ADVERTISEMENT

ಯಾದಗಿರಿ | ಹಿಂಗಾರು ಹಂಗಾಮು: ಬಿತ್ತನೆಗೆ ಸಿದ್ಧತೆ

ಬಿ.ಜಿ.ಪ್ರವೀಣಕುಮಾರ
ಭೀಮಶೇನರಾವ ಕುಲಕರ್ಣಿ
Published 14 ಅಕ್ಟೋಬರ್ 2024, 5:03 IST
Last Updated 14 ಅಕ್ಟೋಬರ್ 2024, 5:03 IST
<div class="paragraphs"><p>ಯಾದಗಿರಿ ನಗರದ ದೊಡ್ಡ ಕೆರೆಯ ಪಕ್ಕದ ಹೊಲವನ್ನು ಹಿಂಗಾರು ಹಂಗಾಮಿಗೆ ಭೂಮಿಯನ್ನು ಹಸನು ಮಾಡುತ್ತಿರುವ ರೈತ ಪ್ರಜಾವಾಣಿ </p></div>

ಯಾದಗಿರಿ ನಗರದ ದೊಡ್ಡ ಕೆರೆಯ ಪಕ್ಕದ ಹೊಲವನ್ನು ಹಿಂಗಾರು ಹಂಗಾಮಿಗೆ ಭೂಮಿಯನ್ನು ಹಸನು ಮಾಡುತ್ತಿರುವ ರೈತ ಪ್ರಜಾವಾಣಿ

   

ಚಿತ್ರಗಳು: ರಾಜಕುಮಾರ ನಳ್ಳಿಕರ್

ಯಾದಗಿರಿ: ಜಿಲ್ಲೆಯ ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಹೆಚ್ಚು ಭತ್ತ ನಾಟಿ ಮಾಡಿದರೆ, ಯಾದಗಿರಿ, ಗುರುಮಠಕಲ್‌, ವಡಗೇರಾ ತಾಲ್ಲೂಕಿನಲ್ಲಿ ಜೋಳ, ಕಡಲೆ, ಶೇಂಗಾ, ಸಜ್ಜೆ ಬಿತ್ತನೆ ಮಾಡಲು ಸಿದ್ಧತೆ ನಡೆದಿದೆ. ಅಕ್ಟೋಬರ್ 7ರ ತನಕ ಶೇ 16.75 ರಷ್ಟು ಬಿತ್ತನೆಯಾಗಿದೆ.

ADVERTISEMENT

ಯಾದಗಿರಿ ತಾಲ್ಲೂಕಿನಲ್ಲಿ ಶೇ 42 .29, ಗುರುಮಠಕಲ್‌ ತಾಲ್ಲೂಕಿನಲ್ಲಿ ಶೇ 38.04 ಬಿತ್ತನೆಯಾಗಿದೆ.

ಭತ್ತ, ಹಿಂಗಾರು ಜೋಳ, ಮೆಕ್ಕೆಜೋಳ, ಸಜ್ಜೆ, ಇತರೆ ತೃಣ ಧಾನ್ಯಗಳು, ತೊಗರಿ, ಹೆಸರು, ಕಡಲೆ, ಹುರುಳಿ, ಉದ್ದು, ಇತರೆ ದ್ವಿದಳ ಧಾನ್ಯಗಳು, ಶೇಂಗಾ, ಎಳ್ಳು, ಸೂರ್ಯಕಾಂತಿ, ಇತರೆ ಎಣ್ಣೆಕಾಳುಗಳು, ಹತ್ತಿ, ಕಬ್ಬು ಸೇರಿದಂತೆ ಹಿಂಗಾರು ಹಂಗಾಮುನಲ್ಲಿ ಬಿತ್ತನೆ ಬೀಜಗಳನ್ನು ಬಿತ್ತಲೆ ರೈತರು ಬಿತ್ತನೆಗೆ ಅಣಿಯಾಗಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ನಕಲಿ ಬೀಜಗಳದ್ದೆ ಸವಾಲಾಗಿದೆ. ಅದರಲ್ಲೂ ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು ನಕಲಿ ಬೀಜಗಳ ಹಾವಳಿ ಇರುತ್ತದೆ.

ರಾಜ್ಯದ ವಿವಿಧ ತಳಿಯ ಹತ್ತಿ ಬೀಜ ತಯಾರಿಕಾ ಕಂಪನಿ ಬೀಜಗಳು ಶಹಾಪುರದಲ್ಲಿ ಮಾರಾಟಕ್ಕೆ ಸಿಗುತ್ತವೆ. ಇದರಿಂದ ನಕಲಿಗೆ ಇದು ರಹದಾರಿ ಎನ್ನುವಂತೆ ಆಗಿದೆ. ಅಲ್ಲದೇ ಕಡಿಮೆ ದರಕ್ಕೆ ಮಾರಾಟ ಮಾಡುವುದರಿಂದ ರೈತರು ಆಸೆಗೆ ಬಿದ್ದು ಖರೀದಿಸುವುದು ಸಾಮಾನ್ಯವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಈ ರೀತಿ ಖರೀದಿಸಿ ರೈತರು ಮೋಸ ಹೋಗಿದ್ದರು.

