ಶಹಾಪುರ: ನದಿಯ ನೀರು ನಂಬಿ ಬದುಕು ಸಾಗಿಸುವ ನದಿ ಪಾತ್ರದ ಜನತೆಗೆ ಪ್ರವಾಹವು ಬದುಕನ್ನೆ ಕಸಿದುಕೊಳ್ಳುತ್ತಿದೆ. ನದಿಯಲ್ಲಿ ಮೀನು ಹಿಡಿಯಲು ಈಗ ಕಷ್ಟವಾಗುತ್ತಿದ್ದು, ಮೀನುಗಾರರ ಜೀವನಕ್ಕೆ ದಾರಿ ಕಾಣದಾಗಿದೆ.
’ಪ್ರವಾಹ ಬಂದಾಗ ನದಿಪಾತ್ರದ ಗ್ರಾಮಸ್ಥರ ಬಗ್ಗೆ ಮಾತ್ರ ಕಾಳಜಿ. ಇಲ್ಲಿ ಪ್ರವಾಹ ಬದುಕು ಕಸಿದು ಕೊಳ್ಳುವುದು ಸಾಮಾನ್ಯವಾಗಿದೆ’ ಎನ್ನುತ್ತಾರೆ ಮೀನುಗಾರರು.
’ನದಿ ತಟದಲ್ಲಿ ಮೀನು ಬೇಟೆಯಾಡುವ ಮೀನುಗಾರರಿಗೆ ಪ್ರವಾಹದಿಂದ ಇಳಿಯುವಂತೆ ಇಲ್ಲ. ಇದು ವಾರಗಟ್ಟೆಲೆ ಸಮಸ್ಯೆ ಎಳೆದುಕೊಂಡು ಹೋಗುತ್ತದೆ. ಸುರಕ್ಷಿತ ಸ್ಥಳ ಎಂಬುವುದು ಇರುವುದಿಲ್ಲ. ನದಿಗೆ ಹೊಂದಿಕೊಂಡು ಮೀನು ಬಲೆ, ಹರಿಗೋಲು ಹಾಗೂ ಚಿಕ್ಕದಾದ ಗುಡಿಸಲು ಹಾಕಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವಾಗ ಪ್ರವಾಹದಿಂದ ಊಟಕ್ಕೂ ಸಂಚಕಾರ ಬರುತ್ತದೆ’ ಎನ್ನುತ್ತಾರೆ ಹಣಮಂತ.
’ಪ್ರವಾಹ ಬಂದಾಗ ನದಿ ಪಾತ್ರದ ಜನತೆಗೆ ಉಂಟಾಗುವುದು ಮೊದಲ ಸಮಸ್ಯೆ ಕುಡಿಯುವ ನೀರು. ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಮುಳಗಡೆಯಾಗಿ ನೀರಿಗೆ ಸಂಚಕಾರ ಬರುತ್ತದೆ. ಅದರಂತೆ ತಾಲ್ಲೂಕಿನ ಗೌಡೂರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ದುರಸ್ತಿಗಾಗಿ ಕಾಯುತ್ತಿದೆ. ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಕೆಲಸ ಸಾಗಿದೆ. ತಾಲ್ಲೂಕಿನ ಮರಕಲ್ ಗ್ರಾಮದಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದೆ’ ಎನ್ನುತ್ತಾರೆ ಗೌಡೂರ ಗ್ರಾಮಸ್ಥರು.
’ಪ್ರವಾಹದಿಂದ ನದಿ ಪಾತ್ರದ ಪ್ರದೇಶದಲ್ಲಿ ಶೀತಗಾಳಿ, ವಿಷ ಜಂತುಗಳ ಹಾವಳಿ, ವಿದ್ಯುತ್ ಸ್ಥಗಿತ ಶುರುವಾಗಿವೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಬೆಳೆ ನಷ್ಟ ನಂತರದ ಸರದಿ. ಫಲವತ್ತಾದ ಜಮೀನಿನಲ್ಲಿ ನೀರು ನುಗ್ಗಿ ಹಾಳಾದರೆ, ಇನ್ನೂ ಕೆಲ ಕಡೆ ಮಣ್ಣು ಕೊಚ್ಚಿಕೊಂಡು ಹೋಗಿ ಬರಡು ನೆಲ ನೋಡಬೇಕಾಗುತ್ತದೆ. ಇದು ಪ್ರವಾಹ ಬಂದಾಗ ನೆರಳಿನಂತೆ ಕಾಡುವ ಸಮಸ್ಯೆಯಾಗಿದೆ’ ಎನ್ನುತ್ತಾರೆ ಮರಕಲ್ ಗ್ರಾಮದ ನಿಂಗಪ್ಪ.
ಪ್ರವಾಹ ತಗ್ಗುವವರೆಗೂ ಆರೋಗ್ಯ, ಕಂದಾಯ ಇಲಾಖೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ನದಿ ತಟದ ಜನತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ನೆರೆ–ಬರ; ಸಂಕಷ್ಟದ ಹಾದಿ: ಕೃಷ್ಣಾ ನದಿ ಪಾತ್ರದ ಜನತೆಯು ಪ್ರವಾಹದ ಸಮಸ್ಯೆಯಿಂದ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ, ತಾಲ್ಲೂಕಿನಲ್ಲಿ ಜುಲೈ ತಿಂಗಳಲ್ಲಿ ಸಮಪರ್ಕವಾಗಿ ಮಳೆ ಬಾರದೇ ಬರದ ದವಡೆಗೆ ಸಿಲುಕುವ ಭೀತಿ ಎದುರಾಗಿದೆ. ಮೋಡ ಕವಿದ ವಾತಾವರಣ ಹಲವು ದಿನದಿಂದ ಮುಂದುವರಿದಿದೆ. ಮಳೆರಾಯ ಭೂಒಡಲಿಗೆ ತಾಗುತ್ತಿಲ್ಲ. ಬರ, ನೆರೆ ಮುಳ್ಳು ಹಾದಿಯಲ್ಲಿ ನಾವಿದ್ದೇವೆ ಎನ್ನುತ್ತಾರೆ ರೈತರು.
ಪ್ರವಾಹದಿಂದ ಸಮಸ್ಯೆ ಉಂಟಾಗಿದೆ. ಎರಡು ದಿನದಿಂದ ಕುಡಿಯುವ ನೀರಿನ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಹೊಸ ಬೊರ್‌ವೆಲ್ ಕೊರೆಸಲು ಅಧಿಕಾರಿಗಳಿಗೆ ಮನವಿ ಮಾಡಿದೆ ಪವಿತ್ರಾದೇವಿಂದ್ರಪ್ಪ ಚಲುವಾದಿ ಗ್ರಾ.ಪಂ ಅಧ್ಯಕ್ಷರು ಕೊಳ್ಳೂರ(ಎಂ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.