ADVERTISEMENT

ಯರಗೋಳ | ಕುಡಿಯುವ ನೀರಿಗಾಗಿ ಹಾಹಾಕಾರ

ಮಳೆ, ಬಿರುಗಾಳಿಗೆ ಬಿದ್ದ ವಿದ್ಯುತ್ ಕಂಬಗಳು

ತೋಟೇಂದ್ರ ಎಸ್ ಮಾಕಲ್
Published 26 ಸೆಪ್ಟೆಂಬರ್ 2024, 6:04 IST
Last Updated 26 ಸೆಪ್ಟೆಂಬರ್ 2024, 6:04 IST
ಯರಗೋಳ ವ್ಯಾಪ್ತಿಯ ಮುದ್ನಾಳ ಗ್ರಾಮ ಪಂಚಾಯಿತಿಯ ಉಮ್ಲಾ ನಾಯಕ ತಾಂಡಾದಲ್ಲಿ ನೀರಿಗಾಗಿ ಟ್ಯಾಂಕರ್‌ಗೆ ಮುಗಿಬಿದ್ದ ನಿವಾಸಿಗಳು
ಯರಗೋಳ ವ್ಯಾಪ್ತಿಯ ಮುದ್ನಾಳ ಗ್ರಾಮ ಪಂಚಾಯಿತಿಯ ಉಮ್ಲಾ ನಾಯಕ ತಾಂಡಾದಲ್ಲಿ ನೀರಿಗಾಗಿ ಟ್ಯಾಂಕರ್‌ಗೆ ಮುಗಿಬಿದ್ದ ನಿವಾಸಿಗಳು   

ಯರಗೋಳ: ಸುತ್ತಲಿನ ಗ್ರಾಮಗಳಲ್ಲಿ ಸುರಿದ ಗುಡುಗು, ಬಿರುಗಾಳಿ ಸಹಿತ ಜೋರಾದ ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಶುದ್ಧ ಕುಡಿಯುವ ನೀರಿಗೆ ಸಾರ್ವಜನಿಕರು ಪರದಾಡುತ್ತಿದ್ದಾರೆ.

ಮುದ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಮ್ಲಾ ನಾಯಕ್ ತಾಂಡಾ, ಸಣ್ಣ ತಾಂಡಾ, ದೊಡ್ಡ ತಾಂಡಾಗಳಲ್ಲಿ, 4 ದಿನಗಳಿಂದ ವಿದ್ಯುತ್ ಸಮಸ್ಯೆಯಿಂದಾಗಿ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಮನೆ ಅಂಗಳದಲ್ಲಿ ಬೋರ್‌ವೆಲ್‌ ಇರುವ ಖಾಸಗಿ ವ್ಯಕ್ತಿಗಳು ಜನರೇಟರ್ ಮೂಲಕ ವಿದ್ಯುತ್ ಸಂಪರ್ಕ ಪಡೆದು, ನೀರು ಪಡೆಯುತ್ತಿದ್ದಾರೆ.

ಕೆಲವರು ಸ್ವಂತ ಖರ್ಚಿನಲ್ಲಿ ಟ್ಯಾಂಕರ್‌ಗಳ ಮೂಲಕ, ಬೈಕ್ ಮೇಲೆ ಬೇರೆ ಗ್ರಾಮದಿಂದ ಕುಡಿಯುವ ನೀರು ತರುತ್ತಿದ್ದಾರೆ. ಸಾಮಾನ್ಯ ಜನರು ಒಂದು ಅಥವಾ ಎರಡು ಕೊಡದಷ್ಟು ನೀರು ತರಲು ಪರದಾಡುತ್ತಿದ್ದಾರೆ.

ADVERTISEMENT

'ಬೆಳಗಿನ ಸ್ನಾನಕ್ಕೆ, ಅಡುಗೆ ಮಾಡಲು, ಗರ್ಭಿಣಿಯರಿಗೆ, ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧರಿಗೆ ಶುದ್ಧ ನೀರು ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕು’ ಎಂದು ಯುವಕ ಆನಂದ 'ಪ್ರಜಾವಾಣಿ' ಗೆ ತಿಳಿಸಿದ.

