ADVERTISEMENT

ಸೈದಾಪುರ: ರೈತರ ಸಂಪರ್ಕ ಕೇಂದ್ರಕ್ಕಿಲ್ಲ ಸ್ವಂತ ಸೂರು

ಹಲವು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ ಸೈದಾಪುರ ಕೇಂದ್ರ

ಮಲ್ಲಿಕಾರ್ಜುನ ಅರಿಕೇರಕರ್
Published 21 ನವೆಂಬರ್ 2023, 4:30 IST
Last Updated 21 ನವೆಂಬರ್ 2023, 4:30 IST
‌ಸೈದಾಪುರ ಪಟ್ಟಣದ ಬಾಡಿಗೆ ಕಟ್ಟಡದಲ್ಲಿರುವ ರೈತ ಸಂಪರ್ಕ ಕೇಂದ್ರದ ನೋಟ
‌ಸೈದಾಪುರ ಪಟ್ಟಣದ ಬಾಡಿಗೆ ಕಟ್ಟಡದಲ್ಲಿರುವ ರೈತ ಸಂಪರ್ಕ ಕೇಂದ್ರದ ನೋಟ   

ಸೈದಾಪುರ: ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯಿಂದ ಹೋಬಳಿ ಕೇಂದ್ರ ಸೈದಾಪುರದಲ್ಲಿ ತೆರೆದಿರುವ ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡವೇ ಇಲ್ಲ.

ಪಟ್ಟಣದ ರೈತ ಸಂಪರ್ಕ ಕೇಂದ್ರವು ಅಂದಾಜು 15ಕ್ಕೂ ಹೆಚ್ಚು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿದೆ. ದಾಸ್ತಾನು ಮತ್ತು ಕಾರ್ಯಾಲಯದ ಕಟ್ಟಡಕ್ಕೆ ಪ್ರಸ್ತುತ ಮಾಸಿಕ ₹17 ಸಾವಿರ ಬಾಡಿಗೆ ಸರ್ಕಾರ ಪಾವತಿಸುತ್ತಿದೆ.

ಬೆಳಗುಂದಿ, ಬಾಡಿಯಾಲ, ಕಡೇಚೂರು, ಸೈದಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 26 ಹಳ್ಳಿಗಳ ರೈತರು ಈ ರೈತ ಸಂಪರ್ಕ ಕೇಂದ್ರದ ನೆರವು ಪಡೆಯುತ್ತಾರೆ. ಇಂಥ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಕೃಷಿಗೆ ಸಂಬಂಧಿಸಿದ ಅಗತ್ಯ ಸಾಮಗ್ರಿಗಳನ್ನು ಅಗತ್ಯಕ್ಕಿಂತ ಹೆಚ್ಚಿಗೆ ಸಂಗ್ರಹಿಸಲು ಬೇಕಾದಷ್ಟು ವಿಶಾಲ ಜಾಗವಿಲ್ಲ!

ADVERTISEMENT

‘ಕೃಷಿ ಇಲಾಖೆಯು ರೈತರಿಗೆ ಕಾಲಕಾಲಕ್ಕೆ ಬೇಕಾದ ಜೋಳ, ಕಡಲೆ, ಹೆಸರು, ಶೇಂಗಾ, ತೊಗರಿ ಇತರೆ ಬಿತ್ತನೆ ಬೀಜ, ಕೃಷಿ ಪರಿಕರಗಳು, ರಸಗೊಬ್ಬರಗಳನ್ನು ಸಂಗ್ರಹಿಸಿಡಲು ವಿಶಾಲ ಕಟ್ಟಡವಿಲ್ಲ ಇದರಿಂದ ಮುಂಗಾರು ಹಂಗಾಮಿನ ಸಮಯದಲ್ಲಿ ಬಿತ್ತನೆ ಬೀಜಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಲು ರೈತರಿಗೆ ಅನನಕೂಲವಾಗುತ್ತಿದೆ’ ಎಂಬುದು ರೈತರ ಅಳಲು.

