ADVERTISEMENT

ಯಾದಗಿರಿ: ಗ್ಯಾಸ್‌ ಸಿಲಿಂಡರ್‌ ಗೋದಾಮು ಸುರಕ್ಷತೆ, ಬೇಕಿದೆ ಕಟ್ಟುನಿಟ್ಟಿನ ಕ್ರಮ

ಅಡುಗೆ ಅನಿಲ ಮನೆಗೆ ತಲುಪಿಸಲು ಹೆಚ್ಚುವರಿ ಶುಲ್ಕ ವಸೂಲಿ

ಬಿ.ಜಿ.ಪ್ರವೀಣಕುಮಾರ
Published 13 ಮಾರ್ಚ್ 2022, 19:30 IST
Last Updated 13 ಮಾರ್ಚ್ 2022, 19:30 IST
ಯಾದಗಿರಿ ನಗರದ ಪದವಿ ಕಾಲೇಜು ಸಮೀಪ ಎಚ್‌ಪಿ ಗ್ಯಾಸ್‌ ಗೋದಾಮುಪ್ರಜಾವಾಣಿ ಚಿತ್ರಗಳು/ರಾಜಕುಮಾರ ನಳ್ಳಿಕರ
ಯಾದಗಿರಿ ನಗರದ ಪದವಿ ಕಾಲೇಜು ಸಮೀಪ ಎಚ್‌ಪಿ ಗ್ಯಾಸ್‌ ಗೋದಾಮುಪ್ರಜಾವಾಣಿ ಚಿತ್ರಗಳು/ರಾಜಕುಮಾರ ನಳ್ಳಿಕರ   

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಕೃಷ್ಣಾ ಮೇಲ್ಡಂಡೆ ವಸತಿಗೃಹದ (ಯುಕೆಪಿ) ಬಳಿ ಈಚೆಗೆ ಅಡುಗೆ ಸಿಲಿಂಡರ್‌ ಅನಿಲ ಸೋರಿಕೆಯಿಂದಾದ ಅವಘಡದಿಂದ 15 ಜನ ಮೃತಪಟ್ಟಿದ್ದು, ಸಿಲಿಂಡರ್‌ ಬಳಕೆ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ.

ಜಿಲ್ಲೆಯಲ್ಲಿ 18 ಅಡುಗೆ ಅನಿಲ ವಿತರಕರಿದ್ದು, ದೋರನಹಳ್ಳಿ ಘಟನೆಯಿಂದ ಎಚ್ಚೆತ್ತುಕೊಂಡ ಕೆಲ ಏಜೆನ್ಸಿಯವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸಂಗ್ರಹಣೆ ಪ್ರಕ್ರಿಯೆ ಅಸುರಕ್ಷಿತವಾಗಿದ್ದು ಇದು ಆತಂಕಕ್ಕೆ ಕಾರಣವಾಗಿದೆ.

ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದ ಮಕ್ಕಳು, ವೃದ್ಧರು, ನೆಂಟರು ಅನಿಲ ಸೋರಿಕೆ ಸ್ಫೋಟದಿಂದ ಆಸ್ಪತ್ರೆಗಳಲ್ಲಿ ನರಳಿ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಕಲಬುರಗಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣ ಏನಿದ್ದರೂ ಕುಟುಂಬದ ಆಧಾರ ಸ್ತಂಭ ಕಳೆದುಕೊಂಡು ಅನೇಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ADVERTISEMENT

ಉಜ್ವಲ ಯೋಜನೆ ಆರಂಭವಾದ ನಂತರ ಗ್ರಾಮೀಣ ಪ್ರದೇಶದಲ್ಲೂ ಅಡುಗೆ ಅನಿಲ ಬಳಕೆ ಸಾಮಾನ್ಯವಾಗಿದೆ. ಆದರೆ, ಅದಕ್ಕೆ ತಕ್ಕಂತೆ ಯಾವುದೇ ಯಾವುದೇ ಜಾಗೃತಿ ಕಾರ್ಯಕ್ರಮಗಳು ಆಗುತ್ತಿಲ್ಲ.

ಅಸುರಕ್ಷಿತ ಸಂಗ್ರಹ: ಯಾದಗಿರಿ ನಗರದಲ್ಲಿ ಅಬ್ಬೆತುಮಕೂರು ಬೈಪಾಸ್‌ನಲ್ಲಿ ಸಿಲಿಂಡರ್‌ ಗೋದಾಮು ಇದ್ದು, ಅಲ್ಲಿಂದ ಏಜೆನ್ಸಿ ಕಡೆ ಸಾಗಿಸಲಾಗುತ್ತಿದೆ. ಆದರೆ, ಏಜೆನ್ಸಿಯವರು ಖಾಲಿ ಜಾಗದಲ್ಲಿ ತುಂಬಿದ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಇಟ್ಟಿರುತ್ತಾರೆ. ಅಕ್ಕಪಕ್ಕದಲ್ಲಿ ಮನೆಗಳು, ಹೋಟೆಲ್‌ ಸೇರಿ ಜನನಿಬಿಡ ಪ್ರದೇಶವಿದೆ.

