ಯಾದಗಿರಿ: ರಾಯಚೂರು ಲೋಕಸಭೆ (ಪರಿಶಿಷ್ಟ ಪಂಗಡ) ಮತಕ್ಷೇತ್ರಕ್ಕೆ 17 ಬಾರಿ ಚುನಾವಣೆ ನಡೆದಿದ್ದು, ಇದರಲ್ಲಿ 13 ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಒಂದು ಬಾರಿ ಸ್ವತಂತ್ರ ಪಕ್ಷ, ಎರಡು ಬಾರಿ ಬಿಜೆಪಿ, ಒಂದು ಬಾರಿ ಜನತಾ ದಳ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ದೇಶದಲ್ಲಿ 1952ರಲ್ಲಿ ಲೋಕಸಭೆ ಚುನಾವಣೆ ನಡೆದಿದ್ದರೆ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ 1957ರಲ್ಲಿ ನಡೆದಿತ್ತು. ಹೀಗಾಗಿ ಲೋಕಸಭೆ 1957ರಿಂದ ಅಸ್ವಿತ್ವಕ್ಕೆ ಬಂದಿದೆ.
1957, 1962 ಕಾಂಗ್ರೆಸ್, 1967ರಲ್ಲಿ ಸ್ವತಂತ್ರ ಪಕ್ಷ, 1971, 1977, 1980, 1984, 1986, 1989, 1991ಕಾಂಗ್ರೆಸ್, 1996 ರಲ್ಲಿ ಜನತಾ ದಳ, 1998, 1999, 2004 ರಲ್ಲಿ ಕಾಂಗ್ರೆಸ್, 2009 ರಲ್ಲಿ ಬಿಜೆಪಿ, 2014ರಲ್ಲಿ ಕಾಂಗ್ರೆಸ್, 2019ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಮೇ 7ರಂದು ಚುನಾವಣೆ ನಿಗದಿಯಾಗಿದೆ.
ರಾಯಚೂರು–ಯಾದಗಿರಿ ಜಿಲ್ಲೆಯನ್ನು ಒಳಗೊಂಡ ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿವೆ. ಈ ಪೈಕಿ 5ರಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ ಮತ್ತು ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ.
ಸುರಪುರದಿಂದ ದಿ. ರಾಜಾ ವೆಂಕಟಪ್ಪ ನಾಯಕ (ಪರಿಶಿಷ್ಟ ಪಂಗಡ) ಕಾಂಗ್ರೆಸ್‌ನಿಂದ ಗೆದ್ದಿದ್ದು, ಮೇ 7ರಂದು ಉಪಚುನಾವಣೆ ನಿಗದಿಯಾಗಿದೆ. ಯಾದಗಿರಿ ಮತಕ್ಷೇತ್ರದಿಂದ ಚನ್ನಾರೆಡ್ಡಿ ಪಾಟೀಲ ತುನ್ನೂರ, ಶಹಾಪುರ ಕ್ಷೇತ್ರದಿಂದ ಶರಣಬಸಪ್ಪ ದರ್ಶನಾಪುರ, ರಾಯಚೂರು ನಗರ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಶಿವರಾಜ್ ಪಾಟೀಲ, ರಾಯಚೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಸನಗೌಡ ದದ್ದಲ್, ಮಾನ್ವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಿ.ಹಂಪಯ್ಯ ನಾಯಕ, ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್‌ನ ಕರೆಮ್ಮ ಜಿ ನಾಯಕ, ಲಿಂಗಸೂಗೂರು ಕ್ಷೇತ್ರದಲ್ಲಿ ಬಿಜೆಪಿಯ ಮಾನಪ್ಪ ಡಿ.ವಜ್ಜಲ್ ಆಯ್ಕೆಯಾಗಿದ್ದಾರೆ. ಕಲಬುರಗಿ ಲೋಕಸಭೆ (ಪರಿಶಿಷ್ಟ ಜಾತಿ)ಗೆ ಒಳಪಡುವ ಗುರುಮಠಕಲ್ ಮತಕ್ಷೇತ್ರದಲ್ಲಿ ಜೆಡಿಎಸ್‌ನ ಶರಣಗೌಡ ಕಂದಕೂರ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ವೆಂಕಟೇಶ ನಾಯಕ ಹ್ಯಾಟ್ರಿಕ್ ಸಾಧನೆ
ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ವೆಂಕಟೇಶ ನಾಯಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ವೆಂಕಟೇಶ ನಾಯಕ ಅವರು ನಾಲ್ಕು ಬಾರಿ ಗೆದ್ದಿದ್ದಾರೆ.
1998, 1999, 2004 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವೆಂಕಟೇಶ ನಾಯಕ ಅವರು ಹ್ಯಾಟ್ರಿಕ್ ಸಾಧಿಸಿದ್ದಾರೆ. 1991ರಲ್ಲೂ ವೆಂಕಟೇಶ ನಾಯಕ ಗೆದ್ದಿದ್ದರು. ಇವರ ಮೊದಲು ಮತ್ತು ನಂತರ ಯಾರೂ ಈ ಸಾಧನೆ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.