ADVERTISEMENT

ಕಕ್ಕೇರಾ | ಇದು ರೈಲಲ್ಲ; ಸರ್ಕಾರಿ ಶಾಲೆ

ಮಹಾಂತೇಶ ಸಿ.ಹೊಗರಿ
Published 15 ಜುಲೈ 2024, 5:59 IST
Last Updated 15 ಜುಲೈ 2024, 5:59 IST
ಕಕ್ಕೇರಾ ಸಮೀಪದ ಗೋಡಿಹಾಳ (ಟಿ) ರೈಲು ಮಾದರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಕಕ್ಕೇರಾ ಸಮೀಪದ ಗೋಡಿಹಾಳ (ಟಿ) ರೈಲು ಮಾದರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ    

ಕಕ್ಕೇರಾ: ಸಮೀಪದ ಗೋಡಿಹಾಳದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚುಕು ಬುಕು ರೈಲಿನ ಬೋಗಿ ರೀತಿಯಲ್ಲಿ ಕಂಗೊಳಿಸುತ್ತಿದ್ದು, ಮುಖ್ಯ ರಸ್ತೆಯಲ್ಲಿರುವ ಶಾಲೆ ನೋಡುಗರ ಕಣ್ಣು ಸೆಳೆಯುತ್ತಿದೆ.

ಸುಸಜ್ಜಿತ ಶಾಲಾ ಕೊಠಡಿಗಳು, ಕುಡಿಯುವ ನೀರು, ಆಟದ ಮೈದಾನ ಹೀಗೆ ಎಲ್ಲ ಸೌಲಭ್ಯಗಳಿವೆ ಎಂದು ವಿದ್ಯಾರ್ಥಿಗಳ ಪೋಷಕರು ಹರ್ಷ ವ್ಯಕ್ತಪಡಿಸುತ್ತಾರೆ.

ಶಾಲೆಯಲ್ಲಿ ಶಿಕ್ಷಕರಾದ ಅಶೋಕ, ಶ್ರೀನಿವಾಸ, ವೆಂಕಟೇಶ, ಕಾಶಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ. ಅತಿಥಿ ಶಿಕ್ಷಕರೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಎಸ್‌ಡಿಎಂಸಿ ಸಹಕಾರದಿಂದ ಶಾಲಾ ಅಭಿವೃದ್ಧಿ ಸಾಧ್ಯವಾಗಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಸಹಕರಿಸಬೇಕು ಎಂದು ಮುಖ್ಯಶಿಕ್ಷಕ ಗುರುನಾಥ ರಾಠೋಡ ಪತ್ರಿಕೆಗೆ ತಿಳಿಸಿದರು.

ADVERTISEMENT

ಶಾಲೆಯ ಉತ್ತಮ ವಾತಾವರಣ  ವಿದ್ಯಾರ್ಥಿಗಳಿಗೆ ಓದಲು ಪ್ರೇರಣೆಯಾಗಲಿದ್ದು, ಮೊರಾರ್ಜಿ ವಸತಿ ಶಾಲೆ, ನವೋದಯಕ್ಕೆ ಇಲ್ಲಿನ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಇಂಗ್ಲಿಷ್‌ ಕಲಿಕೆಗೆ ಹೆಚ್ಚಿನ ಒತ್ತು ನೀಡಿದ್ದು, ಎಸ್‌ಡಿಎಂಸಿ, ಗ್ರಾಮಸ್ಥರ ಸಹಕಾರದಿಂದ ಸಾಧನೆ ಸಾಧ್ಯವಾಗಿದೆ. ಗ್ರಾಮಸ್ಥರು ಶಾಲೆಗೆ 12 ಕುರ್ಚಿ, 100 ಊಟದ ತಟ್ಟೆ, ತಿಜೋರಿ ಸಹ ಕೊಡಿಸಿದ್ದಾರೆ ಎಂದು ಶಿಕ್ಷಕರು ಹೇಳಿದರು.

ಶಾಲೆಯಲ್ಲಿ ಮೂವರು ಕಾಯಂ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೊದಲು ಶಾಲೆಗೆ 30 ವಿದ್ಯಾರ್ಥಿಗಳು ಬರುತ್ತಿದ್ದರು. ಪ್ರಸ್ತುತ 119 ಇದೆ. ಖಾಸಗಿ ಶಾಲೆಗಳನ್ನು ತೊರೆದು ಸರ್ಕಾರಿ ಶಾಲೆಯತ್ತ ಮಕ್ಕಳು ಬರುತ್ತಿದ್ದಾರೆ. ಪ್ರತಿ ಶನಿವಾರ ಶಾಲೆ ಬಿಟ್ಟ ಹಾಗೂ ಕಲಿಕೆಯಿಂದ ದೂರವಿರುವ ವಿದ್ಯಾರ್ಥಿಗಳನ್ನು ಕರೆ ತಂದು ವಿದ್ಯಾಭ್ಯಾಸದ ಕಡೆಗೆ ಒಲಿಸುವ ಪ್ರಯತ್ನ ನಿರಂತರ ಸಾಗಿದೆ’ ಎಂದು ಶಿಕ್ಷಕರು ತಿಳಿಸಿದರು.