ಅಲ್ಲದೇ ಶುಭಂ ಪೆಟ್ರೋಲ್‌ ಬಂಕ್‌ ಹಿಂಭಾಗದಲ್ಲಿ ಖಾಲಿ ಸಿಲಿಂಡರ್‌ಗಳನ್ನು ಸಂಗ್ರಹಿಸುತ್ತಾರೆ. ಮುಳ್ಳು ಕಂಟಿ ಜಾಗದಲ್ಲಿ ಸಂಗ್ರಹ ಮಾಡುತ್ತಿದ್ದು, ಇಲ್ಲಿಂದಲೇ ವಾಹನಗಳಲ್ಲಿ ರವಾನಿಸಲಾಗುತ್ತಿದೆ. ಪಕ್ಕದಲ್ಲೇ ಆಸ್ಪತ್ರೆ ಇದೆ. ಆದರೆ, ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ.

ಎಲ್ಲಿವೆ ಏಜೆನ್ಸಿಗಳು: ಯಾದಗಿರಿ ತಾಲ್ಲೂಕಿನಲ್ಲಿ 4, ಗುರುಮಠಕಲ್‌ ತಾಲ್ಲೂಕಿನಲ್ಲಿ 2, ಶಹಾಪುರ ತಾಲ್ಲೂಕಿನಲ್ಲಿ 5, ವಡಗೇರಾ ತಾಲ್ಲೂಕಿನಲ್ಲಿ 2, ಸುರಪುರ ತಾಲ್ಲೂಕಿನಲ್ಲಿ 3, ಹುಣಸಗಿ ತಾಲ್ಲೂಕಿನಲ್ಲಿ 2 ಸೇರಿದಂತೆ ಒಟ್ಟು 18 ಏಜೆನ್ಸಿಗಳು ಜಿಲ್ಲೆಯಲ್ಲಿವೆ. ಜಿಲ್ಲೆಯ ಕೆಲ ಕಡೆ ಮಾತ್ರ ನಗರದ ಹೊರ ವಲಯ ಮತ್ತು ಗ್ರಾಮದ ಹೊರವಲಯದಲ್ಲಿ ಗೋದಾಮುಗಳಿವೆ. ಉಳಿದ ಕಡೆ ನಗರದ ಪ್ರದೇಶದ ಜನನಿಬಿಡ ಪ್ರದೇಶದಲ್ಲೇ ಗೋದಾಮುಗಳಿವೆ.

ಪ್ರಮುಖವಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ), ಭಾರತ ಪೆಟ್ರೋಲಿಯಂ (ಬಿಪಿ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿ) ಕಂಪನಿಗಳ ಏಜೆನ್ಸಿಗಳಿವೆ. ಉಜ್ವಲ ಯೋಜನೆಯಿಂದ ಹೋಬಳಿ ಮಟ್ಟದಲ್ಲೂ ವಿತರಣಾ ಜಾಲವನ್ನು ಹೊಂದಿವೆ.

₹150ಕ್ಕೆ ಕಾಳಸಂತೆಯಲ್ಲಿ ಮಾರಾಟ: ‘ನಗರ ಸೇರಿ ಜಿಲ್ಲೆಯಲ್ಲಿ ಸಿಲಿಂಡರ್‌ ಶುಲ್ಕಕ್ಕಿಂತ ಹೆಚ್ಚುವರಿಯಾಗಿ ₹150 ಕೊಟ್ಟರೆ ಕಾಳಸಂತೆಯಲ್ಲಿ ಸಿಲಿಂಡರ್‌ ಸಿಗುವುದು ಗುಟ್ಟಾಗಿ ಉಳಿದಿಲ್ಲ. ಸರಿಯಾದ ದಾಖಲೆಗಳು ಇಲ್ಲದವರು, ಬೇರೆ ಜಿಲ್ಲೆಗಳಿಂದ ಬಂದವರಿಗೆ ಏಜೆನ್ಸಿಗಳ ಮಾಲಿಕರು ಇಲ್ಲದ ಕಾರಣ ಹೇಳುತ್ತಾರೆ. ಇದರಿಂದ ಇಂಥವರು ಹಣ ಹೆಚ್ಚುಕೊಟ್ಟು ಕಾಳಸಂತೆಯಲ್ಲಿ ಸಿಲಿಂಡರ್‌ ಮಾರುತ್ತಿದ್ದಾರೆ’ ಎಂದು ಚಿರಂಜೀವಿ ನಗರದ ನಿವಾಸಿ ಲೂಕ್‌ ರಾಜ್‌ ಹೇಳುತ್ತಾರೆ.

