ADVERTISEMENT

ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿದ ರೈತ ಮುಖಂಡರು

ವೈದ್ಯರ ನಿಷ್ಕಾಳಜಿಯಿಂದ ಮಹಿಳೆ ಸಾವು-ಆರೋಪ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 16:23 IST
Last Updated 14 ಅಕ್ಟೋಬರ್ 2024, 16:23 IST
14ಎಸ್ಎಚ್ಪಿ 3: ಶಹಾಪುರ ನಗರದ ಸಾರ್ವಜನಿಕ ಆಸ್ಪತ್ರೆಯ ಎದುರುಗಡೆ ಆಸ್ಪತ್ರೆಯ ವೈದ್ಯರ ನಿಷ್ಕಾಳಜಿ ಖಂಡಿಸಿ ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿದ ರೈತ ಮುಖಂಡರು
14ಎಸ್ಎಚ್ಪಿ 3: ಶಹಾಪುರ ನಗರದ ಸಾರ್ವಜನಿಕ ಆಸ್ಪತ್ರೆಯ ಎದುರುಗಡೆ ಆಸ್ಪತ್ರೆಯ ವೈದ್ಯರ ನಿಷ್ಕಾಳಜಿ ಖಂಡಿಸಿ ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿದ ರೈತ ಮುಖಂಡರು   

ಶಹಾಪುರ: ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವಲ್ಲಿ ವೈದ್ಯೆ ಡಾ.ಸರೋಜಾ ಪಾಟೀಲ ಅವರು ನಿಷ್ಕಾಳಜಿ ವಹಿಸಿದ್ದರಿಂದ ಮಹಿಳೆ ಅಸುನೀಗಿದ್ದಾರೆ. ತಕ್ಷಣ ಅವರನ್ನು ಅಮಾನತುಗೊಳಿಸಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಬೇಕು ಎಂದು ಆಗ್ರಹಿಸಿ ಸೋಮವಾರ ಮೃತರ ಕುಟುಂಬದ ಸದಸ್ಯರು ಹಾಗೂ ರೈತ ಸಂಘಟನೆಯ ಮುಖಂಡರು ಆಸ್ಪತ್ರೆಯ ಮುಂದುಗಡೆಯ ಬೀದರ್‌-ಬೆಂಗಳೂರು ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿದರು.

ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಭವಾನಿ ಮಹಾಂತೇಶ ಮೃತ ಮಹಿಳೆ ಸಾವನ್ನಪ್ಪಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಗಿನ ಜಾವ ಕೊನೆಯುಸಿರೆಳೆದ ಮಹಿಳೆ ಶವವನ್ನು ಸರ್ಕಾರಿ ಆಸ್ಪತ್ರೆಗೆ ತಂದರು. ಅಲ್ಲಿ ಶವ ಪಂಚನಾಮೆಗೆ ಅವಕಾಶ ನೀಡದ ಮೃತರ ಕುಟುಂಬದ ಸದಸ್ಯರು ವೈದ್ಯರ ಅಮಾನತ್ತಿಗೆ ಹಾಗೂ ಪರಿಹಾರ ನೀಡುವಂತೆ ಒತ್ತಾಯಿಸಿ ಪಟ್ಟು ಹಿಡಿದರು. ಆಗ ರೈತ ಮುಖಂಡ ಮಹೇಶ ಸುಬೇದಾರ ಹಾಗೂ ಇನ್ನಿತರ ಸಂಘಟನೆಯ ಮುಖಂಡರು ಸಾಥ್ ನೀಡಿ ಆಸ್ಪತ್ರೆಯ ಆವರಣದ ಮುಂಭಾಗದಲ್ಲಿ ಧರಣಿ ನಡೆಸಿದರು.

ಆಗ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರು ಚರ್ಚೆ ನಡೆಸಿ ಯುಡಿಆರ್ (ಅಸ್ವಾಭಾವಿಕ ಸಾವು) ದಾಖಲಿಸಿ ಮರಣೋತ್ತರ ಪರೀಕ್ಷೆ ಮುಂದಾಗುತ್ತಿದ್ದಂತೆ ಕುಟುಂಬದ ಸದಸ್ಯರು ಪರಿಹಾರ ನೀಡಬೇಕು ಒತ್ತಾಯಿಸಿದರು. ಆಗ ಸಮಸ್ಯೆ ಬಿಗಡಾಯಿಸಿತು.

