ADVERTISEMENT

ಯಾದಗಿರಿ: ಗಿರಿನಾಡಿನಲ್ಲಿ ಬೆಳಕಿನ ಹಬ್ಬದ ವಿಶೇಷ

ಬಿ.ಜಿ.ಪ್ರವೀಣಕುಮಾರ
Published 1 ನವೆಂಬರ್ 2024, 7:21 IST
Last Updated 1 ನವೆಂಬರ್ 2024, 7:21 IST
ಯಾದಗಿರಿ ನಗರದ ರೈಲ್ವೆ ಸ್ಟೇಷನ್‌ ರಸ್ತೆಯ ಅಂಗಡಿಯೊಂದರಲ್ಲಿ ದೀಪಾವಳಿ ಹಬ್ಬಕ್ಕಾಗಿ ಆಕಾಶಬುಟ್ಟಿ  ಸೇರಿದಂತೆ ಜಗಮಗಿಸುವ ದೀಪಗಳನ್ನು ಮಾರಾಟಕ್ಕೆ ಇಟ್ಟಿರುವುದು
ಯಾದಗಿರಿ ನಗರದ ರೈಲ್ವೆ ಸ್ಟೇಷನ್‌ ರಸ್ತೆಯ ಅಂಗಡಿಯೊಂದರಲ್ಲಿ ದೀಪಾವಳಿ ಹಬ್ಬಕ್ಕಾಗಿ ಆಕಾಶಬುಟ್ಟಿ  ಸೇರಿದಂತೆ ಜಗಮಗಿಸುವ ದೀಪಗಳನ್ನು ಮಾರಾಟಕ್ಕೆ ಇಟ್ಟಿರುವುದು    

ಯಾದಗಿರಿ: ಜಿಲ್ಲೆಯ ವಿವಿಧೆಡೆ ಬೆಳಕಿನ ಹಬ್ಬ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತಿದೆ.

ದೀಪಾವಳಿ ಬಂತೆಂದರೆ ಸಾಕು ಗ್ರಾಮೀಣ ಪ್ರದೇಶದ ಜನರಲ್ಲಿ ಸಂಭ್ರಮ ಮನೆ ಮಾಡುತ್ತದೆ. ಹಲವು ಸಂಪ್ರದಾಯಗಳನ್ನೊಳಗೊಂಡ ಈ ಹಬ್ಬವು ಹಳ್ಳಿಯ ಸೊಗಡನ್ನು ಬಿಂಬಿಸುತ್ತದೆ. ದಸರಾ ಹಬ್ಬದಿಂದ ದೀಪಾವಳಿ ಬರುವವರೆಗೆ ಕೋಲಾಟ ಮೂಲಕ ಹಬ್ಬವನ್ನು ಆಚರಿಸಲಾಗುತ್ತಿದೆ.

ಹೆಣ್ಣುಮಕ್ಕಳು ಅಡುಗೆ ತಯಾರಿಸುವುದರಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿದೆ. ಪಾಡ್ಯ, ಗಂಗಾಪೂಜೆ, ವನಭೋಜನ, ಪುಷ್ಕರಣಿ ಬಳಿ ಪೂಜೆ ಇತ್ಯಾದಿ ಕಾರ್ಯಗಳನ್ನು ಹಬ್ಬದ ಅಂಗವಾಗಿ ಮಾಡಲಾಗುತ್ತಿದೆ.

ADVERTISEMENT

ಉಳಿದಂತೆ ಲಕ್ಷ್ಮಿ ಪೂಜೆ ಮಾಡಿ ಹೋಳಿಗೆ ಸಿಹಿಯೂಟ ಮಾಡಿ ಸಂಜೆ ಪಟಾಕಿ ಸಿಡಿಸುವುದು ಸಾಮಾನ್ಯ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಹೆಚ್ಚಿರುತ್ತದೆ. ದೇವಸ್ಥಾನಗಳಲ್ಲಿ ಹಬ್ಬದ ಸಡಗರ ಹೆಚ್ಚಿರುತ್ತದೆ.

ದೀಪಾವಳಿ ಹಬ್ಬದ ದಿನ ಸೂರ್ಯ ಉದಯಿಸುವುದಕ್ಕಿಂತ ಮೊದಲೇ ಪುರುಷರಿಗೆ ಮಹಿಳೆಯರಿಂದ ಆರತಿ ಪೂಜೆ ನಡೆಯುತ್ತದೆ. ಇನ್ನು ಕೆಲವು ಕಡೆ ಸೂರ್ಯೋದಯದ ನಂತರ ಆರತಿ ಪೂಜೆ ನಡೆಯುತ್ತದೆ.

