ADVERTISEMENT

ಗುರುಮಠಕಲ್‌ ಮತಕ್ಷೇತ್ರದಲ್ಲಿ ಮೊಟ್ಟ ಮೊದಲು ಬಾರಿಗೆ ಪ್ರಬಲ ತ್ರಿಕೋನ ಸ್ಪರ್ಧೆ

ಗುರುಮಠಕಲ್‌ ಮತಕ್ಷೇತ್ರದಲ್ಲಿ ಅನುಕಂಪ, ಅಭಿವೃದ್ಧಿ, ಮಹಿಳಾ ಪ್ರಾತಿನಿಧ್ಯವೋ?

​ಪ್ರಜಾವಾಣಿ ವಾರ್ತೆ
Published 2 ಮೇ 2023, 5:27 IST
Last Updated 2 ಮೇ 2023, 5:27 IST
ಯಾದಗಿರಿ ಜಿಲ್ಲೆಯ ನಕ್ಷೆ
ಯಾದಗಿರಿ ಜಿಲ್ಲೆಯ ನಕ್ಷೆ   

ಬಿ.ಜಿ. ಪ್ರವೀಣಕುಮಾರ

ಯಾದಗಿರಿ: 1962ರಲ್ಲಿ ಅಸ್ತಿತ್ವಕ್ಕೆ ಬಂದ ಗುರುಮಠಕಲ್ ಮತಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆ ಪ್ರಬಲವಾಗಿ ಮೂಡಿ ಬಂದಿದೆ.

ಕಳೆದ ಎರಡ್ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮಧ್ಯೆ ನೇರಾ ನೇರ ಹಣಾಹಣಿ ಇತ್ತು. ಈ ಬಾರಿ ಬಿಜೆಪಿಯಿಂದ ಕೋಲಿ ಸಮಾಜದ ಮಹಿಳೆಗೆ ಅವಕಾಶ ನೀಡಿದ್ದರಿಂದ ಜಿದ್ದಾಜಿದ್ದಿಯಾಗಿದೆ. ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಈ ಬಾರಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಮೂರು ಪಕ್ಷಗಳಲ್ಲಿ ವಿವಿಧ ವಿಷಯಗಳು ಪ್ರಚಲಿತಕ್ಕೆ ಬಂದಿವೆ.

ADVERTISEMENT

ಸದ್ಯ ಜೆಡಿಎಸ್‌ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಕಾಂಗ್ರೆಸ್‌ ಮರು ವಶಪಡಿಸಿಕೊಳ್ಳಲು ಹವಹಣಿಸುತ್ತಿದ್ದರೆ, ಕಮಲ ಪಾಳೆಯ ಖಾತೆ ತೆಗೆದು ಇತಿಹಾಸ ನಿರ್ಮಿಸಲು ಪಣ ತೊಟ್ಟಿದೆ. ಮತ್ತೊಮ್ಮೆ ತೆನೆ ಹೊತ್ತ ಮಹಿಳೆಯನ್ನು ಗೆಲ್ಲಿಸಲು ಜೆಡಿಎಸ್‌ ಪ್ರಬಲ ಹೋರಾಟ ನಡೆಸುತ್ತಿದೆ. ಕ್ಷೇತ್ರದಲ್ಲಿ ಇಲ್ಲಿಯವರೆಗೆ ನಡೆದಿರುವ 13 ಚುನಾವಣೆಗಳಲ್ಲಿ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ. 11 ಬಾರಿ ಕಾಂಗ್ರೆಸ್‌, 1 ಬಾರಿ ಜೆಡಿಎಸ್‌ ಗೆದ್ದಿದ್ದರೆ, 1962ರಲ್ಲಿ ಸ್ವತಂತ್ರ ಪಕ್ಷ ಅಧಿಕಾರಕ್ಕೆ ಬಂದಿತ್ತು.

