ADVERTISEMENT

ಯಾದಗಿರಿ: ಪದೇ ಪದೇ ರೈಲ್ವೆ ಸೇತುವೆ ಕುಸಿತ

ವನಮಾರಪಲ್ಲಿ- ರಾಯಚೂರು ರಸ್ತೆ ಸೇತುವೆಗೆ ದುರಸ್ತಿಗೆ ಬೇಕು ₹1 ಕೋಟಿ

ಬಿ.ಜಿ.ಪ್ರವೀಣಕುಮಾರ
Published 12 ಸೆಪ್ಟೆಂಬರ್ 2024, 6:05 IST
Last Updated 12 ಸೆಪ್ಟೆಂಬರ್ 2024, 6:05 IST
ಯಾದಗಿರಿ ಹೊರ ವಲಯದ ರೈಲ್ವೆ ಮೇಲ್ಸೆತುವೆ ಬಳಿ ಬ್ಯಾರಿಕೇಡ್‌ ಅಳವಡಿಸಿರುವುದು
ಯಾದಗಿರಿ ಹೊರ ವಲಯದ ರೈಲ್ವೆ ಮೇಲ್ಸೆತುವೆ ಬಳಿ ಬ್ಯಾರಿಕೇಡ್‌ ಅಳವಡಿಸಿರುವುದು    

ಯಾದಗಿರಿ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹಳೆ ಬಸ್‍ನಿಲ್ದಾಣ ಹತ್ತಿರದ ರಾಜ್ಯ ಹೆದ್ದಾರಿ-15 ವನಮಾರಪಲ್ಲಿ- ರಾಯಚೂರು ರಸ್ತೆ ಸೇತುವೆ (ರೈಲ್ವೆ ಮೇಲ್ಸೆತುವೆ)ಯ ಕಳೆದ ಮೂರ್ನಾಲ್ಕು ವರ್ಷಗಳಿಂದ ಪದೇ ಪದೇ ಒಂದೇ ಸ್ಥಳದಲ್ಲಿ ಬಿರುಕು ಬಿಡುತ್ತಿದೆ. ಇದು ಪ್ರತಿವರ್ಷ ಮಳೆಗಾಲದಲ್ಲಿ ನಡೆದುಕೊಂಡು ಬಂದಿದೆ.

ಅಧಿಕ ಮಳೆಯಿಂದ ನಗರದ ರೈಲ್ವೆ ಮೇಲ್ಸೇತುವೆ ರಸ್ತೆ ಕುಸಿದಿದೆ. ಬ್ಯಾರಿಕೇಡ್‌ ಇಟ್ಟು ಅಲ್ಲಲ್ಲಿ ಕಲ್ಲುಗಳನ್ನು ಇಡಲಾಗಿದೆ. ವಾಹನಗಳ ಸಂಚಾರ ತುಂಬಾ ತೊಂದರೆ ಉಂಟಾಗಿದೆ. ಸುತ್ತಿ ಬಳಸಿ ಯಾದಗಿರಿಗೆ ಹೋಗುವಂತಾಗಿದೆ. ಸಾರ್ವಜನಿಕರು ಸರ್ಕಾರ ಹಾಗೂ ಜಿಲ್ಲಾಡಳಿತದ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಪೊಲೀಸರ ಕಣ್ತಪ್ಪಿಸಿ ಜನರ ಸಂಚಾರ ನಡೆದಿದೆ.

