ಯಾದಗಿರಿ:ಲಾಕ್‌ಡೌನ್ ಆದಾಗಿನಿಂದ ಸ್ನೇಹಿತರು ತಮ್ಮ ಬೇರುಗಳನ್ನು ನೆನಪಿಸಿಕೊಳ್ಳಲಾರಂಭಿಸಿದ್ದಾರೆ. ಅಂತಹ ಮಿತ್ರರ ಜ್ಞಾಪಕ ಚಿತ್ರಶಾಲೆಗಳ ನೋಟದ ಬಗ್ಗೆ‘ಸ್ನೇಹಿತರ ದಿನ’ದ ಅಂಗವಾಗಿ ಲೇಖನ ಆಹ್ವಾನಿಸಲಾಗಿತ್ತು. ಆಯ್ದ ಲೇಖನಗಳು ಇಲ್ಲಿವೆ.
ಹೈಸ್ಕೂಲಿನ ದಿನಗಳು ನೆನಪಾದವು
ಕಣ್ಣಿಗೆ ಕಾಣದ ಕೊರೊನಾ ವೈರಸ್ ಸುಮಾರು 5–6 ವರ್ಷಗಳ ಹಿಂದಿನ ಸ್ನೇಹಿತರನ್ನು ಒಂದುಗೂಡಿಸಿತು. ಅದೊಂದು ದಿನ ಲಾಕ್‌ಡೌನ್‌ನಿಂದ ಮರಳಿ ಊರಿಗೆ ಬಂದಿದ್ದೆ. ಎಲ್ಲಾ ಸ್ನೇಹಿತರು ಒಂದುಗೂಡಿಸುವ ಆಲೋಚನೆ ಬಂತು. ತಡ ಮಾಡದೆ ಹೈಸ್ಕೂಲ್ ಗೆಳೆಯರ ಬಳಗ ಗ್ರೂಪ್ ಕ್ರಿಯೇಟ್ ಮಾಡಿದೆ. ಸಂಪರ್ಕದಲ್ಲಿದ್ದ ಕೆಲ ಗೆಳೆಯರನ್ನೂ ಅಡ್ಮಿನ್ ಮಾಡಿದೆ. ಒಬ್ಬರಿಗೊಬ್ಬರು ಸೇರಿಸುತ್ತಾ ಹೋದರು.ಅಂದಿನ ಸ್ನೇಹಿತರೆಲ್ಲರೂ ಇಂದು ಒಗ್ಗಟ್ಟಾಗಿದ್ದೇವೆ. ಪರಸ್ಪರ ಭೇಟಿ ಆಗೋಣ ಎಂದು ಗೆಳೆಯನೊಬ್ಬ ಹೇಳಿದ. ಅಷ್ಟರಲ್ಲಿಯೇಗೆಳೆಯನೊಬ್ಬನಹುಟ್ಟಿದ ದಿನಬಂತು. ಅಂದು ನಾವೆಲ್ಲ ಕಲಿತ ಶಾಲೆಯಲ್ಲಿಯೇ ಭೇಟಿಯಾದೆವು. ಹೈಸ್ಕೂಲಿನ ಆ ದಿನಗಳು, ಪಾಠ ಕಲಿಸಿದ ಗುರುಗಳನ್ನು ಮೆಲುಕು ಹಾಕಿದೆವು.
ಸಾಬಣ್ಣ ಕುರಕುಂದಾ, ವಡಗೇರಾತಾಲ್ಲೂಕು
ಹಳೆಯ ನೆನಪುಗಳ ಹೂರಣ
ಲಾಕ್‍ಡೌನ್ ಆದಾಗಿನಿಂದ ದಿನನಿತ್ಯ ಹೊತ್ತು ಹೋಗುವುದೇ ಕಠಿಣವಾಗಿತ್ತು. ಮಗಳ ಸಲಹೆಯಂತೆ ಬಾಲ್ಯದ ಸ್ನೇಹಿತರನ್ನು ಫೇಸ್‍ಬುಕ್‍ನಲ್ಲಿ ಹುಡುಕಲು ಆರಂಭಿಸಿದೆ. ಫೋನ್ ಮಾಡಿ ಸಂಪರ್ಕಿಸಿದಾಗ ಗೆಳೆಯರಿಗಾದ ಆನಂದ ಅಪರಿಮಿತ. ಹೀಗೆ ಹುಡುಕುತ್ತಾ ಹುಡುಕುತ್ತಾ 50ಕ್ಕೂ ಹೆಚ್ಚು ಸ್ನೇಹಿತರನ್ನು ಒಂದು ಗೂಡಿಸಿ ವಾಟ್ಸ್ ಆ್ಯಪ್‌ನಲ್ಲಿ ‘ಸುರಪುರ ಸ್ನೇಹಿತರು’ ಎಂಬ ಗ್ರೂಪ್ ಮಾಡಿದೆ. ದಿನಾಲೂ ಎಲ್ಲರೂ ಪ್ರಾಥಮಿಕ, ಪ್ರೌಢಶಾಲೆಯ ಘಟನೆಗಳನ್ನು ನೆನೆಪಿಸಿಕೊಳ್ಳುತ್ತೇವೆ.