’ಕೊನೆಗೆ ಡಿಎಚ್‌ಒ ಡಾ.ಎಂ.ಎಸ್ ಪಾಟೀಲ ಹಾಗೂ ರೈತ ಮುಖಂಡ ಮಹೇಶಗೌಡ ಸುಬೇದಾರ ಹಾಗೂ ಇನ್ನಿತರ ನಡುವೆ ಸಂಧಾನದ ಮೂಲಕ ಮಾತುಕತೆ ನಡೆಸಿ ಬಗೆಹರಿಸಲಾಗಿದೆ’ ಎಂದು ರೈತ ಮುಖಂಡ ಮಹೇಶಗೌಡ ಸುಬೇದಾರ ತಿಳಿಸಿದರು.
ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ರಸ್ತೆ ಸಂಚಾರಕ್ಕೆ ಪರ್ಯಾಯ ಮಾರ್ಗ: ನಾಲ್ಕು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಪೊಲೀಸರು ಅನ್ಯ ಮಾರ್ಗವಾದ ಆಸರ ಮೋಹಲ್ಲಾದ ಮೂಲಕ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ವೈದ್ಯೆಯ ಮೇಲೆ ಹಲ್ಲೆಗೆ ಯತ್ನ: ಖಾಸಗಿ ಆಸ್ಪತ್ರೆಯಿಂದ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ತಂದಾಗ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಡಾ.ಸುರೋಜಾ ಪಾಟೀಲ ಮೇಲೆ ಮೃತರ ಕುಟುಂಬದ ಸದಸ್ಯರು ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇಡೀ ಘಟನೆಯ ಬಗ್ಗೆ ಸಿಸಿ ಕ್ಯಾಮರ್ ದೃಶ್ಯಾವಳಿಯಲ್ಲಿ ದಾಖಲಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

ಏನಿದು ಪ್ರಕರಣ: ಸೆ.1ರಂದು ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಭವಾನಿ ಚೊಚ್ಚಲು ಹೆರಿಗೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯೆ ಡಾ.ಸರೋಜಾ ಪಾಟೀಲ ಶಸ್ತ್ರಚಿಕಿತ್ಸೆ ಮಾಡಿದರು. ಒಂದು ಗಂಟೆಯ ನಂತರ ರಕ್ತಸ್ರಾವ ಆರಂಭಗೊಂಡಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದರು. ಒಂದು ತಿಂಗಳ ಕಾಲ ಆರೋಗ್ಯದಲ್ಲಿ ಏರುಪೇರಾಗಿ ಸಮಸ್ಯೆ ಉಂಟಾಗಿ ಕೊನೆಗೆ ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಮೃತ ಭವಾನಿ ಅವರ ಪತಿ ಮಹಾಂತೇಶ ದೋರನಹಳ್ಳಿ ಮಾಹಿತಿ ನೀಡಿದ್ದಾರೆ.

14ಎಸ್ಎಚ್ಪಿ 3(2): ಮೇಲಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಡಿವೈಎಸ್ಪಿ ಜಾವೇದ ಇನಾಂದಾರ
ವೈದ್ಯೆ ಡಾ.ಸರೋಜಾ ಪಾಟೀಲ ಅವರನ್ನು ವರ್ಗಾವಣೆ ಮಾಡಲಾಗುವುದು. ತಜ್ಞರ ವರದಿ ಬಂದ ಬಳಿಕ ಕಾನೂನು ಕ್ರಮ ತೆಗೆದುಕೊಳ್ಳುತ್ತವೆ. ವೈದ್ಯಕೀಯ ಪರಿಹಾರದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
–ಡಾ.ಎಸ್.ಎಸ್.ಪಾಟೀಲ, ಡಿಎಚ್ ಒ. ಯಾದಗಿರಿ.
ತಾಯಿ ಮೃತಪಟ್ಟಿದ್ದರಿಂದ 40 ದಿನದ ಗಂಡು ಮಗು ಅನಾಥವಾಗಿದೆ. ನ್ಯಾಯ ಪಡೆಯಲು ಹಸುಗೂಸು ಸಮೇತ ನಾವೆಲ್ಲರೂ ರಸ್ತೆ ತಡೆ ನಡೆಸಬೇಕಾಯಿತು. ಇದು ಅತ್ಯಂತ ನೋವಿನ ಸಂಗತಿಯಾಗಿದೆ.
–ಮೃತ ಭವಾನಿ ಪಾಲಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.