ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕ್ರೈಸ್ತರು ಯೇಸುಕ್ರಿಸ್ತನು ಮರಣ ಅನುಭವಿಸಿದ ದಿನದ ಅಂಗವಾಗಿ ಗುಡ್ ಫ್ರೈಡೆ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ವಿವಿಧ ಚರ್ಚ್‌ಗಳಲ್ಲಿ ಆಚರಣೆ ಮಾಡಿದರು.
ನಗರದ ಕೇಂದ್ರ ಮೆಥೋಡಿಸ್ಟ್ ಚರ್ಚ್, ತಾತಾ ಸೀಮಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್, ಅಂಬೇಡ್ಕರ್ ನಗರ ಮೆಥೋಡಿಸ್ಟ್ ಸೇರಿದಂತೆ ಜಿಲ್ಲೆಯ ವಿವಿಧ ಸ್ವಂತಂತ್ರ ಚರ್ಚ್‌ಗಳಲ್ಲೂ ಶುಭಶುಕ್ರವಾರ ಆಚರಣೆ ಮಾಡಲಾಯಿತು.
ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದ ಆರಂಭವಾದ ಪ್ರಾರ್ಥನೆ ಕೂಟ ಮಧ್ಯಾಹ್ನ 3 ಗಂಟೆಗೆ ಮುಕ್ತಾಯವಾಯಿತು. ಆ ನಂತರ ಕೆಲ ಚರ್ಚ್‌ಗಳಲ್ಲಿ ಸಿರಾ, ಉಪ್ಪಿಟು, ಮಜ್ಜಿಗೆ, ನಿಂಬೆ ಪಾನಕ, ಹಣ್ಣು ಹಂಪಲು ಉಪವಾಸ ವ್ರತ ತ್ಯಜಿಸಿದವರಿಗೆ ವಿತರಿಸಲಾಯಿತು. ಈ ಮೂಲಕ ಕಳೆದ 40 ದಿನಗಳಿಂದ ಆಚರಿಸಿಕೊಂಡ ಬಂದ ಉಪವಾಸ ವ್ರತ ಕೊನೆಗೊಳಿಸಲಾಯಿತು.
ಯೇಸುಕ್ರಿಸ್ತನ ಜೀವನ ಅನುಸರಿಸಿ: ಈ ವೇಳೆ ಕೇಂದ್ರ ಮೆಥೋಡಿಸ್ಟ್ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ರೆವೆರಂಡ್ ಸುನಂದ ಕುಮಾರ ಮಾತನಾಡಿ, ‘ಯೇಸುಕ್ರಿಸ್ತನು 2000 ಸಾವಿರ ವರ್ಷಗಳ ಹಿಂದೆ ಭೂ ಲೋಕಕ್ಕೆ ಮನುಷ್ಯ ಅವತಾರ ತಾಳಿ ಬಂದನು. ಮನುಷ್ಯನಂತೆ ಲೋಕದಲ್ಲಿ ಜೀವಿಸಿದನು. ಆದರೆ, ಪಾಪ ಮಾತ್ರ ಮಾಡಲಿಲ್ಲ. ಆದರೂ ಆಗಿನ ರೋಮ್ ಸಮಾಜ್ರ್ಯದಲ್ಲಿ ಯೆಹೂದ್ಯರು ಆತನನ್ನು ಶಿಲುಭೆಯ ಮರಣಕ್ಕೆ ಒಪ್ಪಿಸಿದರು. ಮೂರು ದಿನಗಳ ನಂತರ ಪುನರುತ್ಥಾನವಾದನು. ಹೀಗಾಗಿ ಕ್ರೈಸ್ತರು ಕೂಡ ಲೋಕದಲ್ಲಿ ಇರುವಾಗ ಕ್ರಿಸ್ತನಿಗೆ ವಿರುದ್ಧವಾದ ಕೆಲಸಗಳನ್ನು ಮಾಡಬಾರದು. ಕ್ರಿಸ್ತನಂತೆ ಜೀವನ ಮಾಡಬೇಕು’ ಎಂದು ಸಂದೇಶ ನೀಡಿದರು.
ತಾತಾ ಸೀಮಂಡ್ಸ್ ಸ್ಮಾರಕ ಮೆಥೋಡಿಸ್ಟ್ ಚರ್ಚ್: ನಗರದ ಹೊಸಳ್ಳಿ ಕ್ರಾಸ್ ಸಮೀಪದ ತಾತಾ ಸೀಮಂಡ್ಸ್ ಸ್ಮಾರಕ ಮೆಥೋಡಿಸ್ಟ್ ಚರ್ಚ್‌ನಲ್ಲಿ ಶುಭಶುಕ್ರವಾರ ಆರಾಧನೆ ಸಭಾಪಾಲಕ ರೆವ ಎ.ಸ್ಯಾಂಸನ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಂದೇಶ ನೀಡಿದ ಅವರು, ಯೇಸು ಕ್ರಿಸ್ತನ ಶ್ರಮೆ, ಮರಣ, ಪುನರುತ್ಥಾನ, ಸಪ್ತ ವಾಕ್ಯಗಳ ಕುರಿತಾಗಿ ವಿವರ ನೀಡಿದರು.