ಪಾಂಡವರು ಯುದ್ಧಕ್ಕೆ ತೆರಳುವ ವೇಳೆ ಆರತಿ ಪೂಜೆ ಮಾಡಿಸಿಕೊಂಡಿದ್ದರು ಎನ್ನುವ ಪ್ರತೀತಿಯಿಂದ ಆದೇ ರೀತಿ ಹಬ್ಬದ ಆಚರಣೆ ಮಾಡಲಾಗುತ್ತಿದೆ.

ನೀರು ತುಂಬುವ ಹಬ್ಬ: ದೀಪಾವಳಿಯನ್ನು ನೀರು ತುಂಬುವ ಹಬ್ಬ ಎಂದು ಆಚರಣೆ ಮಾಡಲಾಗುತ್ತಿದೆ. ಅಮಾವಾಸ್ಯೆ ಹಿಂದಿನ ದಿನ ಸಂಜೆ ವೇಳೆ ಖಾಲಿಯಾಗಿರುವ ಎಲ್ಲ ಪಾತ್ರೆಗಳಿಗೆ ನೀರು ತುಂಬಿಸುವ ಮೂಲಕ ಹಬ್ಬದ ಆಚರಣೆಯಲ್ಲಿ ಸೇರಿಕೊಂಡಿದೆ.

ದೀಪಾವಳಿಯ ಮೊದಲನೇ ದಿನ ನೀರು ತುಂಬಿಸುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ಬೆಳಿಗ್ಗೆ ಮಹಿಳೆಯರು ಮನೆಯಲ್ಲಿನ ಕೊಡ, ಬಿಂದಿಗೆಗಳನ್ನು ತುಂಬಿಸಿ ಪೂಜೆ ಸಲ್ಲಿಸುತ್ತಾರೆ. ನಂತರ ಮನೆಯ ಯಜಮಾನ, ಗಂಡು ಮಕ್ಕಳಿಗೆ ಆರತಿ ಬೆಳಗುವ ರೂಢಿ ಇದೆ.

ಅಮಾವಾಸ್ಯೆ ದಿನ ಗೊಲ್ಲರ ಪೂಜೆ ಎಂದು ಆಚರಿಸುತ್ತಾರೆ. ಹೋಳಿಗೆ, ಕರಿಗಡಬು, ಸಜ್ಜಕ ತಯಾರಿಸಿ ಡೋಣಿ ತುಂಬಿಸುತ್ತಾರೆ. ಗಿರಿನಾಡಿನಲ್ಲಿ ಮೈಲಾ‍ಪುರದ ಮೈಲಾರಲಿಂಗೇಶ್ವರನಿಗೆ ಹೆಚ್ಚಿನ ಭಕ್ತರು ನಡೆದುಕೊಳ್ಳುವುದರಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಸಂಜೆ ಜಾನುವಾರು ಮತ್ತು ಕುರಿಗಳನ್ನು ಪೂಜೆ ಮಾಡಿ ಅವುಗಳಿಗೆ ಯಾವುದೇ ರೋಗ ಬಾರದಂತೆ ದೇವರಲ್ಲಿ ಬೇಡಿಕೊಳ್ಳುತ್ತಾರೆ.

ಪಾಡ್ಯಮಿಯಂದು ಹುಡುಗರು ಹಳ್ಳದಲ್ಲಿ ಸಿಗುವ ಬೇರು (ಜೇಕು)ನಿಂದ ದೀಪದ ಮಾದರಿಯಲ್ಲಿ ಗೂಡು ತಯಾರಿಸಿ ಅದರಲ್ಲಿ ದೀಪ ಇಟ್ಟು ಮನೆ ಮನೆಗೆ ತೆರಳಿ ಹಾಡು ಹಾಡುತ್ತ ಆಕಳು, ಕರು, ಎಮ್ಮೆಗಳಿಗೆ ದೀಪ ಬೆಳಗುತ್ತಾರೆ. ಬೆಳೆಗಿದ ಹುಡುಗರಿಗೆ ಆ ಮನೆಯವರು ಜೋಳ, ಗೋಧಿ, ಕಾಳು ಮತ್ತು ದಕ್ಷಿಣೆ ನೀಡುವ ಸಂಪ್ರದಾಯ ದೀಪಾವಳಿಯಂದು ಇಂದಿಗೂ ಈ ಭಾಗದಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ.

