ADVERTISEMENT

ವಡಗೇರಾ | ಹಾಳಾದ ರಸ್ತೆ: ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಮೇ 2024, 5:22 IST
Last Updated 23 ಮೇ 2024, 5:22 IST
ವಡಗೇರಾ ತಾಲ್ಲೂಕಿನ ಬೀರನಾಳ ಕ್ರಾಸ್‌ನಿಂದ ಅಣತಿ ದೂರದಲ್ಲಿ ರೈತರು ತಮ್ಮ ಜಮೀನಿಗೆ ಪೈಪ್‌ಲೈನ್ ಅಳವಡಿಸಲು ಜಿಲ್ಲಾ ಮುಖ್ಯ ರಸ್ತೆಯನ್ನು ಅಗೆದಿರುವುದರಿಂದ ರಸ್ತೆಯಲ್ಲಿ ಕಂದಕ ಬಿದ್ದಿರುವದು
ವಡಗೇರಾ ತಾಲ್ಲೂಕಿನ ಬೀರನಾಳ ಕ್ರಾಸ್‌ನಿಂದ ಅಣತಿ ದೂರದಲ್ಲಿ ರೈತರು ತಮ್ಮ ಜಮೀನಿಗೆ ಪೈಪ್‌ಲೈನ್ ಅಳವಡಿಸಲು ಜಿಲ್ಲಾ ಮುಖ್ಯ ರಸ್ತೆಯನ್ನು ಅಗೆದಿರುವುದರಿಂದ ರಸ್ತೆಯಲ್ಲಿ ಕಂದಕ ಬಿದ್ದಿರುವದು   

ವಡಗೇರಾ: ಈ ಭಾಗದ ಕೆಲವು ರೈತರು ಹಾಗೂ ಪಕ್ಕದ ಆಂದ್ರ ರಾಜ್ಯದಿಂದ ವಲಸೆ ಬಂದ ರೈತರು ತಮ್ಮ ಗದ್ದೆಗಳಿಗೆ ನದಿಯಿಂದ ಪೈಪ್ ಲೈನ್ ಮುಖಾಂತರ ನೀರನ್ನು ಪಡೆಯಲು ರಸ್ತೆಯನ್ನು ಅಗೆದಿರುವದರಿಂದ ವಾಹನ ಸವಾರರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ವಾಹನ ಸವಾರರು ದೂರಿದ್ದಾರೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಬೀರನಾಳ ಕ್ರಾಸ್‌ನಿಂದ ಅಣತಿ ದೂರದಲ್ಲಿ ಗಡ್ಡೆಸೂಗುರ ಗ್ರಾಮದ ಗೇಟ್‌ನ ಸಮೀಪ , ಹಾಲಗೇರಾ ಗ್ರಾಮದ ಗೇಟ್ ಹತ್ತಿರ, ತುಮಕೂರು, ಇಟಗಾ, ರೋಟ್ನಡಗಿ, ಕದರಾಪೂರ ಹಾಗೂ ಇನ್ನಿತ ಗ್ರಾಮಗಳ ಅಣತಿ ದೂರದಲ್ಲಿ ರೈತರು ತಮ್ಮ ಭತ್ತದ ಗದ್ದೆಗಳಿಗೆ ಭೀಮಾ ನದಿಯಿಂದ ಹಾಗೂ ಕೃಷ್ಣಾ ನದಿಯಿಂದ ಪೈಪ್ ಲೈನ್ ಮುಖಾಂತರ ನೀರನ್ನು ಪಡೆಯಲು ಜಿಲ್ಲಾ ಮುಖ್ಯ ರಸ್ತೆಯನ್ನು ಎಡ ಭಾಗದಿಂದ ಬಲಭಾಗಕ್ಕೆ ರಸ್ತೆಯನ್ನು ಅಗೆದು ಪೈಪ್‌ಗಳನ್ನು ಹಾಕಿದ್ದಾರೆ. ಇದು ಕಾನೂನಿನ ವಿರುದ್ಧವಾದ ಕೆಲಸವಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ನಿಯಮ: ರಾಜ್ಯ ಜಿಲ್ಲಾ, ತಾಲ್ಲೂಕಾ ಹಾಗೂ ಗ್ರಾಮೀಣ ರಸ್ತೆಗಳನ್ನು ಅಗೆಯಬೇಕಾದರೆ ( ತೋಡಬೇಕಾದರೆ) ಸಂಬಂಧ ಪಟ್ಟ ಇಲಾಖೆಗೆ ಅರ್ಜಿಯನ್ನು ಕೊಡಬೇಕು. ಆಗ ಆ ಇಲಾಖೆಯವರು ಅದಕ್ಕೆ ಅಂದಾಜು ವೆಚ್ಚವನ್ನು ಮಾಡಿ ಅರ್ಜಿದಾರರಿಗೆ ಮರಳಿಸುತ್ತಾರೆ. ಅಗ ಅರ್ಜಿದಾರರು ಅಂದಾಜು ವೆಚ್ಚವನ್ನು ಭರಿಸಿದ ನಂತರ ರಸ್ತೆಯನ್ನು ಅಗೆಯಲು ಅನುಮತಿಯನ್ನು ಕೊಡುತ್ತಾರೆ. ನಂತರ ಇಲಾಖೆಯ ವತಿಯಿಂದ ಆ ರಸ್ತೆಯನ್ನು ಅಂದಾಜು ವೆಚ್ಚದ ಹಣವನ್ನ ಬಳಸಿಕೊಂಡು ರಸ್ತೆಯನ್ನು ದುರಸ್ತಿ ಮಾಡುತ್ತಾರೆ.

