ADVERTISEMENT

ಯಾದಗಿರಿ: ಡೆಂಗಿ ಜ್ವರ ತಪಾಸಣೆಗೆ ಸಿಬ್ಬಂದಿ ಕೊರತೆ

ಬಿ.ಜಿ.ಪ್ರವೀಣಕುಮಾರ
Published 11 ಜುಲೈ 2024, 3:30 IST
Last Updated 11 ಜುಲೈ 2024, 3:30 IST
ಯಾದಗಿರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ಚೀಟಿ ಪಡೆಯುತ್ತಿರುವ ಜನ
ಯಾದಗಿರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ಚೀಟಿ ಪಡೆಯುತ್ತಿರುವ ಜನ   

ಯಾದಗಿರಿ: ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಆದರೆ, ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಕ್ತ ತಪಾಸಣೆ ಸಿಬ್ಬಂದಿ ಕೊರತೆ ಕಾಡುತ್ತಿದೆ.

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 41 ಪ್ರಾಥಮಿಕ, 6 ಸಮುದಾಯ ಹಾಗೂ 3 ನಗರ ಆರೋಗ್ಯ ಕೇಂದ್ರಗಳಿವೆ.

ಹಲವೆಡೆ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ADVERTISEMENT

ಅತಿಯಾದ ಜ್ವರದ ಲಕ್ಷಣಗಳಿರುವ ವ್ಯಕ್ತಿಗಳ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ಸೊಳ್ಳೆ ಉತ್ಪತ್ತಿ ನಿಲ್ಲಿಸಲು ವಾರಕ್ಕೊಮ್ಮೆ (ಪ್ರತಿ ಶುಕ್ರವಾರ) ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿ ಸುವಂತೆ ನಿರ್ದೇಶನ ನೀಡಲಾಗಿದೆ. 

‘ಪಂಚಾಯಿತಿ ಮಟ್ಟದಲ್ಲಿ ಪಿಡಿಒ, ಸದಸ್ಯರು ಹಾಗೂ ಪಂಪ್ ಆಪರೇಟರ್‌ಗಳೊಂದಿಗೆ ಚರ್ಚಿಸಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರು ಸೋರಿಕೆಯಾದಲ್ಲಿ ಕೂಡಲೇ ದುರಸ್ತಿ ಮಾಡಬೇಕು. ಲಾರ್ವಾ ಸರ್ವೆಯ ಜತೆಗೆ ಸೊಳ್ಳೆಗಳ ನಾಶಕ್ಕೆ ಕ್ರಮವಹಿಸಬೇಕು. ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಮೂಲಕ ಸೂಚಿಸಲಾಗಿದೆ’ ಟಿಎಚ್‌ಒ ಡಾ.ಹಣಮಂತರೆಡ್ಡಿ ಮಾಹಿತಿ ನೀಡಿದರು.

‘ಕ್ರಮವಹಿಸಲು ಸೂಚಿಸಿ ಸುಮ್ಮನೆ ಕೂಡುವ ಬದಲಿಗೆ ಸಂಬಂಧಿಸಿದ ಅಧಿಕಾರಿಗಳು ಗ್ರಾಮೀಣ ಮಟ್ಟದಲ್ಲಿ ಸೂಚನೆಗಳ ಪಾಲನೆಯಾಗಿದೆಯೇ ಎನ್ನುವುದನ್ನು ಪರಿಶೀಲಿಸಲಿ. ಬ್ಲೀಚಿಂಗ್ ಸಿಂಪಡಣೆ ಮಾಡುವ ಕುರಿತು ಹೇಳಲಾಗುತ್ತಿದೆಯಷ್ಟೆ. ಆದರೆ, ಎಲ್ಲೂ ಬ್ಲೀಚಿಂಗ್ ಪೌಡರ್ ಸಿಂಪಡಿಸುತ್ತಿಲ್ಲ. ಅಧಿಕಾರಿಗಳು ಕೇವಲ ಪೇಪರ್‌ಗಳಲ್ಲಿ ಕೆಲಸದ ಕುರಿತು ಬರೆದು ನಿರ್ಲಕ್ಷ್ಯಿಸುವುದು ಬೇಡ. ನಿಜವಾದ ಮುತುವರ್ಜಿಯಿಂದ ಕೆಲಸವಾಗುವ ನಿಟ್ಟಿನಲ್ಲಿ ಕ್ರಮವಹಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸಂಜು ಅಳೆಗಾರ ಆಗ್ರಹಿಸಿದರು.