ಮಹೇಶ ಜಾಗೀರದಾರ, ಶಿಕ್ಷಕ ಸುರಪುರ
ಸಿಟಿಇ ಗುಲಬರ್ಗಾ ಗ್ರೂಪ್
ಸರ್ಕಾರಿ ಬಿ.ಇಡಿ ಕಾಲೇಜ್ ಆಫ್ ಟೀಚರ್ ಎಜುಕೇಶನ್ (ಸಿಟಿಇ) ಕಲಬುರ್ಗಿ ಗೆಳೆಯರು 10 ವರ್ಷಗಳಿಂದ ಬೇರೆ ಬೇರೆಯಾಗಿದ್ದೆವು. ಲಾಕ್‌ಡೌನ್ ವೇಳೆಸಿಟಿಇ ಗುಲಬರ್ಗಾ ಗ್ರೂಪ್‌ನಿಂದ ಎಲ್ಲರೂ ಒಂದೇ ಕಡೆ ಸಿಕ್ಕಂತಾಯಿತು. ಈ ಗ್ರೂಪ್ ಮೂಲಕ ಹಳೆಯ ಘಟನೆಗಳು ನೆನಪಾದವು. ಗ್ರೂಪ್‌ನಲ್ಲಿ ಕಲಬುರ್ಗಿ ಬಿಸಿಲು, ಸಿನಿಮಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸುತ್ತೇವೆ.
ಸಂಗನಗೌಡ ಧನರಡ್ಡಿ,ರಾಜನಕೋಳೂರ
ಮತ್ತಷ್ಟು ಗಾಢ ಸ್ನೇಹ
ನಾನು ಕಳೆದ 8 ವರ್ಷಗಳಿಂದವಾಟ್ಸ್ ಆ್ಯಪ್ ಉಪಯೋಗಿಸುತ್ತಿದ್ದು, ನಮ್ಮ ವ್ಯವಹಾರ ಹಾಗೂ ಸಾಮಾಜಿಕ ಚಟುವಟಿಕೆಗೆ ಸೀಮಿತವಾಗಿತ್ತು. ಲಾಕ್‌ಡೌನ್ ಸಂದರ್ಭದಲ್ಲಿ ವಿಶೇಷ ಅನುಭವ ಏನೆಂದರೆ ನಮ್ಮ ಶಾಲೆಯ ಗೆಳೆಯರ ಗ್ರೂಪ್‌ನಲ್ಲಿ ಒಬ್ಬ ಗೆಳೆಯ ಏಳನೇ ತರಗತಿಯಲ್ಲಿ ಓದುತ್ತಿರುವಾಗ ಎರಡು ಕಡ್ಡಿಯ ಪೆನ್ನಿಗಾಗಿ (ಆಗ ಎರಡು ಕಡೆ ಬರೆಯುವ ಪೆನ್ನು ಸಿಗುತ್ತಿದ್ದವು) ಜಗಳವಾಡಿ ಇಲ್ಲಿಯತನಕ ಅಂದರೆ 27 ವರ್ಷ ಸಿಕ್ಕಿರಲಿಲ್ಲ. ಆಕಸ್ಮಿಕವಾಗಿ ನಮ್ಮ ಗ್ರೂಪ್‌ನಲ್ಲಿ ಸಿಕ್ಕಿ ಹಳೆಯ ಸ್ನೇಹ ನೆನಪಿಸಿಕೊಂಡರು. ಬಳಿಕ ಕುಶಲೋಪರಿ ನಡೆಸಿದೆವು. ಸಣ್ಣವರಿದ್ದಾಗಿನ ಪೆನ್ನು, ಕಾಪಿ, ಕಂಪಾಸ್, ಹರಿದ ಪಾಟೀ ಚೀಲ ನೆನೆದು ಮತ್ತಷ್ಟು ಗಾಢ ಸ್ನೇಹ ಬೆಳೆಯಿತು.
