ADVERTISEMENT

ಶಹಾಪುರ: ಮಾವಿನ ಕೆರೆಯ ಅಂಗಳ ಭೂಗಳ್ಳರ ಪಾಲು!

ಟಿ.ನಾಗೇಂದ್ರ
Published 18 ನವೆಂಬರ್ 2024, 4:14 IST
Last Updated 18 ನವೆಂಬರ್ 2024, 4:14 IST
ಶಹಾಪುರ ನಗರದ ಮಾವಿನ ಕೆರೆಯಂಗಳವನ್ನು ಒತ್ತುವರಿ ಮಾಡಿ ಮಣ್ಣು ಹಾಕಿರುವುದು
ಶಹಾಪುರ ನಗರದ ಮಾವಿನ ಕೆರೆಯಂಗಳವನ್ನು ಒತ್ತುವರಿ ಮಾಡಿ ಮಣ್ಣು ಹಾಕಿರುವುದು   

ಶಹಾಪುರ: ನಗರದ ಜನತೆಯ ನಾಡಿ ಮಿಡಿತವಾಗಿರುವ ಮಾವಿನ ಕೆರೆಯ ಅಂಗಳವನ್ನು ಒತ್ತುವರಿ ಮಾಡುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಟ್ರ್ಯಾಕ್ಟರ್ ಹಾಗೂ ಜೆಸಿಬಿ ಮೂಲಕ ಕೆರೆಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿದೆ. ಕಂದಾಯ ಹಾಗೂ ನಗರಸಭೆಯ ಅಧಿಕಾರಿಗಳ ಕೆರೆ ಒತ್ತುವರಿ ಕಣ್ಣು ಮುಂದೆ ನಡೆಯುತ್ತಿದ್ದರೂ ಜಾಣ ಕಿವುಡತನ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕೆರೆಯ ದಂಡೆಗೆ ಹೊಂದಿಕೊಂಡ ಕೆಲ ರೈತರು ತ್ಯಾಜ್ಯ ವಸ್ತುಗಳನ್ನು ಕೆರೆಯಲ್ಲಿ ಎಸೆಯುತ್ತಾರೆ. ಬೇಸಿಗೆ ಸಂದರ್ಭದಲ್ಲಿ ಫಲವತ್ತಾದ ಮಣ್ಣು ಇದೇ ಕೆರೆಯಂಗಳದ ಮಣ್ಣು ಪಡೆದುಕೊಂಡು ಇಟ್ಟಿಗೆ ಸಿದ್ಧಪಡಿಸುತ್ತಾರೆ. ಈಗಾಗಲೇ ಕೆಲ ದಿನದಿಂದ ಕೆರೆಯ ದಂಡೆಯ ಮಣ್ಣು ಜೆಸಿಬಿ ಮೂಲಕ ಅಗೆದು ಸಮತಟ್ಟು ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಇದರಲ್ಲಿ ನಮ್ಮ ಜಮೀನು ಇದೆ. ನೀವ್ಯಾರು ನಮ್ಮನ್ನು ಕೇಳವರು ಎಂದು ನಮಗೆ ಉಲ್ಟಾ ಗದರಿಸಿ ವಾಪಸ್‌ ಕಳುಹಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಅರುಣಿ ಆರೋಪಿಸುತ್ತಾರೆ.