ಅಂಬೇಡ್ಕರ್ ನಗರದ ಮೆಥೋಡಿಸ್ಟ್ ಚರ್ಚ್ ಸೇರಿದಂತೆ ಸ್ವತಂತ್ರ ಚರ್ಚ್‌ಗಳಲ್ಲಿ ಸಭಾಪಾಲಕರು ಶುಭ ಶುಕ್ರವಾರ ಆಚರಣೆ ಮಾಡಲಾಯಿತು. ಇನ್ನೂ ಕೆಲ ಚರ್ಚ್‌ಗಳಲ್ಲಿ ಹೆಚ್ಚು ಭಕ್ತರು ಆಗಮಿಸಿದ್ದರಿಂದ ಹೊರ ಭಾಗದಲ್ಲಿ ಶಾಮಿಯಾನ ಹಾಕಲಾಗಿತ್ತು. ಅಂಬೇಡ್ಕರ್ ನಗರದ ಮೆಥೋಡಿಸ್ಟ್ ಚರ್ಚ್ ಸೇರಿದಂತೆ ಸ್ವತಂತ್ರ ಚರ್ಚ್‌ಗಳಲ್ಲಿ ಸಭಾಪಾಲಕರು ಶುಭ ಶುಕ್ರವಾರ ಆಚರಣೆ ಮಾಡಲಾಯಿತು.
ಸಪ್ತ ವಾಕ್ಯಗಳ ಧ್ಯಾನ
ಯೇಸು ಕ್ರಿಸ್ತನು ಶಿಲುಬೆ ಮೇಲೆ ಆಡಿದ ಏಳು ವಾಕ್ಯಗಳನ್ನು ಚರ್ಚ್‌ನಲ್ಲಿ ಭಕ್ತರು ಧ್ಯಾನ ಮಾಡುವ ಮೂಲಕ ಯೇಸುವನ್ನು ಸ್ಮರಿಸಿದರು. ಪ್ರತಿ ಚರ್ಚ್‌ಗಳಲ್ಲೂ ಯೇಸುಕ್ರಿಸ್ತನು ಶಿಲುಭೆ ಮೇಲೆ ಆಡಿರುವ 7 ಮಾತುಗಳನ್ನು ಧ್ಯಾನ ಮಾಡಲಾಗಿತು. ಒಂದು ಮಾತು ಧ್ಯಾನ ಮಾಡಿದ ನಂತರ ವಿಶೇಷ ಹಾಡು ಪ್ರಾರ್ಥನೆ ನಡೆಯಿತು. ಶಿಲುಬೆಯ ಮೇಲೆ ನುಡಿದ ತಂದೆಯೇ ಅವರನ್ನು ಕ್ಷಮಿಸು ಇವತ್ತೇ ನೀನು ನನ್ನ ಸಂಗಡ ಪರದೈಸಿಯಲ್ಲಿರುವೆ ಅಮ್ಮಾ ಇಗೋ ನಿನ್ನ ಮಗನು ನನ್ನ ದೇವರೆ ನನ್ನ ದೇವರೆ ಯಾಕೆ ನನ್ನನ್ನು ಕೈಬಿಟ್ಟಿ ನನಗೆ ನೀರಡಿಕೆಯಾಗಿದೆ. ತೀರಿತು ತಂದಯೇ ನನ್ನ ಆತ್ಮವನ್ನು ನಿನಗೆ ಒಪ್ಪಿಸಿಕೊಡುತ್ತೇನೆ ಎಂಬ ಸಪ್ತ ವಾಕ್ಯಗಳ ಧ್ಯಾನ ಸಂದೇಶಗಳನ್ನು ಧ್ಯಾನಿಸಿದರು.
ಭಾನುವಾರ ಪುನರುತ್ಥಾನ ಹಬ್ಬ
ಶುಭ ಶುಕ್ರವಾರ ಯೇಸು ಕ್ರಿಸ್ತನು ಶಿಲುಬೆ ಮೇಲೆ ಮರಣ ಹೊಂದಿರುವ ದಿನವಾಗಿದೆ. ಭಾನುವಾರ ಸಮಾಧಿಯಿಂದ ಎದ್ದೇಳುವ ಪುನರುತ್ಥಾನ ಹಬ್ಬವನ್ನು ಆಚರಿಸಲಾಗುತ್ತದೆ. ಭಾನುವಾರ ಬೆಳಿಗ್ಗೆ 5 ಗಂಟೆಗೆ ಸೂರ್ಯೋದಯ ಆರಾಧನೆ ನಂತರ 9.30ಕ್ಕೆ ಪುನರುತ್ಥಾನದ ಹಬ್ಬವನ್ನು ಆಚರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.