ADVERTISEMENT

ಯಾದಗಿರಿ | ಅತಿಯಾದ ತಾಪಮಾನ; ಮೀನುಗಳ ಮಾರಣ ಹೋಮ

ಬಿ.ಜಿ.ಪ್ರವೀಣಕುಮಾರ
Published 27 ಮೇ 2024, 5:13 IST
Last Updated 27 ಮೇ 2024, 5:13 IST
ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಲುಂಬಿನ ಕೆರೆಯಲ್ಲಿ ಮೀನುಗಳು ಸತ್ತಿರುವುದು
ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಲುಂಬಿನ ಕೆರೆಯಲ್ಲಿ ಮೀನುಗಳು ಸತ್ತಿರುವುದು   

ಯಾದಗಿರಿ: ಮಳೆ ಬಂದರೂ ಜಿಲ್ಲೆಯಲ್ಲಿ ತಾಪಮಾನ ದಿನೆ ದಿನೇ ಹೆಚ್ಚಾಗುತ್ತಿದ್ದು, ರಣ ಬಿಸಿಲಿನಿಂದಾಗಿ ಕೆರೆಗಳು ಖಾಲಿ ಖಾಲಿಯಾಗಿವೆ. ನೀರು ಬತ್ತಿ ಹೋಗಿದ್ದರಿಂದ ಮೀನುಗಳ ಮಾರಣಹೋಮ ನಡೆಯುತ್ತಿದೆ.

ನಗರದ ಹೃದಯ ಭಾಗದಲ್ಲಿರುವ ಲುಂಬಿನ ಕೆರೆ ಸಂಪೂರ್ಣವಾಗಿ ಖಾಲಿಯಾಗಿದೆ. ಅಲ್ಲಲ್ಲಿ ಅಲ್ಪಸ್ವಲ್ಪ ನೀರು ಹೊರತು ಪಡಿಸಿದರೆ ಕೆರೆ ಬಹುತೇಕ ಖಾಲಿಯಾಗಿದೆ. ಇನ್ನೂ ಕೆರೆಯಲ್ಲಿ ಇರುವ ಅಲ್ಪಸ್ವಲ್ಪ ನೀರು ಕೂಡ ಕಲುಷಿತವಾಗಿವೆ. ಜೊತೆಗೆ ತಾಪಮಾನ ಕೂಡ ಜಾಸ್ತಿಯಾಗುತ್ತಿರುವ ಕಾರಣಕ್ಕೆ ಕೆರೆಯಲ್ಲಿರುವ ಮೀನುಗಳ ಮಾರಣಹೋಮ ನಡೆದು ಹೋಗಿದೆ.

ಸಾವಿರಾರು ಮೀನುಗಳು ಆಮ್ಲಜನಕ ಕೊರತೆಯಿಂದಾಗಿ ಜೀವಬಿಟ್ಟಿವೆ. ಇದರಿಂದಾಗಿ ಉದ್ಯಾನದಲ್ಲಿ ದುರ್ವಾಸನೆ ಹಬ್ಬಿದ್ದು, ಬೆಳಗಿನ ಜಾವ ವಾಯುವಿಹಾರಕ್ಕೆ ಬರುವ ಜನರಿಗೆ ಕಿರಿಕಿರಿ ಉಂಟಾಗಿದೆ. ಇನ್ನೊಂದೆಡೆ ನಗರದಲ್ಲಿ ಇದೊಂದೇ ಉದ್ಯಾನ ಇರುವುದರಿಂದ ನಿತ್ಯ ನೂರಾರು ಜನರು ಇಲ್ಲಿಗೆ ಬರುತ್ತಾರೆ. ಮಕ್ಕಳನ್ನು ಕರೆದುಕೊಂಡು ಸಮಯ ಕಳೆಯಲು ಬರುತ್ತಾರೆ. ದುರ್ವಾಸನೆ ತಾಳುವುದಕ್ಕೆ ಆಗದಂತಾಗಿದೆ.

ADVERTISEMENT

‘ರಾಜ್ಯದ್ಯಾಂದ್ಯತ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಿದೆ. ಆದರೆ, ಬಿಸಿಲುನಾಡು ಎಂದೆ ಪ್ರಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಬಿಸಿಲು ಇನ್ನೂ ತಣಿದಿಲ್ಲ. ಇದರಿಂದ ಸಣ್ಣ ಕೆರೆಯಲ್ಲಿ ಮೀನುಗಳ ಮಾರಣ ಹೋಮವಾಗಿದೆ’ ಎಂದು ವಾಯುವಿಹಾರಿ ಬಸವರಾಜ ಪಾಟೀಲ ಹೇಳುತ್ತಾರೆ.

