ವಡಗೇರಾ: ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾದರೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಈವರೆಗೂ ಒಂದೇ ಒಂದು ಬಾರಿಯೂ ತಾಲ್ಲೂಕಿಗೆ ಭೇಟಿ ನೀಡಿಲ್ಲ. ಜನರ ಸಮಸ್ಯೆ ಆಲಿಸಿಲ್ಲ. ಹೀಗಾಗಿ ತಾಲ್ಲೂಕಿನ ಜನರು ಸಚಿವರ ಬರುವಿಕೆಗಾಗಿ ಬಕ ಪಕ್ಷಿಯಂತೆ ಕಾಯುವಂತಾಗಿದೆ.
ತಾಲ್ಲೂಕು ಕೇಂದ್ರವಾಗಿ 7 ವರ್ಷಗಳು ಕಳೆದಿವೆ. ತಾಲ್ಲೂಕಿನ ಅಭಿವೃದ್ಧಿ ಮರೀಚಿಕೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯಾದಗಿರಿ ಉಸ್ತುವಾರಿ ಸಚಿವರಾಗಿದ್ದ ಪ್ರಭು ಚವ್ಹಾಣ ಅವರು, ವಡಗೇರಾ ಪಟ್ಟಣಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದರು. ನಂತರ ಅದೇ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟೆ ಶ್ರೀನಿವಾಸ ಪೂಜಾರಿ ಅವರು, ಬೆಂಡೆಬೆಂಬಳಿ ಮೊರಾರ್ಜಿ ವಸತಿ ಶಾಲಾ ಆವರಣದಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಆದರೆ ನಮ್ಮದೇ ಜಿಲ್ಲೆಯವರಾಗಿರುವ ಸಚಿವ ಶರಣಬಸಪ್ಪ ದರ್ಶಾನಾಪುರ ಅವರು ಮಾತ್ರ ವಡಗೇರಾ ತಾಲ್ಲೂಕಿಗೆ ಭೇಟಿಕೊಟ್ಟಿಲ್ಲ. ಹೀಗಾಗಿ ತಾಲ್ಲೂಕಿನ ಜನರ ಗೋಳು ಕೇಳವವರು ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಅಳಲು ತೊಂಡಿಕೊಂಡರು.
ನೋಂದಣಿ ಕಚೇರಿಯಿಲ್ಲ: ಈ ಭಾಗದ ರೈತರು ತಮ್ಮ ಜಮೀನುಗಳ ಮಾರಾಟ ಹಾಗೂ ಖರೀದಿಗೆ ದೂರದ ಶಹಾಪುರಕ್ಕೆ ಹೋಗಬೇಕು. ಅದರಿಂದ ರೈತರ ಸಮಯ ಹಾಗೂ ಹಣ ಎರಡೂ ಪೋಲಾಗುತ್ತಿದೆ. ನೋಂದಣಿಗೆ ಸರ್ಕಾರಕ್ಕೆ ಕಟ್ಟುವ ಶುಲ್ಕ ಸಹ ಶಹಾಪುರದ ಪಾಲಾಗುತ್ತಿದೆ. ಒಂದು ವೇಳೆ ವಡಗೇರಾದಲ್ಲಿ ನೋಂದಣಿ ಕಚೇರಿ ಆರಂಭವಾದರೆ ನೋಂದಣಿ ಶುಲ್ಕ ವಡಗೇರಾ ತಾಲ್ಲೂಕಿನ ಖಾತೆಗೆ ಜಮೆಯಾಗುತ್ತದೆ. ಮಿನಿವಿಧಾನಸೌಧ ನಿರ್ಮಾಣಕ್ಕಾಗಿ ನಿವೇಶನ ಮಂಜೂರಾಗಿದೆ. ನಿರ್ಮಾಣಕ್ಕೆ ಕ್ರಮಕೈಗೊಂಡಿಲ್ಲ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಅತೀ ಹಿಂದುಳಿದ ತಾಲ್ಲೂಕು ಎಂದು ಘೋಷಣೆಯಾಗಿರುವ ವಡಗೇರಾ ತಾಲ್ಲೂಕಿನಲ್ಲಿ, ಶಿಕ್ಷಣ, ಕೃಷಿ, ಕುಡಿಯುವ ನೀರಿನ ಸಮಸ್ಯೆಗಳ ಜತೆಗೆ ತಾಲ್ಲೂಕು ಕಚೇರಿಗಳು ಇಲ್ಲ. ಹೀಗಾಗಿ ಈ ಭಾಗದ ರೈತರು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಹಳೆಯ ತಾಲ್ಲೂಕು ಶಹಾಪುರಕ್ಕೆ ತೆರಳಬೇಕಾಗಿದೆ.
ಅಕಾಲಿಕ ಮಳೆಯಾಗಿ ರೈತರ ಜಮೀನಿನಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಹಾಳಾಗಿವೆ. ಬೆಳೆಹಾನಿ ಪರಿಹಾರ ಕೊಡಿಸುವ ಭರವಸೆ ನೀಡುವುದಕ್ಕಾದರೂ ಸಚಿವರು ತಾಲ್ಲೂಕಿಗೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಬೇಕಿತ್ತು. ಆದರೆ ಸಚಿವರು ಇದ್ಯಾವುದನ್ನೂ ಮಾಡಿಲ್ಲ. ತಾಲ್ಲೂಕಿನ ವ್ಯಾಪ್ತಿಯ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಉಸ್ತುವಾರಿ ಸಚಿವರಿಗೆ ತಿಳಿಸಿ, ಪರಿಹಾರ ಕಂಡುಕೊಳ್ಳಲು ಕಾಯುತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಯಾದಗಿರಿ ಶಹಾಪುರ ಹಾಗೂ ಕಲಬುರಗಿಗೆ ಮಾತ್ರ ಸೀಮಿತರಾಗಿದ್ದಾರೆ. ಹಿಂದುಳಿದ ವಡಗೇರಾ ತಾಲ್ಲೂಕು ಕೇಂದ್ರಕ್ಕೆ ಈವರೆಗೂ ಭೇಟಿ ನೀಡಿಲ್ಲ. ರೈತರು ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸಿಲ್ಲರಾಜಶೇಖರ ಕಾಡಂನೋರ, ಅಧ್ಯಕ್ಷ ಬಿಜೆಪಿ ಗ್ರಾಮೀಣ ಮಂಡಲ ವಡಗೇರಾ
ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಬಿಡುವಿಲ್ಲದ ಕಾರ್ಯಕ್ರಮಗಳು ಇರುವುದರಿಂದ ವಡಗೆರಾ ತಾಲ್ಲೂಕು ಕೇಂದ್ರಕ್ಕೆ ಭೇಟಿ ನೀಡಲು ಆಗಿಲ್ಲ. ಮುಂಬರುವ ದಿನಗಳಲ್ಲಿ ರೈತರ ಹಾಗೂ ಸಾರ್ವಜನಿಕರು ಸಮಸ್ಯೆಗಳನ್ನು ಆಲಿಸಲಿದ್ದಾರೆಲಚಮರಡ್ಡಿ ಬಾಗ್ಲಿ ಅಧ್ಯಕ್ಷ ಯಾದಗಿರಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.