ಈಗ ಆ್ಯಪ್‌ಗಳ ಮೂಲಕವೂ ಸಿಲಿಂಡರ್‌ ಬುಕ್‌ ಮಾಡಬಹುದು. ಆನ್‌ಲೈನ್‌ನಲ್ಲಿಯೇ ಹಣ ಭರಿಸಿದರೆ ಸಾಕು. ಆದರೆ, ಕೆಲವರು ಮನೆಮನೆಗೆ ತಲುಪಿಸುವ ಲೆಕ್ಕದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ.

ಬಹುಮಹಡಿ ಕಟ್ಟಡಗಳಲ್ಲಿ ವಾಸ ಮಾಡುವವರಿಗೆ ಸಿಲಿಂಡರ್‌ ಸರಬರಾಜು ಮಾಡಲು ಹೆಚ್ಚುವರಿ ಶುಲ್ಕ ಕೊಡಲೇಬೇಕು ಎನ್ನುವ ಅಲಿಖಿತ ನಿಯಮವಿದೆ. ಮೊದಲನೇ ಅಂತಸ್ತಿಗೆ ₹50, ಎರಡನೇ ಅಂತಸ್ತಿಗೆ ₹100 ಹೀಗೇ ಅಂತಸ್ತು ಹೆಚ್ಚಿದಂತೆಲ್ಲ ಹಣ ನಿಗದಿ ಮಾಡಲಾಗಿದೆ.

ಏನೆಲ್ಲ ಸುರಕ್ಷತಾ ಕ್ರಮಗಳಿರಬೇಕು: ಗ್ಯಾಸ್‌ ಸಿಲಿಂಡರ್ ಗೋದಾಮುಗಳು ಜನನಿಬಿಡ ಪ್ರದೇಶದಿಂದ ದೂರ ಇರಬೇಕು. ಅಗ್ನಿ ನಿವಾರಕಗಳು ವಸ್ತುಗಳಿರಬೇಕು. ನೆಲದ ಮೇಲೆ ರಬ್ಬರ್‌ ಮ್ಯಾಟ್‌ ಉಪಯೋಗಿಸಬೇಕು. ಸಾಗಣೆ ವಾಹನದಲ್ಲಿ ರಬ್ಬರ್‌ ಮ್ಯಾಟ್‌, ಪ್ರತಿ ಮನೆಗೆ ಸಿಲಿಂಡರ್‌ ತಲುಪಿಸುವಾಗ ಲಿಕೇಜ್‌ ಪರಿಶೀಲಿಸಬೇಕು. ಈ ಅಂಶಗಳನ್ನು ಕೆಲ ಕಡೆ ಮಾತ್ರ ಪಾಲಿಸಲಾಗುತ್ತಿದೆ. ಕೆಲ ಕಡೆ ಇವುಗಳಿಗೆ ಎಳ್ಳುನೀರು ಬಿಡಲಾಗಿದೆ.

‘ಸಿಲಿಂಡರ್‌ ಸರಬರಾಜು ಮಾಡುವ ಯುವಕರಿಗೆ ಹೆಚ್ಚುವರಿ ಹಣ ಕೊಡುವ ಅವಶ್ಯವಿಲ್ಲ. ಒಂದು ಬಾರಿ ನೀಡಿದರೆ ಅದೇ ಅಭ್ಯಾಸವಾಗಿ ಹಣ ಪೀಕುವ ಯುವಕರಿದ್ದಾರೆ. ಅಲ್ಲದೇ ಕೆಲವರು ಮಾನವೀಯತೆ ದೃಷ್ಟಿಯಿಂದ ಕೊಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಅವರು ಎಲ್ಲರ ಬಳಿ ಹಣ ತೆಗೆದುಕೊಳ್ಳುತ್ತಾರೆ. ಹೀಗಾಗಿ ಇದು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ’ ಎಂದು ಹೆಸರು ಬಹಿರಂಗ ಪಡಿಸಿದ ಏಜೆನ್ಸಿಯೊಬ್ಬರು ಹೇಳಿದರು.

‘ಯಾವುದೇ ಕಾರಣ ಸಿಲಿಂಡರ್‌ ಬೆಲೆಗಿಂತ ಹೆಚ್ಚು ಹಣ ನೀಡಬಾರದು. ನಾವು ಅವರಿಗೆ ವೇತನ ನೀಡುತ್ತೇವೆ’ ಎನ್ನುತ್ತಾರೆ ಅವರು.

