ADVERTISEMENT

ಬಿಜೆಪಿ ಅಭ್ಯರ್ಥಿಗಳಿಂದ ಹೆಚ್ಚು ವೆಚ್ಚ!

ವಿಧಾನಸಭೆ ಚುನಾವಣೆಯಲ್ಲಿ ಆಯೋಗದ ₹25ಲಕ್ಷ ಮಿತಿ ದಾಟದ ಅಭ್ಯರ್ಥಿಗಳ ವೆಚ್ಚ

ಮಲ್ಲೇಶ್ ನಾಯಕನಹಟ್ಟಿ
Published 20 ಜುಲೈ 2018, 12:07 IST
Last Updated 20 ಜುಲೈ 2018, 12:07 IST

ಯಾದಗಿರಿ: ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಇತರೆ ಅಭ್ಯರ್ಥಿಗಳಿಗಿಂತ ಹೆಚ್ಚು ವೆಚ್ಚ ಮಾಡಿದ್ದಾರೆ.

ಅಧಿಸೂಚನೆ ಸಂದರ್ಭದಲ್ಲಿ ಚುನಾವಣಾ ಆಯೋಗವು ಅಭ್ಯರ್ಥಿಗಳ ವೆಚ್ಚಕ್ಕೆ ₹ 25 ಲಕ್ಷದ ಮಿತಿ ವಿಧಿಸಿತ್ತು. ಅಧಿಸೂಚನೆಗೂ ಮುಂಚೆ ಅಭ್ಯರ್ಥಿಗಳು ಚುನಾವಣೆಗೆ ಹಣ ಖರ್ಚು ಮಾಡಲು ಅವಕಾಶವಿತ್ತು. ಆದರೆ, ಟಿಕೆಟ್ ಹಂಚಿಕೆಯಲ್ಲಿ ಉಂಟಾದ ಗೊಂದಲ ಅಭ್ಯರ್ಥಿಗಳನ್ನು ಕಟ್ಟಿಹಾಕಿತ್ತು.

ಪ್ರತಿವರ್ಷ ಚುನಾವಣಾ ಚಿತ್ರಣ ಹಾಗೂ ಫಲಿತಾಂಶದಲ್ಲಿ ಭಿನ್ನತೆ ತರುವ ಶಹಾಪುರ ಕ್ಷೇತ್ರದಲ್ಲಿಯ ಬಿಜೆಪಿ ಅಭ್ಯರ್ಥಿ ಗುರುಪಾಟೀಲ ಶಿರವಾಳ ಇಡೀ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚು ಚುನಾವಣಾ ವೆಚ್ಚಗೊಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಒಟ್ಟು ₹ 15.13ಲಕ್ಷ ವೆಚ್ಚಗೊಳಿಸಿದ್ದಾರೆ. ಸುರಪುರ ತಾಲ್ಲೂಕಿನ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ಒಟ್ಟು 13.18 ಲಕ್ಷ ವೆಚ್ಚಗೊಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ADVERTISEMENT

ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಡಾ.ಎ.ಬಿ.ಮಾಲಕರಡ್ಡಿ ಒಟ್ಟು ₹12.78 ಲಕ್ಷ ವೆಚ್ಚಗೊಳಿಸಿ ಗೆಲುವುಗಾಗಿ ಶತಪ್ರಯತ್ನ ನಡೆಸಿದ್ದರು. ರ್‍ಯಾಲಿ ನಡೆಸಲು ವಾಹನ ಇತರೆ ವೆಚ್ಚಕ್ಕಾಗಿ ಅವರು ಒಟ್ಟು ₹6.82 ಲಕ್ಷ ವ್ಯಯಿಸಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಗೆದ್ದಿರುವ ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ ₹11.78 ಲಕ್ಷ ಖರ್ಚು ಮಾಡಿದ್ದಾರೆ. ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಅಭ್ಯರ್ಥಿ ಅಬ್ದುಲ್‌ ನಬಿ ಅತ್ಯಂಕ ಕಡಿಮೆ ಖರ್ಚು ಮಾಡಿರುವುದು ಅಚ್ಚರಿಗೊಳಿಸುತ್ತದೆ. ಠೇವಣಿ ಉಳಿಸಿಕೊಂಡಿರುವ ಅವರು ಕೇವಲ ₹1.5 ಲಕ್ಷ ಮಾತ್ರ ವೆಚ್ಚಗೊಳಿಸಿದ್ದಾರೆ. ಗುರುಮಠಕಲ್‌ನಲ್ಲಿ ಕಮ್ಯುನಿಷ್ಟ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಸೋಮಶೇಖರ್ ಸಹ ₹2.5ಲಕ್ಷ ವೆಚ್ಚಗೊಳಿಸಿದ್ದಾರೆ.

ಭಾರೀ ಕುತೂಹಲ ಕೆರಳಿಸಿದ್ದ ಗುರುಮಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ ಅವರು ₹11.29 ಲಕ್ಷ ಚುನಾವಣಾ ವೆಚ್ಚಗೊಳಿಸಿದ್ದಾರೆ. ಬಿಜೆಪಿಯ ಸಾಯಿಬಣ್ಣ ಬೋರಬಂಡಾ ₹9.26ಲಕ್ಷ ಹಾಗೂ ಭಾರೀ ಅಂತರದಿಂದ ಗೆಲುವು ಪಡೆದಿರುವ ಜೆಡಿಎಸ್‌ನ ನಾಗನಗೌಡ ಕಂದಕೂರ ಅವರು ₹9.76 ಲಕ್ಷ ವೆಚ್ಚಗೊಳಿಸಿದ್ದಾರೆ.

ಸುರಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜಾವೆಂಕಟಪ್ಪ ನಾಯಕ ₹7.42 ಲಕ್ಷ ಮಾತ್ರ ವೆಚ್ಚಗೊಳಿಸಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ನರಸಿಂಹ ನಾಯಕ ಅವರು ರಾಜಾವೆಂಕಟಪ್ಪ ನಾಯಕ ಅವರಿಗಿಂತ ₹5ಲಕ್ಷ ಹೆಚ್ಚು ಖರ್ಚು ಮಾಡಿರುವುದಾಗಿ ಚುನಾವಣಾ ಆಯೋಗದ ಖರ್ಚುವೆಚ್ಚ ಪಟ್ಟಿ ತಿಳಿಸುತ್ತದೆ.

ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣು ಇಡಲಾಗಿತ್ತು. ಪರವಾನಗಿ ಪಡೆಯದೇ ಪ್ರಚಾರ ನಡೆಸಲು ಮುಂದಾದವರ ಮೇಲೆ ಕಠಿಣ ಕ್ರಮ ಜರುಗಿಸಲಾಗಿತ್ತು
- ಜೆ.ಮಂಜುನಾಥ್ ಜಿಲ್ಲಾಧಿಕಾರಿ

ಪಕ್ಷೇತರರ ತಾಕತ್ತು

ಜಿಲ್ಲೆಯಲ್ಲಿ ನಾಲ್ಕೂ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದರು. ಆದರೆ, ಈ ಬಾರಿ ಅವರ ಚುನಾವಣಾ ವೆಚ್ಚ ಅಚ್ಚರಿ ಮೂಡಿಸಿದೆ. ಲಕ್ಷಕ್ಕಿಂತ ಹೆಚ್ಚು ವೆಚ್ಚಗೊಳಿಸಿದವರ ಸಂಖ್ಯೆಯೂ ವೃದ್ಧಿಸಿದೆ.

ಯಾದಗಿರಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಂ. ಬಸವರಾಜ್ ₹ 3,25,418 ರಷ್ಟು ವೆಚ್ಚಗೊಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಗುರುಮಠಕಲ್‌ನಲ್ಲಿ ಸತ್ಯನಾರಾಯಣ ಅವರು ₹1,77,440 ವೆಚ್ಚಗೊಳಿಸಿ ಎರಡನೆ ಸ್ಥಾನದಲ್ಲಿದ್ದಾರೆ. ಯಾದಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾರ್ಮಿಕ ಮುಖಂಡ ಸೈದಪ್ಪ ಅವರು ₹1,27,930 ವೆಚ್ಚಗೊಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಕ್ಷೇತ್ರವಾರು ಚುನಾವಣಾ ಅಭ್ಯರ್ಥಿಗಳ ಖರ್ಚುವೆಚ್ಚ

ಕ್ಷೇತ್ರ ಪಕ್ಷ ಅಭ್ಯರ್ಥಿ ಎಷ್ಟುವೆಚ್ಚ?
ಯಾದಗಿರಿ ಕಾಂಗ್ರೆಸ್‌ ಡಾ.ಎ.ಬಿ.ಮಾಲಕರಡ್ಡಿ ₹12,78,455
ಯಾದಗಿರಿ ಬಿಜೆಪಿ ವೆಂಕಟರೆಡ್ಡಿ ಮುದ್ನಾಳ ₹11,78,025
ಯಾದಗಿರಿ ಜೆಡಿಎಸ್ ಅಬ್ದುಲ್ ನಬಿ ₹1.05ಲಕ್ಷ
ಶಹಾಪುರ ಜೆಡಿಎಸ್ ಅಮೀನ್‌ರೆಡ್ಡಿ ₹8,48,606
ಶಹಾಪುರ ಬಿಜೆಪಿ ಗುರುಪಾಟೀಲ ಶಿರವಾಳ ₹15,13,028
ಶಹಾಪುರ ಕಾಂಗ್ರೆಸ್ ಶರಣಬಸಪ್ಪ ದರ್ಶನಾಪುರ ₹10,85,367
ಸುರಪುರ ಬಿಜೆಪಿ ನರಸಿಂಹನಾಯಕ (ರಾಜೂಗೌಡ) ₹13,94,300
ಸುರಪುರ ಕಾಂಗ್ರೆಸ್‌ ರಾಜಾವೆಂಕಟಪ್ಪ ನಾಯಕ ₹7,42,828
ಗುರುಮಠಕಲ್‌ ಕಾಂಗ್ರೆಸ್‌ ಬಾಬುರಾವ ಚಿಂಚನಸೂರ ₹11,29,766
ಗುರುಮಠಕಲ್‌ ಜೆಡಿಎಸ್‌ ನಾಗನಗೌಡ ಕಂದಕೂರ ₹9,76,625
ಗುರುಮಠಕಲ್‌ ಬಿಜೆಪಿ ಸಾಯಿಬಣ್ಣ ಬೋರಬಂಡಾ ₹9,26,737

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.