ಡೆಂಗಿ ಪ್ರಕರಣಗಳಿಲ್ಲ: ಹುಣಸಗಿ ತಾಲ್ಲೂಕಿನಲ್ಲಿ ಅಲ್ಲಲ್ಲಿ ಜ್ವರ ಕಾಣಿಸಿಕೊಂಡಿವೆ. ಆದರೆ, ಡೆಂಗಿ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಈಗಾಗಲೇ ಹುಣಸಗಿ ತಾಲ್ಲೂಕಿನ ಕಲ್ಲದೇವನಹಳ್ಳಿ, ಶ್ರೀನಿವಾಸಪುರ, ರಾಜನಕೊಳೂರು ಮತ್ತು ಕೊಡೇಕಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಜ್ವರ ಕಾಣಿಸಿಕೊಂಡ 60ಕ್ಕೂ ಹೆಚ್ಚು ಜನರ ರಕ್ತದ ಮಾದರಿ ತಪಾಸಣೆಗೊಳಪಡಿಸಲಾಗಿದ್ದು, ಯಾರಿಗೂ ಡೆಂಗಿ ದೃಢಪಟ್ಟಿಲ್ಲ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ.ನಾಯಕ ಮಾಹಿತಿ ನೀಡಿದರು.

ಜ್ವರ ಕಾಣಿಸಿಕೊಂಡವರಿಗೆ ತಕ್ಷಣವೇ ಸೂಕ್ಷ್ಮ ಚಿಕಿತ್ಸೆ ನೀಡಿದ್ದರಿಂದ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿನ ವಿವಿಧ ಗ್ರಾಮಗಳಲ್ಲಿ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಅಲ್ಲದೆ ವಾರಕ್ಕೆ ಒಂದು ದಿನ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಕಲುಷಿತ ನೀರು ನಿಲ್ಲದಂತೆ ಹಾಗೂ ಮಲಿನ ನೀರು ಶೇಖರಣೆಯಾಗದಂತೆ ನೋಡಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ಮಂಜಾಗ್ರತಾ ಕ್ರಮ: ವಡಗೇರಾ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕಿನ ಬೆಂಡೆಬೆಂಬಳಿ, ಹಯ್ಯಾಳ (ಬಿ), ಕುರಕುಂದಾ, ತಡಬಿಡಿ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.

ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳಲ್ಲಿ ಡೆಂಗಿ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್, ಸ್ವಚ್ಛತೆ ಹಾಗೂ ಇನ್ನಿತರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರತಿ ಶುಕ್ರವಾರ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಗ್ರಾಮಸ್ಥರ ಆರೋಗ್ಯ ವಿಚಾರಿಸುವುದರ ಜತೆಗೆ ಜ್ವರದಿಂದ ಬಳಲುತ್ತಿರುವವರ ಮಾಹಿತಿ ಕಲೆಹಾಕಿ ಆರೋಗ್ಯ ಇಲಾಖೆಗೆ ನೀಡುತ್ತಿದ್ದಾರೆ.

ಯಾದಗಿರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ಚೀಟಿ ಪಡೆಯುತ್ತಿರುವ ಜನ
ಸುರಪುರದ ಸರ್ಕಾರಿ ಕನ್ಯಾ ಮಾದರಿಯ ಶಾಲೆಯಲ್ಲಿ ಡೆಂಗಿ ಜಾಗೃತಿ ಕುರಿತ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು
ಯಾದಗಿರಿ ನಗರಸಭೆಯಲ್ಲಿ ಈಗಾಗಲೇ ಡೆಂಗಿ ಜ್ವರಕ್ಕೆ ಸಂಬಂಧಿಸಿದಂತೆ ಜಾಗೃತಿಗೆ ಕ್ರಮ ವಹಿಸಲಾಗಿದೆ. ಫಾಗಿಂಗ್‌ ಮಾಡಲು ಸೂಚಿಸಲಾಗಿದೆ. ಅಗತ್ಯ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ
ಚನ್ನಾರೆಡ್ಡಿ ಪಾಟೀಲ ತುನ್ನೂರು ಯಾದಗಿರಿ ಶಾಸಕ
ಡೆಂಗಿ ಜ್ವರಕ್ಕೆ ಸಂಬಂಧಿಸಿದಂತೆ ಈಗಾಗಲೇ ವೈದ್ಯಾಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಪ್ರತಿದಿನ 20 ರಕ್ತದ ಮಾದರಿ ಪರೀಕ್ಷಿಸಲಾಗುತ್ತಿದೆ
ಡಾ.ರಿಜ್ವಾನ್‌ ಆಫ್ರಿನ್‌ ಜಿಲ್ಲಾ ಶಸ್ತ್ರಚಿಕಿತ್ಸಕಿ
ಜಿಲ್ಲೆಯಲ್ಲಿ ಡೆಂಗಿ ಪರೀಕ್ಷೆ ಮಾಡಲಾಗಿದೆ. ಸದ್ಯಕ್ಕೆ 16 ಪಾಸಿಟಿವ್ ಇದ್ದು ಯಾವುದೇ ಗಂಭೀರ ಸಮಸ್ಯೆಗಳಿಲ್ಲ. ಇಲ್ಲಿಯವರೆಗೆ 1118 ಮಾದರಿ ಪರೀಕ್ಷೆ ಮಾಡಲಾಗಿದೆ
ಡಾ.ಸಾಜೀದ್‌ ಮುಬಾಶಿರ್‌ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ
ಡೆಂಗಿ ನಿಯಂತ್ರಣಕ್ಕೆ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು
ಡಾ. ರಾಜಾ ವೆಂಕಪ್ಪನಾಯಕ ಟಿಎಚ್‌ಒ ಸುರಪುರ
ಸುರಪುರ ನಗರದಲ್ಲಿ ಸ್ವಚ್ಛತೆ ಇಲ್ಲ. ತೆಗ್ಗು ಗುಂಡಿಗಳಲ್ಲಿ ನೀರು ನಿಲ್ಲುತ್ತಿದೆ. ಚರಂಡಿ ತ್ಯಾಜ್ಯ ತೆಗೆಯುತ್ತಿಲ್ಲ. ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ
ಉಸ್ತಾದ ವಜಾಹತ್ ಹುಸೇನ್ ಜೆಡಿಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ
ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಎರಡು ಬೆಡ್‌ಗಳನ್ನು ಡೆಂಗಿಯಿಂದ ಬಳಲುತ್ತಿರುವರಿಗಾಗಿ ಮೀಸಲಿಡಲಾಗಿದೆ. ಡೆಂಗಿ ಹರಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ
ರಮೇಶ ಗುತ್ತೇದಾರ ಶಹಾಪುರ ತಾಲ್ಲೂಕು ವೈದ್ಯಾಧಿಕಾರಿ

6 ಡೆಂಗಿ ಪ್ರಕರಣ

ಶಹಾಪುರ: ತಾಲ್ಲೂಕಿನಲ್ಲಿ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅದರಲ್ಲಿ ಹತ್ತಿಗೂಡೂರ ದೋರನಹಳ್ಳಿ ತಡಿಬಿಡಿ ಬೆಂಡೆಬೆಂಬಳಿ ಸೇರಿದಂತೆ ಆರು ಕೇಂದ್ರಗಳಲ್ಲಿ ರಕ್ತ ತಪಾಸಣೆ ಮಾಡುವ ಸಿಬ್ಬಂದಿ ಇಲ್ಲ. ನೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವ ವ್ಯವಸ್ಥೆ ಮಾಡಿದೆ ಎಂದು ಟಿಎಚ್ಒ ಡಾ.ರಮೇಶ ಗುತ್ತೆದಾರ ತಿಳಿಸಿದರು.

