ADVERTISEMENT

ಯಾದಗಿರಿ: ಕಾಲುವೆಗೆ ನೀರು ಹರಿಯುವ ದಾರಿ ಯಾವುದಯ್ಯಾ?

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ಹೂಳು, ಗಿಡಗಂಟಿ ತೆರವಿಗೆ ರೈತರ ಆಗ್ರಹ

ಬಿ.ಜಿ.ಪ್ರವೀಣಕುಮಾರ
Published 17 ಜೂನ್ 2024, 5:59 IST
Last Updated 17 ಜೂನ್ 2024, 5:59 IST
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಮಳ್ಳಳ್ಳಿ ಸಮೀಪ ಕಾಲುವೆ ಹದಗೆಟ್ಟಿರುವುದು
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಮಳ್ಳಳ್ಳಿ ಸಮೀಪ ಕಾಲುವೆ ಹದಗೆಟ್ಟಿರುವುದು   

ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜೀವನಾಡಿಯಾಗಿರುವ ಕಾಲುವೆಗಳು ಹೂಳು ತುಂಬಿಕೊಂಡು ಏದುಸಿರು ಬಿಡುತ್ತಲಿವೆ. ರೈತರಿಗೆ ಕೇವಲ ನೀರು ಪಡೆದುಕೊಳ್ಳುವುದು ಮಾತ್ರ ಗೊತ್ತು. ಅದರ ನಿರ್ವಹಣೆ ಬಂದರೆ ಕೆಬಿಜೆಎನ್‌ಎಲ್ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ.

ಜಮೀನುಗಳಿಗೆ ನೀರಾವರಿ ಸೌಕರ್ಯ ಒದಗಿಸುವ ಉಪ-ಕಾಲುವೆಗಳು, ವಿತರಣಾ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದು, ಕಾಲುವೆ ಇಕ್ಕೆಲಗಳಲ್ಲಿ ಮುಳ್ಳಿನ ಕಂಟಿಗಳು ಬೆಳೆದಿವೆ.

ಕಾಲುವೆ ಮಜಬೂತಾಗಿದ್ದರೆ ಸಮರ್ಪಕವಾಗಿ ನೀರು ಹರಿದು ಜಮೀನುಗಳಿಗೆ ತಲುಪಲು ಸಾಧ್ಯ. ಬಹುತೇಕ ಕಾಲುವೆಗಳಲ್ಲಿ ಹೂಳು, ಜಾಲಿಗಿಡ, ಆಪುಹುಲ್ಲು ಬೆಳೆದು ನಿಂತಿವೆ. ಕಾಲುವೆಗೆ ನೀರು ಹರಿದು ಬರುವುದೇ ಒಂದು ಪವಾಡವಾಗಿದೆ. ಕೊನೆ ಪಕ್ಷ ರೈತರು ಹೊಲಗಾಲುವೆಯನ್ನು ದುರಸ್ತಿ ಮಾಡಿಕೊಳ್ಳದೇ ಇರುವುದು ಕಂಡು ಬಂದಿತು.

ADVERTISEMENT

ಸಾಮಾನ್ಯವಾಗಿ ಕಾಲುವೆ ನೀರು ಸ್ಥಗಿತಗೊಂಡ ಬಳಿಕ (ಕ್ಲೋಜರ್ ಅವಧಿ) ಮುಖ್ಯ ಕಾಲುವೆಯಿಂದ ಹಿಡಿದು ವಿತರಣಾ ಕಾಲುವೆ, ಹೊಲಗಾಲುವೆ ದುರಸ್ತಿ, ಸ್ವಚ್ಛತೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಾರೆ. ಆದರೆ, ಈ ಬಾರಿ ಲೋಕಸಭೆಯ ಚುನಾವಣೆಯ ನೀತಿ ಸಂಹಿತೆಯ ಕಾರಣದಿಂದ ಹೆಚ್ಚಿನ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ಅನುದಾನದ ಕೊರತೆಯು ಎದ್ದು ಕಾಣುತ್ತಿದೆ. ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸುತ್ತಾರೆ ರೈತರು.

