ADVERTISEMENT

ಭತ್ತದ ಹುಲ್ಲು ಸುಟ್ಮ‌ರೆ ಮಣ್ಣಿನ ಫಲವತ್ತತೆಗೆ ಹಾನಿ: ವಿಜ್ಞಾನಿಗಳ ಎಚ್ಚರಿಕೆ

ಟಿ.ನಾಗೇಂದ್ರ
Published 13 ಡಿಸೆಂಬರ್ 2019, 8:57 IST
Last Updated 13 ಡಿಸೆಂಬರ್ 2019, 8:57 IST
ಶಹಾಪುರ ತಾಲ್ಲೂಕಿನ ಮಂಡಗಳ್ಳಿ ಗ್ರಾಮದ ಬಳಿ ಭತ್ತ ಕಟಾವು ಮಾಡಿದ ಗದ್ದೆಯಲ್ಲಿ ಹುಲ್ಲು ಸುಡುತ್ತಿರುವ ರೈತ
ಶಹಾಪುರ ತಾಲ್ಲೂಕಿನ ಮಂಡಗಳ್ಳಿ ಗ್ರಾಮದ ಬಳಿ ಭತ್ತ ಕಟಾವು ಮಾಡಿದ ಗದ್ದೆಯಲ್ಲಿ ಹುಲ್ಲು ಸುಡುತ್ತಿರುವ ರೈತ   

ಶಹಾಪುರ: ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಕಟಾವು ಮುಕ್ತಾಯವಾಗಿದೆ. ಗದ್ದೆಯಲ್ಲಿ ಬಿದ್ದಿರುವ ಹುಲ್ಲನ್ನು ರೈತರು ಸುಡುತ್ತಿದ್ದಾರೆ. ಭೂ ಒಡಲಿಗೆ ಬೆಂಕಿ ಹಚ್ಚುವುದರಿಂದಮಣ್ಣಿನಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ ಹಾಗೂ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ರೈತರು ಯಾವುದೇ ಕಾರಣಕ್ಕೂ ಹುಲ್ಲಿಗೆ ಬೆಂಕಿ ಹಚ್ಚಬಾರದು ಎಂದು ಕೃಷಿ ವಿಜ್ಞಾನಿಗಳು ಸೂಚಿಸಿದ್ದಾರೆ.

ರೈತರು ಭತ್ತ ಕಟಾವು ಯಂತ್ರದ ಮೂಲಕ ರಾಶಿ ನಡೆಸಿದ್ದಾರೆ. ಬೇಸಿಗೆ ಹಂಗಾಮಿನ ಭತ್ತ ನಾಟಿಗೆ ಸಿದ್ಧತೆ ಮಾಡಿಕೊಳ್ಳಲು ಗದ್ದೆಯಲ್ಲಿ ಒಣಗಿರುವ ಹುಲ್ಲಿಗೆ ಬೆಂಕಿ ಹಚ್ಚಿ ಸ್ವಚ್ಛ ಮಾಡುವ ಕಾರ್ಯವನ್ನು ಆಂಧ್ರ ವಲಸಿಗರು ನಡೆಸಿದ್ದಾರೆ.

‘ನಾವು ಗದ್ದೆಯನ್ನು ಸ್ವಚ್ಛಗೊಳಿಸಿ ನೀರು ಹಾಯಿಸಿ ಮತ್ತೆ ಪಟ್ಲರ್ ಹೊಡೆದು ಜಮೀನು ಹದಗೊಳಿಸಬೇಕು ಎಂದರೆ ಕನಿಷ್ಠ 15 ದಿನ ಬೇಕು. ಅದಕ್ಕಾಗಿ ಹುಲ್ಲಿಗೆ ಬೆಂಕಿ ಹಚ್ಚಿದ್ದೇವೆ’ ಎನ್ನುತ್ತಾರೆ ಆಂಧ್ರ ವಲಸಿಗ ರೈತ ಹುಸೇನಸಾಬ್.

ADVERTISEMENT

‘ಗದ್ದೆಯಲ್ಲಿ ಬಿದ್ದಿರುವ ಹುಲ್ಲಿಗೆ ಬೆಂಕಿ ಹಚ್ಚುವುದರಿಂದ, ನಿರಂತರ ನೀರು ಹಾಯಿಸುವುದರಿಂದ ಭೂಮಿಯಲ್ಲಿ ಸವಳು ಇಲ್ಲವೆ ಜೌಗು ಹಿಡಿಯುತ್ತದೆ. ಬೇಸಿಗೆ ಹಂಗಾಮಿನಲ್ಲಿ ಭತ್ತವನ್ನು ಬಿಟ್ಟು ಪರ್ಯಾಯ ಬೆಳೆಯನ್ನು ರೈತರು ಬೆಳೆಯಲು ಮುಂದಾಗಬೇಕು ಎನ್ನುತ್ತಾರೆ’ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಕೃಷಿ ವಿಜ್ಞಾನಿ ಒಬ್ಬರು.

‘ಭತ್ತದ ಗದ್ದೆಯಲ್ಲಿ ಬೆಂಕಿ ಹಚ್ಚುವುದರಿಂದ ಹೊಗೆಯು ಗಾಳಿಯಲ್ಲಿ ಮಿಶ್ರಣವಾಗಿ ವಾತಾವರಣ ಹಾಳಾಗುತ್ತದೆ. ಆಸ್ತಮಾ ಹಾಗೂ ಉಸಿರಾ ಟದ ತೊಂದರೆ ಆಗುವುದರಿಂದ ದೆಹಲಿ, ಪಂಜಾಬ್‌ ಹಾಗೂ ಹರಿಯಾಣದಲ್ಲಿ ಹಲ್ಲು ಸುಡುವು ದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಲ್ಲದೆ ಜಮೀನುಗಳಲ್ಲಿ ಬೆಂಕಿ ಹಚ್ಚಿದರೆ ರೈತರಿಗೆ ದಂಡ ವಿಧಿಸುವ ಸುತ್ತೋಲೆಯನ್ನು ಹೊರಡಿಸಿದೆ. ಮುಂದಿನ ದಿನಗಳಲ್ಲಿ ನಮ್ಮಲ್ಲಿ ಅಂತಹ ದುಸ್ಥಿತಿ ಬರುವ ಮೊದಲು ನಾವು ಎಚ್ಚರಗೊಳ್ಳಬೇಕು. ಅದರಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹುಲ್ಲಿಗೆ ಬೆಂಕಿ ಹಚ್ಚದಂತೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯ ಸಾಗಿದೆ’ ಎನ್ನುತ್ತಾರೆ ಕೃಷಿ ವಿಜ್ಞಾನಿ ಡಾ.ಶಿವಾನಂದ ಹೊನ್ನಾಳಿ.

‘ಜಾನುವಾರುಗಳಿಗೆ ಮೇವಿಗೆ ಹುಲ್ಲು ಸಂಗ್ರಹಿಸಿಕೊಳ್ಳಬೇಕು. ಗದ್ದೆಯಲ್ಲಿ ಕೊಳೆಯುವಂತೆ ಮಾಡಲು ರಸಾಯನಿಕ ಔಷಧಿ ಬಳಸಿ. ಯಾವದೇ ಕಾರಣಕ್ಕೂ ಹುಲ್ಲು ಸುಡಬಾರದು ಎಂದು ಅವರು ರೈತರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.