ಜನವರಿಯಿಂದ ಜುಲೈ 9ವರೆಗೆ ಒಟ್ಟು ಆರು ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಅವರಲ್ಲಿ ನೆರೆ ಜಿಲ್ಲೆಯಿಂದ ಬಂದವರೂ ಇದ್ದಾರೆ. ಪ್ರತಿ ಶುಕ್ರವಾರಕ್ಕೊಮ್ಮೆ ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಮ್ಮಲ್ಲಿ ಅಷ್ಟು ಗಂಭೀರ ಪ್ರಕರಣಗಳಿಲ್ಲ. ಔಷಧ ಕೊರತೆಯಿಲ್ಲ ಎಂದು ಅವರು ಮಾಹಿತಿ ನೀಡಿದರು.

ನಗರ ಪ್ರದೇಶದ ಹೃದಯ ಭಾಗದಲ್ಲಿ ಸೀಳಿಕೊಂಡು ಹರಿಯುತ್ತಿರುವ ನಾಲಾದಲ್ಲಿ ತ್ಯಾಜ್ಯ ವಸ್ತು ಹಾಗೂ ಚರಂಡಿ ನೀರು ಹರಿಯುತ್ತಿರುವುದರಿಂದ ಕಲುಷಿತ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗುತ್ತಿದೆ. ಅಲ್ಲದೆ ಚರಂಡಿಯಲ್ಲಿ ಕೆಲ ಕಡೆ ಹೂಳು ತುಂಬಿಕೊಂಡಿವೆ. ಫಾಗಿಂಗ್ ಮಾಡಿಸಬೇಕು ಎಂದು ನಗರದ ಜನತೆ ಮನವಿ ಮಾಡಿದ್ದಾರೆ.

‘ಭಯ ಪಡುವ ಅಗತ್ಯವಿಲ್ಲ’

‘ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಒಂದು ಡೆಂಗಿ ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಿಂದ ಬಂದ ಯುವಕನಿಗೆ ಡೆಂಗಿ ದೃಢ‍ಪಟ್ಟಿದೆ. ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಇದೆ. ಎರಡು ಪ್ರತ್ಯೇಕ ಕೋಣೆಗಳನ್ನು ಕಾಯ್ದಿರಿಸಲಾಗಿದೆ. ಔಷಧ ಕೊರತೆ ಇಲ್ಲ. ಯಾರೂ ಅನಗತ್ಯವಾಗಿ ಭಯ ಪಡುವ ಅಗತ್ಯವಿಲ್ಲ’ ಎಂದು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಯಲ್ಲಪ್ಪ ಪಾಟೀಲ ಹುಲಕಲ್ ಮಾಹಿತಿ ನೀಡಿದರು.

ಸುರಪುರ: 4 ಡೆಂಗಿ ಪ್ರಕರಣ ಪತ್ತೆ

ಸುರಪುರ: ‘ಸುರಪುರ ಮತ್ತು ಹುಣಸಗಿ ತಾಲ್ಲೂಕಿನಲ್ಲಿ ಮೇ ತಿಂಗಳ ಕೊನೆಯಿಂದ ಇದುವರೆಗೆ 4 ಡೆಂಗಿ ಪ್ರಕರಣಗಳು ಪತ್ತೆಯಾ ಗಿವೆ. ಸುರಪುರ ತಾಲ್ಲೂಕಿನ ಟಿ.ಬೊಮ್ಮನಳ್ಳಿ ರತ್ತಾಳ ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಮತ್ತು ಕಲ್ಲದೇವನಹಳ್ಳಿ ಗ್ರಾಮಗಳಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದ್ದು ಎಲ್ಲರೂ ಗುಣಮುಖರಾಗಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ತಿಳಿಸಿದ್ದಾರೆ.

