ADVERTISEMENT

ಸುರಪುರ | ಉಚಿತ ನೇತ್ರ ಚಿಕಿತ್ಸಾ ಶಿಬಿರ ಜೂನ್ 8ಕ್ಕೆ: ಆರೋಗ್ಯಾಧಿಕಾರಿ

​ಪ್ರಜಾವಾಣಿ ವಾರ್ತೆ
Published 30 ಮೇ 2024, 15:36 IST
Last Updated 30 ಮೇ 2024, 15:36 IST
ಡಾ.ರಾಜಾ ವೆಂಕಪ್ಪನಾಯಕ
ಡಾ.ರಾಜಾ ವೆಂಕಪ್ಪನಾಯಕ   

ಸುರಪುರ: ‘ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜೂನ್ 8 ಮತ್ತು 9 ರಂದು ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ಹೇಳಿದರು.

‘ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಡಿಎಚ್‍ಒ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಸಾರ್ವಜನಿಕ ಆಸ್ಪತ್ರೆ, ಟಿಎಚ್‍ಒ ಕಚೇರಿ ಮತ್ತು ಲಯನ್ಸ್ ಕ್ಲಬ್ ಸುರಪುರ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಜನ ಹಿತ ಐಕೇರ್ ಸೆಂಟರ್ ಬೆಂಗಳೂರು-ಹಿಂದುಪುರದ ಡಾ. ಕೃಷ್ಣ ಮೋಹನ ಜಿಂಕಾ ಅವರ ತಂಡ ಎರಡು ದಿನಗಳ ಕಾಲ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಿದೆ’ ಎಂದರು.

ADVERTISEMENT

‘ನೇತ್ರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವವರು ಆಸ್ಪತ್ರೆಗೆ  ಬರುವಾಗ ದಾಡಿ, ಕಟಿಂಗ್, ತಲೆ ಸ್ನಾನ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಿ  ಬರಬೇಕು. ವೋಟರ್ ಐಡಿ, ರೇಷನ್, ಆಧಾರ್ ಕಾರ್ಡ್ ಜೆರಾಕ್ಸ್ ಪತ್ರಿಗಳನ್ನು ಕಡ್ಡಾಯವಾಗಿ ತರಬೇಕು. ಆಧಾರ್ ಕಾರ್ಡ್ ಜೆರಾಕ್ಸ್ ಪತ್ರಿ ಮೇಲೆ ತಮ್ಮ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಬೇಕು’ ಎಂದು ಹೇಳಿದರು.

‘350 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ. ಕಳೆದ ವರ್ಷ ನಮ್ಮ ಆಸ್ಪತ್ರೆಯ ಶಿಬಿರದಲ್ಲಿ 312 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಜರುಗಿ ಇಡೀ ಜಿಲ್ಲೆಗೆ ಮಾದರಿಯಾಗಿತ್ತು. ಜನ ಹಿತ ಐಕೇರ್ ಸೆಂಟರ್‌ನವರು 2008 ರಿಂದ ಇದುವರೆಗೂ 1 ಲಕ್ಷ ಮೇಲ್ಪಟ್ಟು ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ’ ಎಂದು ತಿಳಿಸಿದರು.

‘ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಇಚ್ಛಿಸುವವರು ಸರ್ಕಾರಿ ಆಸ್ಪತ್ರೆಯಲ್ಲಿರುವ ನೇತ್ರಾಧಿಕಾರಿಯನ್ನು ಸಂಪರ್ಕಿಸಬೇಕು. ಶಸ್ತ್ರ ಚಿಕಿತ್ಸೆ ದಿನ ಬಿಪಿ, ಶುಗರ್ ಟೆಸ್ಟ್ ಮಾಡಲಾಗುವುದು. ಅದು ನಿಯಂತ್ರಣದಲ್ಲಿದ್ದರೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ನೇತ್ರ ಚಿಕಿತ್ಸೆಗೊಳಗಾದವರಿಗೆ ಮತ್ತು ಅವರ ಜತೆ ಬಂದವರಿಗೆ ಸುರಪುರ ಲಯನ್ಸ್ ಕ್ಲಬ್ ವತಿಯಿಂದ ಎರಡು ದಿನ ಊಟದ ವ್ಯವಸ್ಥೆ ಇರುತ್ತದೆ. ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವವರ ಜತೆ ಸಹಾಯಕರೊಬ್ಬರು ಆಸ್ಪತ್ರೆಗೆ ಬಂದು ಸಹಕರಿಸಬೇಕು’ ಎಂದು ಕೋರಿದರು.

ನೇತ್ರಾಧಿಕಾರಿ ಶಮೀಮ್, ಆರೋಗ್ಯ ಸಹಾಯಕ ಸಂಗಪ್ಪ ಚೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.