ಹುಣಸಗಿ: ಇಲ್ಲಿನ ಎಸ್.ಕೆ ಶಿಕ್ಷಣ ಸಂಸ್ಥೆಯ ಕಾಲೇಜನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಿವೇದಿತಾ ನರಸಿಂಹಭಟ್ (24) ಎಂಬುವರು ಸೋಮವಾರ ನಿಧನರಾಗಿದ್ದು ಈ ಬಗ್ಗೆ ಮೃತರ ತಂದೆ ನರಸಿಂಹಭಟ್ ಸಂಶಯ ವ್ಯಕ್ತಪಡಿಸಿ ಅಂಕೋಲಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತ ನಿವೇದಿತಾ ಅಂಕೋಲಾ ಠಾಣಾ ವ್ಯಾಪ್ತಿಯ ಅಂಗಡಿಬೈಲು ಗ್ರಾಮದವರಾಗಿದ್ದು, ಪಟ್ಟಣದ ಎಸ್.ಕೆ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
‘ಏ.17ರಂದು ಸಹೋದ್ಯೋಗಿ ಸುಷ್ಮಾ ಎಂಬುವರಿಗೆ ಅನಾರೋಗ್ಯ ಉಂಟಾಗಿದ್ದರಿಂದ ಅವರನ್ನು ಹುಣಸಗಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದಾಗ ನಿವೇದಿತಾ ಕುಸಿದು ಬಿದ್ದಿದ್ದರು. ಅವರನ್ನು ಪರೀಕ್ಷಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸೂಗುರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರು, ಅಲ್ಲಿಯೇ ನಿವೇದಿತಾ ನಿಧನರಾದರು ಎಂದು ಶಿಕ್ಷಣ ಸಂಸ್ಥೆಯವರು ಹೇಳಿದರು’ ಎಂದು ಮೃತಳ ತಂದೆ ನರಸಿಂಹಭಟ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ತಮ್ಮ ಮಗಳ ಸಾವಿನ ಕುರಿತಂತೆ ಸಂಶಯ ಮೂಡಿರುವುದರಿಂದ ತನಿಖೆ ನಡೆಸಿ ನಿಖರ ಕಾರಣ ತಿಳಿದುಕೊಂಡು ಅಗತ್ಯವಾದ ಕ್ರಮ ಕೈಗೊಳ್ಳುವಂತೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹುಣಸಗಿ ಸಿಪಿಐ ಎಂ.ಬಿ.ಚಿಕ್ಕಣ್ಣವರ್ ಅವರು ಮಾತನಾಡಿ ಈ ಪ್ರಕರಣದ ಬಗ್ಗೆ ಇಲಾಖೆಯಿಂದ ಸೂಚನೆ ಬಂದ ಬಳಿಕ ತನಿಖೆ ಕೈಗೊಳ್ಳುವದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.