ADVERTISEMENT

ಯಾದಗಿರಿ | ಹಾಸ್ಟೆಲ್‌ಗಳಿಗೆ ಪೂರೈಕೆಯಾಗದ ಆಹಾರ ಧಾನ್ಯ: ವಿದ್ಯಾರ್ಥಿಗಳ ಪರದಾಟ

ಶಾಲಾ–ಕಾಲೇಜುಗಳು ಆರಂಭವಾಗಿದ್ದರೂ ಊಟವಿಲ್ಲದೇ ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 5:21 IST
Last Updated 13 ಜೂನ್ 2024, 5:21 IST
ಯಾದಗಿರಿ ನಗರದ ಗಂಜ್‌ ಪ್ರದೇಶದಲ್ಲಿರುವ ಹಾಸ್ಟೆಲ್‌ (ಸಂಗ್ರಹ ಚಿತ್ರ)
ಯಾದಗಿರಿ ನಗರದ ಗಂಜ್‌ ಪ್ರದೇಶದಲ್ಲಿರುವ ಹಾಸ್ಟೆಲ್‌ (ಸಂಗ್ರಹ ಚಿತ್ರ)    

ಯಾದಗಿರಿ: 2024–25ನೇ ಶೈಕ್ಷಣಿಕ ವರ್ಷ ಆರಂಭವಾಗಿ, ಶಾಲಾ–ಕಾಲೇಜುಗಳಲ್ಲಿ ಪಾಠಗಳು ಶುರುವಾಗಿವೆ. ಜೊತೆಗೆ ವಸತಿ ನಿಲಯಗಳು ಆರಂಭವಾಗಿದೆ. ಆದರೆ, ಆಹಾರ ಧಾನ್ಯಗಳು ಪೂರೈಕೆಯಾಗದ ಕಾರಣ ವಿದ್ಯಾರ್ಥಿಗಳು ಊಟಕ್ಕಾಗಿ ಹೋಟೆಲ್‌–ಖಾನಾವಳಿ ಅವಲಂಬಿಸುವಂತಾಗಿವೆ.

ವಸತಿ ನಿಲಯಗಳಲ್ಲಿ ಊಟ ತಯಾರಿಸದ ಕಾರಣ ವಿದ್ಯಾರ್ಥಿಗಳು ಗ್ರಾಮಗಳಿಂದ ಕಾಲೇಜುಗಳಿಗೆ ನಿತ್ಯವೂ ಎಡತಾಕುವಂತಾಗಿದೆ. ಇದರಿಂದ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ.

ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಗರ, ಹೋಬಳಿ ಕೇಂದ್ರದಲ್ಲಿ ಸರ್ಕಾರ ಕಲ್ಪಿಸಿರುವ ಹಾಸ್ಟೆಲ್‌ ವ್ಯವಸ್ಥೆ ಮಕ್ಕಳಿಗೆ ಉಪಯೋಗವಿಲ್ಲದಂತಾಗಿದೆ.

ADVERTISEMENT

ಎರಡು ಬಾರಿ ಪತ್ರ:

‘ಯಾದಗಿರಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿ ನಿಲಯಗಳಿಗೆ ಜೂನ್ ತಿಂಗಳಿಗೆ ಆಹಾರ ಧಾನ್ಯಗಳು ಪೂರೈಕೆ ಆಗದಿರುವ ಬಗ್ಗೆ ಹಾಸ್ಟೆಲ್‌ ನಿಲಯಗಳ ವಾರ್ಡನ್‌ಗಳು ಎರಡು ಸಲ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೂ, ಇಲ್ಲಿಯವರೆಗೂ ಆಹಾರ ಧಾನ್ಯ ಪೂರೈಕೆಗೆ ಕ್ರಮ ಕೈಗೊಂಡಿಲ್ಲ’ ಎಂದು ಹಾಸ್ಟೆಲ್‌ವೊಂದರ ನಿಲಯ ಪಾಲಕರು  ಬೇಸರವ್ಯಕ್ತಡಿಸಿದರು.

