ಕಣೇಕಲ್(ಸೈದಾಪುರ): ಕುಡಿಯುವ ಮತ್ತು ಬಳಕೆ ನೀರು ಸರಬರಾಜು ಮಾಡುವ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಭಾರೀ ಅಪಾಯ ಸೃಷ್ಟಿಸುವ ಸಾಧ್ಯತೆ ಇರುವುದರಿಂದ ನಿತ್ಯ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಆತಂಕದಲ್ಲಿ ಕಾಲ ಕಳೆಯುವಂತ ಸ್ಥಿತಿ ನಿರ್ಮಾಣವಾಗಿದೆ.
ಸಮೀಪದ ಕಾಳೆಬೆಳಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಣೇಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿರುವ ನೀರು ಸಂಗ್ರಹದ ಓವರ್‌ಹೆಡ್ ಟ್ಯಾಂಕ್ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಇದು ಭಾರೀ ಅಪಾಯದ ಮುನ್ಸೂಚನೆ ನೀಡುತ್ತಿದ್ದರೂ ಸಂಬಂಧಿಸಿದವರು ಅದನ್ನು ತೆರವುಗೊಳಿಸದೇ ಬಿಟ್ಟಿರುವುದು ಶಾಲಾ ಮಕ್ಕಳಲ್ಲಿ, ಶಿಕ್ಷಕರಲ್ಲಿ, ಗ್ರಾಮಸ್ಥರಲ್ಲಿ ಭಯ, ಆತಂಕ ಮೂಡಿಸಿದೆ.
ಗ್ರಾಮದ ವಾರ್ಡ್ ಸಂಖ್ಯೆ 1ರಲ್ಲಿರುವ ಓವರ್‌ಹೆಡ್ ಟ್ಯಾಂಕ್ಅನ್ನು ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಇದು ಅಂದಾಜು 30,000 ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ವಾರ್ಡ್ 1ರಲ್ಲಿ ಬರುವ ಹಲವು ಮನೆಗಳಿಗೆ ಇದರ ಮೂಲಕ ಕುಡಿಯುವ ಮತ್ತು ಮನೆ ಬಳಕೆ ನೀರು ಸರಬರಾಜು ಆಗುತ್ತಿದೆ. ಆದರೆ ಕಾಲ ಕಾಲಕ್ಕೆ ಮಾಡಬೇಕಾದ ಸರಿಯಾದ ನಿರ್ವಹಣೆ ಕೊರತೆಯಿಂದ ಈ ಸ್ಥಿತಿಗೆ ಬಂದಿದೆ ಎಂದು ಗ್ರಾಮದ ಮಲ್ಲಪ್ಪಗೌಡ ನಿವಾಸಿ ಹೇಳುತ್ತಾರೆ.
ಶಾಲಾವರಣದಲ್ಲಿನ ಟ್ಯಾಂಕ್ ಬೀಳುವ ಆತಂಕ: ಸುಮಾರು 40 ವರ್ಷಗಳಿಗಿಂತ ಹಿಂದೆ ನಿರ್ಮಿಸಿದ ಹಳೆಯ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆಗೊಂಡಿದ್ದು ಸಿಮೆಂಟ್ ಉದುರಿ ಬೀಳುತ್ತಿದೆ. ಓವರ್‍ಹೆಡ್ ಟ್ಯಾಂಕ್‍ಗೆ ಆಧಾರವಾಗಿದ್ದ ಆರು ಕಂಬಗಳು ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡಿವೆ. ಅದರಲ್ಲಿನ ಕಂಬಿಗಳು ತುಕ್ಕು ಹಿಡಿದು ಹಾಳಾಗಿ ಹೊರಗಡೆ ಕಾಣುತ್ತಿವೆ. ಯಾವಾಗ ಟ್ಯಾಂಕ್ ಸಂಪೂರ್ಣ ಕುಸಿದು ಬೀಳುತ್ತದೋ, ಸಾವು ನೋವು ಸಂಭವಿಸುತ್ತದೋ ಎಂಬ ಆತಂಕದಲ್ಲಿಮಕ್ಕಳು ಮತ್ತು ಶಿಕ್ಷಕರು ಇದ್ದಾರೆ ಎಂದು ಪಾಲಕ ಮಲ್ಲೆಶ ಅವರು ಕಳವಳ ವ್ಯಕ್ತಪಡಿಸಿದರು.
