ಯಾದಗಿರಿ: ಜಿಲ್ಲೆಯಲ್ಲಿ ಹೊಸ ಸರ್ಕಾರ ಬಂದ ನಂತರ ಅನಧಿಕೃತವಾಗಿ ಜೂಜಾಟ ಕ್ಲಬ್‌ಗಳು ತಲೆ ಎತ್ತಿವೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಈ ಮೊದಲು ಇದ್ದರೂ ಅವು ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ. ಈಗ ರಾಜಾರೋಷವಾಗಿ ಕೆಲವರು ಎಲ್ಲ ಇಲಾಖೆಗಳಿಗೆ ‘ವ್ಯವಸ್ಥೆ’ ಮಾಡುವ ಮೂಲಕ ಸಾವಿರಕ್ಕೂ ಹೆಚ್ಚು ಜನರು ಕ್ಲಬ್‌ಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈಗ ಜಿಲ್ಲೆಯ ಕಾಲುವೆ ಜಾಲದ ಅಲ್ಲಲ್ಲಿ ಭತ್ತ ಕಟಾವು ನಡೆಯುತ್ತಿದೆ. ಗದ್ದೆಗಳ ಬಳಿಯೇ ವ್ಯಾಪಾರಿಗಳು ಬಂದು ಖರೀದಿ ಮಾಡುತ್ತಿದ್ದಾರೆ. ಇದರಿಂದ ಲಕ್ಷಾಂತರ ಹಣದ ವ್ಯವಹಾರ ನಡೆಯುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಗದ್ದೆಗಳ ಅಕ್ಕಪಕ್ಕದಲ್ಲೇ ಕ್ಲಬ್ ದಂಧೆ ಶುರುವಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.
6 ತಿಂಗಳ ಹಿಂದೆ ಬೆರಳೆಣಿಕೆಯ ಜನರಿಗೆ ಮಾತ್ರ ಅನಧಿಕೃತ ಕ್ಲಬ್‌ಗಳ ಪರಿಚಯವಿತ್ತು. ಆದರೆ, ಈಗ ಎಲ್ಲೆಡೆ ತಲೆ ಎತ್ತಿದ್ದು, ಸಾವಿರಾರು ಜನ ಭಾಗಿಯಾಗುತ್ತಿದ್ದಾರೆ. ಇಸ್ಪೀಟ್ ಆಟದಲ್ಲಿ ನಾಲ್ಕಾರು ವಿಧಗಳಿದ್ದು, ಆಯಾ ಆಟಕ್ಕೆ ಸಂಬಂಧಿಸಿದವರಿಗೆ ಒಂದೊಂದು ಕಡೆ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಕೇಂದ್ರದಿಂದ ತೆರಳುವ ಜನ
ಜಿಲ್ಲಾ ಕೇಂದ್ರವಾದ ಯಾದಗಿರಿಯಿಂದ ಪ್ರತಿ ಭಾನುವಾರ, ಮಂಗಳವಾರ ನಡೆಯುವ ಕೋಳಿ ಪಂದ್ಯಕ್ಕೆ ತೆರಳುತ್ತಿದ್ದಾರೆ. ಇದೇ ಕೆಲವರಿಗೆ ಉದ್ಯೋಗವಾಗಿ ಪರಿಣಮಿಸಿದೆ. ಹೀಗಾಗಿ ಹಣದ ರುಚಿ ಹತ್ತಿದವರು ನೂರಾರು ಕಿಲೊಮೀಟರ್ ದೂರವಾದರೂ ವಾಹನಗಳ ವ್ಯವಸ್ಥೆ ಮಾಡಿಕೊಂಡು ತೆರಳುತ್ತಿದ್ದಾರೆ.
ಅನಧಿಕೃತ ಕ್ಲಬ್ ನಡೆಯುವ ಜಾಗದಲ್ಲಿ ನೂರಾರು ಬೈಕ್, ಕಾರು, ಟಂಟಂ ಆಟೊಗಳಲ್ಲಿ ಜನ ತಂಡೋಪ ತಂಡವಾಗಿ ಗ್ರಾಮದಿಂದ ಹೊರ ವಲಯಕ್ಕೆ ಹಾದುಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಬೀಟ್ ಪೊಲೀಸರು ಏನ್ಮಾಡುತ್ತಿದ್ದಾರೆ?
ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಬೀಟ್ ಪೊಲೀಸರು ಇರುತ್ತಾರೆ. ಅವರಿಗೆ ಇಂತಿಷ್ಟು ಗ್ರಾಮಗಳೆಂದು ಹೊಣೆ ನೀಡಲಾಗುತ್ತಿದೆ. ಗ್ರಾಮದಲ್ಲಿ ಆಗು–ಹೋಗುಗಳ ಚಟುವಟಿಕೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಆದರೆ ಇಲ್ಲಿ ಲಕ್ಷಾಂತರ ವ್ಯವಹಾರಗಳು ಅನಧಿಕೃವಾಗಿ ನಡೆಯುತ್ತಿದ್ದರೂ ಬೀಟ್ ಪೊಲೀಸರು ಏಕೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ಒಂದು ವೇಳೆ ಮಾಹಿತಿ ನೀಡಿದ್ದರೂ ಮೇಲಾಧಿಕಾರಿಗಳು ಏಕೆ ಸುಮ್ಮನಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ. ಇದಕ್ಕೆ ಏಕೆ ನಿಯಂತ್ರಣ ಹಾಕುತ್ತಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.
₹80 ಸಾವಿರಕ್ಕೆ ಡೀಲ್ ₹60 ಸಾವಿರಕ್ಕೆ ಒಪ್ಪಿಗೆ
ಅನಧಿಕೃತ ಕ್ಲಬ್ ನಡೆಸಲು ಠಾಣೆಯೊಂದರ ಪೊಲೀಸ್ ಅಧಿಕಾರಿಯೊಬ್ಬರು ₹80 ಸಾವಿರಕ್ಕೆ ಡೀಲ್ ಮಾಡಿ ನಂತರ ₹60 ಸಾವಿರ ಪಡೆದು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅನಧಿಕೃತ ಎಂದು ಗೊತ್ತಿದ್ದರೂ ದುಡ್ಡಿನ ಆಸೆಗಾಗಿ ಪೊಲೀಸರು ಇಂಥ ದಂಧೆಗಳಿಗೆ ಪರೋಕ್ಷವಾಗಿ ‘ಸಹಕಾರ’ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಜಿಲ್ಲೆಯ ಕೆಲವು ಕಡೆ ರಾಜಾರೋಷವಾಗಿ ನಡೆಯುತ್ತಿದ್ದರೂ ಇದಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮೀಣ ಭಾಗದ ಜನರು ದೂರುತ್ತಿದ್ದಾರೆ.
ಮಾಹಿತಿ ನೀಡಿದವರಿಗೆ ಧಮ್ಕಿ!
ಜಿಲ್ಲೆಯ ಪೊಲೀಸ್ ಠಾಣೆಯೊಂದರ ವ್ಯಾಪ್ತಿಯ ಗ್ರಾಮದಲ್ಲಿ ಕೋಳಿ ಪಂದ್ಯ ಇಸ್ಪೀಟ್ ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರೆ ಅವರಿಗೇ ಧಮ್ಕಿ ಹಾಕಲಾಗಿದೆ ಎಂದು ತಿಳಿದುಬಂದಿದೆ. ‘ಅದೆಲ್ಲ ಗ್ರಾಮಸ್ಥರಿಗೆ ಏಕೆ ಬೇಕಾಗಿದೆ’ ಎಂದು ಪೊಲೀಸ್ ಠಾಣೆಯಿಂದಲೇ ಮಾಹಿತಿ ನೀಡಿದವರಿಗೆ ಮತ್ತೊಬ್ಬರಿಂದ ಧಮ್ಕಿ ಹಾಕಲಾಗಿದೆ ಎಂದು ದೂರು ನೀಡಿದವರೇ ನೊಂದು ನುಡಿಯುತ್ತಾರೆ. ‘ಪೊಲೀಸರೇ ಅಕ್ರಮಕ್ಕೆ ಸಾಥ್ ನೀಡಿದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಹೇಗೆ’ ಎಂದು ದೂರುದಾರರು ಪ್ರಶ್ನಿಸುತ್ತಾರೆ.
