ADVERTISEMENT

ಶಹಾಪುರ: ಬಾಲಕಿಯ ಹೊಟ್ಟೆಯಲ್ಲಿ 5 ಕೆ.ಜಿ ಅಂಡಾಂಶಯ ಗಡ್ಡೆ

ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಉಚಿತ ಶಸ್ತ್ರ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 7:50 IST
Last Updated 22 ಏಪ್ರಿಲ್ 2024, 7:50 IST
ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಶಸ್ತ್ರ ಚಿಕಿತ್ಸೆಯ ಮೂಲಕ 5 ಕೆ.ಜಿ ಅಂಡಾಂಶಯ ಗಡ್ಡೆಯನ್ನು ಹೊರತೆಗೆದ ಡಾ.ಯಲ್ಲಪ್ಪ ಪಾಟೀಲ ಹುಲಕಲ್ ಹಾಗೂ ತಂಡ
ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಶಸ್ತ್ರ ಚಿಕಿತ್ಸೆಯ ಮೂಲಕ 5 ಕೆ.ಜಿ ಅಂಡಾಂಶಯ ಗಡ್ಡೆಯನ್ನು ಹೊರತೆಗೆದ ಡಾ.ಯಲ್ಲಪ್ಪ ಪಾಟೀಲ ಹುಲಕಲ್ ಹಾಗೂ ತಂಡ   

ಶಹಾಪುರ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ 5 ಕೆ.ಜಿ ಅಂಡಾಂಶಯ ಗಡ್ಡೆಯನ್ನು ಡಾ.ಯಲ್ಲಪ್ಪ ಪಾಟೀಲ ಹುಲಕಲ್ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದಿದ್ದಾರೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ತಾಲ್ಲೂಕಿನ ಸಿಂಗನಹಳ್ಳಿ ಗ್ರಾಮದ ಮುಸ್ಲಿಂ ಬಾಲಕಿ ಒಬ್ಬಳು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾದರು. ವೈದ್ಯರು ಎಲ್ಲಾ ತಪಾಸಣೆ ಮಾಡಿ ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. ಬಾಲಕಿಯ ಆರೋಗ್ಯದಲ್ಲಿ ತುಸು ವ್ಯತ್ಯಾಸ ಕಂಡು ಬಂದು ರಕ್ತಹೀನತೆ ಕಾಣಿಸಿತು. ಆಗ ಎರಡು ಬಾಟಲಿ ರಕ್ತ ಕೊಟ್ಟು ನಂತರ ಚಿಕಿತ್ಸೆ ಮಾಡಿದೆ. ಬಾಲಕಿ ಆರೋಗ್ಯವಾಗಿದ್ದಾರೆ ಎನ್ನುತ್ತಾರೆ ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ಯಲ್ಲಪ್ಪ ಪಾಟೀಲ ಹುಲಕಲ್.

ಯಾದಗಿರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಚಿಕಿತ್ಸೆ ಆಗಿಲ್ಲ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯವಿದ್ದು ತಜ್ಞ ವೈದ್ಯರ ತಂಡವು ಇದೆ. ಖಾಸಗಿ ಆಸ್ಪತ್ರೆಗಿಂತ ಅತ್ಯುತ್ತಮ ಗುಣಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಲಿದೆ ಎನ್ನುತ್ತಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿ ಒಬ್ಬರು.

ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಚಿಕಿತ್ಸೆ ಮಾಡಲು ಸುಮಾರು ₹2ಲಕ್ಷಕ್ಕೂ ಹೆಚ್ಚು ಹಣ ಕೇಳುತ್ತಾರೆ. ಅಷ್ಟೊಂದು ಹಣ ಎಲ್ಲಿಂದ ತರಲಿ. ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ಯಲ್ಲಪ್ಪ ಪಾಟೀಲ ಅವರು ನಮ್ಮ ಆತಂಕ ಹಾಗೂ ಭೀತಿಯನ್ನು ಹೊಗಲಾಡಿಸಿ ನಯಾ ಪೈಸೆ ತೆಗೆದುಕೊಳ್ಳದೆ ಮಗಳ ಜೀವ ಉಳಿಸಿದರು ಎಂದು ಭಾವುಕರಾಗಿ ಬಾಲಕಿಯ ತಂದೆ ನುಡಿದರು.

ಆಸ್ಪತ್ರೆಗೆ 3 ಡಯಾಲಿಸೆಸ್ ಯಂತ್ರ ಕೊಡುಗೆ: ನಗರದ ಕರ್ನಾಟಕ ಬ್ಯಾಂಕ್‌ ಸರ್ಕಾರಿ ಆಸ್ಪತ್ರೆಗೆ ₹24.36ಲಕ್ಷ ವೆಚ್ಚದಲ್ಲಿ ಮೂರು ಡಯಾಲಿಸೆಸ್ ಯಂತ್ರವನ್ನು ಖರೀದಿಸಿ ದೇಣಿಗೆ ನೀಡಲು ಮುಂದಾಗಿದೆ.

‌ಚುನಾವಣೆಯ ನೀತಿ ಸಂಹಿತೆಯ ಇರುವ ಕಾರಣ ತಾತ್ಕಾಲಿಕವಾಗಿ ನಿಲ್ಲಿಸಿದೆ. ನಗರದಲ್ಲಿ 18 ಡಯಾಲಿಸೆಸ್ ರೋಗಿಗಳು ಇದ್ದಾರೆ. ಈಗಾಗಲೇ ಆಸ್ಪತ್ರೆಯಲ್ಲಿ ಎರಡು ಯಂತ್ರ ಕಾರ್ಯ ನಿರ್ವಹಿಸುತ್ತಲಿವೆ ಎಂದು ಸರ್ಕಾರಿ ಆಸ್ಪತ್ರೆಯ ಹಿರಿಯ ಅಧಿಕಾರಿ ಒಬ್ಬರು ಮಾಹಿತಿ ನೀಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆ ಇದೆ. ಭರವಸೆ ಇಟ್ಟುಕೊಂಡು ಬನ್ನಿ ಉಚಿತ ಚಿಕಿತ್ಸೆ ಹಾಗೂ ಅಗತ್ಯಬಿದ್ದರೆ ಶಸ್ತ್ರ ಚಿಕಿತ್ಸೆ ನಡೆಸುತ್ತೇವೆ.
-ಡಾ.ಯಲ್ಲಪ್ಪ ಪಾಟೀಲ, ಹುಲಕಲ್ ಆಸ್ಪತ್ರೆಯ ಆಡಳಿತಾಧಿಕಾರಿ
ಜೀವ ಕೈಯಲ್ಲಿ ಹಿಡಿದುಕೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲು ಆಗಿದ್ದೆ. ಚಿಕ್ಕದೊಂದು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಮಾನಸಿಕ ಧೈರ್ಯ ತುಂಬಿದರು. ತೊಂದರೆ ಆಗದಂತೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.
-ಶಸ್ತ್ರ ಚಿಕಿತ್ಸೆಗೆ ಒಳಗಾದ ಬಾಲಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.