‘ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣವಾದರೆ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ಬಾಡಿಗೆ ಹಣ ಉಳಿತಾಯವಾಗುತ್ತದೆ. ಮುಂಗಾರು ಮಳೆ ವೇಳೆಗೆ ಅಗತ್ಯ ಬೀಜ, ರಸಗೊಬ್ಬರ, ಕೃಷಿ ಉಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡು ರೈತರಿಗೆ ವಿತರಿಸಲು ನೆರವಾಗುತ್ತದೆ’ ಎಂಬುದು ರೈತರ ಅಂಬೋಣ.

ಸ್ವಂತ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ: ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೂಡ್ಲೂರು ಗ್ರಾಮದ ಸರ್ವೆ ನಂ. 235ರಲ್ಲಿ 4.08 ಎಕರೆ ಸರ್ಕಾರಿ ಜಾಗವಿದೆ. ಇದರಲ್ಲಿ 100x100 ಅಡಿ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ‌ ನೀಡಲಾಗಿದೆ. 2017ರಲ್ಲಿ ಕೆಇಬಿ ಹಿಂದಿರುವ ಜಾಗದಲ್ಲಿ ನಿರ್ಮಿಸಲು ಗ್ರಾಮಸಭಾ ನಡುವಳಿಯಲ್ಲಿ ಅನುಮೋದನೆ ಕೂಡ ನೀಡಿದೆ. ಆದ್ದರಿಂದ ಅಧಿಕಾರಿಗಳು ಆದಷ್ಟು ಬೇಗ ಸ್ಥಳಗಳ ಬಗ್ಗೆ ಪರಿಶೀಲಿಸಿ ರೈತರಿಗೆ ಅನುಕೂಲವಾಗುವ ಸ್ಥಳದಲ್ಲಿ ಶೀಘ್ರವೇ ಕಟ್ಟಡ ನಿರ್ಮಿಸಿಕೊಡಬೇಕು ಎಂಬುದು ರೈತ ಮುಖಂಡ ಶರಣಬಸವ ಸ್ವಾಮಿ ಬದ್ದೇಪಲ್ಲಿ ಒತ್ತಾಯ.

ರೈತ ಸಂಪರ್ಕ ಕೇಂದ್ರಕ್ಕೆ ಸ್ಥಳದ ಕೊರತೆಯಿಂದ ಹೆಚ್ಚಿನ ಸಾಮಗ್ರಿಗಳನ್ನು ಶೇಖರಿಸಿಟ್ಟುಕೊಳ್ಳಲು ಆಗುತ್ತಿಲ್ಲ. ಜೊತೆಗೆ ಸರ್ಕಾರಿ ಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆದರೆ ಸರ್ಕಾರದ ಬೊಕ್ಕಸಕ್ಕೇ ಹೊರೆ
-ಆಂಜನೇಯ ನಾಯಕ ಮಲ್ಹಾರ ಸೈದಾಪುರ ರೈತ
ಕೇಂದ್ರಕ್ಕೆ ಸ್ವಂತ ಕಟ್ಟಡವಿದ್ದರೆ ಸಾಕ‌ಷ್ಟು ಬೀಜ ಗೊಬ್ಬರ ಉಪಕರಣ ದಾಸ್ತಾನು ಮಾಡಿ ರೈತರಿಗೆ ಸಕಾಲದಲ್ಲಿ ವಿತರಿಸಲು ನೆರವಾಗುತ್ತದೆ
-ಮಾಳಪ್ಪ ಮುನಗಾಲ ರೈತ
ರೈತ ಸಂಪರ್ಕ ಕೇಂದ್ರದ ಸ್ವಂತ ಕಟ್ಟಡ ನಿರ್ಮಾಣ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಸ್ವಂತ ಕಟ್ಟಡ ನಿರ್ಮಿಸುವ ಬಗ್ಗೆ ಭರವಸೆ ದೊರೆತಿದೆ
-ಮೇನಕಾ ಕೃಷಿ ಅಧಿಕಾರಿ ಸೈದಾಪುರ ರೈತ ಸಂಪರ್ಕ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.