ಗುರುಮಠಕಲ್: ಹತ್ತಿರದ ಎಕ್ಲಾಸಪುರ (ಲೋಕಪಲ್ಲಿ) ಗ್ರಾಮದ ಗಣೇಶ ಉತ್ಸವವು ಸುತ್ತಲಿನ ಗ್ರಾಮಗಳ ಜನರಿಗೆ ಗಮನ ಸೆಳೆಯುತ್ತಿದೆ.
ಗ್ರಾಮದ ಎಲ್ಲಾ ಸಮುದಾಯಗಳು ಸೇರಿ ಮೂರು ಸಾವಿರಕ್ಕೂ ಅಧಿಕ ಜನಸಂಖ್ಯೆ ವಾಸವಿದೆ. 1976ರಲ್ಲಿ ಮಾಡಿದ ನಿರ್ಣಯದಂತೆ ಇಡೀ ಗ್ರಾಮಕ್ಕೆ ಒಂದೇ ಗಣೇಶನ ಪ್ರತಿಷ್ಠಾಪಿಸುವ ಪರಂಪರೆ ಮುಂದವರಿಸಿದ್ದು, ಸದ್ಯ 48ನೇ ವರ್ಷದ ಉತ್ಸವವನ್ನು ಮಾಡಲಾಗುತ್ತಿದೆ.
ತಾಲ್ಲೂಕಿನ ಗಡಿಯನ್ನು ಹಂಚಿಕೊಂಡ ತೆಲಂಗಾಣ ರಾಜ್ಯದ ನಾರಾಯಣಪೇಟ ಜಿಲ್ಲೆ ವ್ಯಾಪ್ತಿಗೆ ಬರುವ ಎಕ್ಲಾಸಪುರ್ ಗ್ರಾಮವು ಸ್ವಂತಂತ್ರ ಸಂಸ್ಥಾನದ ಆಡಳಿತ ಕೇಂದ್ರವಾಗಿ (ಲೋಕಪಲ್ಲಿ ಲಕ್ಷ್ಮಮ್ಮ ಸಂಸ್ಥಾನಂ) ಮೆರೆದಿದ್ದ ಐತಿಹ್ಯವನ್ನು ಹೊಂದಿದ್ದು, ಲೋಕಪಲ್ಲಿ ಹೆಸರಿಂದಲೂ ಪ್ರಚಲಿತವಾಗಿದೆ.
‘ಗ್ರಾಮದ ಗೋವಿಂದರಾಜಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪಿಸುವ ಗಣೇಶನ ಪೂಜೆಗೆ ಎಲ್ಲಾ ಜಾತಿ ಜನಾಂಗದವರೂ ಜತೆಗೂಡುವುದು, ಒಗ್ಗೂಡಿ ಆಚರಿಸುವುದು ನಮ್ಮೂರಿನ ಮಾದರಿಯಾಗಿದೆ. ಜಾತಿಗಳ ನಡುವಿನ ಭಿನ್ನತೆಯನ್ನು ತೊಡೆದು, ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಗಣೇಶ ಉತ್ಸವವು ವೇದಿಕೆಯಾಗಿದೆ’ ಎನ್ನುತ್ತಾರೆ ಗ್ರಾಮದ ಬೋಸ್ಲೆ ಅಂಬಾದಾಸ್, ಹರಿಕೃಷ್ಣಾ, ಅಂಜಿ ಮತ್ತು ಹರೀಶ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರು 48 ವರ್ಷಗಳ ಹಿಂದೆ ನೀಡಿದ ಪರಿಕಲ್ಪನೆಯಂತೆ ಆಚರಣೆ ಆರಂಭಗೊಂಡಿದೆ. ಗ್ರಾಮಸ ಸ್ವಚ್ಛತೆ, ಗ್ರಾಮದ ಅಗತ್ಯಗಳ ಪೂರೈಕೆ, ಸಮಸ್ಯೆಗಳ ಪರಿಹಾರ ಮತ್ತು ಗ್ರಾಮ ವಿಕಾಸ ಚಟುವಟಿಕೆಗಳಿಗೆ ಈ ಉತ್ಸವವು ವೇದಿಕೆಯಾಗಿದೆ. ಎಲ್ಲಾ ಸಮುದಾಯಗಳೂ ಒಗ್ಗೂಡಿ ಮಾಡುವ ಆಚರಣೆಗೆ ಇತರೆ ಗ್ರಾಮಗಳಿಂದಲೂ ಜನ ಬರುತ್ತಾರೆ ಎಂದು ವಿವರಿಸಿದ್ದು ಉತ್ಸವ ಮಂಡಳಿಯ ಹಿರಿಯ ಸದಸ್ಯ ವೇಮುಲ ಮಧುಸೂದನರೆಡ್ಡಿ.
