ADVERTISEMENT

ಹಿಂಗಾರು ಹಂಗಾಮಿಗೆ ನೀರು ಹರಿದು ಬರುವ ನಿರೀಕ್ಷೆ: ICC ಸಭೆಯತ್ತ ಅನ್ನದಾತರ ಚಿತ್ತ

ಹಿಂಗಾರು ಹಂಗಾಮಿಗೆ ಮಾರ್ಚ್‌ ಅಂತ್ಯದವರೆಗೆ ನೀರು ಅಗತ್ಯ

ಭೀಮಶೇನರಾವ ಕುಲಕರ್ಣಿ
Published 19 ಅಕ್ಟೋಬರ್ 2024, 7:02 IST
Last Updated 19 ಅಕ್ಟೋಬರ್ 2024, 7:02 IST

ಹುಣಸಗಿ ಹೊರವಲಯದಲ್ಲಿ ಬೆಳೆದ ಭತ್ತ ತೆನೆ ಬಿಚ್ಚುವ ಹಂತದಲ್ಲಿರುವುದು

ಹುಣಸಗಿ ಹೊರವಲಯದಲ್ಲಿ ಬೆಳೆದ ಭತ್ತ ತೆನೆ ಬಿಚ್ಚುವ ಹಂತದಲ್ಲಿರುವುದು

ಹುಣಸಗಿ: ಈ ಬಾರಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಹಿಂಗಾರು ಹಂಗಾಮಿಗೆ ನೀರು ಹರಿದು ಬರುವ ನಿರೀಕ್ಷೆ ಇದ್ದು, ಅಧಿಕೃತ ಮಾಹಿತಿಗಾಗಿ ನೀರಾವರಿ ಸಲಹಾ ಸಮಿತಿ (ಐಸಿಸಿ)  ಸಭೆಯತ್ತ ರೈತರು ಎದುರು ನೋಡುತ್ತಿದ್ದಾರೆ.

ADVERTISEMENT

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮುಂಗಾರು ಹಂಗಾಮಿಗೆ ಪೂರ್ವ ನಿಗದಿಯಂತೆ ನೀರು ಹರಿಸಿದ್ದರಿಂದಾಗಿ ಹುಣಸಗಿ ತಾಲ್ಲೂಕಿನಲ್ಲಿಯೇ ಸುಮಾರು 50 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಿದ್ದಾರೆ. ಆಗಾಗ ಮಳೆಯಾಗಿದ್ದರಿಂದಾಗಿ ಆರ್.ಎನ್.ಆರ್ ಮತ್ತು ಸೋನಾ ತಳಿಯ ಭತ್ತ ಹುಲುಸಾಗಿ ಬೆಳೆದಿದ್ದು ಮುಂದಿನ ಒಂದು ತಿಂಗಳಲ್ಲಿ ರಾಶಿ ಮಾಡುವ ಹಂತಕ್ಕೆ ಬರಲಿದೆ. ಆದರೆ ಹಿಂಗಾರು ಹಂಗಾಮಿಗೆ ಯಾವ ದಿನಾಂಕದಿಂದ ಎಲ್ಲಿಯವರೆಗೆ ನೀರು ಹರಿಸಲಾಗುತ್ತದೆ ಎನ್ನುವ ಸಭೆಯ ನಿರ್ಣಯದ ಬಳಿಕ ಹಿಂಗಾರು ಹಂಗಾಮಿಗೆ ಭತ್ತ ಸಸಿ ಹಾಕಲು ರೈತರು ಅಣಿಯಾಗಲಿದ್ದಾರೆ. ಅದಕ್ಕಾಗಿ ದಿನಾಂಕ ಪ್ರಕಟಿಸುವುದು ಮಹತ್ವದ್ದಾಗಿದೆ.

‘ನವೆಂಬರ್ ತಿಂಗಳಲ್ಲಿ ಭತ್ತದ ಸಸಿ ಹಾಕಿಕೊಂಡಿದ್ದರೆ ಮಾತ್ರ ಡಿಸೆಂಬರ್ ಮೂರನೇ ವಾರದಲ್ಲಿ ಭತ್ತ ನಾಟಿಗೆ ಅನುಕೂಲವಾಗಲಿದೆ. ಆದ್ದರಿಂದ ಅಧಿಕಾರಿಗಳು ರೈತರ ಹಿತದೃಷ್ಟಿಯಿಂದ ಕೂಡಲೇ ಐಸಿಸಿ ಸಭೆ ಕರೆಯುವುದು ಅಗತ್ಯವಾಗಿದೆ’ ಎಂದು ರಾಜ್ಯ ರೈತ ಸಂಘದ ರಾಜ್ಯ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ, ಅಯ್ಯಣ್ಣ ಹಾಲಬಾವಿ ಹಾಗೂ ಮಹಾದೇವಿ ಬೇನಾಳಮಠ, ಮಲ್ಲನಗೌಡ ನಗನೂರು ಹೇಳುತ್ತಾರೆ.