ಜೆಡಿಎಸ್‌ ಅಭ್ಯರ್ಥಿ ಶರಣಗೌಡ ಕಂದಕೂರ, ತಮ್ಮ ತಂದೆ ಶಾಸಕ ನಾಗನಗೌಡ ಕಂದಕೂರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದಲೇ ಕ್ಷೇತ್ರ ಪರ್ಯಟನೆ ನಡೆಸಿರುವ ಕಂದಕೂರು, ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ತಂದೆಯ ಪರವಾಗಿ ಯರಗೋಳದಿಂದ ಸೈದಾಪುರ ವರೆಗೆ ಪಾದಯಾತ್ರೆ ಮಾಡಿ ತಂದೆಯವರನ್ನು ಗೆಲ್ಲಿಸಿದ್ದರೆ, ಈ ಬಾರಿ ಮಗನ ಪರವಾಗಿ ತಂದೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ತಂದೆ ಸಾಕಷ್ಟು ಅನುದಾನ ತಂದಿದ್ದು, ಈ ಬಾರಿ ತಮ್ಮನ್ನು ಆಯ್ಕೆ ಮಾಡಿದರೆ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಮಾಡುತ್ತೇನೆ. ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳು ಹೊರಗಿನವರು, ನಾನು ಸ್ಥಳೀಯ ನಿವಾಸಿಯಾಗಿದ್ದು, ಸ್ಥಳೀಯರಿಗೆ ಅವಕಾಶ ನೀಡಿ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್‌ ಟಿಕೆಟ್ ಗಿಟ್ಟಿಸಿಕೊಂಡಿರುವ ಮಾಜಿ ಸಚಿವ ಬಾಬುರಾವ ಚಿಂಚನಸೂರ ಕೆಲ ದಿನಗಳ ಹಿಂದೆ ಅಪಘಾತವಾಗಿ ಆಸ್ಪತ್ರೆಯಲ್ಲಿದ್ದರು. ಈಚೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮೇ 4ರಂದು ಕ್ಷೇತ್ರಕ್ಕೆ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಐಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಚಿಂಚನಸೂರ ಪರ ಪ್ರಚಾರಕ್ಕೆ ಆಗಮಿಸುತ್ತಾರೆ ಎನ್ನುವ ಮಾತುಗಳು ಕ್ಷೇತ್ರಗಳಲ್ಲಿ ಕೇಳಿ ಬರುತ್ತಿದ್ದು, ಇನ್ನೂ ಖಚಿತತೆ ಸಿಕ್ಕಿಲ್ಲ. ಪತಿಗೆ ಅಪಘಾತವಾಗಿದ್ದರಿಂದ ಪತ್ನಿ ಅಮರೇಶ್ವರಿ ಚಿಂಚನಸೂರ ಮತದಾರರಲ್ಲಿ ಸೆರಗೊಡ್ಡಿ ಮತಭಿಕ್ಷೆ ಕೇಳುತ್ತಿದ್ದಾರೆ. ಅಲ್ಲದೇ ಈ ಬಾರಿ ನಮ್ಮನ್ನು ಕೈಬಿಟ್ಟರೆ ನಮಗೆ ಸಾವೇ ಗತಿ ಎಂದು ಭಾವನಾತ್ಮಕವಾಗಿ ಜನರನ್ನು ಸೆಳೆಯುತ್ತಿದ್ದಾರೆ.

ಇನ್ನೂ ಬಿಜೆಪಿ ಮಹಿಳಾ ಪ್ರತಿನಿಧ್ಯದಡಿ ಲಲಿತಾ ಅನಪುರ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರನ್ನು ಸೆಳೆಯುತ್ತಿದ್ದಾರೆ. ಗ್ರಾಮಗಳಲ್ಲಿ ಸಂಚಾರ ಮಾಡಿ ಅಲ್ಲಿನವರಿಗೆ ಯಾವ ಸೌಲಭ್ಯಗಳು ಬೇಕು ಎಂದು ಕೇಳುತ್ತಿದ್ದು, ಮತದಾರರ ಮನ ಗೆಲ್ಲಲು ಪ್ರಯತ್ನ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಏನು ಅಭಿವೃದ್ಧಿಯಾಗಿಲ್ಲ ಎಂಬ ಬಗ್ಗೆ ಪಟ್ಟಿ ಮಾಡಿ, ಅದನ್ನು ನಾನು ನೇರವೇರಿಸುತ್ತೇನೆ ಎಂದು ಜನರಿಗೆ ಭರವಸೆ ನೀಡುತ್ತಿದ್ದಾರೆ.

ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷವೊಂದು ಮಹಿಳೆಯನ್ನು ಪ್ರಥಮ ಬಾರಿಗೆ ಅಭ್ಯರ್ಥಿಯನ್ನಾಗಿ ಮಾಡಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್‌ ಬಿಟ್ಟು ಮತದಾರರು ಅಚ್ಚರಿಯಾಗಿ ಮಹಿಳೆಗೆ ಮತ ನೀಡಿದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ.

ಕೋಲಿ ಸಮಾಜದ ಮತಗಳೇ ಇಲ್ಲಿ ನಿರ್ಣಾಯವಾಗಿದ್ದು, ಅವರು ಯಾರ ಪರವಾಗಿದ್ದರೊ ಅವರಿಗೆ ಗೆಲುವು ಖಚಿತ ಎನ್ನಲಾಗುತ್ತಿದೆ. ಇದರ ಜೊತೆಗೆ ಪರಿಶಿಷ್ಟ ಜಾತಿ, ಪಂಗಡ, ಅಲ್ಪ ಸಂಖ್ಯಾತರ ಮತಗಳು ಸೇರಿವೆ. ಮೇ 10ರಂದು ಚುನಾವಣೆ ನಡೆಯಲಿದ್ದು, 13ರಂದು ಫಲಿತಾಂಶ ಹೊರಬೀಳಲಿದೆ. ಆಗ ಅಭಿವೃದ್ಧಿಗೆ ಮತದಾರರ ಜೈ ಎಂದಿದ್ದಾರೊ, ಅನುಕಂಪಕ್ಕೆ ಮರುಗಿದ್ದಾರೊ, ಮಹಿಳೆಗೆ ಮತ ನೀಡಿ ಇತಿಹಾಸ ಸೃಷ್ಟಿಸಿದ್ದಾರೊ ಎನ್ನುವುದನ್ನು ಕಾಣಲು ಕೆಲವು ದಿನ ಕಾಯಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.