‘ಒಂದು ವಾರದ ನಂತರವೂ ಜ್ವರ ನಿಲ್ಲದ ರೋಗಿಗಳ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಇದುವರೆಗೂ 200ಕ್ಕೂ ಹೆಚ್ಚು ಅಂತಹ ಪರೀಕ್ಷೆ ನಡೆಸಲಾಗಿದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕಿಟ್ ಪದ್ಧತಿಯಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಡೆಂಗಿ ಶಂಕಿತ ರೋಗಿಗಳ ರಕ್ತದ ಮಾದರಿಯನ್ನು ಜಿಲ್ಲಾ ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ. ಅಲ್ಲಿ ಅಲೇಜಾ ಪದ್ಧತಿಯಲ್ಲಿ ಪರೀಕ್ಷೆ ನಡೆಸಿ ಡೆಂಗಿ ಇದ್ದರೆ ದೃಢಪಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಡೆಂಗಿ ಕುರಿತು ತಹಶೀಲ್ದಾರ್ ಇಒ ಶಿಕ್ಷಣ ಗ್ರಾಮ ಪಂಚಾಯಿತಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಲಾಗಿದೆ. ಎಲ್ಲೆಡೆ ಸ್ವಚ್ಛತೆ ಕಾಪಾಡುವಂತೆ ಸುತ್ತೋಲೆ ನೀಡಲಾಗಿದೆ. ಪ್ರತಿ ಶುಕ್ರವಾರ ಎಲ್ಲ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಡೆಂಗಿ ಕುರಿತು ತಿಳಿವಳಿಕೆ ನೀಡುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು. ‘ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿ ದಾಸ್ತಾನು ಇದೆ. ಚಿಕಿತ್ಸೆಯ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅವಳಿ ತಾಲ್ಲೂಕಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಯಾವುದೇ ಆತಂಕ ಇಲ್ಲ’ ಎಂದು ಮಾಹಿತಿ ನೀಡಿದರು.

9ರಂದು ನಾಲ್ಕು ಕೇಸ್‌ ಪತ್ತೆ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ 5 ಸುರ‍ಪುರ ತಾಲ್ಲೂಕಿನಲ್ಲಿ 40 ಯಾದಗಿರಿ ತಾಲ್ಲೂಕಿನಲ್ಲಿ 30 ಸೇರಿದಂತೆ 75 ಶಂಕಿತ ಪ್ರಕರಣಗಳಿದ್ದು ಇದರಲ್ಲಿ ಸುರಪುರ ತಾಲ್ಲೂಕಿನಲ್ಲಿ 3 ಯಾದಗಿರಿ ತಾಲ್ಲೂಕಿನಲ್ಲಿ 1 ಡೆಂಗಿ ಪ್ರಕರಣ ಪತ್ತೆಯಾಗಿದೆ. ಜನವರಿ 1ರಿಂದ ಜುಲೈ 9ರವರೆಗೆ 1544 ಶಂಕಿತ ಪ್ರಕರಣಗಳಿದ್ದು 1118 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 16 ಜನರಿಗೆ ಡೆಂಗಿ ಜ್ವರ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ರಾಜಧಾನಿಯಿಂದ ಬಂದವರಿಗೆ ಜ್ವರ

‘ದುಡಿಯಲು ಬೆಂಗಳೂರಿಗೆ ಹೋಗಿದ್ದ ವ್ಯಕ್ತಿ ಕಳೆದ ಒಂದು ವಾರದ ಹಿಂದೆ ಮರಳಿ ವಡಗೇರಾಕ್ಕೆ ಬಂದಿದ್ದ. ಆತನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಾಗ ಜ್ವರ ಕಾಣಿಸಿತ್ತು. ರಕ್ತದ ಮಾದರಿಯನ್ನು ಡಿಪಿಎಚ್‌ಎಲ್‌ಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅವರಲ್ಲಿ ಡೆಂಗಿ ಕಾಯಿಲೆಯ ಲಕ್ಷಣಗಳು ಕಂಡು ಬಂದಿದ್ದವು. ಅವರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈಗ ಅವರು ಗುಣ ಮುಖರಾಗಿದ್ದಾರೆ’ ಎಂದು ವಡಗೇರಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಗನ್ನಾಥರಡ್ಡಿ ಹೇಳುತ್ತಾರೆ.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.