ಲಕ್ಷಾಂತರ ರೂಪಾಯಿ ಖರ್ಚು: ಮಲ್ಲಿಕಾರ್ಜುನ ಶೇಗುರಕರ್ ಎಂಬ ಮೀನುಗಾರ ಈ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುವುದಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಪಡೆದಿದ್ದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೆರೆಯಲ್ಲಿ ಮೀನಿನ ಮರಿಗಳನ್ನು ತಂದು ಹಾಕಿದ್ದರು. ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇದ್ದಿದ್ದರೆ ಮೀನುಗಾರ ಲಕ್ಷಾಂತರ ರೂಪಾಯಿ ಲಾಭ ಪಡೆಯುತ್ತಿದ್ದರು. ಆದರೆ, ಭೀಕರ ಬರಗಾಲ ಹಾಗೂ ಹೆಚ್ಚಾಗುತ್ತಿರುವ ತಾಪಮಾನದಿಂದಾಗಿ ಕೆರೆ ನೀರು ಸಂಪೂರ್ಣವಾಗಿ ಬತ್ತಿ ಹೋಗಿದೆ. ಹೀಗಾಗಿ ಮೀನುಗಳು ವಾಸಕ್ಕೆ ಬೇಕಾದಷ್ಟು ನೀರು ಇಲ್ಲದಂತಾಗಿದೆ. ಜೊತೆಗೆ ಬಿಸಿಲು ಹೆಚ್ಚಾಗುತ್ತಿದ್ದ ಕಾರಣಕ್ಕೆ ಮೀನುಗಳಿಗೆ ಉಸಿರಾಟದ ತೊಂದರೆಯಿಂದಾಗಿ ಸಾವನ್ನಪ್ಪುತ್ತಿವೆ.

ಸಾವಿರಾರು ಮೀನುಗಳ ಮಾರಣಹೋಮ ನಡೆಯುತ್ತಿದೆ. ಸಾಯುತ್ತಿರುವ ಮೀನುಗಳು ನೀರಿನಲ್ಲಿ ತೇಲಿಕೊಂಡು ದಡಕ್ಕೆ ಬರುತ್ತಿವೆ. ಇದರಿಂದಾಗಿಯೇ ಕೆರೆಯಲ್ಲಿ ವಿಪರೀತ ದುರ್ವಾಸನೆ ಉಂಟಾಗುತ್ತಿದೆ. ಕೆರೆಯಲ್ಲಿ ನೀರು ಖಾಲಿಯಾಗುತ್ತ ಬಂದರೆ ಮೀನುಗಾರರು ಕೆರೆಯಲ್ಲಿರುವ ಮೀನುಗಳನ್ನು ಹಿಡಿಯುವ ಕೆಲಸ ಮಾಡಿಲ್ಲ. ಮೀನುಗಳ ಪ್ರಮಾಣ ಹೆಚ್ಚಾಗಿದ್ದು, ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಮೀನುಗಳ ವಾಸಕ್ಕೆ ತೊಂದರೆ ಉಂಟಾಗಿ ಸಾವನ್ನಪ್ಪುತ್ತಿವೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು.

ನಗರದ ಹೃದಯ ಭಾಗದಲ್ಲೇ ಇಂತಹ ವ್ಯವಸ್ಥೆ ನಿರ್ಮಾಣವಾಗಿದ್ದರೂ ನಗರಸಭೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ. ಇತ್ತ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರುವ ಮೀನುಗಾರ ಒಂದು ಕಡೆಯಾದರೆ ಇನ್ನೊಂದೆಡೆ ಜನ ಅಧಿಕಾರಿಗಳ ವಿರುದ್ಧ ವಾಯುವಿಹಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಲುಂಬಿನ ಕೆರೆಯಲ್ಲಿ ಮೀನುಗಳು ಸತ್ತಿರುವುದು
ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಲುಂಬಿನ ಕೆರೆಯಲ್ಲಿ ಮೀನುಗಳು ಸತ್ತಿರುವುದು
ನಾಲ್ಕು ಅಡಿಗಿಂತ ಹೆಚ್ಚಿದ್ದರೆ ಮೀನುಗಳು ಸರಾಗವಾಗಿ ಇರಲು ಸಾಧ್ಯ. ಆದರೆ ಲುಂಬಿನಿ ವನದಲ್ಲಿ 1 ಅಡಿ ನೀರಿದ್ದು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿವೆ
ನಾಡಗೌಡ ಬಸವನಗೌಡ ಉಪನಿರ್ದೇಶಕ ಮೀನುಗಾರಿಕೆ ಇಲಾಖೆ

ಕೆರೆಗಳು ಖಾಲಿ ಖಾಲಿ

ಜಿಲ್ಲಾ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ 352 ಕೆರೆಗಳಲ್ಲೂ ನೀರಿನ ಅಭಾವವಿದೆ.  ತಾಪಮಾನ ಹೆಚ್ಚಾಗುತ್ತಿರುವುದರಿಂದ ಜಲಮೂಲಗಳು ಖಾಲಿಯಾಗುತ್ತಿವೆ. ಕೆರೆಗಳು ಖಾಲಿಯಾಗಿದ್ದರಿಂದ ಜಲಚರಗಳಿಗೆ ಸಂಕಷ್ಟ ಎದುರಾಗಿದೆ. ಅತಿಯಾದ ಉಷ್ಣಾಂಶದಿಂದ ಕೆರೆಯಲ್ಲಿರುವ ಮೀನುಗಳ ಮಾರಣಹೋಮ ಆಗುತ್ತಿದೆ. ಅಲ್ಲಲ್ಲಿ ಮಳೆ ಬರುತ್ತಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ತಾಪಮಾನ ದಾಖಲಾಗುತ್ತಿದೆ. ಅದರಲ್ಲೂ ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿ ಭೀಕರ ಬರಗಾಲ ಆವರಿಸಿಕೊಂಡಿದೆ. ಇದರಿಂದಾಗಿ ಜಿಲ್ಲೆಯಲ್ಲಿನ ಜಲಮೂಲಗಳು ಸಂಪೂರ್ಣವಾಗಿ ಖಾಲಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.