ಒಂಬತ್ತು ದಿನಗಳ ಕಾಲ ಜರುಗುವ ಉತ್ಸವದಲ್ಲಿ ಗ್ರಾಮದ ಪ್ರತಿ ಮನೆಯಿಂದಲೂ ಪೂಜೆ, ನೈವೇದ್ಯ ಸಮರ್ಪಣೆ ಮತ್ತು ಪ್ರಸಾದ ವಿತರಣೆ ಮಾಡುವುದು, ಪ್ರತಿ ಸಮುದಾಯವೂ ಎಲ್ಲರ ಮನೆಯ ಪ್ರಸಾದ ಸ್ವೀಕರಿಸುವುದು ಉತ್ಸವದ ಭಾಗವಾಗಿದೆ.
ಉತ್ಸವದಲ್ಲಿ ಮಕ್ಕಳಿಗೆ ನಡೆಸಲಾಗುವ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗೆ ವಾರಗಟ್ಟಲೇ ತಯಾರಿ ನಡೆಸಲಾಗುತ್ತದೆ. ಉತ್ಸವದ ಐದನೇ ದಿನ ಗ್ರಾಮಸ್ಥರಿಂದ ಭಕ್ತರಿಗಾಗಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ.
ಜತೆಗೆ ಜಾತ್ರೆಗಳಲ್ಲಿ ನಡೆಸುವಂತೆ ಕೈಕುಸ್ತಿ ಸ್ಪರ್ಧೆಯನ್ನು ಆಯೋಜಿಸುತ್ತಾರೆ. ಸ್ಪರ್ಧೆಯಲ್ಲಿ ಮೂರು ಜನರನ್ನು ಸೋಲಿಸಿದವರಿಗೆ ತೆಂಗಿನಕಾಯಿ, ನಾಲ್ವರನ್ನು ಸೋಲಿಸಿದರೆ 40 ಗ್ರಾಂ ಬೆಳ್ಳಿ ಕಡಗ ಮತ್ತು ಐವರನ್ನು ಸೋಲಿಸಿದರೆ 50 ಗ್ರಾಂ ಬೆಳ್ಳಿ ಕಡಗ ಬಹುಮಾನ ನೀಡಿ ಸನ್ಮಾನಿಸುವುದಾಗಿ ಉತ್ಸವ ಮಂಡಳಿ ತಿಳಿಸಿತು.
ಒಂಬತ್ತನೇ ದಿನ ಮಕ್ಕಳ ಸಾಂಸ್ಕೃತಿಕ ಪ್ರದರ್ಶನದೊಡನೆ ಯುವ ಸಮುದಾಯದ ನೃತ್ಯ, ಚಕ್ಕ ಭಜನೆ, ಮೆರವಣಿಗೆಯೊಡನೆ ಕರೆಯಲ್ಲಿ ವಿಸರ್ಜನಾ ಕಾರ್ಯಕ್ರಮ ಜರುಗುತ್ತದೆ.