ಕಳೆದ ಎರಡು ವರ್ಷಗಳ ಹಿಂದೆ ಧಾರಾಕಾರ ಸುರಿದ ಮಳೆಗೆ ಇದೆ ತರಹ ಹೆದ್ದಾರಿ ಕುಸಿತಗೊಂಡಿತ್ತು. ಆಗ 15 ದಿನಗಳವರೆಗೆ ಸಂಚಾರ ಬಂದ್ ಮಾಡಲಾಗಿತ್ತು. ಅಂದು ₹ 1 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಮಾಡಿದರೂ ಪುನಃ ಮತ್ತೆ ಹೆದ್ದಾರಿ ಕುಸಿತವಾಗಿದೆ. ಗುಣಮಟ್ಟದ ಕಾಮಗಾರಿ ಸಮರ್ಪಕ ಮಾಡದೇ ಇರುವುದರಿಂದ ಇಂಥ ಘಟನೆಗಳು ಸಂಭವಿಸುತ್ತಲಿವೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಜಾಲತಾಣಗಳಲ್ಲಿ ಆಕ್ರೋಶ: ಯಾದಗಿರಿ-ಶಹಾಪುರ ಹದಗೆಟ್ಟ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದಿದ್ದರು. ಫೋಟೊ, ವಿಡಿಯೊ ಹರಿಬಿಟ್ಟು ರಸ್ತೆ ದುರಸ್ತಿ ಆಗುವವರೆಗೂ ಶೇರ್‌ ಮಾಡಿ ಎನ್ನುವ ಟ್ಯಾಗ್‌ ಲೈನ್‌ ಬಳಸಿದ್ದರು. ಕುಸಿತಗೊಂಡ ಹೆದ್ದಾರಿಯನ್ನು ದುರಸ್ತಿಗೊಳಿಸಬೇಕು. ಯಾವುದೇ ಅನಾಹುತಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸೂಚಿಸಿದ್ದರು. ಅಲ್ಲಿಯವರೆಗೆ ಗುರುಸುಣಿಗಿ ಕ್ರಾಸ್ ಭೀಮಾ ಬ್ರೀಜ್‌ನ ಬೈಪಾಸ್ ಮೂಲಕ ಯಾದಗಿರಿಗೆ ಸಂಚಾರ ಮಾಡಲಿಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದ್ದರು.

ಅದು ಕೂಡ ದುರಸ್ತಿಯಲ್ಲಿ: ನಗರದ ಹೊರ ವಲಯದ ಭೀಮಾ ಬ್ರಿಜ್‌ ಕಂ ಬ್ಯಾರೇಜ್‌ ರಸ್ತೆಯ ಬೈಪಾಸ್ ರಸ್ತೆಯ ರೈಲ್ವೆ ಮೇಲ್ಸೇತುವೆಯ ಸಿಮೆಂಟ್ ರಸ್ತೆ ಕಿತ್ತು ಹೋಗಿದೆ. ಕಬ್ಬಿಣದ ಸಲಾಕೆಗಳು ಎದ್ದು ಕಾಣುತ್ತಿವೆ. ಅಲ್ಲಲ್ಲಿ ಆಳವಾದ ತಗ್ಗುಗಳು ಬಿದ್ದಿವೆ. ಇದರಿಂದ ರಸ್ತೆಯ ಮೇಲ್ಸೇತುವೆಗೆ ಧಕ್ಕೆ ಉಂಟಾಗುವ ಆತಂಕವನ್ನು ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ. ಗುರುಸಣಿಗಿ ಕ್ರಾಸ್ ಮೂಲಕ ಭೀಮಾ ಬ್ರಿಜ್ ಮಾರ್ಗವಾಗಿ ಈ ಬೈಪಾಸ್ ರಸ್ತೆ ಹೆದ್ದಾರಿಯ ಡಾನ್‌ಬೋಸ್ಕೊ ಶಾಲೆಗೆ ಸಂಪರ್ಕಿಸುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಶಹಾಪುರ ಮತ್ತು ಸುರಪುರ ತಾಲ್ಲೂಕುಗಳ ಕಡೆಗೆ ತೆರಳಬೇಕಾದರೆ ಈ ರಸ್ತೆಯ ಮೂಲಕ ಸಂಚರಿಸುತ್ತಾರೆ. ಈ ರಸ್ತೆಯೂ ದುರಸ್ತಿಗೆ ಬಂದಿದೆ.

‘ಮೇಲ್ಸೇತುವೆ ಮಧ್ಯೆ ಭಾಗದಲ್ಲಿ ಸುಮಾರು 5-6 ಕಡೆ ಆಳವಾದ ಗುಂಡಿಗಳು ಬಿದ್ದಿವೆ. ಸೇತುವೆ ಮೇಲೆ ಸಿಮೆಂಟ್ ಕಿತ್ತು ಹೋಗಿದೆ. ಅಧಿಕಾರಿಗಳ ನಿಷ್ಕಾಳಜಿಯಿಂದ ಮೇಲ್ಸುತುವೆ ಶಿಥಿಲಾವಸ್ಥೆಗೆ ತಲುಪಿದೆ’ ಎನ್ನುತ್ತಾರೆ ವಾಹನ ಸವಾರರು.

