ADVERTISEMENT

ಸೈದಾಪುರ | ಒಳಚರಂಡಿ ಕಾಮಗಾರಿ: ಸಂಚಾರಕ್ಕೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 6:30 IST
Last Updated 18 ಜೂನ್ 2024, 6:30 IST
ಸೈದಾಪುರ ಪಟ್ಟಣದ ಕನಕ ವೃತ್ತದಲ್ಲಿ ಒಳ ಚರಂಡಿ ನಿರ್ಮಾಣಕ್ಕಾಗಿ ರಸ್ತೆ ಅಗೆದಿರುವುದು
ಸೈದಾಪುರ ಪಟ್ಟಣದ ಕನಕ ವೃತ್ತದಲ್ಲಿ ಒಳ ಚರಂಡಿ ನಿರ್ಮಾಣಕ್ಕಾಗಿ ರಸ್ತೆ ಅಗೆದಿರುವುದು   

ಸೈದಾಪುರ: ಪಟ್ಟಣದ ಎಸ್‍ಬಿಐ ಬ್ಯಾಂಕ್‍ನಿಂದ ಕನಕ ವೃತ್ತದವರೆಗೆ ಕೈಗೊಂಡಿರುವ ಒಳಚರಂಡಿ ನಿರ್ಮಾಣ ಕಾಮಗಾರಿಯು ಆಮೆಗತಿಯಲ್ಲಿ ಸಾಗಿದೆ. ಇದು  ಜನಸಾಮಾನ್ಯರಲ್ಲಿ ಖುಷಿಯನ್ನುಂಟು ಮಾಡುವ ಬದಲು ಕಿರಿಕಿರಿಗೆ ಕಾರಣವಾಗಿದೆ.

ಸುತ್ತಲಿನ ಹತ್ತಾರು ಗ್ರಾಮಗಳ ಶೈಕ್ಷಣಿಕ, ವ್ಯವಹಾರಿಕ ಕೇಂದ್ರಕ್ಕೆ ಸಾರಿಗೆ ಮತ್ತು ರೈಲು ಸಂಪರ್ಕ ಇರುವುದರಿಂದ ಪ್ರತಿನಿತ್ಯ ನೂರಾರು ವಾಹನಗಳಲ್ಲಿ ಸಾವಿರಾರು ಜನ ಸಂಚರಿಸುತ್ತಾರೆ. ಒಳಚರಂಡಿ ನಿರ್ಮಾಣಕ್ಕಾಗಿ ಯಾದಗಿರಿ-ರಾಯಚೂರು ರಸ್ತೆಯನ್ನು ಕನಕ ವೃತ್ತದಲ್ಲಿ ಒಂದು ವಾರದ ಹಿಂದೆ ಅಗೆಯಲಾಗಿದೆ. ಹೀಗಾಗಿ ಯಾದಗಿರಿ ಮತ್ತು ರಾಯಚೂರಿಗೆ ತೆರಳುವ ವಾಹನಗಳು, ಪಟ್ಟಣದ ಬಸವೇಶ್ವರ ವೃತ್ತದ ಮೂಲಕ ತೆರಳಬೇಕಾಗಿದೆ. ಆದರೆ ಇಕ್ಕಟ್ಟಾದ ಪಟ್ಟಣದ ಒಳ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ದ್ವಿಚಕ್ರ ವಾಹನಗಳಿಂದ ಸುಗಮ ವಾಹನ ಸಂಚಾರ ಸಾಧ್ಯವಾಗದೆ, ವಾಹನ ಸವಾರರು ಪರದಾಡುವಂತಾಗಿದೆ. ಆಟೋ, ಟಂಟಂ ಸೇರಿದಂತೆ ಇತರ ವಾಹನಗಳು ಸೇರಿ ವಾಹನ ದಟ್ಟಣೆ ಹೆಚ್ಚಾಗಿ ವಾಹನಗಳು ಹಿಂದೆ-ಮುಂದೆ ಹೋಗದೆ ರಸ್ತೆ ಮಧ್ಯೆ ತಾಸುಗಟ್ಟಲೇ ನಿಂತು ತೊಂದರೆ ಅನುಭವಿಸುವಂತಾಗಿದೆ. ಮುಂದಿನ ದಿನಗಳಲ್ಲಾದರೂ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರ ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ: ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರ ಆರೋಪವಾಗಿದೆ. ಮತ್ತೊಂದಡೆ ಸ್ಥಳೀಯ ಆಡಳಿತದಿಂದ ವಾಹನ ಸಂಚಾರ ನಿರ್ವಹಣೆಯಾಗುತ್ತಿಲ್ಲ. ಇದರಿಂದಾಗಿ ಲಾರಿ, ಬಸ್‌, ಭಾರೀ ವಾಹನಗಳು ಗಂಟೆಗಟ್ಟಲೇ ರಸ್ತೆಯಲ್ಲಿಯೇ ಕಾಯಬೇಕಿದೆ. ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳಿಗೆ, ವೃದ್ಧರಿಗೆ ತೀವ್ರ ತೊಂದರೆಯಾಗುತ್ತಿದೆ. ಅನೇಕ ಬಸ್‌ಗಳು ಪಟ್ಟಣದೊಳಗೆ ಬರದೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹೊರಗಿಂದ ಹೊರಗೆ ಹೋಗುತ್ತಿರುವುದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರು ಸಂಕಷ್ಟ ಅನುಭವಿಸಬೇಕಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ADVERTISEMENT