ಮಳೆಗಾಲ ಆರಂಭವಾಗಿದ್ದು, ಶೀಘ್ರ ಸಂಬಂಧಿಸಿದ ಅಧಿಕಾರಿಗಳು ಕಾಲುವೆ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಿ, ನೀರು ಹರಿದು ಹೋಗಲು ಅನುವು ಮಾಡಿಕೊಡಬೇಕು ಎಂದು ಅಚ್ಚುಕಟ್ಟು ಭಾಗದ ರೈತರು ಆಗ್ರಹಿಸಿದ್ದಾರೆ.

ಬಾಕಿ ಉಳಿಸಿಕೊಂಡಿರುವ ಕರ: ‘ಸಮೃದ್ಧಿಯಾಗಿ ಎರಡು ಬೆಳೆ ಬೆಳೆದರೂ ರೈತರು ನೀರಾವರಿ ತೆರಿಗೆ ನೀಡುವುದನ್ನು ಮರೆತು ಬಿಟ್ಟಿದ್ದಾರೆ. ಹಲವು ವರ್ಷದಿಂದ ಕರ ಬಾಕಿ ಉಳಿಸಿಕೊಂಡು ಹೋಗುತ್ತಲೇ ಇದ್ದಾರೆ. ಕೋಟ್ಯಂತರ ಹಣ ಕರ ರೂಪದಲ್ಲಿ ಬಾಕಿ ಇದೆ. ಕಾಲುವೆ ದುರಸ್ತಿ ಹಾಗೂ ಸ್ವಚ್ಛತೆಯನ್ನು ನಿಗಮದ ಅನುದಾನದಿಂದಲೇ ಮಾಡಬೇಕು. ಸರ್ಕಾರ ಎಲ್ಲಿಂದ ಹಣ ತರಬೇಕು’ ಎಂದು ಪ್ರಶ್ನಿಸುತ್ತಾರೆ ಕೆಬಿಜೆಎನ್‌ಎಲ್ ನಿಗಮದ ಹಿರಿಯ ಎಂಜಿನಿಯರ್ ಒಬ್ಬರು.

‘ತುಂಗಭದ್ರಾ ನಾಲೆ ವ್ಯಾಪ್ತಿಯ ಪ್ರದೇಶದಲ್ಲಿ ರೈತರು ಪ್ರತಿವರ್ಷ ಕಡ್ಡಾಯವಾಗಿ ನೀರಾವರಿ ಕರವನ್ನು ಪಾವತಿಸುತ್ತಾರೆ. ಬ್ಯಾಂಕಿನಲ್ಲಿ ಕೃಷಿ ಸಾಲ ಪಡೆದುಕೊಳ್ಳಲು ತೆರಳಿದರೆ ಕಡ್ಡಾಯವಾಗಿ ಕರ ಪಾವತಿ ರಸೀದಿ ಕೇಳುತ್ತಾರೆ. ಅಲ್ಲದೆ ಕರ ಬಾಕಿ ಉಳಿಸಿಕೊಂಡರೆ ಪಹಣಿಯಲ್ಲಿ ನಮೂದಿಸುತ್ತಾರೆ. ಅದರಂತೆ ಇಲ್ಲಿಯೂ ಅಳವಡಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ನಿಗಮದ ಅಧಿಕಾರಿ ಒಬ್ಬರು.

ಕೃಷ್ಣಾ ಅಚ್ಚುಕಟ್ಟು ಭಾಗದ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಜಮೀನುಗಳ ರೈತರು, ಎರಡು ಹಂಗಾಮಿನ ಬೆಳೆಗಳಿಗೆ ಕಾಲುವೆ ನೀರನ್ನು ನೆಚ್ಚಿಕೊಂಡಿದ್ದಾರೆ. ಹೀಗಾಗಿ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅಧಿಕಾರಿಗಳು, ಪ್ರತಿ ವರ್ಷ ಕಾಲುವೆಗಳನ್ನು ಸೂಕ್ತ ನಿರ್ವಹಣೆ ಮಾಡುವುದು ಅವಶ್ಯವಿದೆ. ಜತೆಗೆ ಕಾಲುವೆಯ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುವ ನಿರ್ವಹಣೆ ಕೃಷ್ಣಾ ಭಾಗ್ಯ ಜಲ ನಿಗಮದ್ದಾಗಿದೆ. ಹೀಗಾಗಿ ಕಾಲುವೆ ಜಾಲಗಳಲ್ಲಿ ತುಂಬಿರುವ ಹೂಳು, ಇತರೆ ತ್ಯಾಜ್ಯ ಹಾಗೂ ಕಾಲುವೆ ಎರಡು ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ಬೆಳೆದ ಮುಳ್ಳು ಕಂಟಿಗಳನ್ನು ತೆರವುಗೊಳಿಸುವ ಕಾಮಗಾರಿಗಳನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಬೇಕು. ಈ ಮೂಲಕ ನೆರವಿಗೆ ಬರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಶಾಂತಿನಾಥ ಪಿ ವನಕುದರಿ, ಎಂ.ಪಿ.ಚಪೆಟ್ಲಾ