ಮುಖ್ಯಶಿಕ್ಷಕ ಗುರುನಾಥ ರಾಠೋಡ ಬಂದಾಗ ಶಿಥಿಲ ವ್ಯವಸ್ಥೆಯಲ್ಲಿ 3 ಕೊಠಡಿಗಳಿದ್ದವು. ಬಹು ದಿನಗಳಿಂದ ಬಣ್ಣಕಾಣದ ಶಾಲೆಗೆ ಗ್ರಾಮಸ್ಥರ ಸಹಾಯ ಪಡೆದು ಬಣ್ಣ ಮಾಡಿಸಿದ್ದಾರೆ. ಈ ಕಾರ್ಯಕ್ಕೆ ಗ್ರಾಮದ ತಿರುಪತಿ ಹವಾಲ್ದಾರ್, ರಾಮಣ್ಣಗೌಡ ಪಾಟೀಲ್, ಭೀಮನಗೌಡ ಪಾಟೀಲ್, ಮಲ್ಲಣ್ಣಗೌಡ ಪಾಟೀಲ್, ಕಾಸಿಂಸಾಬ, ವೆಂಕಟೇಶ ಹವಾಲ್ದಾರ್, ದೇವು, ರವಿಪಾಟೀಲ್, ನಂದಪ್ಪ ಸೇರಿದಂತೆ  ಅನೇಕ ಶಿಕ್ಷಣಪ್ರೇಮಿಗಳು ನೆರವು ನೀಡಿದರು ಎಂದು ಸ್ಮರಿಸಿದರು.

‘ಶಾಲೆಯಲ್ಲಿ ಆಟದ ಮೈದಾನ, ಮರಮ್, ಶೌಚಾಲಯ ಸಮಸ್ಯೆಯಿದ್ದು, ಆಗಸ್ಟ್‌ 15ರೊಳಗೆ ಎರಡು ಕೆಲಸಗಳನ್ನು ಮಾಡಲಾಗುವುದು’ ಎಂದು ದೇವತ್ಕಲ್ ಪಿಡಿಒ ಹೇಳಿದ್ದು, ಆಗಸ್ಟ್‌ 15ರಂದು 50 ಗಿಡಗಳನ್ನು ನೆಡಲಾಗುವುದು ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಕೈಯಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲವಿದೆ. ಸರ್ವರ ಸಹಕಾರಕ್ಕೆ ಚಿರರುಣಿ. ಮಾದರಿ ಶಾಲೆಗಾಗಿ ಪ್ರಯತ್ನಿಸುತ್ತೇವೆ
ಗುರುನಾಥ ರಾಠೋಡ ಮುಖ್ಯಶಿಕ್ಷಕ
ಗೋಡಿಹಾಳ ಸರ್ಕಾರಿ ಶಾಲೆ ವಾತವರಣ ಉತ್ತಮವಾಗಿದ್ದು ಸ್ಥಳೀಯರ ಸಹಕಾರದಿಂದ ಶಿಕ್ಷಣಕ್ಕೆ ಉತ್ತಮ ಸೇವೆ ನೀಡಲಾಗುತ್ತಿದೆ. ತಾಲ್ಲೂಕಿಗೆ ಮಾದರಿ ಶಾಲೆಯಾಗಲಿದೆ
ಕಾಂತೇಶ ಹಲಗಿಮನಿ ಬಿಆರ್‌ಸಿ
ಮುಖ್ಯ ಶಿಕ್ಷಕ ಗುರು ರಾಠೋಡ ಬಂದ ಮೇಲೆ ಗುಣಮಟ್ಟ ಹೆಚ್ಚುತ್ತಿದ್ದು ಕಲಿಕೆಯತ್ತ ಮಕ್ಕಳು ಆಕರ್ಷಿತರಾಗುತ್ತಿದ್ದಾರೆ. ಗ್ರಾಮಸ್ಥರ ಸಂಪೂರ್ಣ ಬೆಂಬಲವಿದೆ
ಮುದ್ದಣ್ಣ ಸಾಹುಕಾರ ಕಮತಗಿ ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.