‘ಈ ಬಾರಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ತುಂಬಾ ಚೆನ್ನಾಗಿ ಬಂದಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದೇವೆ’ ಎಂದು ಗುಳಬಾಳ ಗ್ರಾಮದ ರೈತ ಸೋಮಣ್ಣ ಮೇಟಿ ಹಾಗೂ ವಜ್ಜಲ ಗ್ರಾಮದ ರೈತ ನಿಂಗನಗೌಡ ಬಸನಗೌಡ್ರ, ಶ್ರೀಶೈಲ ದೇವತಕಲ್ಲ, ಪರಮೇಶ ಗಿಂಡಿ ಮಾಹಿತಿ ನೀಡಿದರು.

ಕಳೆದ ವರ್ಷ ಹಿಂಗಾರು ಹಂಗಾಮಿಗೆ ನೀರು ಬರುವ ನಿರೀಕ್ಷೆ ಇದೆ ಎಂದು ಭತ್ತ ನಾಟಿಗಾಗಿ ಸಸಿ ಹಾಕಿಕೊಂಡಿದ್ದೆವು. ಆದರೆ ಹಿಂಗಾರು ಹಂಗಾಮಿಗೆ ಇತ್ತ ನೀರು ಬರಲಿಲ್ಲ. ಹಾಕಿದ ಸಸಿ ಒಣಗಿ ಹೋದವು. ಸಾವಿರಾರು ರೂಪಾಯಿ ನಷ್ಟವಾಯಿತು ಎಂದು ದ್ಯಾಮನಹಾಳ ಗ್ರಾಮದ ಲಕ್ಷ್ಮೀಕಾಂತ ಕುಲಕರ್ಣಿ ಹಾಗೂ ವಜ್ಜಲದ ಸತ್ಯನಾರಾಯಣ ರಡ್ಡಿ ಅಲವತ್ತುಕೊಂಡರು.

‘ಈ ಬಾರಿ ಎರಡು ಅವಧಿಗೆ ನೀರು ಹರಿಸಿದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಎರಡು ಬೆಳೆ ಇದ್ದರೆ ರೈತರ ಜೀವನಮಟ್ಟ ಸುಧಾರಿಸುವ ಜೊತೆಗೆ ಅಚ್ಚುಕಟ್ಟು ಪ್ರದೇಶದಲ್ಲಿ ಎಲ್ಲ ರೀತಿಯ ವ್ಯಾಪಾರ, ವಹಿವಾಟು ಚುರುಕುಗೊಳ್ಳಲಿದ್ದು, ಆರ್ಥಿಕತೆ ಸುಧಾರಿಸುತ್ತದೆ’ ಎಂದು ರೈತರಾದ ಬಸವರಾಜಸ್ವಾಮಿ ಸ್ಥಾವರಮಠ ಹಾಗೂ ಸಿದ್ದಲಿಂಗಯ್ಯ ಕಲ್ಲದೇವನಹಳ್ಳಿ ಹೇಳಿದರು.

ಅವಳಿ ಜಲಾಶಯಕ್ಕೆ ಒಳಹರಿವು

ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆ ಇರುತ್ತಿತ್ತು. ಆದರೆ ಅ.18ರಂದು ಆಲಮಟ್ಟಿ ಲಾಲ್ ಬಹದ್ದೂರಶಾಸ್ತ್ರಿ ಜಲಾಶಯಕ್ಕೆ 48 ಸಾವಿರ ಕ್ಯುಸೆಕ್ ಒಳ ಹರಿವು ಇದ್ದು, 42,500 ಕ್ಯುಸೆಕ್ ಹೊರಹರಿವು ಇದೆ. ಆಲಮಟ್ಟಿ ಜಲಾಶಯದಲ್ಲಿ 105 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಅದರಂತೆ ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ 32 ಟಿಎಂಸಿ ಅಡಿ ನೀರು ಸಂಗ್ರಹವಿದೆ’ ಎಂದು ಅಣೆಕಟ್ಟೆ ಮೂಲಗಳು ತಿಳಿಸಿವೆ.

ರೈತರ ಹಿತದೃಷ್ಟಿಯಿಂದ ಸಭೆ ಕರೆಯುವಂತೆ ಈಗಾಗಲೇ ಸಚಿವರಿಗೂ ಹಾಗೂ ಕೆಬಿಜೆಎನ್ಎಲ್ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರವೇ ಸಭೆ ಕರೆದು ರೈತರ ನೆರವಿಗೆ ಬರಲಾಗುವುದು.
ರಾಜಾ ವೇಣುಗೋಪಾಲನಾಯಕ, ಸುರಪುರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.