ಯಾದಗಿರಿ: ‘ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಹಾನಿಯಾದ ಮನೆಗಳ ಜಿಪಿಎಸ್ ಪ್ರಕ್ರಿಯೆ ಶೀಘ್ರ ಮುಗಿಸುವಂತೆ’ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಸಂಬಂಧಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಸಕಾಲ ಹಾಗೂ ಭೂಮಿ, ವಕ್ಫ್, ಎಜೆಎನ್‌ಕೆ ಪ್ರಗತಿ ಮತ್ತು ಪ್ರವಾಹದಿಂದ ಹಾನಿಯಾದ ಮನೆಗಳ ಜಿಪಿಎಸ್ ಅಪ್‍ಲೋಡ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರವಾಹದಿಂದ ಹಾನಿಯಾದ ಮನೆಗಳ ಜಿಪಿಎಸ್ ಪ್ರಕ್ರಿಯೆ ವಿಳಂಬ ಮಾಡದೆ ಶೀಘ್ರವೇ ಖಾತ್ರಿ ಮಾಡಿ ವರದಿ ನೀಡಬೇಕೆಂದು ಜಿಲ್ಲೆಯ ಯಾದಗಿರಿ, ಗುರುಮಠಕಲ್, ಸುರಪುರ, ಶಹಾಪುರ, ವಡಗೇರಾ, ಹುಣಸಗಿ ತಹಶೀಲ್ದಾರರಿಗೆ’ ಜಿಲ್ಲಾಧಿಕಾರಿ ಸೂಚಿಸಿದರು.
‘ಜೆಸ್ಕಾಂ, ತೋಟಗಾರಿಕೆ ಸೇರಿದಂತೆ ಇತರೆ ಇಲಾಖೆಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆಯಿಂದ ಬಂದಂಥ ಪರಿಹಾರವನ್ನು ಪ್ರವಾಹದಿಂದ ನೊಂದವರಿಗೆ ನೇರವಾಗಿ ತಲುಪುವಂತೆ ಮಾಡುವಂತೆ ಅಧಿಕಾರಿಗಳಿಗೆ’ ಹೇಳಿದರು.
‘ಮಾತೃ ವಂದನಾ ಯೋಜನಾ ಅಡಿಯಲ್ಲಿ ಉತ್ತಮ ಪ್ರಗತಿ ಸಾಧಿಸಿ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ಲಭಿಸುವಂತೆ ಕಾರ್ಯನಿರ್ವಹಿಸಿದ ಅಧಿಕಾರಿಗಳ ಕಾರ್ಯ ಶ್ಲಾಘಿಸಿದರು. ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಮೂರು ಕಂತಿನಲ್ಲಿ ಹಣವನ್ನು ನೀಡಲಾಗುತ್ತಿದ್ದು, ಇದರ ಲಾಭ ಜನರಿಗೆ ತಲುಪುವಂತಗಾಲಿ’ ಎಂದರು.
ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಸುರಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಗುರುಮಠಕಲ್ ತಹಶೀಲ್ದಾರ್ ಸಂಗಮೇಶ ಜಿಡಗಿ, ಶಹಾಪುರ ತಹಶೀಲ್ದಾರ್ ಮಹಿಬೂಬಿ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.