ADVERTISEMENT

₹12 ಕೋಟಿ ವೆಚ್ಚದ ಸರ್ಕಾರಿ ಮಾದರಿ ಪದವಿ ಕಾಲೇಜು ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 16:24 IST
Last Updated 14 ಅಕ್ಟೋಬರ್ 2024, 16:24 IST
ಶಹಾಪುರ ನಗರದ ಹೊರವಲಯದ ನೂತನವಾಗಿ ನಿರ್ಮಿಸಿದ ₹12ಕೋಟಿ ವೆಚ್ಚದ ಸರ್ಕಾರಿ ಮಾದರಿ ಪದವಿ ಕಾಲೇಜಿನ ಶೈಕ್ಷಣಿಕ ಹಾಗೂ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು
ಶಹಾಪುರ ನಗರದ ಹೊರವಲಯದ ನೂತನವಾಗಿ ನಿರ್ಮಿಸಿದ ₹12ಕೋಟಿ ವೆಚ್ಚದ ಸರ್ಕಾರಿ ಮಾದರಿ ಪದವಿ ಕಾಲೇಜಿನ ಶೈಕ್ಷಣಿಕ ಹಾಗೂ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು   

ಶಹಾಪುರ: ಶೈಕ್ಷಣಿಕ ಚಟುವಟಿಕೆಗಳಿಗಾಗಿ ನಗರದ ಹೊರವಲಯದಲ್ಲಿ 88.1ಗುಂಟೆ ಜಮೀನು ಮೀಸಲಿಟ್ಟಿದೆ. ಈಗ ₹12 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಆಶ್ರಯದಲ್ಲಿ ಸರ್ಕಾರಿ ಮಾದರಿ ಪದವಿ ಕಾಲೇಜು ಕಟ್ಟಡ ನಿರ್ಮಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಹೊರವಲಯದ ದಿಗ್ಗಿ ಮಾರ್ಗದ ಸರ್ಕಾರಿ ಪ್ರಥಮ ಕಾಲೇಜು ಹೊಂದಿಕೊಂಡಂತೆ ಮಹತ್ವಕಾಂಕ್ಷೆ ಜಿಲ್ಲೆ ಯೋಜನೆ ನೆರವಿನಿಂದ ಕೇಂದ್ರ ಸರ್ಕಾರದ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ರಾಷ್ಟ್ರೀಯ ಉಚ್ಚತನ ಶಿಕ್ಷಾ ಅಭಿಯಾನ(ರೂಸಾ) ಅನುದಾನದ ಅಡಿಯಲ್ಲಿ ₹12ಕೋಟಿ ವೆಚ್ಚದಲ್ಲಿ ಸರ್ಕಾರಿ ಮಾದರಿ ಪದವಿ ಕಾಲೇಜಿನ ಶೈಕ್ಷಣಿಕ ಹಾಗೂ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

’ಕಾಲೇಜಿನಲ್ಲಿ ಉಪನ್ಯಾಸಕರ ಮತ್ತು ಸಿಬ್ಬಂದಿ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತೇನೆ. ಕಾಲೇಜಿಗೆ ಕುಡಿಯುವ ನೀರು, ಉದ್ಯಾನವನ ಸೇರಿದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬೇಕಾದ ಎಲ್ಲಾ ಅಗತ್ಯ ಸೌಲಭ್ಯ ಒದಗಿಸಿ ಕೊಡಲಾಗುವುದು. ವಿದ್ಯಾರ್ಥಿಗಳು ಒಳ್ಳೆಯ ವ್ಯಾಸಂಗ ಪಡೆದು ಕಾಲೇಜಿಗೆ ಉಪನ್ಯಾಸಕರಿಗೆ ಮತ್ತು ಪಾಲಕರಿಗೆ ಒಳ್ಳೆಯ ಹೆಸರು ತರಬೇಕು’ ಎಂದರು.

ADVERTISEMENT

ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಾದ ಕ್ರೀಡಾ ಸಾಮಗ್ರಿ, ಆಟದ ಮೈದಾನ ಹೀಗೆ ಹಲವಾರು ರಚನಾತ್ಮಕ ಸೌಲಭ್ಯ ಒದಗಿಸುವೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾವಹಿಸುವುದರಿಂದ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು.

ಯಾದಗಿರಿ ಲೀಡ್ ಕಾಲೇಜೀನ ಪ್ರಾಚಾರ್ಯ ಸುಭಾಷಚಂದ್ರ ಕೌಲಗಿ ಮಾತನಾಡಿ, ಪ್ರತಿ ಜಿಲ್ಲೆಗೆ ಒಂದರಂತೆ ವಿಶ್ವ ವಿದ್ಯಾಲಯ ಸ್ಥಾಪಿಸಬೇಕು ಎಂಬ ನಿಯಮ ಇದೆ. ಅದರಂತೆ ಯಾದಗಿರಿಗೆ ವಿಶ್ವ ವಿದ್ಯಾಲಯ ಸ್ಥಾಪಿಸಲು ಸಚಿವರು ಶ್ರಮಿಸಬೇಕು ಎಂದರು.

ಜಂಟಿ ನಿರ್ದೇಶಕ ಗೊಳ್ಳೆ ಶಿವಶರಣ, ಕಾಲೇಜಿನ ಪ್ರಾಚಾರ್ಯರಾದ ಶರಣಬಸಪ್ಪ.ಎಸ್.ದೇಸಾಯಿ, ಎಸ್.ಎಸ್. ರಾಂಪುರೆ, ಗುತ್ತಿಗೆದಾರರಾದ ಗೊಲಯ್ಯ.ಸಿ.ಹಿರೇಮಠ, ಶ್ರೀಶೈಲ, ವಿರೇಶ ಮದ್ರ ಭಾಗವಹಿಸಿದ್ದರು.

ಆರು ವರ್ಷದ ನಂತರ ಉದ್ಘಾಟನೆ ಭಾಗ್ಯ: 2018 ಜುಲೈ 2ರಂದು ಕಟ್ಟಡ ಕಾಮಗಾರಿ ಆರಂಭಗೊಂಡು ಕುಂಟುತ್ತಾ ಸಾಗಿ ಆರು ವರ್ಷದ ಬಳಿಕ ಕಟ್ಟಡ ಉದ್ಘಾಟನೆಗೊಂಡಿದೆ. ಆದರೆ, ಕಾಲೇಜಿಗೆ ಅಗತ್ಯವಾದ ಮೂಲ ಸೌಲಭ್ಯಗಳಾದ ರಸ್ತೆ, ಕಂಪೌಂಡ, ವಸತಿನಿಯಯ ಹೀಗೆ ಹಲವಾರು ಸಮಸ್ಯೆಗಳನ್ನು ಒಡಲಿನಲ್ಲಿ ತುಂಬಿಕೊಂಡು ಉದ್ಘಾಟನೆಗೊಂಡಿದೆ ಎನ್ನುತ್ತಾರೆ ಉಪನ್ಯಾಸಕರು.

ಶೈಕ್ಷಣಿಕ ಉನ್ನತಿಗಾಗಿ ಹೆಚ್ಚಿನ ಅನುದಾನ ನೀಡುವುದರ ಜತೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವೆ. ವಿದ್ಯಾರ್ಥಿಗಳು ಪಾಲಕರ ಕನಸ್ಸು ನನಸ್ಸು ಮಾಡುವ ಜವಾಬ್ದಾರಿ ಇದೆ.
–ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.