‘ದೋರನಹಳ್ಳಿ ಘಟನೆಯಿಂದ ಈಗಾಗಲೇ ಪೊಲೀಸ್‌, ಅಗ್ನಿಶಾಮಕ ದಳದ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಾವು ಆಗಾಗ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ನಿಗದಿ ಮಾಡಿದಕ್ಕಿಂತ ಹೆಚ್ಚು ಸಿಲಿಂಡರ್‌ ಇದ್ದರೆ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಸಿದ್ದೇವೆ. ಗೋದಾಮು ಸುರಕ್ಷತಾ ಕ್ರಮಗಳ ಬಗ್ಗೆ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಇವರು ಹೇಳಿದಂತೆ ಇದೆಯೋ ಇಲ್ಲವೋ ಪರಿಶೀಲನೆ ಮಾಡುತ್ತೇವೆ’ ಎನ್ನುತ್ತಾರೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ರಾಜು ಅವರು.

‘ದೋರನಹಳ್ಳಿ ದುರ್ಘಟನೆಯಿಂದ ತುಸು ಮೈದಡಿ ನಿಂತ ಅಧಿಕಾರಿಗಳು ಹಾಗೂ ಗ್ಯಾಸ್ ಎಜೆನ್ಸಿಯ ಮಾಲೀಕರು ಕಾಟಾಚಾರಕ್ಕೆ ಸಭೆಗಳನ್ನು ನಡೆದು ಸಿಲಿಂಡರ್ ಬಳಕೆ, ಸೋರಿಕೆಯಾದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಆದರೆ, ಆಕಸ್ಮಿಕವಾಗಿ ದುರ್ಘಟನೆ ನಡೆದಾಗ ಸಿಗುವ ಪರಿಹಾರ ಹಾಗೂ ಯಾರು ಹೊಣೆಗಾರರು ಎಂಬುವುದನ್ನು ಹೇಳುತ್ತಿಲ್ಲ’ ಎಂದು ಸಭೆಯಲ್ಲಿ ಭಾಗವಹಿಸಿದ ಮಹಿಳೆಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಸಿಲಿಂಡರ್ ಸರಬರಾಜುಗೆ ಹೆಚ್ಚುವರಿ ಶುಲ್ಕ

ಗುರುಮಠಕಲ್: ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಕೋವಿಡ್-19 ಕಾರಣ ಮೊದಲ ಬಾರಿ ಲಾಕ್‌ಡೌನ್ ಮಾಡಿದಾಗಿನಿಂದ ಸಿಲಿಂಡರ್ ಪಡೆಯಲು ಪಟ್ಟಣದ ಗ್ಯಾಸ್ ಏಜೆನ್ಸಿ ಕಚೇರಿಗೆ ಬರುವಂತಿಲ್ಲ. ಬದಲಿಗೆ ಅವರೆ ವಾಹನದ ಮೂಲಕ ಮನೆಗಳಿಗೆ ಸಿಲಿಂಡರ್ ತಲುಪಿಸುತ್ತಿದ್ದಾರೆ. ಆದರೆ, ಅದಕ್ಕೆ ಹೆಚ್ಚುವರಿ ₹50 ವರೆಗೆ ಶುಲ್ಕ ಪಡೆಯುತ್ತಿರುವ ಕುರಿತು ಸಾರ್ವಜನಿಕರು ಆರೋಪ ಮಾಡುತ್ತಾರೆ.

ಈ ಕುರಿತು ಆಹಾರ ನಿರೀಕ್ಷಕ ಅನ್ವರ ಅವರಿಗೆ ಮಾತನಾಡಿದಾಗ, ‘ಸಿಲಿಂಡರ್ ಬೆಲೆ ಎಷ್ಟಿದೆಯೋ ಅಷ್ಟು ಮಾತ್ರ ನೀಡಿ. ಹಣ ನೀಡಿ ಸಿಲಿಂಡರ್ ಜೊತೆಗೆ ರಸೀದಿ ಪಡೆಯಬೇಕು. ರಸೀದಿಯಲ್ಲಿ ನಮೂದಿಸಲಾದ ಮೊತ್ತವನ್ನು ಮಾತ್ರ ಗ್ರಾಹಕರು ಪಾವತಿಸಬೇಕು. ಮನೆಗೆ ತಲುಪಿಸಿದ ಕಾರಣ ಏಜೆನ್ಸಿಯವರು ಹೆಚ್ಚುವರಿ ಹಣ ಪಡೆಯುವಂತಿಲ್ಲ. ಹಾಗೇನಾದರೂ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರೆ 85500 06270 ಕರೆ ಮಾಡಿ, ನಾನು ಖುದ್ದಾಗಿ ಸ್ಥಳಕ್ಕೆ ಬರುತ್ತೇನೆ’ ಎನ್ನುತ್ತಾರೆ.

