ADVERTISEMENT

ಶಹಾಪುರ | ಬಂಧನದ ಭೀತಿ; ನಿರೀಕ್ಷಣಾ ಜಾಮೀನಿಗೆ ಮೊರೆ

₹2.6ಕೋಟಿ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 13:57 IST
Last Updated 29 ನವೆಂಬರ್ 2023, 13:57 IST
ಶಹಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಮುಖಂಡರು ಬುಧವಾರ ಅಕ್ಕಿ ನಾಪತ್ತೆ ಪ್ರಕರಣದ ಆರೋಪಿತರನ್ನು ಬಂಧಿಸುವಂತೆ ಮನವಿ ಸಲ್ಲಿಸಿದರು
ಶಹಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಮುಖಂಡರು ಬುಧವಾರ ಅಕ್ಕಿ ನಾಪತ್ತೆ ಪ್ರಕರಣದ ಆರೋಪಿತರನ್ನು ಬಂಧಿಸುವಂತೆ ಮನವಿ ಸಲ್ಲಿಸಿದರು   

ಶಹಾಪುರ: ಅಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಇತರರ ವಿರುದ್ಧ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಭೀಮರಾಯ ಅವರು ಶಹಾಪುರ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ಇದರಿಂದ ಆರೋಪಿತರಿಗೆ ಬಂಧನದ ಭೀತಿ ಎದುರಾಗಿದ್ದು, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.

ಟಿಎಪಿಸಿಎಂಎಸ್‌ನ ಮುಖ್ಯ ಕಾರ್ಯನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿರುವ ಶಿವರಾಜ ಗುಂಡಪ್ಪ ಹಾಲಗೇರಾ ಮತ್ತು ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಪ್ಪ ಹಳಿಸಗರ ಅವರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ದೂರು ದಾಖಲಾದ ದಿನದಿಂದ ಟಿಎಪಿಸಿಎಂಎಸ್‌ನ ಅಧ್ಯಕ್ಷ ಗುರುನಾಥರಡ್ಡಿ ಪಾಟೀಲ ಹಳಿಸಗರ ಅವರ ಮೊಬೈಲ್ ಸ್ವಿಚ್ಆಫ್ ಆಗಿದೆ. ಯಾರ ಸಂಪರ್ಕಕ್ಕೂ ಅವರು ಸಿಗುತ್ತಿಲ್ಲ.

’ನಾನು ಮೊದಲು ಜಾಮೀನು ಪಡೆದುಕೊಂಡ ಮೇಲೆ ನಿಮ್ಮ ಬಗ್ಗೆ ವಿಚಾರಿಸುವೆ ಎಂಬ ಅಧ್ಯಕ್ಷರು ತಿಳಿಸಿದ್ದಾರೆ. ನಾವು ನಂಬಿ ಕೆಟ್ಟೆವು. ಕಾನೂನು ಪ್ರಕಾರ ನಮ್ಮ ದಾರಿ ನಾವು ಹುಡುಕಲು ವಕೀಲರನ್ನು ಭೇಟಿಯಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿರುವೆ’ ಎಂದು ಆರೋಪಿಯೊಬ್ಬರು ಪ್ರಜಾವಾಣಿಗೆ ತಿಳಿಸಿದರು.

ADVERTISEMENT

’ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಕೆಲ ಪೊಲೀಸ್ ಸಿಬ್ಬಂದಿಯ ಮೇಲೆ ಶಂಕೆ ವ್ಯಕ್ತವಾಗಿದೆ. ತನಿಖೆ ಸಮಯದಲ್ಲಿ ಮಾಹಿತಿ ಸೋರಿಕೆಯ ಆತಂಕವಿದೆ. ಆರೋಪಿಗಳ ಬಂಧನಕ್ಕೆ ಹಾಗೂ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಮುಂದಾಗಲು ನೆರೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಆನೇಗುಂದಿ ಆಗ್ರಹಿಸಿದ್ದಾರೆ.

ಮರು ಜೀವ: ಮೇ ತಿಂಗಳಲ್ಲಿ ನಗರದ ಹೊರವಲಯದ ಉಗ್ರಾಣ ಕೇಂದ್ರದ ಬಳಿಯಿಂದ 400 ಕ್ವಿಂಟಲ್ ಅಕ್ಕಿ ತುಂಬಿದ ಲಾರಿ ನಾಪತ್ತೆಯಾಗಿತ್ತು. ಕೆಲ ದಿನದ ಬಳಿಕ ಇಂಡಿ ತಾಲ್ಲೂಕು ವರ್ತಿ ಬಳಿ ಪತ್ತೆಯಾಗಿತ್ತು. ಆದರೆ, ಇನ್ನೂ ಸದರಿ ಪ್ರಕರಣ ವಿಚಾರಣೆ ಹಂತದಲ್ಲಿಯೇ ಇದ್ದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಅಕ್ಕಿ ತುಂಬಿದ ಲಾರಿ ಕಳ್ಳತನಕ್ಕೂ ಅಕ್ಕಿ ನಾಪತ್ತೆ ಪ್ರಕರಣಕ್ಕೂ ಸಾಮ್ಯತೆಯಿದೆ. ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಕೃಷಿಕೂಲಿಕಾರ ಸಂಘದ ಮುಖಂಡ ದಾವಲಸಾಬ್ ನದಾಫ್ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.

ಆರೋಪ ಸಾಬೀತಾದರೆ ಆರೋಪಿತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು

-ಭಾಸ್ಕರರಾವ ಮುಡಬೂಳ, ಹಿರಿಯ ವಕೀಲ

ಆಡಳಿತ ಮಂಡಳಿಯ ನಿರ್ದೇಶಕರ ಮೇಲೆ ದೂರು ದಾಖಲಾದ ನಂತರ ಪೊಲೀಸರು ನಮಗೆ ಯಾವುದೇ ನೊಟೀಸ್‌ ನೀಡಿಲ್ಲ. ವಿಚಾರಣೆಗೆ ಬರುವಂತೆ ತಿಳಿಸಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ

-ಬಸವರಾಜ ವಿಭೂತಿಹಳ್ಳಿ, ಆಡಳಿತ ಮಂಡಳಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.