ಯಾದಗಿರಿ ನಗರದ ರೈಲ್ವೆ ಸ್ಟೇಷನ್‌ ರಸ್ತೆಯ ಅಂಗಡಿಯೊಂದರಲ್ಲಿ ದೀಪಾವಳಿ ಹಬ್ಬಕ್ಕಾಗಿ ಇಟ್ಟಿದ್ದ ಬಣ್ಣದ ದೀಪಗಳನ್ನು ಬಾಲಕಿ ಕುತೂಹಲದಿಂದ ವೀಕ್ಷಿಸಿದಳು  
ಯಾದಗಿರಿ ನಗರದ ಮೆಥೋಡಿಸ್ಟ್‌ ಚರ್ಚ್‌ ಮುಂಭಾಗದಲ್ಲಿ ಮಣ್ಣಿನ ಹಣತೆ ವ್ಯಾಪಾರ ನಡೆಯಿತು
ಕಾಳ ಪಾಟ್‌ ಬಲಿ
ಯಾದಗಿರಿ ಜಿಲ್ಲೆಯ ಪ್ರತಿಯೊಂದು ಹೋಬಳಿಯಲ್ಲಿ ತಾಂಡಾಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಲಂಬಾಣಿ ಸಮುದಾಯದವರು ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ದುಡಿಯಲು ದೂರದ ಮಹಾನಗರಗಳಿಗೆ ತೆರಳಿದವರು ‌ದೀಪಾವಳಿಗೆ ತಮ್ಮ ಊರಿಗೆ ಬರುತ್ತಾರೆ. ಯಾದಗಿರಿ ತಾಲ್ಲೂಕಿನ ಯರಗೋಳ ಮುದ್ನಾಳ ದೊಡ್ಡ ತಾಂಡಾ ಆಶನಾಳ ತಾಂಡಾ ಮುಂಡರಗಿ ಅಲ್ಲಿಪುರ ವೆಂಕಟೇಶ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ನೃತ್ಯವೇ ಇಲ್ಲಿ ಆಕರ್ಷಣೆಯಾಗಿದೆ. ದಸರಾ ಹಬ್ಬದಿಂದ ದೀಪಾವಳಿವರೆಗೆ ಪ್ರತಿನಿತ್ಯ ರಾತ್ರಿ ಮಹಿಳೆಯರು ನೃತ್ಯ ಮಾಡುವ ಸಂಪ್ರದಾಯ ಕಂಡುಬರುತ್ತದೆ. ಶಹಾಪುರ ತಾಲ್ಲೂಕಿನ ಹೋತಪೇಟ ಗ್ರಾಮಕ್ಕೆ ಹೊಂದಿಕೊಂಡ ನಾಲ್ಕು ತಾಂಡಾಗಳಲ್ಲಿ ದೀಪಾವಳಿ ಸಂಭ್ರಮದಿಂದ ನಡೆಯುತ್ತದೆ. ದಿಬ್ಬ ತಾಂಡಾ ನಡುವಿನ ತಾಂಡಾ ಕೆಳಗಿನ ತಾಂಡಾ ಮತ್ತು ಮುಂದಿನ ತಾಂಡಾಗಳಲ್ಲಿ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಗುತ್ತದೆ. ದವಾಳಿ (ದೀಪಾವಳಿ) ಹಬ್ಬವನ್ನು ವಿಜೃಂಭಣೆ ಹಾಗೂ ಭಯಭಕ್ತಿಯಿಂದ ಆಚರಿಸುವ ‘ಗೋರ್‌’ ಜನರು ಈ ದೀಪಾವಳಿ ಅಮಾವಾಸ್ಯೆಯನ್ನು ‘ಕಾಳಿಮಾಸ್’ ಎಂಬುದಾಗಿ ಆಚರಿಸುತ್ತಾರೆ. ಕಾಳಿಮಾಸ್ ಎಂದರೆ ಕಾಳ ಅಮಾವಾಸ್ ಎಂಬುದಾಗಿದ್ದು ವರ್ಷದಲ್ಲಿ ಬರುವ ಹನ್ನೆರಡು ಅಮಾವಾಸ್ಯೆಗಳಲ್ಲಿಯೇ‌ ಈ ಅಮಾವಾಸ್ಯೆಯನ್ನೇ ಗೋರ್‌ ಜನರು ಕಾಳಿಮಾಸ್ (ಕತ್ತಲೆಯ ಅಮಾವಾಸ್ಯೆ) ಎಂದು ಆಚರಣೆ ಮಾಡುತ್ತಾರೆ. ಕಾಳಿಮಾಸ್ ದಿನ ಗೋರ್‌ ಜನರು ಪ್ರತಿ ತಾಂಡಾಗಳಲ್ಲಿಯೂ ಕರಿ ಹೆಣ್ಣು