ಸರ್ಕಾರದ ಆದೇಶದಂತೆ ಹೆಚ್ಚಿನ ಶುಲ್ಕ ಪಡೆಯುವಂತಿಲ್ಲ. ಆದರೆ, ಗ್ರಾಮೀಣ ಜನರಿಗೆ ನಿಯಮಗಳ ಕುರಿತು ಗೊತ್ತಿಲ್ಲದ ಕಾರಣ ಏಜೆನ್ಸಿಗಳು ಹೀಗೆ ಮೋಸ ಮಾಡುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತ ರವಿ ಬುರ್ರನೋಳ ಅವರು ಹೇಳುತ್ತಾರೆ.

ತಿಳಿವಳಿಕೆ ಮೂಡಿಸದ ಅಧಿಕಾರಿಗಳು

ಹುಣಸಗಿ: ತಾಲ್ಲೂಕು ಸೇರಿದಂತೆ ಕೊಡೇಕಲ್ಲ ಗ್ರಾಮದಲ್ಲಿ ಒಟ್ಟು ಎರಡು ಗ್ಯಾಸ್ ಸಿಲಿಂಡರ್ ವಿತರಣಾ ಕೇಂದ್ರಗಳಿವೆ.

ಪಟ್ಟಣದಲ್ಲಿ ಸಹನಾ ಇಂಡೇನ್ ಏಜೆನ್ಸಿಯಿಂದ ವಿವಿಧ ಯೋಜನೆಯ ಅಡಿಯಲ್ಲಿ 10,177 ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ. ಬಹುತೇಕ ಗ್ರಾಹಕರು ಆಯಾ ಕೇಂದ್ರಗಳಿಗೆ ಆಗಮಿಸುತ್ತಿದ್ದಾರೆ. ಆದರೆ, ಇನ್ನೂ ಮನೆಗಳಿಗೆ ಉಚಿತವಾಗಿ ಗ್ಯಾಸ್ ವಿತರಣೆ ಸೇವೆ ಇರುವುದಿಲ್ಲ. ಆದ್ದರಿಂದ ಪಟ್ಟಣದಲ್ಲಿ ಈ ವ್ಯವಸ್ಥೆ ಕಲ್ಪಿಸಬೇಕೆಂಬುದು ನಾಗರಿಕರ ಒತ್ತಾಸೆಯಾಗಿದೆ. ಅಲ್ಲದೇ ಗ್ಯಾಸ್ ಬಳಕೆ ಸುರಕ್ಷತಾ ಕ್ರಮಗಳು ಹಾಗೂ ಜಾಗ್ರತೆ ಕಾರ್ಯಕ್ರಮ ಇನ್ನೂ ತಾಲ್ಲೂಕಿನಲ್ಲಿ ನಡೆದಿಲ್ಲ.

ಕೊಡೇಕಲ್ಲ ಗ್ರಾಮದಲ್ಲಿ ಅಮರೇಶ್ವರ ಎಚ್.ಪಿ ಏಜೆನ್ಸಿ ಗ್ಯಾಸ್ ಏಜೆನ್ಸಿ ಕಾರ್ಯನಿರ್ವಹಿಸುತ್ತಿದ್ದು, 12,172 ಗ್ರಾಹಕರಿದ್ದಾರೆ. 295 ವಾಣಿಜ್ಯ ಬಳಕೆ ಸಿಲಿಂಡರ್‌ಗಳನ್ನು ಬಳಸಲಾಗುತ್ತದೆ.

ನಾರಾಯಣಪುರ ಮತ್ತು ರಾಜನಕೋಳೂರು ಗ್ರಾಮದಲ್ಲಿ ಒಂದು ಸೇವಾ ಕೇಂದ್ರವನ್ನು ಮಾಡಿದ್ದು, ಅಲ್ಲಿಂದಲೇ ಗ್ರಾಮಗಳಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆ ಅಧಿಕಾರಿ ಎಸ್.ಎಂ.ಗವಿಸಿದ್ದಯ್ಯ ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಈ ಕುರಿತು ಜಾಗ್ರತೆ ಮೂಡಿಸುವುದು ಅಗತ್ಯವಿದೆ ಎಂದು ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಹೇಳಿದರು.