ಶಹಾಪುರ ತಾಲ್ಲೂಕಿನ ಹತ್ತಿಗುಡೂರ ಗ್ರಾಮ ಬಳಿಯ ವಿತರಣಾ ಕಾಲುವೆ ಹಾಳಾಗಿರುವುದು
ನಾರಾಯಣಪುರ ಸಮೀಪದ ಉಪಕಾಲುವೆಗಳಲ್ಲಿ ಹೂಳು ಹಾಗೂ ಗಿಡಗಂಟಿಗಳು ಬೆಳೆದಿರುವುದು
ಸುರಪುರ ತಾಲ್ಲೂಕಿನ ಚಂದಲಾಪುರ ಸೀಮಾಂತರದಲ್ಲಿ ಕಾಲುವೆಯಲ್ಲಿ ಕಸ ಕಡ್ಡಿ ಬೆಳೆದಿರುವುದು
ಮುಂಬರುವ ದಿನಗಳಲ್ಲಿ ಮುಖ್ಯ ಕಾಲುವೆಗಳಿಗೆ ನೀರು ಹರಿಸುವುದಕ್ಕೂ ಮುನ್ನ ಎಲ್ಲ ಕಾಲುವೆಗಳ ಹೂಳು ತೆರವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಅಶೋಕರೆಡ್ಡಿ ಪಾಟೀಲ ಇಇ ಅಣೆಕಟ್ಟು ವಿಭಾಗ ಕಚೇರಿ ನಾರಾಯಣಪುರ
ಕಾಲುವೆಗಳು ಹೂಳು ತುಂಬಿಕೊಂಡು ನಿಂತಿವೆ. ನೀರು ಬರುವುದು ಅನುಮಾನವಾಗಿದೆ. ಇನ್ನೂ ಒಂದು ತಿಂಗಳಲ್ಲಿ ಕಾಲುವೆ ನೀರು ಹರಿಸುತ್ತಾರೆ ಅಷ್ಟರಲ್ಲಿ ಕಾಲುವೆ ದುರಸ್ತಿಗೊಳಿಸಬೇಕು
ಶರಣಪ್ಪ ಪ್ಯಾಟಿ ರೈತ ಮುಖಂಡ ಶಹಾಪುರ
ಇಡ್ಲೂರು ದೊಡ್ಡಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಸುತ್ತಲಿನ ರೈತರಿಗೆ ಅನುಕೂಲದ ಜತೆಗೆ ಚಲ್ಲೇರಿ ಸಮಸ್ಯೆಯೂ ನಿವಾರಿಸಬಹುದು. ಸಂಬಂಧಿತರು ಇತ್ತ ಗಮನಹರಿಸಲಿ
ಶರಣಬಸಪ್ಪ ಎಲ್ಲೇರಿ ಗ್ರಾಮಸ್ಥ
ಕಾಲುವೆ ದುರಸ್ತಿ ನಿರ್ವಹಣೆಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ಕೈಚಲ್ಲಿದ್ದು ರೈತರು ಸಂಕಷ್ಟ ಎದುರಿಸುವಂತಾಗಿದೆ
ಹಣಮಂತ್ರಾಯ ಚಂದಲಾಪುರ ರೈತ ಮುಖಂಡ
ದಾಹ ತೀರಿಸಿದ ಕಾಲುವೆ ನೀರು
ಕಳೆದ ವರ್ಷ ಮುಂಗಾರು ಮುನಿಸಿಕೊಂಡು ಬರ ಆವರಿಸಿತ್ತು. ನಾರಾಯಣಪುರ ಹಾಗೂ ಆಲಮಟ್ಟಿಯಲ್ಲಿ ಲಭ್ಯವಿದ್ದ ನೀರನ್ನು ಜತನದಿಂದ ಅಧಿಕಾರಿಗಳು ಹಿಡಿದಿಟ್ಟುಕೊಂಡು ಬೇಸಿಗೆ ಕಾಲದಲ್ಲಿ ಕಾಲುವೆ ಮೂಲಕ ಎರಡು ಬಾರಿ ನೀರು ಹರಿಸಿದರ ಪರಿಣಾಮ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಜನತೆಗೆ ನೀರಿನ ಸಮಸ್ಯೆ ಉಂಟಾಗಲಿಲ್ಲ. ನೀರಿನ ದಾಹವನ್ನು ಕಾಲುವೆಗಳು ತೀರಿಸಿದವು.
ನಿರ್ವಹಣೆಯಾಗದ ಕಾಲುವೆ ಜಾಲ
ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಬರುವ ಕಾಲುವೆಗಳ ಸರಿಯಾದ ನಿರ್ವಹಣೆಯಾಗುತ್ತಿಲ್ಲ. ಇದರಿಂದಾಗಿ ಕಾಲುವೆಯಲ್ಲಿರುವ ಹೂಳು ಕಸದಿಂದಾಗಿ ನೀರು ವ್ಯರ್ಥವಾಗಿ ಬೇರೆಡೆ ಹರಿದು ಹೋಗುತ್ತದೆ. ಇದರಿಂದಾಗಿ ಕೊನೆ ಭಾಗದಲ್ಲಿರುವ ರೈತರಿಗೆ ನೀರು ತಲುಪುತ್ತಿಲ್ಲ ಎಂಬ ಮಾತುಗಳು ಕೇಳುತ್ತಿವೆ. ಹೀಗಾಗಿ ಅಧಿಕಾರಿಗಳು ಮಳೆಗಾಲ ಆರಂಭವಾಗಿದ್ದು ಇನ್ನಾದರೂ ಕಾಲುವೆಗಳನ್ನು ಸ್ವಚ್ಛಗೊಳಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಹದಗೆಟ್ಟ ರಸ್ತೆಗಳು
ಎಡದಂಡೆ ಮುಖ್ಯ ಕಾಲುವೆ ಹಾಗೂ ವಿತರಣೆ ಕಾಲುವೆಗೆ ನಿರ್ವಹಿಸುವ ಸಂದರ್ಭದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ವಾಹನಗಳು ಒಡಾಟ ನಡೆಸಲು ರಸ್ತೆಗಳು ಹಾಳಾಗಿವೆ. ಬಹುತೇಕ ರಸ್ತೆಗಳು ತಗ್ಗು ಗುಂಡಿಗಳಿಂದ ಕೂಡಿದ್ದರಿಂದಾಗಿ ಹಾಗೂ ಹಲವಾರು ವರ್ಷಗಳಿಂದ ರಸ್ತೆಯ ನಿರ್ವಹಣೆ ಇಲ್ಲದಿರುವುದರಿಂದಾಗಿ ಡಿ–7 ಡಿ–8 ಸರ್ವಿಸ್‌ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಡಿ –7 ವಿತರಣಾ ಕಾಲುವೆ ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದರಿಂದಾಗಿ ಬೈಕ್‌ ಕೂಡ ಸಂಚರಿಸದ ಪರಿಸ್ಥಿತಿ ಇದೆ. ಇನ್ನು ಮಳೆ ಬಂದರಂತೂ ದೇವರೇ ಗತಿ. ಒಂದು ಹೆಜ್ಜೆ ಕೂಡ ಮುಂದೆ ಇಡದ ರೀತಿ ತೊಂದರೆ ಇದೆ ಎಂದು ರೈತರು ಆರೋಪಿಸಿದರು. ‘ಕಾಲುವೆ ದುರಸ್ತಿಯ ಜೊತೆಯಲ್ಲಿ ಸರ್ವಿಸ್‌ ರಸ್ತೆಗಳನ್ನು ದುರಸ್ತಿಗೊಳಿಸುವ ಮೂಲಕ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ವಜ್ಜಲ ಗ್ರಾಮದ ರಾಮನಗೌಡ ಪೊಲೀಸ್ ಪಾಟೀಲ್ ಆಗ್ರಹಿಸಿದ್ದಾರೆ. ‘ಈಗಾಗಲೇ ವಾರ್ಷಿಕ ನಿರ್ವಹಣೆಗಾಗಿ ಅಂದಾಜು ₹5.30 ಕೋಟಿ ಮೊತ್ತದ ಕಾಮಗಾರಿಗಳ ವಿವರದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ’ ಎಂದು ಹುಣಸಗಿ ಕೃಷ್ಣಾ ಭಾಗದಲ್ಲಿ ಭಾಗ್ಯ ಜಲ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ್ ಮಾಹಿತಿ ನೀಡಿದರು.