ಆಡಿನ (ಕಾಳ ಪಾಟ್) ಬಲಿಯನ್ನೇ ಕೊಡುತ್ತಾರೆ. ತಾಂಡಾದವರಿಗೆಲ್ಲರಿಗೂ ಈ ಆಡಿನ‌ ಮಾಂಸವನ್ನು ಪಾಲು ಹಂಚಿ‌ ತಾಂಡಾದಲ್ಲಿ ಸಮಾನತೆ ಸಾರುತ್ತಾರೆ. ತಾಂಡಾಗಳಲ್ಲಿ ದೀಪಾವಳಿ ಎಂದರೆ ಆರತಿ ಬೆಳಗುವುದು ಹಾಡು ಹಾಡುವುದು ನೃತ್ಯ ಮಾಡುವುದು ಭಕ್ತಿಗೀತೆಗಳ ಮೂಲಕ ಕುಲದೇವತೆ ಮತ್ತು ಸಂತ ಸೇವಾಲಾಲ್‌ ಅವರನ್ನು ಪೂಜಿಸುವುದಾಗಿದೆ. ಕಾಂಚಳಿ (ಜಾಕೀಟು) ಪೇಟಿಯಾ (ಲಂಗ) ಛಾಟೀಯ (ಮೇಲು ವಸ್ತ್ರ) ಅಲಂಕಾರಕ್ಕೆ ಬೇಕಾಗುವ ಸಾಮಗ್ರಿ ರಂಗೋಲಿ ಪುಡಿ ಖರೀದಿಸುತ್ತಾರೆ. ಅಮಾವಾಸ್ಯೆಯ ಸಂಜೆ ಮೇರಾ ಮಾಡುವಾಗ ಬಲಿ ಪಾಡ್ಯಮಿಯಂದು ಲಂಬಾಣಿ ತಾಂಡಾದ ಅವಿವಾಹಿತ ಹೆಣ್ಣುಮಕ್ಕಳು ತಾಂಡಾದ ಕತ್ತಲೆ ಓಡಿಸಿ ಬೆಳಕು ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸುವರು. ನಂತರ ದೀಪಾವಳಿ ದಿನ ಆ ವರ್ಷದಲ್ಲಿ ಅಗಲಿದವರನ್ನು ನೆನೆದು ಅವರ ಆತ್ಮಕ್ಕೆ ಶಾಂತಿ ಕೋರುವರು. ಸಾವು ಸಂಭವಿಸಿದ ಮನೆಗಳಿಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವರು. ದೇವರ ನಾಮ ಸ್ಮರಣೆಯೊಂದಿಗೆ ಅಪ್ಪ ಅಮ್ಮ ಅಣ್ಣ ತಮ್ಮ ಗುರು ಹಿರಿಯರ ಗುಣಗಾನ ಮಾಡಿ ನಮಸ್ಕರಿಸುತ್ತಾರೆ. ‘ವರ್ಸೇರ ದಾಡೇರ್ ಕೋರ್ ದವಾಳಿ ತೋನ್ ಮೇರಾ ಸೇವಾಲಾಲ್ ತೋನ್ ಮೇರಾ ಮಾರಿಯಮ್ಮ ತೋನ್ ಮೇರಾ’ ಎಂಬ ಶುಭಾಶಯದ ಹಾಡು ಹಾಡುವುದರ ಮುಖಾಂತರ ಪ್ರತಿ ತಾಂಡಾದ ಮನೆಗಳಲ್ಲಿ ದೀಪಾವಳಿ ಹಬ್ಬದ ವಿಶೇಷ. ಮಾರನೇ ದಿನ ಹೂವು ತರಲು ಹೊರಟ ಯುವತಿಯರು ಲಂಬಾಣಿ ಭಾಷೆಯಲ್ಲಿ ಹಬ್ಬದ ಮಹತ್ವ ಸಾರುವ ಹಾಡುಗಳ ಜೊತೆಗೆ ಹೂವು ಕೀಳಲು ಬಂದ ತಮ್ಮನ್ನು ಬಯ್ಯಬೇಡಿ ಎಂದು ಹೊಲದ ಮಾಲೀಕನಿಗೆ ಹಾಡಿನಲ್ಲೇ ಮನವಿ ಮಾಡುತ್ತಾರೆ. ಕಾಡು ಹೂವುಗಳನ್ನು ಕಿತ್ತು ಬುಟ್ಟಿಯಲ್ಲಿ ಸಂಗ್ರಹಿಸಿಕೊಂಡು ಬಂದು ಹಾಡುಗಳನ್ನು ಹಾಡುತ್ತ ತಾಂಡಾದ ಪ್ರತಿ ಮನೆಗೆ ತೆರಳುತ್ತಾರೆ. ಮನೆಯ ಮುಂದೆ ಹೂವು ಹಾಕಿ ಬರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.