರ ಆಗಮಿಸಬೇಕು ಹಾಗೂ ಎಪಿಎಂಸಿಯಲ್ಲಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.