ನಿರ್ವಹಣೆ ಇಲ್ಲದ ಕಾಲುವೆ ರಸ್ತೆಗಳು
ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ಕಾಲುವೆ ಹಾಗೂ ಅದರ ಅಡಿಯಲ್ಲಿ ಬರುವ ವಿತರಣಾ ಕಾಲುವೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ಸಿಲ್ಟ್ ಹಾಗೂ ಜಂಗಲ್ ಕಟಿಂಗ್ ಕೆಲಸ ನಡೆದೇ ಇದ್ದುದರಿಂದಾಗಿ ಕಲ್ಲುಗಳು ಮಣ್ಣು ಬಿದ್ದು ಅಲ್ಲಲ್ಲಿ ಹಾನಿಯಾಗಿದೆ. ಆದರೆ ಸಂಬಂಧಿಸಿದ ಇಲಾಖೆ ಕ್ಲೊಸರ್ ಅವಧಿಯ ನಿರ್ವಹಣೆಗೆ ಅನುದಾನ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ‌. ಈ ಹಿಂದೆ ಪ್ರತಿ ವರ್ಷವೂ ವಾರ್ಷಿಕ ನಿರ್ವಹಣೆಗಾಗಿ ಅನುದಾನ ಬರುತ್ತಿತ್ತು. ಅದರಿಂದ ಟೆಂಡರ್ ಕರೆದು ಕಾಲುವೆ ನಿರ್ವಹಣೆ ಹಾಗೂ ವಾರ್ಷಿಕ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕ್ಲೋಸರ್ ಅವಧಿಗೆ ಯಾವುದೇ ಅನುದಾನ ಲಭ್ಯವಾಗಿಲ್ಲ. ಈ ಬಾರಿ ಹೊಲ ಕಾಲುವೆ ಕಾಮಗಾರಿಗಳನ್ನು ಅಯಾ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸ್ವಚ್ಛಗೊಳಿಸಲಾಗಿದ್ದು ವಿತರಣಾ ಕಾಲುವೆ ಮತ್ತು ಮುಖ್ಯ ಕಾಲುವೆ ಮುಖ್ಯ ಕಾಲುವೆ ಜಾಲದಲ್ಲಿ ಮುಳ್ಳುಕಂಟೆಗಳು ಬೆಳೆದಿದ್ದರಿಂದ ಸಂಚಾರಕ್ಕೂ ತೊಂದರೆ ಉಂಟಾಗಿದೆ.
ಕಾಲುವೆ ಕೊನೆ ಭಾಗದ ರೈತರ ನಿಲ್ಲದ ಗೋಳು
ಸುರಪುರ: ಮುಂಗಾರು ಮಳೆ ಜೋರಾಗಿಯೇ ಆರಂಭವಾಗಿದೆ. ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಜುಲೈ ತಿಂಗಳಲ್ಲಿ ಕಾಲುವೆಗೆ ನೀರು ಹರಿಸುವ ಸಾಧ್ಯತೆ ಇದೆ. ಆದರೆ ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್) ಇದುವರೆಗೂ ಕಾಲುವೆಗಳ ಹೂಳು ತೆಗೆಯುವುದು ದುರಸ್ತಿ ಜಂಗಲ್ ಕಟಿಂಗ್‌ನಂತಹ ಕಾಮಗಾರಿ ಕೈಗೊಂಡಿಲ್ಲ. ಅದರಲ್ಲೂ ಉಪವಿತರಣಾ ಕಾಲುವೆಗಳ ಪರಿಸ್ಥಿತಿಯಂತೂ ಕೇಳುವವರೇ ಇಲ್ಲ. ಇದರಿಂದ ಕಾಲುವೆ ಕೊನೆ ಭಾಗದ ರೈತರ ಗೋಳು ನಿಲ್ಲದಂತಾಗಿದೆ. ವಿತರಣಾ ಕಾಲುವೆ ಸಂಖ್ಯೆ 6ಕ್ಕೆ ಸುರಪುರದಿಂದ ಸುಗೂರದವರೆಗೆ ಹೋಗಲು ಉಪ ವಿತರಣಾ ಕಾಲುವೆ ಇದೆ. ಇದು 35 ಕಿ.