ಮೊಬೈಲ್ ಚಾರ್ಜ್‌ಗಾಗಿ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗಿದೆ, ಜಿಲ್ಲಾ ಕೇಂದ್ರದಲ್ಲಿಯೂ ವಿದ್ಯುತ್ ಸಮಸ್ಯೆ ಇರುವುದರಿಂದ ಸಾರ್ವಜನಿಕ ಸಂಪರ್ಕಕ್ಕೆ, ತಮ್ಮ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲು ತೊಂದರೆಯಾಗುತ್ತಿದೆ. ತಾಂಡಾ ನಿವಾಸಿಗಳು, ಪಂಚಾಯಿತಿ, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಂದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಾಮ್ಮನಹಳ್ಳಿ, ಯಡ್ಡಳ್ಳಿ ಗ್ರಾಮಗಳಲ್ಲಿಯೂ ವಿದ್ಯುತ್ ಸಮಸ್ಯೆಯಿಂದಾಗಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಿಕಾರ್ಜುನ್ ಇವರು, ಕೊಳವೆ ಬಾವಿಗಳಿಗೆ ದೊಡ್ಡ ಗಾತ್ರದ ಜನರೇಟರ್ ಮೂಲಕ ವಿದ್ಯುತ್ ವ್ಯವಸ್ಥೆ ಮಾಡಿಕೊಂಡು, ಗ್ರಾಮಸ್ಥರಿಗೆ ನಲ್ಲಿಗಳಲ್ಲಿ ನೀರು ಸರಬರಾಜು ಮಾಡುತ್ತಿದ್ದಾರೆ.

ಯರಗೋಳ ವ್ಯಾಪ್ತಿಯ ಬಂದಳ್ಳಿ ಗ್ರಾಮದಲ್ಲಿ ಜನರೇಟರ್ ಮೂಲಕ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು. ಪಿಡಿಒ ವಿಜಯಲಕ್ಷ್ಮಿ ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ್ ಇದ್ದಾರೆ

ಕೈಪಂಪುಗಳ ಮುಂದೆ ಜಾಗರಣೆ ನೀರಿಗಾಗಿ ಕಿಲೋಮೀಟರ್ ನಡಿಗೆ ಸ್ನಾನ ಮಾಡದ ಜನ

ತಾಂಡಾಗಳಲ್ಲಿ ವಿದ್ಯುತ್ ಕಂಬಗಳು ನೆಲಕುರುಳಿದ್ದು ಜೆಸ್ಕಾಂ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಜನರೇಟರ್‌ಗಳ ಮೂಲಕ ನೀರು ಕೊಡಲಾಗುತ್ತಿದೆ.

-ಸಂತೋಷ ಶಹಾಪುರಕರ್ ಪಿಡಿಒ ಮುದ್ನಾಳ

ಪಂಚಾಯತಿ ವ್ಯಾಪ್ತಿಯ ಹಳ್ಳಿಗಳು ತಾಂಡಾಗಳಲ್ಲಿ ಕುಡಿಯುವ ನೀರಿನ ಸರಬರಾಜು ಸಮಸ್ಯೆಯಾಗಿದೆ. ಜನರೇಟರ್‌ಗಳ ಮೂಲಕ ನೀರು ಬಿಡುತ್ತಿದ್ದೇವೆ.

-ವಿಜಯಲಕ್ಷ್ಮಿ ಪಿಡಿಒ ಬಂದಳ್ಳಿ ಗ್ರಾಮ ಪಂಚಾಯಿತಿ

ಗ್ರಾಮದಲ್ಲಿ ಇರುವ ಕೈಪಂಪ್ ಎದುರಿಗೆ ಸಾರ್ವಜನಿಕರು ತಡ ರಾತ್ರಿವರೆಗೂ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಜೆಸ್ಕಾಂ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. -ಮುದುಕಪ್ಪ ಚಾಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.