ಯಾದಗಿರಿ: ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಕಠಿಣ ಪರಿಶ್ರಮ ಬೇಕು. ಮೊದಲು ವಿಫಲವಾದರೂ, ಎಂದಿಗೂ ಛಲ ಬಿಡದೇ ಶ್ರಮಿಸಿದರೆ ಗುರಿ ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸ್ನೇಹಲ್.ಆರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಯಾದಗಿರಿ ನಗರದ ಪ್ರೌಢ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಹೆಜ್ಜೆಗೊಂದು ದಾರಿ, ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಸ್ಫೂರ್ತಿ ಸಂವಾದ ಎಂಬ ನಡೆಸಿದ ಅವರು, ಬಹು ಆಸಕ್ತಿಯಿಂದ ವಿದ್ಯಾರ್ಥಿಗಳಿಂದ ವಿವಿಧ ಪ್ರಶ್ನೆಗಳನ್ನು ಕೇಳುತ್ತಾ ವಿದ್ಯಾರ್ಥಿಗಳ ಭವಿಷ್ಯದ ಗುರಿಗಳು ಮತ್ತು ಅವರ ಅಭಿಲಾಷೆಗಳ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಯಾವುದೇ ಗುರಿ ತಪ್ಪಲ್ಲ. ಆದರೆ, ಆ ನಿಮ್ಮ ಗುರಿ ದೊಡ್ಡದಾಗಿರಬೇಕು. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯನ್ನು ದೇಶದ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗಿದೆ ಎಂದರು.
ಯುಪಿಎಸ್ಸಿ ಪರೀಕ್ಷೆಗಳು ಹಾವು ಏಣಿ ಆಟವಿದ್ದಂತೆ. ಈ ಪರೀಕ್ಷೆಗಳು ಮೂರು ಹಂತದಲ್ಲಿ ನಡೆಯುತ್ತವೆ. ಒಂದುವೇಳೆ ಒಂದು ಹಂತದಲ್ಲಿಯೂ ಅನ್ನುತ್ತೀರ್ಣ ಆದರೆ ಮತ್ತೇ ಮೂರು ಹಂತದ ಪರೀಕ್ಷೆ ಎದುರಿಸಬೇಕಾಗುತ್ತದೆ. ಹೀಗಾಗಿ ಛಲದಿಂದ ಪರಿಶ್ರಮಪಟ್ಟರೆ ಮಾತ್ರ ಯಶಸ್ಸು ಸಿಗಲು ಸಾಧ್ಯವಾಗುತ್ತದೆ
ಸರ್ಕಾರಿ ಕರ್ತವ್ಯದ ಬಗ್ಗೆ ಸೂಕ್ತ ಮಾಹಿತಿ ಪಡೆದ ವಿದ್ಯಾರ್ಥಿಗಳು, ತಮ್ಮ ಪರಿಚಯ ಜೊತೆಗೆ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪರಿಚಯ ಮಾಡಿಕೊಂಡು, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ ನೀಡಿ ಜಿಲ್ಲಾಡಳಿತದ ಕಾರ್ಯ ವೈಖರಿ ಹೇಗಿದೆ, ಜನರು ಯಾವ ಯಾವ ಕೆಲಸಕ್ಕಾಗಿ ಜಿಲ್ಲಾಡಳಿತ ಭವನಕ್ಕೆ ಬರುತ್ತಾರೆ. ಇಲ್ಲಿನ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಗಳನ್ನು ನೋಡುವ ಮತ್ತು ಮಕ್ಕಳು ಪ್ರೇರೇಪಿಸುವ ಕಾರ್ಯ ಜಿಲ್ಲಾಡಳಿತದ್ದಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿಯು, ಒಳ್ಳೆಯ ಸಮಾಜ ನಿರ್ಮಾಣಕ್ಕೆ ವಿದ್ಯಾವಂತ ಯುವಕ, ಯುವತಿಯರ ಅವಶ್ಯವಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.
ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ನಮ್ಮ ಹಂತದಲ್ಲಿದ್ದರೆ ಪರಿಹರಿಸುವ ಅವಕಾಶವಿದೆ. ಜಿಲ್ಲೆಯ ಜನರು ದೂರದ ನಗರಗಳಿಗೆ ಗುಳೆ ಹೋಗುತ್ತಾರೆ. ಅದನ್ನು ತಪ್ಪಿಸುವ ಆಸೆಯೂ ಇದೆ. ಜಿಲ್ಲೆಯನ್ನು ಬಯಲು ಶೌಚಮುಕ್ತ ಮಾಡಬೇಕು. ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಕಾಳಜಿ ವಹಿಸಬೇಕು. ನಮ್ಮ ಸಂಸ್ಕೃತಿ ಪರಂಪರೆಯಲ್ಲಿ ಮನೆ ಮದ್ದು ಚಿಕಿತ್ಸೆಗಳ ಉಪಯೋಗವನ್ನು ಹಿರಿಯರು ಬಹಳಷ್ಟು ಹೇಳಿದ್ದಾರೆ. ಅವುಗಳನ್ನು ಪಾಲಿಸುವುದರೊಂದಿಗೆ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಎಲ್ಲಾ ವಿದ್ಯಾರ್ಥಿಗಳಿಗೆ ಶಬ್ದಕೋಶ ಹಾಗೂ ಪೆನ್ ನೀಡಿ ಉತ್ತಮ ಭವಿಷ್ಯಕ್ಕೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಬಸವಣ್ಣಪ್ಪ ಸಿನ್ನೂರ, ಮರೆಪ್ಪ, ಮುನೀರ್ ಅಹ್ಮದ್ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.