‘ಪ್ರಸಕ್ತ ಸಾಲಿನಲ್ಲಿ ಹಾಸ್ಟೆಲ್‌ಗಳಿಗೆ ಟೆಂಡರ್‌ ಪಡೆದವರು ಈತನಕ ಆಹಾರ ಧಾನ್ಯಗಳನ್ನು ಸರಬರಾಜು ಮಾಡಿಲ್ಲ. ಹೀಗಾಗಿ ಅಡುಗೆ ಪ್ರಾರಂಭಿಸಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ವಾರ್ಡನ್‌ಗಳಿಗೆ ಸಣ್ಣಪುಟ್ಟ ಮಾತಿನ ಚಕಮಕಿಯೂ ಏರ್ಪಟ್ಟಿದೆ. ಮೇ 31ರಂದು ವಸತಿ ನಿಲಯಗಳಿಗೆ ಆಹಾರ ಧಾನ್ಯಗಳನ್ನು ಪೂರೈಸಲು ಮನವಿ ಪತ್ರ ಸಲ್ಲಿಸಲಾಗಿದೆ. ನಂತರ ಜೂನ್ 5ರಂದು ಎರಡನೇ ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಗರಿಮಾ ಪಂವಾರ್‌
ವಸತಿ ನಿಲಯಗಳ ಆಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಮಾಜ ಕಲ್ಯಾಣ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಯಾದಗಿರಿ ತಾಲ್ಲೂಕಾಧಿರಿ ವಿರುದ್ಧ ಕ್ರಮಕ್ಕೆ ಮಾಹಿತಿ ನೀಡಲಾಗಿದೆ.
ಗರಿಮಾ ಪಂವಾರ್‌ ಜಿಲ್ಲಾ ಪಂಚಾಯಿತಿ ಸಿಇಒ
ಮರೆಪ್ಪ ಚಟ್ಟರಕರ್‌
ಶಾಲಾ–ಕಾಲೇಜು ಆರಂಭವಾದರೂ ವಸತಿ ನಿಲಯಗಳಿಗೆ ಆಹಾರ ಧಾನ್ಯ ಪೂರಕೈಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಆಹಾರ ಧಾನ್ಯ ಪೂರೈಸಬೇಕು
ಮರೆಪ್ಪ ಚಟ್ಟರಕರ್‌ ಡಿಎಸ್‌ಎಸ್‌ ಮುಖಂಡ
ಎಲ್ಲೆಲ್ಲಿ ಹಾಸ್ಟೆಲ್‌ಗಳಿವೆ?
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಯಾದಗಿರಿ ಗುರುಮಠಕಲ್‌ ತಾಲ್ಲೂಕುಗಳನ್ನು ಒಳಗೊಂಡಿದೆ. ತಾಲ್ಲೂಕುಗಳು ಬೇರೆಯಾಗಿದ್ದರೂ ಇನ್ನೂ ವಸತಿನಿಲಯಗಳು ಯಾದಗಿರಿ ತಾಲ್ಲೂಕಿನಲ್ಲೇ ಮುಂದುವರಿದಿವೆ. ಯಾದಗಿರಿ ನಗರದ ಹಳೆಯ ಹೊಸ ಸರ್ಕಾರಿ ಬಾಲಕರ ವಸತಿ ನಿಲಯ ಗಾಜರಕೋಟ ಬಾಲಕರ ವಸತಿ ನಿಲಯ ಹತ್ತಿಕುಣಿ ಬಾಲಕರ ಸರ್ಕಾರಿ ವಸತಿ ನಿಲಯ ಬಳಿಚಕ್ರ ಲಿಂಗೇರಿ ಯರಗೋಳ ಅನಪುರ ಇಡ್ಲೂರ್ ಕೊಂಕಲ್ ಗುರುಮಠಕಲ್‌ ಟೌನ್ ಯಾದಗಿರಿ ಪಿಎಂಬಿಎಚ್ ಹೊಸ ಯಾದಗಿರಿ ಪಿಎಂಬಿಎಚ್ ಹಳೆಯ ಯಾದಗಿರಿ ಪಿಎಂಬಿಎಚ್ ಹಳೆಯ ಗುರುಮಠಲ್ ಜಿಜಿಎಚ್ ಯಾದಗಿರಿ ಹಾಗೂ ಬೋರಬಂಡದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ವಸತಿ ನಿಲಯಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.