***

ಜನವಸತಿ ಬಳಿ ಸಿಲಿಂಡರ್ ಗೋದಾಮು

ಶಹಾಪುರ: ನಗರದ ಹಳೆ ಬಸ್ ನಿಲ್ದಾಣ ಮಾರುದ್ದ ದೂರದಲ್ಲಿಯೇ ವಿಜಯ ಗ್ಯಾಸ್ ಎಜೆನ್ಸಿ ಮಳಿಗೆ ಇದೆ. ಇಲ್ಲಿಯೇ ಸಿಲಿಂಡರ್‌ಗಳನ್ನು ಸಂಗ್ರಹಿಸುವ ಗೋದಾಮು ಇದೆ. ಎರಡು ದಿನಕ್ಕೆ ಒಮ್ಮೆ ಲಾರಿಯಲ್ಲಿ ಸಿಲಿಂಡರ್ ತಂದು ವಿತರಿಸುತ್ತಾರೆ. ಸರ್ಕಾರ ಮಾರ್ಗಸೂಚಿ ನಿಯಮದ ಪ್ರಕಾರ ಜನವಸತಿ ಪ್ರದೇಶದಿಂದ ಗೋದಾಮು ಇರಬೇಕು ಎಂಬ ನಿಯಮ ಇಲ್ಲಿ ನಗಣ್ಯವಾಗಿದೆ.

ಅಲ್ಲದೆ ಗ್ಯಾಸ್ ಎಜೆನ್ಸಿಯ ಮುಂದುಗಡೆ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಇದೆ. ತುಸು ಯಾಮಾರಿದರೆ ಅನಾಹುತ ತಪ್ಪಿದ್ದಲ್ಲ. ಇದೇ ರಸ್ತೆಯ ಮೇಲೆ ವಾಹನಗಳ ಓಡಾಟ ಹಾಗೂ ಸಾರ್ವನಿಕರ ಅಲೆದಾಟ ಹಾಗೂ ಸುತ್ತಮುತ್ತಲು ಹೊಟೇಲ್, ಕಿರಾಣಿ ಅಂಗಡಿ ಇವೆ. ಸುರಕ್ಷತೆಯ ಕ್ರಮಗಳು ಇಲ್ಲಿ ಕಾಣಿಸುವುದಿಲ್ಲ.

ಕಂಪನಿಯಿಂದ ನಿಗದಿಪಡಿಸಿದ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಇದನ್ನು ಪ್ರಶ್ನಿಸಿದರೆ ನಿಮಗೆ ಸಿಲಿಂಡರ್ ನೀಡುವುದಿಲ್ಲ. ಮಾಲೀಕರ ಬಳಿ ಬನ್ನಿ ಎಂದು ಉಡಾಫೆಯ ಮಾತುಗಳನ್ನು ಆಡಿ ಹೋಗುತ್ತಾರೆ. ಇದರಿಂದ ನಾವು ಅನಿವಾರ್ಯವಾಗಿ ಅವರು ಹೇಳಿದ ದರಕ್ಕೆ ತೆಗೆದುಕೊಳ್ಳುವ ದುಸ್ಥಿತಿ ಬಂದಿದೆ ಎಂದು ನಗರದ ಜೀಹ್ವೇಶ್ವರ ನಗರದ ನಿವಾಸಿ ಮಹಿಳೆ ಒಬ್ಬರು.

ಇವೆಲ್ಲವುಗಳಿಂತ ಮಿಗಿಲಾಗಿ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಸಿಲಿಂಡರ್‌ಗಳನ್ನು ಸರಬರಾಜು ಮಾಡುತ್ತಾರೆ. ಬಹುತೇಕ ಕಡೆ ಬಿಸಿಯೂಟದ ಅಡುಗೆ ಕೋಣೆಗಳು ಇಲ್ಲ. ಶಾಲಾ ಕೋಣೆಯಲ್ಲಿ ಮಕ್ಕಳು ಪಾಠ ಮಾಡುವ ಪಕ್ಕದಲ್ಲಿಯೇ ಸಿಲಿಂಡರ್ ಇಟ್ಟಿದ್ದಾರೆ. ಅದರಂತೆ ಅಂಗನವಾಡಿ ಕೇಂದ್ರಗಳು ಇದಕ್ಕೆ ಹೊರತಾಗಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ಮಕ್ಕಳ ಪಾಲಕರು.

***

ಅಪಾಯಕಾರಿಯಾಗಿ ಸಿಲಿಂಡರ್‌ ಸಂಗ್ರಹ

ಸುರಪುರ: ದೋರನಹಳ್ಳಿ ಘಟನೆ ಸಂಭವಿಸಿದ ನಂತರ ಆಹಾರ ಇಲಾಖೆ ತಾಲ್ಲೂಕಿನಲ್ಲಿ ಎಚ್ಚೆತ್ತುಕೊಂಡಿದೆ. ಅಲ್ಲಲ್ಲಿ ಗ್ರಾಹಕರ ಸಭೆ ನಡೆಸಿ ಸಿಲಿಂಡರ್ ಸುರಕ್ಷಿತ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಕ್ಷರ ದಾಸೋಹ ಇಲಾಖೆಯೂ ಅಡುಗೆಯವರಿಗೆ ತಿಳಿವಳಿಕೆ ನೀಡುತ್ತಿದೆ.