ಬಿತ್ತನೆ ಮಾಹಿತಿ: ಶಹಾಪುರ ತಾಲ್ಲೂಕಿನಲ್ಲಿ 6,883.55 ಹೆಕ್ಟೇರ್‌, ವಡಗೇರಾ 5,181.29, ಸುರಪುರ 7,324.79, ಹುಣಸಗಿ 5012.10, ಯಾದಗಿರಿ 10,310.29, ಗುರುಮಠಕಲ್‌ 6828.26 ಸೇರಿದಂತೆ 41,540.26 ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, ಯಾದಗಿರಿ ತಾಲ್ಲೂಕಿನ 4,360 ಹೆಕ್ಟೇರ್‌, ಗುರುಮಠಕಲ್‌ 2,597.40 ಹೆಕ್ಟೇರ್‌ ಬಿತ್ತನೆಯಾಗಿದೆ. ಒಟ್ಟಾರೆ 6,957.40 ಬಿತ್ತನೆಯಾಗಿದೆ.

ಯಾದಗಿರಿ ನಗರ ಹೊರವಲಯದ ಭೀಮಾ ನದಿ ಸಮೀಪ ಭತ್ತ ನಾಟಿ ಮಾಡಿರುವುದು
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ರೈತರು ಸಿದ್ಧತೆ ನಡೆದಿದ್ದು ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಶಹಾಪುರ ಸುರಪುರದಲ್ಲೂ ಶೇಂಗಾ ಬೀಜ ಬಿತ್ತನೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ
ರತೇಂದ್ರನಾಥ ಸೂಗೂರು ಜಂಟಿ ಕೃಷಿ ನಿರ್ದೇಶಕ
ಮುಂಗಾರು ಹಂಗಾಮು ಬೆಳೆ ಹೆಸರು ಬೆಳೆ ತೆಗೆದುಕೊಂಡಿದ್ದೇವೆ. ಈಗ ಹಿಂಗಾರು ಹಂಗಾಮು ಜೋಳ ಬಿತ್ತನೆಗೆ ಹೊಲ ಹಸನುಗೊಳಿಸಲಾಗಿದೆ. ಇನ್ನೂ ಒಂದು ವಾರದೊಳಗೆ ಜೋಳ ಬಿತ್ತನೆ ಮಾಡುತ್ತೆವೆ
ಶರಣಪ್ಪ ಕುಂಬಾರ ಚಟ್ನಳ್ಳಿ ರೈತ

ಈ ಬಾರಿ ಎರಡು ಬೆಳೆಗೆ ನೀರು

ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಹಿಂಗಾರು ಹಂಗಾಮಿಗೆ ನೀರಿನ ಕೊರತೆ ಕಾಡಿತ್ತು. ಆದರೆ ಈ ಬಾರಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಬೆಳೆಗೆ ನೀರಿನ ಕೊರತೆ ಇಲ್ಲ. ಹೀಗಾಗಿ ವಾರಂಬಂಧಿ ಸಮಸ್ಯೆ ಇನ್ನೂ ಉದ್ಬವಿಸಿಲ್ಲ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಮಿತ ಬಳಕೆ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. ಮುಂಗಾರು ಹಂಗಾಮಿನಲ್ಲಿ ಕಾಲುವೆಗೆ ನೀರಿನ ಸಮಸ್ಯೆಯಾಗುವದಿಲ್ಲ.

ಆದರೆ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ನಾಟಿಯ ಸಂದರ್ಭದಲ್ಲಿ ರೈತರಿಗೆ ನೀರಿನದೇ ದೊಡ್ಡ ಚಿಂತೆ ಎನ್ನುವಂತಾಗುತ್ತದೆ. ಪ್ರತಿ ವರ್ಷ ನೀರಾವರಿ ಪ್ರದೇಶ ಹೆಚ್ಚಾಗುತ್ತಿದೆ. ರೈತರ ನೀರಿನ ಬೇಡಿಕೆಯು ಜಾಸ್ತಿಯಾಗುತ್ತಿದೆ. ಮುಂಗಾರು ಹಿಂಗಾರು ಹಂಗಾಮಿನ ಬೆಳೆ ಪಡೆದ ನಂತರ ರೈತರು ನೀರಿನ ಲಭ್ಯತೆ ಆಧಾರದ ಮೇಲೆ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಚಿಂತನೆ ನಡೆಸುವುದು ಈಗ ಸಕಾಲವಾಗಿದೆ.

ಅನವಶ್ಯಕವಾಗಿ ಬೀಜ ಗೊಬ್ಬರ ಶ್ರಮ ಹಾಕಿ ಆರ್ಥಿಕ ನಷ್ಟ ಅನುಭವಿಸುವುದಕ್ಕಿಂತ ಎಚ್ಚರಿಕೆ ಹೆಜ್ಜೆ ಇಟ್ಟುಕೊಂಡು ಲಘು ಬೆಳೆ ಬೆಳೆಯಬೇಕು. ಭೂಮಿಯ ಫಲವತ್ತತೆ ಕಾಪಾಡಬೇಕು ಎನ್ನುವುದು ಕೃಷಿ ವಿಜ್ಞಾನಿಗಳ ಸಲಹೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.