ನಿತ್ಯ ಕೊಳಚೆ ನೀರು ಮನೆಗಳಿಗೆ ಸರಬರಾಜು: ಟ್ಯಾಂಕ್‍ನ ಮೇಲ್ಭಾಗದಲ್ಲಿ ಸರಿಯಾದ ಮುಚ್ಚಳಿಕೆ ಇಲ್ಲದೆ ಇರುವುದರಿಂದ ಪಕ್ಷಿಗಳ ಮಲಮೂತ್ರ, ಕೆಲವೊಮ್ಮೆ ಪಕ್ಷಿಗಳು ಅದರಲ್ಲಿಯೇ ಬಿದ್ದು ಸಾಯುತ್ತವೆ. ಅದನ್ನು ಕಾಲ ಕಾಲಕ್ಕೆ ಸ್ವಚ್ಚಗೊಳಿಸದೆ ಇರುವುದರಿಂದ ಟ್ಯಾಂಕ್ ಒಳಗಡೆ ಪಾಚಿಗಟ್ಟಿಕೊಂಡು ಬಿಟ್ಟಿದೆ. ಅದೇ ಕೊಳಚೆ ನೀರು ನಿತ್ಯ ಮನೆಗಳಿಗೆ ಸರಬರಾಜು ಆಗುತ್ತವೆ ಎಂದು ಗ್ರಾಮಸ್ಥ ರವಿ ಕುಮಾರ ಡೀಲರ್ ಹೇಳಿದರು.
ಬಿದ್ದು ಹೋಗುವ ಟ್ಯಾಂಕ್‍ಗೆ ಬಣ್ಣಸುಣ್ಣ: ಗ್ರಾಮದಲ್ಲಿ ಜೆಜೆವೈ ಯೋಜನೆಯ ಕಾಮಗಾರಿ ಮಾಡಿದ ಗುತ್ತಿಗೆದಾರರು ಟ್ಯಾಂಕ್‍ಗೆ ಬಣ್ಣ ಸುಣ್ಣ ಬಳಿದು ಕಾಮಗಾರಿಯ ಹಣವನ್ನು ತೆಗೆದುಕೊಂಡಿದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಹಲವು ಬಾರಿ ಪಿಡಿಒಗೆ ಮನವಿ: ಶಾಲಾವರಣದಲ್ಲಿರುವ ಶಿಥಿಲಗೊಂಡ ನೀರಿನ ಟ್ಯಾಂಕ್‍ನ್ನು ತೆರವುಗೊಳಿಸಿ ಶಾಲಾಮಕ್ಕಳನ್ನು ಭಯ ಮುಕ್ತರನ್ನಾಗಿಸಿ ಎಂದು ಹಲವು ಬಾರಿ ಕಾಳೆಬೆಳಗುಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಹಿಂದಿನ ಮುಖ್ಯಶಿಕ್ಷರು ಲಿಖಿತ ಹಾಗೂ ಮೌಖಿಕ ಮನವಿಯನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೇಷ್ಮಾ ತಿಳಿಸಿದರು.
400 ರಿಂದ 500 ಶಾಲಾ ಮಕ್ಕಳು ಅಪಾಯದಂಚಿದ್ದೂ ಟ್ಯಾಂಕ್ ತೆರವುಗೊಳಿಸದರೆ ಒಳ್ಳೆಯದು.ಮಲ್ಲಿಕಾರ್ಜುನ ದೊಡ್ಡ ಉಪ್ಪಾರ ಕಣೇಕಲ್
ದಿನಾಲು ಮಕ್ಕಳು ಶಾಲೆಗೆ ಹೋಗಿ ಮರಳಿ ಬರುವವರೆಗೂ ಜೀವ ಕೈಯಲ್ಲಿಡಿದಿಟ್ಟುಕೊಂಡಂತಾಗಿದೆ. ಟ್ಯಾಂಕ್ ಬೀಳುವ ಭಯ ಪೋಷಕರನ್ನು ಕಾಡುತ್ತಿದೆ.ಸುರೇಶ ಬಿರಾದಾರ ಕಣೇಕಲ್ ವಲಯಾಧ್ಯಕ್ಷ ಜಯ ಕರ್ನಾಟಕ ಸಂಘಟನೆ ಸೈದಾಪುರ
ಈಗಾಗಲೇ ಮುಖ್ಯಶಿಕ್ಷಕರು ನೀಡಿದ ಮನವಿಯನ್ನು ಜಿ.ಪಂ ಪಿಆರ್‌ಇ ವಿಭಾಗಕ್ಕೆ ಕೊಟ್ಟಿದ್ದೇನೆ. ಶೀಘ್ರದಲ್ಲಿ ಅಧಿಕಾರಿಗಳು ಪರಿಶೀಲಿಸಿ ಟ್ಯಾಂಕ್ ತೆರವುಗೊಳಿಸುವ ಕಾರ್ಯ ಮಾಡುತ್ತೇವೆ ಎಂದಿದ್ದಾರೆ.ಶಿವಶರಣಪ್ಪ ಪಿಡಿಒ ಕಾಳೆಬೆಳಗುಂದಿ ಗ್ರಾ. ಪಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.