ಹತ್ತು ವರ್ಷದ ಹಿಂದೆ ಕೆರೆ ಅಭಿವೃದ್ಧಿಗಾಗಿ ಅನುದಾನ ಬಂದಾಗ ಕೆರೆಗೆ ಹೊಂದಿಕೊಂಡಂತೆ ಪಾದಚಾರಿಗಳು ವಾಯು ವಿಹಾರಕ್ಕೆ ತಿರುಗಾಡಲು ಸಿ.ಸಿ ರಸ್ತೆ, ವೀಕ್ಷಣಾ ಗೋಪುರ, ಕೆರೆಗೆ ಹೊಂದಿಕೊಂಡಂತೆ ಸಸಿಗಳನ್ನು ನೆಡಲಾಗಿತ್ತು. ಸರಿಯಾದ ನಿರ್ವಹಣೆ ಇಲ್ಲದೆ ಹಾಳು ಬಿದ್ದಿತ್ತು. ಅಲ್ಲದೆ ನಾಲ್ಕು ವರ್ಷದ ಹಿಂದೆ ಜೈನ ಸಮುದಾಯದವರು ಮಾವಿನ ಕೆರೆಯಲ್ಲಿನ ಹೂಳೆತ್ತುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದರು. ಆದರೆ ಅರೆ ಬರೆ ಕೆಲಸ ನಿರ್ವಹಿಸಿ ಬಿಟ್ಟು ಹೋಗಿದ್ದಾರೆ. ಅಲ್ಲದೆ ಕೆರೆಗೆ ಹೊಂದಿಕೊಂಡ ಜಮೀನುಗಳ ರೈತರು ಕೃತಕ ರಸ್ತೆ ನಿರ್ಮಿಸಿಕೊಂಡು ಕೃಷಿ ಜಮೀನುಗಳನ್ನು ಪರಿವರ್ತನೆ ಮಾಡಿ ನಿವೇಶನಗಳನ್ನು ಸಿದ್ಧಪಡಿಸಿ ಮಾರಾಟಕ್ಕೆ ಮುಂದಾಗಿರುವುದು ಕೆರೆ ಒತ್ತುವರಿಗೂ ತಳಕು ಹಾಕಿಕೊಂಡಿದೆ ಎನ್ನುತ್ತಾರೆ ಪರಿಸರ ಪ್ರೇಮಿ ಸಂತೋಷ ಸತ್ಯಂಪೇಟೆ

ADVERTISEMENT

ಪ್ರಸಕ್ತ ಬಾರಿ ಉತ್ತಮ ಮಳೆಯಾಗಿದ್ದರಿಂದ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗಿದೆ. ಬೇಸಿಗೆಯ ಸಮಯದಲ್ಲಿ ಕೆರೆಯಲ್ಲಿ ನೀರಿನ ಸಂಗ್ರಹವಿದ್ದರೆ ಅಂತರ್ಜಲಮಟ್ಟ ಕುಸಿಯುವುದಿಲ್ಲ. ಕೆರೆಯ ಕೆಳಗಡೆಯ ಬಡಾವಣೆಯ ಪ್ರದೇಶದ ಕೊಳವೆ ಬಾಯಿ ಬತ್ತುವುದಿಲ್ಲ. ಆದರೆ ಕೆಲ ದುಷ್ಟಶಕ್ತಿಗಳು ಬೇಸಿಗೆ ಸಂದರ್ಭದಲ್ಲಿ ಕೆರೆಯ ಕೋಡಿ ಒಡೆದು ನೀರು ಹರಿಬಿಟ್ಟು ಅಲ್ಲಿ ಇಟ್ಟಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಮೂಲ ದಾಖಲೆಯ ಪ್ರಕಾರ ಮಾವಿನ ಕೆರೆಯ ವಿಸ್ತೀರ್ಣವನ್ನು ಅಳತೆ ಮಾಡಿ ಗಡಿ ಗುರುತು ಹಾಕಿ ಒತ್ತುವರಿ ತಡೆಯದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ನಗರದ ಜನತೆ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.