ಬಸವರಾಜ ಮೇಲಿನಮನಿ, ಹುಣಸಗಿ
‘12 ವರ್ಷಗಳ ನಂತರ ಒಂದಾದೆವು’
ಶಾಲಾ–ಕಾಲೇಜು ಮುಗಿದ ನಂತರ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಹಾಗೆಯೇ ನಾನು2008ರಲ್ಲಿ ಬೆಂಗಳೂರು ಎಂಜಿ ರಸ್ತೆಯ ಏರ್ ಹೋಸ್ಟೇಸ್ ಅಕಾಡೆಮಿಯಲ್ಲಿ ಓದಿ ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ನಲ್ಲಿಕೆಲಸ ಪಡೆದೆ. ನನ್ನಂತೆ ಬೇರೆ ಸ್ನೇಹಿತರೂ ಅವರವರ ಜೀವನದಲ್ಲಿ ಬ್ಯುಸಿ ಆದರು. ಬರೋಬ್ಬರಿ 12 ವರ್ಷಗಳ ನಂತರ ಲಾಕ್‌ಡೌನ್ ವೇಳೆ ವಾಟ್ಸ್ ಆ್ಯಪ್ ಗ್ರೂಪ್ ರಚನೆ ಮಾಡಿಕೊಂಡು ಎಲ್ಲರೂ ಒಂದೇ ಕಡೆ ಸೇರಿದೆವು. ವಿದ್ಯಾರ್ಥಿ ಜೀವನದಲ್ಲಿ ನಡೆದ ಸವಿ ನೆನಪುಗಳನ್ನು ಮೆಲುಕು ಹಾಕಿದೆವು. ಅಸ್ಮಾ, ಪರ್ವೇಜ್, ಮುಜಾಹಿದ್, ನಾಝಿಲ್, ಶೀಬಾ, ಜಾವೇದ್, ಶಿಫಾ, ರವಿ, ಇರ್ಷಾದ್ ಸ್ನೇಹಿತರ ಜೊತೆ ಚಾಟಿಂಗ್ ಮಾಡುವಂತೆ ಆಗಿದೆ.
ಮರಿಯಂ ಫಾತಿಮಾ, ಹೊಸದುರ್ಗ
ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಂತೆ
ಒಂದು ದಿನ ನನ್ನ ಮೊಬೈಲ್ ನಂಬರ್‌ಗೆ ಸಿಎಂಎಚ್‌ಎಸ್‌ಗ್ರೂಪ್ ಎಂದು ಸಂದೇಶ ಬಂತು.ಗ್ರೂಪ್ ನೋಡಿದಾಗ ನನಗೇನೂ ಅನ್ನಿಸಲಿಲ್ಲ. ಆದರೆ, ಅದರಲ್ಲಿ ಇದ್ದ ನನ್ನ ಗೆಳೆಯ, ಗೆಳತಿಯರ ಫೋಟೋಗಳನ್ನುನೋಡಿ ಆಶ್ಚರ್ಯವಾಯಿತು. ಅದು ನನ್ನ ಚಿರಂಜೀವಿ ಮೆಥೋಡಿಸ್ಟ್ ಪ್ರೌಢಶಾಲೆಯ ಗ್ರೂಪ್‌ನಿಂದ ಬಂದಿತ್ತು. ನನಗೆ ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಾಗೆ ಆಯ್ತು. ಆ ಹಳೆಯ ದಿನಗಳು ಆ ನಮ್ಮ ತುಂಟಾಟ ಎಲ್ಲರೂ ಒಂದಲ್ಲೆ ಕುಳಿತು ಊಟ ಮಾಡುವುದು. ಎಲ್ಲ ನೆನಪಾಗಿ ತುಂಬಾ ಖುಷಿ ಆಯ್ತು. ಆ ಖುಷಿಗೆ ಲಾಕ್‌ಡೌನ್‌ಗೂ ನನ್ನ ಆ ಗುಂಪಿಗೆ ಸೇರಿಸಿದ ನನ್ನ ಗೆಳೆಯನಿಗೂಧನ್ಯವಾದಹೇಳಿಬಿಟ್ಟೆ. ಈಗ ಶೇ 80ರಷ್ಟುಗೆಳೆಯರು ಸೇರಿದ್ದೇವೆ. ಎಲ್ಲರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದೇವೆ.
ಅರುಣ ಕುಮಾರ,ಯಾದಗಿರಿ
ಸಮಯ ಕಳೆಯಲು ನೆರವಾಯಿತು
ಲಾಕ್‌ಡೌನ್ ವೇಳೆ ಗೆಳೆಯರ ಜೊತೆ ಸೇರಿ ವಾಟ್ಸ್ ಆ್ಯಪ್ ಮೂಲಕ ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಯಿತು. ಚಾಟಿಂಗ್, ವಿಡಿಯೊ ಕಾಲ್ ಮಾಡಿ ಮಾತನಾಡುತ್ತಿದ್ದೆವು. ಜೊತೆಗೆ ಅಂತ್ಯಕ್ಷರಿ, ಟ್ರೂತ್ ಆಂಡ್ ಡೇರ್ ಗೇಮ್ ಆಡುತ್ತಿದ್ದೆವು. ಶಾಲೆ ಇಲ್ಲದಿದ್ದರೂ ಗೆಳೆಯರು ಎಲ್ಲರೂ ಗ್ರೂಪ್‌ನಲ್ಲಿ ಇದ್ದೇವೆ. ವಿವಿಧ ವಿಷಯಗಳ ಕುರಿತು ಚರ್ಚಿಸಲು ವೇದಿಕೆಯಾಗಿದೆ. ಸ್ನೇಹಿತರ ಎದುರಿಗೆ ಹೇಳಲಾಗದ ವಿಷಯಗಳನ್ನು ಫೋನ್ ಮೂಲಕ ಹೇಳಲು ಸಾಧ್ಯವಾಯಿತು.
ಅವಿನಾಶ ಬಿರಾದಾರ, ಶಹಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.