ಬೆಟ್ಟಿಂಗ್ ದಂಧೆ
ಅನಧಿಕೃತ ಕ್ಲಬ್ ನಡೆಸುವವರು ಒಂದೆಡೆಯಾದರೆ ಆಡುವವರು ಮತ್ತೊಂದು ಕಡೆ. ಇದರ ನಡುವೆ ಬೆಟ್ಟಿಂಗ್ ಕಟ್ಟುವವರ ತಂಡವೂ ಅಲ್ಲಿರುತ್ತದೆ. ಇವರು ನೇರವಾಗಿ ಪಂದ್ಯದಲ್ಲಿ ಭಾಗಿಯಾಗದೇ ಆಟ ಆಡುವವರ ಮೇಲೆ ಬಾಜಿ ಕಟ್ಟಿ ಹಣ ಮಾಡುವ ದಾರಿ ಕಂಡುಕೊಂಡಿದ್ದಾರೆ. ಕೆಲಸಕ್ಕೆ ತೆರಳದೇ ಕ್ಲಬ್‌ಗಳಿಗೆ ತೆರಳಿಗೆ ಹಣ ಪಣಕ್ಕಿಟ್ಟು ಬೆಟ್ಟಿಂಗ್ ದಂಧೆ ನಡೆಸುವವರು ಹೆಚ್ಚಾಗಿದ್ದಾರೆ.
‘ನಿಯಂತ್ರಣಕ್ಕೆ ಸೂಚಿಸಿದ್ದೇನೆ’
ಅನಧಿಕೃತ ದಂಧೆಗಳ ಬಗ್ಗೆ ಪತ್ರಿಕೆಯಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾದಗಿರಿ ಸುರಪುರ ಡಿವೈಎಸ್‌ಪಿಯವರಿಗೆ ನಿಯಂತ್ರಣ ಮಾಡಲು ಸೂಚಿಸಿದ್ದೇನೆ. ನಾವು ಅಧಿಕಾರಕ್ಕೆ ಬಂದಾಗ ಅನಧಿಕೃತ ಕ್ಲಬ್‌ಗಳ ಮಾಹಿತಿ ಪಡೆದು ಮುಚ್ಚಿಸಲು ಸೂಚಿಸಿದ್ದೇನೆ. ನಾವು ಅದಕ್ಕೆ ಆಸ್ಪದ ಕೊಟ್ಟಿಲ್ಲ. ಮುಂದೆಯೂ ಕೊಡಲ್ಲ. ಅನಧಿಕೃತವಾಗಿ ನಡೆಯುವ ಕ್ಲಬ್‌ಗಳನ್ನು ಮುಚ್ಚಲು ಮತ್ತೊಮ್ಮೆ ಸೂಚಿಸುತ್ತೇನೆ ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ (ಫೋಟೋ ಇದೆ)
ಅನಧಿಕೃತ ದಂಧೆಗಳ ಬಗ್ಗೆ ಬೀಟ್ ಪೊಲೀಸರು ಬೀಟ್ ಪುಸ್ತಕದಲ್ಲಿ ನಮೂದು ಮಾಡಿದ್ದಾರಾ ಇಲ್ಲವೇ ಎಂದು ಪರಿಶೀಲಿಸುತ್ತೇನೆ.ಜಿ.ಸಂಗೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಜಿಲ್ಲೆಯಲ್ಲಿ ಅಕ್ರಮ ಇಸ್ಪೀಟ್ ಮಟ್ಕಾ ಕೋಳಿ ಪಂದ್ಯದ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತೇನೆ. ಈ ಬಗ್ಗೆ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾಧಿಕಾರಿಯವರಿಗೆ ಸೂಚಿಸುತ್ತೇನೆಮನೋಜ ಜೈನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.