ಈ ಮೇಲ್ಸೇತುವೆ ಮೇಲೆ ಬೃಹತ್ ಗಾತ್ರದ ವಾಹನಗಳು, ಭಾರ ಹೊತ್ತ ಲಾರಿಗಳು, ಸಾರಿಗೆ ಬಸ್‌ಗಳ ಸಂಚಾರ ಮಾಡುತ್ತಿವೆ. ಈ ಮೆಲ್ಸುತುವೆ ಕೂಡ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದರೂ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ. ತಗ್ಗು ಗುಂಡಿಗಳ ಮಧ್ಯೆ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರ ಅನಿವಾರ್ಯವಾಗಿದೆ.

ಕೂಗಳತೆ ಅಂತರದಲ್ಲಿ ಇಇ ಕಚೇರಿ: ‌ ವನಮಾರಪಲ್ಲಿ- ರಾಯಚೂರು ಹೆದ್ದಾರಿ ರಸ್ತೆ ಕುಸಿತಗೊಂಡ ಸ್ಥಳದಿಂದ ಕೂಗಳತೆ ಅಂತರದಲ್ಲಿ ಲೋಕೋಪಯೋಗಿ ಇಲಾಖೆಯ ಇಇ, ಎಇಇ ಹಾಗೂ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿದ್ದರೂ, ರಸ್ತೆಯುದ್ದಕ್ಕೂ ಆಳವಾದ ಗುಂಡಿಗಳು ಬಿದ್ದಿವೆ. ಹೆದ್ದಾರಿ ಕುಸಿತವಾದರೂ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ ಎಂದು ಜನತೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾದಗಿರಿ ಹೊರ ವಲಯದ ಭೀಮಾ ಬ್ರೀಜ್ ಕಂ ಬ್ಯಾರೇಜ್‌ ಬೈಪಾಸ್ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿಯ ರಸ್ತೆಯ ಮೇಲೆ ಸಿಮೆಂಟ್ ಕಿತ್ತು ಹೋಗಿರುವುದು
ಯಾದಗಿರಿ ಹೊರ ವಲಯದ ರಾಜ್ಯ ಹೆದ್ದಾರಿ-15 ವನಮಾರಪಲ್ಲಿ- ರಾಯಚೂರು ರಸ್ತೆ ಸೇತುವೆ (ರೈಲ್ವೆ ಮೇಲ್ಸೆತುವೆ)ಯ ಕುಸಿದಿರುವುದು
ವನಮಾರಪಲ್ಲಿ- ರಾಯಚೂರು ರೈಲ್ವೆ ಮೇಲ್ಸೇತುವೆ ರಸ್ತೆ ದುರಸ್ತಿಗೆ ₹ 1 ಕೋಟಿ ಬೇಡಿಕೆ ಸಲ್ಲಿಸಲಾಗಿದೆ. ಗುರುಸಣಗಿ–ಭೀಮಾ ಬ್ರಿಜ್‌ ಕಂ ಬ್ಯಾರೇಜ್‌ ಬೈಪಾಸ್ ರಸ್ತೆ ಸೇರಿದಂತೆ ರಸ್ತೆಗಳ ದುರಸ್ತಿಗೆ ₹20 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ
ಅಭಿಮನ್ಯು ಎಇಇ ಲೋಕೋಪಯೋಗಿ ಇಲಾಖೆ
ಎರಡು ಸೇತುವೆಗಳ ಮೇಲೆ ಸಂಚಾರ ಅಪಾಯಕಾರಿಯಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷ್ಯದ ಪರಮಾವಧಿಯಿಂದ ವಾಹನ ಸವಾರರು ಪರದಾಡುವಂತಾಗಿದೆ
ಬಸವರಾಜ ಪಾಟೀಲ ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.