ADVERTISEMENT

ಕೆಂಭಾವಿ | SSLC ಪರೀಕ್ಷೆ ಫಲಿತಾಂಶ ಕುಸಿತ: ಪಿಯು ಕಾಲೇಜಿನಲ್ಲಿ ದಾಖಲಾತಿ ಇಳಿಕೆ

ಪವನ ಕುಲಕರ್ಣಿ
Published 25 ಜೂನ್ 2024, 5:55 IST
Last Updated 25 ಜೂನ್ 2024, 5:55 IST
   

ಕೆಂಭಾವಿ: 2023-24ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಭಾರಿ ಪ್ರಮಾಣದಲ್ಲಿ ಕುಸಿತವಾಗಿರುವ ಪರಿಣಾಮ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾತಿ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಸುಮಾರು ಶೇ 40ರಷ್ಟು ದಾಖಲಾತಿ ಕಡಿಮೆಯಾಗಿದೆ. ಈ ಬಾರಿ ಪ್ರಥಮ ಪಿಯುಸಿಗೆ ಕಲಾ ವಿಭಾಗದಲ್ಲಿ 75, ವಾಣಿಜ್ಯ ವಿಭಾಗ 21 ಹಾಗೂ ವಿಜ್ಞಾನ ವಿಭಾಗಕ್ಕೆ 35 ಸೇರಿದಂತೆ ಒಟ್ಟಾರೆಯಾಗಿ 135 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಕಲಾ ವಿಭಾಗದಲ್ಲಿ 124, ವಾಣಿಜ್ಯ 22, ವಿಜ್ಞಾನ 55 ಸೇರಿ ಒಟ್ಟು 201 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ಪ್ರವೇಶಾತಿ ಪಡೆದುಕೊಂಡಿದ್ದಾರೆ. ಇದನ್ನು ಗಮನಿಸಿದರೆ 80ಕ್ಕೂ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಈ ಬಾರಿಯಾಗಿದ್ದು, ಇದಕ್ಕೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಕಾರಣ ಎನ್ನಲಾಗಿದೆ.

ADVERTISEMENT

ಕೆಂಭಾವಿ ಪಟ್ಟಣ ಸೇರಿದಂತೆ ವಲಯದ ಹಲವು ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿಗೆ ಓದಲು ಬರುವುದು ಸಾಮಾನ್ಯ. ಇದರಲ್ಲಿ ಕೆಲವು ಮಕ್ಕಳು ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಇರುವುದು ಅಥವಾ ಹಾಸ್ಟೆಲ್ ಸೌಲಭ್ಯ ಸಿಗದ ಕಾರಣ ಬೇರೆ ಕಡೆ ಹೋಗಿದ್ದಾರೆ.

ಉತ್ತಮ ಫಲಿತಾಂಶ ಪಡೆದವರು ದೂರದ ಊರಿಗೆ ತೆರಳಿ ಪ್ರತಿಷ್ಠಿತ ಕಾಲೇಜುಗಳಿಗೆ ತೆರಳುತ್ತಿದ್ದು, ಪ್ರವೇಶಾತಿ ಕಡಿಮೆಯಾಗಿದೆ. ಕಾಲೇಜಿನಲ್ಲಿ ಉಪನ್ಯಾಸಕ ಕೊರತೆ ಕಡಿಮೆಯಾಗಿದ್ದರೂ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಐವರು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಕಾಲೇಜು ಕೊಠಡಿಗಳ ಕೊರತೆ ಸೃಷ್ಟಿಸಿಯಾಗುವ ಮುನ್ನವೇ ಕ್ಷೇತ್ರದ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕಾಳಜಿ ವಹಿಸಿ ಹೆಚ್ಚುವರಿ ನಾಲ್ಕು ಕೋಣೆ ಮಂಜೂರು ಮಾಡಿದ್ದು, ಸದ್ಯ ಕಾಮಗಾರಿ ಪ್ರಗತಿಯಲ್ಲಿದೆ.

ಗುಂಡಭಟ್ ಜೋಷಿ
ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ವಿಶೇಷ ಕಾಳಜಿಯಿಂದ ಕಾಲೇಜಿಗೆ ಹೆಚ್ಚುವರಿ ನಾಲ್ಕು ಕೋಣೆ ಮಂಜೂರಾಗಿವೆ. ಅದರಂತೆ ಕಾಲೇಜಿಗೆ ಬೇಕಾಗುವ ಮೂಲ ಸೌಕರ್ಯ ಒದಗಿಸಲಾಗಿದೆ
-ಗುಂಡುಭಟ್ ಜೋಷಿ ಉಪಾಧ್ಯಕ್ಷ ಕಾಲೇಜು ಮೇಲುಸ್ತುವಾರಿ ಸಮಿತಿ
ಇಲ್ಲಿಯವರೆಗೂ ಮೂರು ವಿಭಾಗ ಒಳಗೊಂಡಿರುವ ನಮ್ಮ ಕಾಲೇಜಿನಲ್ಲಿ 135 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು ಜೂನ್ 26ರ ವರೆಗೆ ದಂಡವಿಲ್ಲದೆ ಪ್ರವೇಶ ಪಡೆಯಬಹುದು
- ವೀರೇಂದ್ರ ಧರಿ ಪ್ರಭಾರ ಪ್ರಾಂಶುಪಾಲ ಕೆಂಭಾವಿ ಸರ್ಕಾರಿ ಪದವಿ ಪೂರ್ವ ಕಾಲೇಜು
‘ಪುಂಡ-ಪೋಕರಿಗಳ ಹಾವಳಿಗೆ ಬೇಕು ಕಡಿವಾಣ’
ಪಟ್ಟಣದ ಹೊರಹೊಲಯದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸುತ್ತಲೂ ಆವರಣಗೋಡೆ ಇಲ್ಲ. ತರಗತಿಗಳು ಮುಗಿದ ನಂತರ ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತದೆ. ಕಾಲೇಜು ಅವಧಿಯಲ್ಲಿಯೂ ಪುಂಡ ಪೋಕರಿಗಳ ಹಾವಳಿ ಹೆಚ್ಚುತ್ತದೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಪೊಲೀಸರಿಗೆ ಹಲವು ಬಾರಿ ಮೌಖಿಕವಾಗಿ ತಿಳಿಸಿದ್ದರೂ ಹಾವಳಿಗೆ ಕಡಿವಾಣ ಹಾಕಿಲ್ಲ. ಇನ್ನಾದರೂ ಸಂಪೂರ್ಣ ಆವರಣಗೋಡೆ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.