ಅಗ್ನಿ ಶಾಮಕ ದಳದವರು ಸ್ಟೌ ಹಚ್ಚಲು ಬೆಂಕಿ ಪಟ್ಟಣದ ಬದಲಿಗೆ ಸ್ಟಾರ್ಟರ್ ಬಳಸಬೇಕು. ಸಿಲಿಂಡರ್ ಸ್ಟೌನಿಂದ ದೂರದಲ್ಲಿರಬೇಕು. ಆಕಸ್ಮಾತ್ ಬೆಂಕಿ ಹತ್ತಿಕೊಂಡರೆ ತಕ್ಷಣ ಹೊರಬರಬೇಕು. ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಬೇಕು ಎಂಬ ಜಾಗೃತಿ ನೀಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಸುರಪುರ, ಕಕ್ಕೇರಾ ಮತ್ತು ಕೆಂಭಾವಿಗಳಲ್ಲಿ ಅಡುಗೆ ಅನಿಲ ವಿತರಕರಿದ್ದಾರೆ. ಎಲ್ಲರೂ ಊರ ಹೊರಗೆ ಸಿಲಿಂಡರ್ ಸಂಗ್ರಹಿಸುವ ಗೋದಾಮು ಮಾಡಿಕೊಂಡಿದ್ದಾರೆ. ವಿತರಣೆಯ ಜಾಲವೂ ಚೆನ್ನಾಗಿದೆ. ಆದರೆ, ವಿತರಣೆ ಮಾಡುವ ಕಾರ್ಮಿಕರು ಕೆಲವಡೆ ಜನನಿಬಿಡ ಪ್ರದೇಶದಲ್ಲಿ ಸಿಲಿಂಡರ್‌ಗಳನ್ನು ಸಂಗ್ರಹಿಸುವುದು ಅಪಾಯಕಾರಿಯಾಗಿದೆ. ಕೆಲ ಕಾರ್ಮಿಕರು ಮನೆ ಮನೆಗೆ ವಿತರಿಸುವಾಗ ಪ್ರತಿಯಾಗಿ ಇಂತಿಷ್ಟು ಹಣ ತೆಗೆದುಕೊಳ್ಳುತ್ತಾರೆ. ಬಹುತೇಕ ಗ್ರಾಹಕರು ಸಿಲಿಂಡರ್ ಸ್ಥಿತಿ, ಗತಿ, ಮುಕ್ತಾಯ ಅವಧಿ ದಿನ ಪರಿಶೀಲಿಸುವುದಿಲ್ಲ. ಈಗ ಉಜ್ವಲ್ ಯೋಜನೆಯಡಿ ಹಳ್ಳಿಗಳಿಗೂ ಸಿಲಿಂಡರ್ ವಿತರಿಸಲಾಗುತ್ತಿದೆ. ಬಹುತೇಕ ಗ್ರಾಮೀಣರು ಅನಕ್ಷರಸ್ಥರಿರುವುದರಿಂದ ಸಿಲಿಂಡರ್ ಸುರಕ್ಷಿತ ಬಳಕೆ ಸವಾಲಾಗಿದೆ.

****

ದೋರನಹಳ್ಳಿ ಘಟನೆ ನಂತರ ಜಿಲ್ಲೆಯ ಎಲ್ಲ ಗ್ಯಾಸ್‌ ಏಜೆನ್ಸಿಗಳ ಸಭೆ ಕರೆದು ಸುರಕ್ಷತೆ ಮೂಡಿಸುವಂತೆ ಸೂಚಿಸಲಾಗಿದೆ. ಹೆಚ್ಚುವರಿ ಶುಲ್ಕ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡು ಬಂದರೆ 1906 ದೂರು ನೀಡಬಹುದು

–ರಾಜು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಪ್ರಭಾರಿ ಉಪ ನಿರ್ದೇಶಕ

***

ಸಿಲಿಂಡರ್‌ಗಳನ್ನು ಉಚಿತವಾಗಿ ಮನೆಗೆ ತಲುಪಿಸಬೇಕೆನ್ನುವ ನಿಯಮವಿದೆ. ಆದರೆ, ಸಿಲಿಂಡರ್ ತಲುಪಿಸುವ ಕಾರ್ಮಿಕರು ಹಣ ಕೇಳುತ್ತಾರೆ. ಮಾನವೀಯತೆ ದೃಷ್ಟಿಯಿಂದ ಹಣ ಕೊಡುತ್ತೇವೆ. ಆದರೂ ಇದು ತಪ್ಪು

