ADVERTISEMENT

ಯಾದಗಿರಿ: ಮಳೆಗಾಲ ಸಮರ್ಪಕ ನಿರ್ವಹಣೆಗೆ ಬೇಕಿದೆ ಇಚ್ಛಾಶಕ್ತಿ

ಜಿಲ್ಲೆಯಲ್ಲಿವೆ ಮೂರು ನಗರಸಭೆ, ಪುರಸಭೆ, ಒಂದು ಪಟ್ಟಣ ಪಂಚಾಯಿತಿ, 122 ಗ್ರಾಮ ಪಂಚಾಯಿತಿಗಳು

ಬಿ.ಜಿ.ಪ್ರವೀಣಕುಮಾರ
Published 24 ಜೂನ್ 2024, 5:12 IST
Last Updated 24 ಜೂನ್ 2024, 5:12 IST
ಸುರಪುರದ ಮುಲ್ಲಾ ಮೋಹಲ್ಲಾದಲ್ಲಿ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿರುವುದು
ಸುರಪುರದ ಮುಲ್ಲಾ ಮೋಹಲ್ಲಾದಲ್ಲಿ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿರುವುದು   

ಯಾದಗಿರಿ: ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರದಲ್ಲಿ ನಗರಸಭೆ, ಕಕ್ಕೇರಾ, ಕೆಂಭಾವಿ, ಗುರುಮಠಕಲ್‌ನಲ್ಲಿ ಪುರಸಭೆ, ಹುಣಸಗಿಯಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಇದೆ. ಜಿಲ್ಲೆಯಲ್ಲಿ 122 ಗ್ರಾಮ ಪಂಚಾಯಿತಿಗಳಿವೆ. ಆದರೂ ಸಮರ್ಪಕ ಮಳೆಗಾಲ ನಿರ್ವಹಣೆ ಸಾಧ್ಯವಾಗುತ್ತಿಲ್ಲ.

ಎರಡು ವರ್ಷಗಳ ಅವಧಿಯಲ್ಲಿ ನಡೆದ ಕಲುಷಿತ ನೀರು ಸೇವನೆ ಪ್ರಕರಣಗಳಲ್ಲಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಈ ಬಾರಿ ಸಾವು–ನೋವುಗಳು ಸಂಭವಿಸದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸೂಕ್ತ ಕ್ರಮ ವಹಿಸುವ ಅಗತ್ಯವಿದೆ.

ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ವಾಂತಿ-ಭೇದಿಯಾಗದಂತೆ ಎಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ವಾರಕ್ಕೊಮ್ಮೆ ಸೊಳ್ಳೆಗಳ ಆವಾಸ ಮತ್ತು ಲಾರ್ವಾಗಳಾಗುವ ಸ್ಥಳ ಪರಿಶೀಲನೆ ನಡೆಸುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ.

ADVERTISEMENT

ನಿಂತ ನೀರಿನಲ್ಲಿ ಲಾರ್ವಾ (ಬಿಳಿ ಬಣ್ಣದ ಹುಳು) ಬೆಳೆದು ಸೊಳ್ಳೆಯ ರೂಪ ಪಡೆಯುತ್ತದೆ. ಇದನ್ನು ತಪ್ಪಿಸಲು ಗ್ರಾಮಗಳ ಬಡಾವಣೆಗಳಲ್ಲಿ ನಿಂತ ಹೊಲಸು ನೀರಿನಲ್ಲಿ ಮೀನು ಮರಿಗಳನ್ನು ಬಿಡಲಾಗಿದೆ. ಈ ಮೀನುಗಳು ಲಾರ್ವಾ ಹುಳಗಳನ್ನು ತಿನ್ನುತ್ತವೆ ಎಂದು ವೈದ್ಯರು ತಿಳಿಸುತ್ತಾರೆ.

ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಿದ್ದು, ಹಳ್ಳಿಗಳ ರಸ್ತೆಗಳು ಕೆಸರು ಗದ್ದೆಗಳಂತಾಗಿದ್ದು, ರಸ್ತೆಗಳು ಗುಂಡಿಗಳನ್ನು ಹೊತ್ತು ನಿಂತಿವೆ.

ಗುಂಡಿಗಳು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದ್ದು, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯಾಡಳಿತಗಳು ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕಿದೆ.

‘ಮುಂದಿನ ತಿಂಗಳು ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗೆ ನೀರು ಹರಿಸಲಾಗುತ್ತದೆ. ಗದ್ದೆ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಲಿದೆ. ಸೊಳ್ಳೆಗಳ ಉತ್ಪತ್ತಿ ಶುರುವಾಗುತ್ತದೆ. ಆಗ ಕಾಯಿಲೆಗಳು ಬರುವುದು ಸಾಮಾನ್ಯ. ಸೊಳ್ಳೆಗಳ ಹಾವಳಿ ತಡೆಗಟ್ಟಲು ಜಾನುವಾರುಗಳಿಗೂ ಸೊಳ್ಳೆ ಪರದೆ ಕಟ್ಟಲಾಗುತ್ತದೆ’ ಎನ್ನುತ್ತಾರೆ ರೈತ ಪರಶುರಾಮ.

ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಪ್ರಕರಣಗಳು ವರದಿಯಾದರೆ ಮಾಹಿತಿ ಹಾಗೂ ಅನುಪಾಲನಾ ವರದಿಯನ್ನು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಕಚೇರಿಗೆ ಸಂಬಂಧಿಸಿದವರು ನೀಡಬೇಕು. ಡೆಂಗಿ ಚಿಕೂನ್ ಗುನ್ಯಾ ಹರಡದಂತೆ ತಡೆಯಲು ವಾರಕ್ಕೆ ಒಂದು ಬಾರಿ ಲಾರ್ವಾ ಸಮೀಕ್ಷೆ ಮಾಡಬೇಕು -ಡಾ.ಪ್ರಭುಲಿಂಗ ಮಾನಕರ್‌ ಅಧಿಕಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಮಳೆಗಾಲದಿಂದ ಉಂಟಾಗುವ ಆರೋಗ್ಯ ತೊಂದರೆಗಳನ್ನು ಎದುರಿಸಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರು ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಸಹಕರಿಸಬೇಕು -ಡಾ.ರಾಜಾ ವೆಂಕಪ್ಪನಾಯಕ ಟಿಎಚ್‌ಒ ಸುರಪುರ

ಸುರಪುರ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ತಿನಿಸುಗಳನ್ನು ಮುಚ್ಚದೆ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ನಗರದಲ್ಲಿ ನಲ್ಲಿ ನೀರನ್ನು ಶುದ್ಧೀಕರಿಸದೆ ಪೂರೈಸಲಾಗುತ್ತಿದೆ

- ರಾಹುಲ್ ಹುಲಿಮನಿ ದಲಿತ ಮುಖಂಡ

ಈಗಾಗಲೇ ಹಲವು ಹಂತಗಳಲ್ಲಿ ಸಭೆಗಳನ್ನು ನಡೆಸಿ ತಾಲ್ಲೂಕು ವ್ಯಾಪ್ತಿಯ ಎಲ್ಲಾ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ. ಔಷಧಗಳ ಕೊರತೆ ಇಲ್ಲ. ಅವಶ್ಯವಿದ್ದಲ್ಲಿಗೆ ಹೆಚ್ಚುವರಿ ಔಷಧ ಸಾಮಗ್ರಿ ಹಂಚಿಕೆ ಮಾಡಲಾಗುವುದು

-ಡಾ.ಹಣಮಂತರೆಡ್ಡಿ ತಾಲ್ಲೂಕು ವೈದ್ಯಾಧಿಕಾರಿ

ಕಳೆದ ವರ್ಷ ಅನಪುರದಲ್ಲಿ ನಡೆದ ಘಟನೆ ಮರುಕಳಿಸದಂತೆ ಸಂಬಂಧಿಸಿದವರು ಮುತುವರ್ಜಿ ಹಾಗೂ ಆದ್ಯತೆ ಮೇಲೆ ಮುಂಜಾಗ್ರತೆ ವಹಿಸಲಿ

- ನೀಲೇಶ ನಜರಾಪುರ ಸಾಮಾಜಿಕ ಕಾರ್ಯಕರ್ತ

ಜನರ ಆರೋಗ್ಯ ಕಾಪಾಡಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜನರು ಸ್ವಚ್ಛತೆ ಕಾಪಾಡುವುದರ ಜೊತೆಗೆ ನೀರು ನಿಲ್ಲದಂತೆ ಜಾಗೃತಿ ವಹಿಸಬೇಕು

-ಡಾ. ಜಗನ್ನಾಥರಡ್ಡಿ ಸಮುದಾಯ ಆರೋಗ್ಯ ಕೇಂದ್ರ ವಡಗೇರಾ

ಹುಣಸಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆಗಾಲದ ಕಾರಣಕ್ಕೆ ಎಲ್ಲೆಡೆ ಹೊಸ ನೀರು ಬರುತ್ತಿದ್ದು ಕುಡಿಯುವ ನೀರನ್ನು ಕಾಯಿಸಿ ಸೋಸಿ ಆರಿಸಿ ಕುಡಿಯಬೇಕು

- ಡಾ.ಆರ್.ವಿ.ನಾಯಕ ತಾಲ್ಲೂಕು ಆರೋಗ್ಯ ಅಧಿಕಾರಿ

ಸಾಂಕ್ರಾಮಿಕ ರೋಗಗಳ ತಡೆಗೆ ಕ್ರಮ

ಮಳೆಯಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ಕ್ರಮಗಳನ್ನು ತೆಗೆದುಕೊಂಡಿದೆ. ಸುರಪುರ ಮತ್ತು ಹುಣಸಗಿ ತಾಲ್ಲೂಕು ಸೇರಿ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎರಡು ಸಮುದಾಯ ಆರೋಗ್ಯ ಕೇಂದ್ರಗಳು ಒಂದು ನಗರ ಆರೋಗ್ಯ ಕೇಂದ್ರ ಒಂದು ತಾಲ್ಲೂಕು ಆಸ್ಪತ್ರೆ ಇದೆ. ಎಲ್ಲ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಆರೋಗ್ಯ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಆರೋಗ್ಯ ಶಿಕ್ಷಣ ನೀಡುತ್ತಿದ್ದಾರೆ. ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿವಳಿಕೆ ನೀಡಿದ್ದಾರೆ. ಸೊಳ್ಳೆಗಳು ಉತ್ಪತ್ತಿಯಾಗುವ ಸಂಭಾವ್ಯ ಸ್ಥಳಗಳನ್ನು ಗುರುತಿಸಿ ಗ್ರಾಮ ಪಂಚಾಯಿತಿ ಮೂಲಕ ಸ್ವಚ್ಛಗೊಳಿಸಲಾಗಿದೆ. ಪ್ರತಿ ಗ್ರಾಮದ ನೀರಿನ ಮೂಲಗಳಾದ ಬಾವಿ ಬೋರ್‌ವೆಲ್‌ ಖಾಸಗಿ ಬೋರ್‌ವೆಲ್‌ಗಳ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ವಾಂತಿ ಭೇದಿ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧ ದಾಸ್ತಾನು ಇದೆ.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.