ವಿಶಾಲವಾದ ಮಾವಿನ ಕೆರೆಯಲ್ಲಿ ನೀರು ಸಂಗ್ರಹವಾಗಿರುವುದು
ನಗರಸಭೆಯ ಅಧೀನದಲ್ಲಿ ಕೆರೆ ಬರುತ್ತದೆ. ಒತ್ತುವರಿಯಾಗಿದ್ದರೆ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ
ಉಮಾಕಾಂತ ಹಳ್ಳೆ ತಹಶೀಲ್ದಾರ್‌
ಮಾವಿನ ಕೆರೆ ಸಣ್ಣ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಕೆರೆ ಒತ್ತುವರಿ ಮಾಡಿಕೊಳ್ಳುತ್ತಿದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ
ರಮೇಶ ಬಡಿಗೇರ ಪೌರಾಯುಕ್ತ
ಕೆರೆಯ ಅಕ್ಕಪಕ್ಕದ ಜಮೀನುಗಳ ರೈತರು ಕೆರೆಯನ್ನು ಒತ್ತವರಿ ಮಾಡಿಕೊಂಡು ಅಕ್ರಮವಾಗಿ ಇಟ್ಟಿಗೆ ಭಟ್ಟಿ ಸಿದ್ಧಪಡಿಸುತ್ತಿದ್ದಾರೆ
ಬಸವರಾಜ ಅರುಣಿ ಸಾಮಾಜಿಕ ಕಾರ್ಯಕರ್ತ
ಕುಂಟುತ್ತಾ ಸಾಗಿದ ಕಾಮಗಾರಿ
ಶಹಾಪುರ: ಶಹಾಪುರ ಶಾಖಾ ಕಾಲುವೆ (ಎಸ್.ಬಿಸಿ) ಕಾಲುವೆ ಮೂಲಕ ಮಾವಿನ ಕೆರೆ ಹಾಗೂ ನಾಗರ ಕೆರೆಗೆ ₹4.84 ಕೋಟಿ ವೆಚ್ಚದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನ ವರ್ಷ ಹಿಂದೆ ಚಾಲನೆ ಸಿಕ್ಕಿದ್ದರೂ ಕಾಮಗಾರಿ ಕುಂಟುತ್ತ ಸಾಗಿದೆ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಂಡಿದ್ದರೆ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿತ್ತು. ಇನ್ನೂ ಪೈಪ್‌ಲೈನ್ ಅಳವಡಿಸುವ ಕಾರ್ಯ ಸಾಗಿದೆ ಎನ್ನುತ್ತಾರೆ ಕೆಬಿಜೆಎನ್‌ಎಲ್ ನಿಗಮದ ಎಂಜಿನಿಯರ್ ಒಬ್ಬರು.
ಅತ್ಯುತ್ತಮ ಪ್ರವಾಸಿ ತಾಣ ಇದಾಗಲಿದೆ
ಶಹಾಪುರ: ನಗರಕ್ಕೆ ಹೊಂದಿಕೊಂಡಿರುವ ಮಾವಿನ ಕೆರೆಯ ಸುಮಾರು ಆರು ಎಕರೆಯಷ್ಟಿದೆ. ಅಂದಿನ ನಿಜಾಮನರ ಆಳ್ವಿಕೆಯಲ್ಲಿ ಬೆಟ್ಟದ ಇಳಿಜಾರು ಪ್ರದೇಶಕ್ಕೆ ಹೊಂದಿಕೊಂಡು ಕೆರೆ ನಿರ್ಮಿಸಿದ್ದಾರೆ. ಅಲ್ಲದೆ ವಿಶಾಲವಾದ ಬುದ್ದವಿಹಾರವು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಕೆರೆಯಲ್ಲಿ ಸದಾ ನೀರು ಸಂಗ್ರಹಿಸಿ ಬೊಟಿಂಗ್ ವ್ಯವಸ್ಥೆ ಮಾಡಿದರೆ ಅತ್ಯುತ್ತಮ ಪ್ರವಾಸಿ ತಾಣವಾಗಿ ಕೆರೆಯ ಅಂಗಳ ರೂಪಗೊಳ್ಳುತ್ತದೆ ಎನ್ನುತ್ತಾರೆ ನಗರದ ನಿವಾಸಿಗರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.