ADVERTISEMENT

ಇಲಾಖೆಯ ಅನುಮತಿ ಇಲ್ಲ: ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ರೈತರು ರಸ್ತೆಯನ್ನು ಅಗೆಯುವಾಗ ಲೋಕೋಪಯೋಗಿ ಇಲಾಖೆಯ ಅನುಮತಿಯನ್ನು ಪಡೆಯದೆ ರಾತ್ರೋರಾತ್ರಿ ಉತ್ತಮವಾದ ಟಾರ್ ರಸ್ತೆಯನ್ನು ಹಾಳು ಮಾಡಿ ಪೈಪ್‌ಗಳನ್ನು ಹಾಕಿ ಒಣ ಮರಂನಿಂದ ರಸ್ತೆಯನ್ನು ಮುಚ್ಚಿ ಬಿಡುತ್ತಾರೆ. ವಾಹನಗಳು ಸಂಚರಿಸಿದಾಗ ಒಣ ಮರಂ ಗಾಳಿಗೆ ಹಾರಿ ರಸ್ತೆ ಮೇಲೆ ಕಂದಕಗಳು ಬೀಳುತ್ತವೆ. ಇದರಿಂದಾಗಿ ದ್ವಿಚಕ್ರ ವಾಹನ ಚಾಲಕರು ನಿಯಂತ್ರಣ ತಪ್ಪಿ ವಾಹನದಿಂದ ಬಿದ್ದು ಕೈಕಾಲುಗಳನ್ನು ಮುರಿದುಕೊಂಡಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕಾನೂನು ಬಾಹಿರವಾಗಿ ರಸ್ತೆಯನ್ನು ಅಗೆದು ಹಾಳು ಮಾಡುತ್ತಿರುವ ರೈತರ ಮೇಲೆ ಕ್ರಮಗಳನ್ನು ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.

ಇಲಾಖೆ ಅನುಮತಿ ಪಡೆಯದೆ ಎಲ್ಲೆಲ್ಲಿ ರಸ್ತೆಯನ್ನು ಅಗೆದು ಹಾಳು ಮಾಡಿದ್ದಾರೆ ಎಂಬ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು
ಸೂಗರಡ್ಡಿ ಎಇಇ ಲೋಕೋಪಯೋಗಿ ಇಲಾಖೆ
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ರಾತ್ರಿ ವೇಳೆ ರೈತರು ರಸ್ತೆ ಅಗೆಯುತ್ತಿದ್ದಾರೆ. ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಅಂಥ ರೈತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು
ಪ್ರಸಾದ ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.