ದಂಡಕ್ಕೆ ಸೀಮಿತವಾದ ಪೊಲೀಸ್ ಇಲಾಖೆ: ಪಟ್ಟಣದಲ್ಲಿ ಹಲವಡೆ ವಾಹನ ಸಂಚಾರದಿಂದ ಸಾರ್ವಜನಿಕರು ತೊಂದರೆ ಅನುಭವಿಸುತಿದ್ದರೆ, ಇನ್ನೊಂದಡೆ ಪೊಲೀಸ್‌ ಅಧಿಕಾರಿಗಳು ಪಟ್ಟಣಕ್ಕೆ ಬರುವ ಮತ್ತು ಹೊರ ಹೋಗುವ ಪ್ರಮುಖ ಸ್ಥಳಗಳಲ್ಲಿ ವಾಹನ ಸವಾರರಿಗೆ ಬಾರಿ ದಂಡ ವಿಧಿಸುಸಿದ್ದಾರೆ. ಇದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ಸುಗಮ ಸಂಚಾರ ಮತ್ತು ಪಾದಚಾರಿಗಳ ಬಗ್ಗೆ ಗಮನಹರಿಸದ ಪೊಲೀಸ್‌ ಇಲಾಖೆ ಕಾರ್ಯವೈಖರಿ ಬಗ್ಗೆ ಪಟ್ಟಣದ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸೈದಾಪುರ ಪಟ್ಟಣದ ಕನಕ ವೃತ್ತದಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿ ರಸ್ತೆ ಅಗೆದಿರುವುದರಿಂದ ವಾಹನಗಳು ಸಾಲುಗಟ್ಟಿ ನಿಂತಿರುವುದು
ಭೀಮಣ್ಣ ಮಡಿವಾಳಕರ

ಒಳಚರಂಡಿ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಶಾಲಾ ಮಕ್ಕಳು ವೃದ್ಧರು ಸಾರ್ವಜನಿಕರು ಕಷ್ಟಪಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು

– ಭೀಮಣ್ಣ ಮಡಿವಾಳಕರ ಗುರುಮಠಕಲ್ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ

ಸೈದಾಪುರ ಪಟ್ಟಣದಲ್ಲಿ ನಿರ್ಮಿಸುತ್ತಿರುವ ಒಳಚರಂಡಿ ಕಾರ್ಯಕ್ಕೆ 2 ತಿಂಗಳು ಕಾಲಾವಕಾಶದ ಮಿತಿ ಪಡೆದುಕೊಂಡಿದ್ದೇವೆ. ಸಂಚಾರ ದಟ್ಟಣೆಯನ್ನು ಕುರಿತು ಪೊಲೀಸ್‌ ಇಲಾಖೆಗೆ ತಿಳಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು

–ಶಿವರಾಜ ಎಇಇ ಲ್ಯಾಂಡ್‍ ಆರ್ಮಿ ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.