ಉತ್ಸವವನ್ನು ಆರಂಭಿಸಿದವರು: ಗ್ರಾಮದಲ್ಲಿ 1976 ರಲ್ಲಿ ಗಣೇಶ ಉತ್ಸವವನ್ನು ಆರಂಭಿಸಲಾಗಿದೆ. ಗ್ರಾಮದ ಎಲ್.ರಾಧಾಕೃಷ್ಣ, ಬಂಡಗೊಂಡ ವೇಮಾರೆಡ್ಡಿ, ಬೋಸ್ಲೆ ಶ್ರೀನಿವಾಸರಾವ, ಕೋಮಟಿ ಸುಶೀಲ, ಕಾಪು ಯಶೋದಮ್ಮ ಅವರ ತಂಡ ಈ ಉತ್ಸವವನ್ನು ಆರಂಭಿಸಿದೆ.
48 ವರ್ಷಗಳಿಂದ ಇಡೀ ಗ್ರಾಮದಲ್ಲಿ ಒಂದೇ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಎಲ್ಲಾ ಸಮುದಾಯದವರೂ ಬೆರೆತು ಪೂಜೆಯಲ್ಲಿ ಭಾಗಿಯಾಗುತ್ತಾರೆಹಣಮಂತು ಮೋದುಂಪಲ್ಲಿ ಗಣೇಶ ಉತ್ಸವ ಮಂಡಳಿಯ ಸದಸ್ಯ
ನಮ್ಮೂರಿನಲ್ಲಿ ಯಾವುದೇ ರೀತಿಯ ಬೇದ-ಭಾವವಿಲ್ಲದೆ ಒಗ್ಗಟ್ಟು ಮತ್ತು ಪರಸ್ಪರ ಸಹಕಾರ ಉಳಿಸುವಲ್ಲಿ ಗಣೇಶ ಉತ್ಸವಕ್ಕೆ ಪ್ರಮುಖ ಸ್ಥಾನ.ರಾಮು ಜುರು ಗ್ರಾಮದ ಯುವಕ
- ಗಣೇಶ ಉತ್ಸವವನ್ನು ಎಲ್ಲಾ ಜನರ ಮನೆಯ ಕಾರ್ಯಕ್ರಮದಂತೆ ಮಾಡುತ್ತೇವೆ. ಇಡೀ ಗ್ರಾಮವೇ ಒಂದು ಕುಟುಂಬದಂತೆ ಭಾಸವಾಗುತ್ತದೆ.ಬೋಸ್ಲೆ ಸಂಧ್ಯಾ ಗೃಹಿಣಿ
ಉತ್ಸವಗಳ ಗ್ರಾಮ
ಗುರುಮಠಕಲ್ ತಾಲ್ಲೂಕಿನ ಪುಟಪಾಕ ಗ್ರಾಮದಿಂದ 8 ಕಿ.ಮೀ. ಮತ್ತು ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲಾ ಕೇಂದ್ರಕ್ಕೆ 3 ಕಿ.ಮೀ. ದೂರದಲ್ಲಿರುವ ಎಕ್ಲಾಸಪುರ್ (ಲೋಕಪಲ್ಲಿ) ಗ್ರಾಮವು ಸುತ್ತಲಿನ ಜನತೆಗೆ ‘ಉತ್ಸವಗಳ ಗ್ರಾಮ’ವೆಂದು ಪ್ರಸಿದ್ಧಿ ಪಡೆದಿದೆ. ಯುಗಾದಿ ಲಕ್ಷ್ಮಮ್ಮ ಜಾತ್ರೆ ತಿಮ್ಮಪ್ಪ ಜಾತ್ರೆ ಕೃಷ್ಣಾಷ್ಟಮಿ ಉತ್ಸವ ಕಾರ್ತಿಕ ದೀಪೋತ್ಸವ ಶಿವರಾತ್ರಿ ದೀಕ್ಷಾ ಉತ್ಸವ ಮೊಹರಂ ಹೀಗೆ ವರ್ಷವಿಡೀ ಒಂದಲ್ಲಾ ಒಂದು ಉತ್ಸವಗಳು ಈ ಗ್ರಾಮದಲ್ಲಿ ಜರುಗತ್ತಲೇ ಇರುತ್ತವೆ. ಆದ್ದರಿಂದ ಸುತ್ತಲಿನ ಗ್ರಾಮಗಳಿಗೆ ಇದು ‘ಉತ್ಸವಗಳ ಗ್ರಾಮ’ವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.