ಮೀ. ಉದ್ದವಿದೆ. ಈ ಕಾಲುವೆ ತುಂಬಾ ಹೂಳು ತುಂಬಿಕೊಂಡಿದೆ. ಜಾಲಿ ಗಿಡಗಳು ಕಸ ಬೆಳೆದಿದೆ. ಕಾಲುವೆ ಅಲ್ಲಲ್ಲಿ ಶಿಥಿಲಗೊಂಡಿದೆ. ಕಾಲುವೆ ಮೇಲಿನ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಕಳೆದ ವರ್ಷ ಹಿಂಗಾರು ಬೆಳೆಗೆ ನೀರು ಹರಿಸಲಿಲ್ಲ. ಕಾಲುವೆ ದುರಸ್ತಿ ನಿರ್ವಹಣೆಗೆ ಸಾಕಷ್ಟು ಕಾಲಾವಕಾಶ ದೊರಕಿತ್ತು. ಆದರೆ ಇಲಾಖೆ ಯಾವ ಕಾಮಗಾರಿಯನ್ನು ಕೈಗೊಳ್ಳದಿರುವುದು ರೈತರನ್ನು ಕಂಗೆಡಿಸಿದೆ.
ಗುರುಮಠಕಲ್ ತಾಲ್ಲೂಕಿನಲ್ಲಿಲ್ಲ ಕಾಲುವೆಗಳು
ಗುರುಮಠಕಲ್: ನದಿ ಹರಿವಿನ ಪ್ರದೇಶಕ್ಕಿಂತಲೂ ತಾಲ್ಲೂಕು ಎತ್ತರದಲ್ಲಿದ್ದ ಹಿನ್ನಲೆ ತಾಲ್ಲೂಕಿನಲ್ಲಿ ಕಾಲುವೆಗಳಿಲ್ಲ. ಕೆಲವರು ಚಿಕ್ಕ-ಪುಟ್ಟ ಹಳ್ಳಗಳು ಕೆರೆ ಮತ್ತು ಕೊಳವೆಬಾವಿ ಬಳಸಿ ನಿರಾವರಿ ಮಾಡುವುದು ಬಿಟ್ಟರೆ ಬಹುತೇಕ ಮಳೆಯಾಶ್ರಿತ ಒಣ ಬೇಸಾಯವನ್ನೇ ಅವಲಂಬಿಸಿದೆ. ‘ಯಾದಗಿರಿ ಜಿಲ್ಲೆಯಲ್ಲಿ ಭೀಮಾನದಿ ಹರಿವಿದೆಯಾದರೂ ತಾಲ್ಲೂಕಿಗೆ ಕಾಲುವೆ ನೀರು ಹರಿಸುವುದು ಅಸಾಧ್ಯ. ಆದರೆ ಇಡ್ಲೂರು ನಂದೇಪಲ್ಲಿ ಜೈಗ್ರಾಮಗಳ ವ್ಯಾಪ್ತಿಯಲ್ಲಿನ ದೊಡ್ಡ ಹಳ್ಳದಿಂದ ಒಂದೆರಡು ಗ್ರಾಮಗಳಿಗೆ ಕಾಲುವೆಗಳು ನಿರ್ಮಿಸಿದ್ದರೂ ಸೂಕ್ತ ನಿರ್ವಹಣೆಯಿಲ್ಲದಾಗಿದೆ. ಇದರಿಂದಾಗಿ ಕಾಲುವೆಗಳೇ ಇಲ್ಲವೆಂದಂತಿದೆ’ ಎಂದು ಕರ್ನಾಟಕ ರೈತ ಸಂಘದ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ‘ಇಡ್ಲೂರು ದೊಡ್ಡಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಿದರೆ ಸುತ್ತಲಿನ ಗ್ರಾಮಗಳಿಗೆ ಅನುಕೂಲ ಒದಗಿಸಲು ಸಾಧ್ಯ. ಆದರೆ ಸಂಬಂಧಿತರ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಮ್ಮಲ್ಲಿನ ಜಲಸಂಪನ್ಮೂಲವೆಲ್ಲಾ ನೆರೆಯ ತೆಲಂಗಾಣದತ್ತ ಹರಿದು ಹೋಗುತ್ತಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಹಾದೇವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.