ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಮೇಲೆ ಗಾಜರಕೋಟ ಪಂಚಾಯಿತಿ ಪಿಡಿಒ ಮಲ್ಲಾರೆಡ್ಡಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪಂವಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ತಾಲ್ಲೂಕು ಪಂಚಾಯಿತಿ ಇಒ ಎಸ್.ಎಸ್. ಖದ್ರೋಳಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಬುಧವಾರದ ವೇಳೆಗೆ ಅಸ್ವಸ್ಥರಾದ 25 ಜನರಲ್ಲಿ 15 ಜನ ಗುಣಮುಖರಾಗಿದ್ದಾರೆ. ಆದರೆ, 10 ಜನರಿಗೆ ಮಾತ್ರ ವಾಂತಿ ಭೇದಿಯಾಗಿದ್ದು, ಉಳಿದವರಲ್ಲಿ ಕೇವಲ ಭೇದಿಯಾಗಿದೆ. ಮಂಗಳವಾರ ಸಂಜೆ ವೇಳೆಗೆ ಗುರುಮಠಕಲ್ ಸಿಎಚ್‌ಸಿ ಮತ್ತು ಗ್ರಾಮದ ಪಿಎಚ್‌ಸಿಯಲ್ಲಿ ಚಿಕಿತ್ಸೆ ಪಡೆದು ಒಟ್ಟು 15 ಜನ ಗುಣಮುಖರಾಗಿದ್ದಾರೆ.
ಸದ್ಯ ಗ್ರಾಮದ ಪಿಎಚ್‌ಸಿಯಲ್ಲಿ 6 ಜನ, ಗುರುಮಠಕಲ್ ಸಿಎಚ್‌ಸಿ ಮತ್ತು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ತಲಾ ಎರಡು ಸೇರಿ ಒಟ್ಟು 10 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಮಂಗಳವಾರ ಕಡಿಮೆ ರಕ್ತದೋತ್ತಡದ ಕಾರಣ ಗುರುಮಠಕಲ್ ಪಿಎಚ್‌ಸಿಗೆ ಕಳುಹಿಸಿದ್ದ ಭೀಮಶಪ್ಪ ಗುಣಮುಖರಾಗಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದ್ದ ಮಹೇಶ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಬುಧವಾರ ಮಧ್ಯಾಹ್ನ 10 ವರ್ಷದ ಬಾಲಕ ವಿಶ್ವರಾಜನಿಗೂ ಕೂಡ ಕಡಿಮೆ ರಕ್ತದೋತ್ತಡದ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿರುವುದಾಗಿ’ ಗಾಜರಕೋಟ ಆರೋಗ್ಯಾಧಿಕಾರಿ ಡಾ.ರಾಹೀಲ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.