–ಅಪ್ಪಣ್ಣ ಚಿನ್ನಾಕಾರ, ಗ್ರಾಹಕ

***

ದೋರನಹಳ್ಳಿ ದುರ್ಘಟನೆಯಿಂದ ಮೃತಪಟ್ಟ ಕುಟುಂಬಗಳಿಗೆ ಸರ್ಕಾರ ₹ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರಿಂದ ಮೃತರ ಅವಲಂಬಿತ ಕುಟುಂಬದ ಸದಸ್ಯರ ದಾಖಲೆ ಹಾಗೂ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸಿಲಿಂಡರ್ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ

–ಮಧುರಾಜ ಕೂಡ್ಲಗಿ, ತಹಶೀಲ್ದಾರ, ಶಹಾಪುರ

***

ಕೇಂದ್ರ ಸರ್ಕಾರವೇನೋ ನಿಯಮ ರೂಪಿಸಿದೆ. ಆದರೆ, ಜನರಿಗೆ ಮಾತ್ರ ಅದರಿಂದ ಉಪಯೋಗವಾಗಿಲ್ಲ. ಮನೆಯವರೆಗೂ ಸಿಲಿಂಡರ್ ನೀಡಿದ್ದೇವೆ. ಅದಕ್ಕೆ ಹೆಚ್ಚುವರಿ ಶುಲ್ಕ ತೆಗೆದುಕೊಳ್ಳುತ್ತೇವೆ ಎಂದು ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳುತ್ತಾರೆ. ಸಂಬಂಧಿತ ಅಧಿಕಾರಿಗಳು ಶೀಘ್ರವೇ ಇದನ್ನು ಸರಿಪಡಿಸಬೇಕು

-ಸಂಜೀವಕುಮಾರ ಅಳೆಗಾರ, ಗ್ರಾಹಕ

***

ಗ್ರಾಮೀಣ ಪ್ರದೇಶಗಳ ಜನರಿಗೆ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸಲಾಗುತ್ತಿದೆ. ಆದರೆ, ಅದಕ್ಕೆ ಹೆಚ್ಚುವರಿ ಶುಲ್ಕವನ್ನೂ ಪಡೆಯಲಾಗುತ್ತಿದೆ. ಡೆಲಿವರಿ ಶುಲ್ಕ ಪಡೆಯುವಂತಿಲ್ಲ ಎಂದು ಸರ್ಕಾರ ನಿಯಮವಿದ್ದರೂ ಜನರಿಗೆ ಮಾತ್ರ ಹೊರೆ ತಪ್ಪುತ್ತಿಲ್ಲ

- ರವಿ ಬುರ್ರನೋಳ, ಸಾಮಾಜಿಕ ಕಾರ್ಯಕರ್ತ

***

ಗ್ರಾಹಕರು ರಸೀದಿಯಲ್ಲಿರುವುದಕ್ಕಿಂತ ಹೆಚ್ಚಿನ ಹಣ ನೀಡಬೇಡಿ. ಹಾಗೇನಾದರೂ ಹೆಚ್ಚಿನ ಹಣಕ್ಕೆ ಒತ್ತಾಯಿಸಿದ ಕುರಿತು ಯಾರಾದರೂ ದೂರು ನೀಡಿದರೆ ಸಂಬಂಧಿತ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು

- ಅನ್ವರ್, ಆಹಾರ ನಿರೀಕ್ಷಕ, ಗುರುಮಠಕಲ್

***

ತಾಲ್ಲೂಕಿನಲ್ಲಿ ಮೂರು ಸಿಲಿಂಡರ್ ಏಜೆನ್ಸಿಯವರು ಸಿಲಿಂಡರ್ ಸಂಗ್ರಹ ಗೋದಾಮುಗಳನ್ನು ಊರ ಹೊರಗೆ ಮಾಡಿದ್ದಾರೆ. ನಮ್ಮ ಇಲಾಖೆ ಆಗಾಗ ಭೇಟಿ ನೀಡಿ ಸುರಕ್ಷತೆಯ ಬಗ್ಗೆ ಪರಿಶೀಲಿಸುತ್ತೇವೆ

- ಅಬ್ಬಾಸ ಅಲಿ, ಆಹಾರ ಇಲಾಖೆ ನಿರೀಕ್ಷಕ ಸುರಪುರ

***

ಪೂರಕವರದಿ:ಟಿ.ನಾಗೇಂದ್ರ, ಅಶೋಕ ಸಾಲವಾಡಗಿ,ಭೀಮಶೇನರಾವ ಕುಲಕರ್ಣಿ,ಎಂ.ಪಿ.ಚಪೆಟ್ಲಾ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.