ಯಾದಗಿರಿ: ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಸರ್ಕಾರಿ ಖಾಲಿ ಜಾಗ, ಕಾಲುವೆ ಜಾಲದಲ್ಲಿ ಅಂದರ್ ಬಾಹರ್ ಜೂಜಾಟ ಎಗ್ಗಿಲ್ಲದೇ ನಡೆಯುತ್ತಿದೆ.
ಈಗ ಜಿಲ್ಲೆಯ ಕಾಲುವೆ ಜಾಲದಲ್ಲಿ ಈಗ ಇಸ್ಪೀಟ್ ಆಟ ಜೋರು ನಡೆಯುತ್ತಿದೆ. ಅನೇಕ ಕಡೆ ಅನಧಿಕೃತವಾಗಿ ಜೂಜಾಟ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ನೀಡುವ ದೂರಾಗಿದೆ.
ಲಕ್ಷಗಟ್ಟಲೆ ವ್ಯವಹಾರ: ಪ್ರತಿದಿನ ಜೂಜಾಟದಲ್ಲಿ ಲಕ್ಷಗಟ್ಟಲೆ ವ್ಯವಹಾರ ನಡೆಯುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಗದ್ದೆಗಳ ಅಕ್ಕಪಕ್ಕದಲ್ಲೇ ಕ್ಲಬ್ ದಂಧೆ ಶುರುವಿಟ್ಟುಕೊಂಡಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯಿಂದ ಹಣ ಸಂಪಾದನೆಗೆ ಕೆಲವರು ಇಳಿದಿದ್ದು, ಇದರಿಂದ ಎಷ್ಟೋ ಜನರ ಬದುಕು ಬೀದಿಗೆ ಬಂದಿದ್ದಾರೆ. ಆದರೂ ಈ ಚಟವನ್ನು ಬಿಡುತ್ತಿಲ್ಲ.
ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಮಸ್ಥರು ದಾಖಲೆ ಸಮೇತ ಮಾಹಿತಿ ರವಾನಿಸುತ್ತಿದ್ದಾರೆ. ಆದರೆ, ತಮಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರ ಆಳಲಾಗಿದೆ.
‘ಸ್ಥಳೀಯ ಪೊಲೀಸರ ಸಹಕಾರವಿಲ್ಲದೇ ಈ ದಂಧೆ ನಡೆಯುವುದಿಲ್ಲ. ಇದು ಗೊತ್ತಿದ್ದರೂ ಬೀಟ್ ಪೊಲೀಸರು ಚೆಕ್ ಮಾಡುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿನ ಮಹಿಳೆಯರು ಕೂಲಿಗಾಗಿ ಪರದಾಡುತ್ತಿದ್ದರೆ ಪುರುಷರು ಇಂಥ ಆಟಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎನ್ನುತ್ತಾರೆ ಬಿಜೆಪಿ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.
ಅಕ್ರಮ ಇಸ್ಪೀಟ್ ದಂಧೆ ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್, ಹುಣಸಗಿ, ವಡಗೇರಾಗಳಲ್ಲಿ ಹಗಲು ರಾತ್ರಿ ಎನ್ನದೇ ಎಗ್ಗಿಲ್ಲದೇ ನಡೆಯುತ್ತಿದೆ. ಈ ಕುರಿತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದೇ ನಿಷ್ಕಾಳಜಿತನ ತೋರುತ್ತಿದ್ದಾರೆ ಎಂದು ಆಪಾದಿಸಿದರು.
ಪೊಲೀಸ್ ಇಲಾಖೆ ಇಂಥ ದಂಧೆಗಳಿಗೆ ಕಡಿವಾಣ ಹಾಕಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಇತ್ತ ಗಮನಹರಿಸಿ ನಿಲ್ಲಿಸಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.
ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕಗಳಿಗೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಉದ್ಯೋಗವಿಲ್ಲ ಎಂದು ಹಲವಾರು ಮಹಿಳೆಯರು ಸಮಸ್ಯೆ ಹೊತ್ತು ದೂರು ನೀಡಿದ್ದಾರೆ. ಹೀಗಾಗಿ ದುಶ್ಚಟಗಳನ್ನು ನಿಯಂತ್ರಣ ಮಾಡಬೇಕು.– ಡಾ.ನಾಗಲಕ್ಷ್ಮೀ ಚೌಧರಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
ಜಿಲ್ಲೆಯಲ್ಲಿ ಇಸ್ಟಿಟ್ ಮಟ್ಕಾ ಆಡುವವರ ಮೇಲೆ ನಿಗಾ ಇಟ್ಟಿದ್ದು ಈಚೆಗೆ 36 ಜನರನ್ನು ವಶಕ್ಕೆ ಪಡೆಯಲಾಗಿದೆ. ಇಸ್ಪೀಟ್ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು.–ಜಿ.ಸಂಗೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಮುಗಿದ ನಂತರ ಖಾಲಿ ಜಮೀನುಗಳು ಇಸ್ಪೀಟ್ ಅಡ್ಡೆಗಳಾಗಿ ತಲೆ ಎತ್ತಿವೆ. ಕಾಲುವೆ ಜಾಲ ಇನ್ನಿತರ ಸ್ಥಳಗಳಲ್ಲಿ ಬಹಿರಂಗ ಆಟ ನಡೆಯುತ್ತಿದೆ. ಪೊಲೀಸರು ಏನು ಮಾಡುತ್ತಿದ್ದಾರೆ?–ಯಲ್ಲಯ್ಯ ನಾಯಕ, ವನದುರ್ಗ ಬಿಜೆಪಿ ಮುಖಂಡ
ನಮ್ಮ ಊರಿನ ಜಮೀನುಗಳಲ್ಲಿ ಹಗಲು ರಾತ್ರಿ ಇಸ್ಪೀಟ್ ಆಟ ಆಡುತ್ತಿದ್ದಾರೆ. ಅವರಿಗೆ ಸಣ್ಣ ಜೋಪಡಿ ಹಾಕಿ ನೆರಳಿನ ಆಶ್ರಯ ಕಲ್ಪಿಸಲಾಗಿದೆ. ಗುಂಪು ಗುಂಪಾಗಿ ಸೇರಿ ಹಣ ಜೂಜಿಗೆ ಇಡುತ್ತಿದ್ದಾರೆ. ಪೊಲೀಸರು ಇತ್ತ ಗಮನ ಹರಿಸಲಿ–ಹೆಸರೇಳಲು ಇಚ್ಛೈಸದ ಯುವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.