ADVERTISEMENT

‘ರೈತರ ಹಿತ ಮರೆತ ಸರ್ಕಾರಗಳಿಗೆ ಉಳಿಗಾಲವಿಲ್ಲ’

ಮಾರುತಿ ದೇವಸ್ಥಾನದ ಆವರಣದಲ್ಲಿ ಸಿಪಿಐ(ಎಂ)ನ 4ನೇ ಜಿಲ್ಲಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 15:46 IST
Last Updated 5 ನವೆಂಬರ್ 2024, 15:46 IST
ಶಹಾಪುರ ನಗರದ ಮಾರುತಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸಿಪಿಐ(ಎಂ)ನ 4ನೇ ಜಿಲ್ಲಾ ಸಮ್ಮೇಳನದಲ್ಲಿ ಸಿಪಿಐ(ಎಂ) ಮುಖಂಡರಾದ ನೀಲಾ.ಕೆ ಮಾತನಾಡಿದರು
ಶಹಾಪುರ ನಗರದ ಮಾರುತಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸಿಪಿಐ(ಎಂ)ನ 4ನೇ ಜಿಲ್ಲಾ ಸಮ್ಮೇಳನದಲ್ಲಿ ಸಿಪಿಐ(ಎಂ) ಮುಖಂಡರಾದ ನೀಲಾ.ಕೆ ಮಾತನಾಡಿದರು   

ಶಹಾಪುರ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತಾಸಕ್ತಿಗಳನ್ನು ಕಡೆಗಣಿಸುತ್ತಿವೆ. ರೈತರು ಬೆಳೆದ ಬೆಳೆಗಳಿಗೆ ರಾಜ್ಯ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡದಿರುವುದು ವಿಷಾದ ಸಂಗತಿ. ರೈತರು ಸಂಘಟನಾತ್ಮಕ ಹೋರಾಟಕ್ಕೆ ಮುಂದಾಗಬೇಕು. ರೈತರನ್ನು ಮರೆತ ಸರ್ಕಾರಗಳಿಗ ಉಳಿಗಾಲವಿಲ್ಲ’ ಎಂದು ಸಿಪಿಐ (ಎಂ)ಪಕ್ಷದ ರಾಜ್ಯ ಸಮಿತಿಯ ಕಾರ್ಯದರ್ಶಿ ಮಂಡಳಿಯ ಸದಸ್ಯೆ ನೀಲಾ ಕೆ. ಆಕ್ರೋಶ ಹೊರ ಹಾಕಿದರು.

ನಗರದ ಮಾರುತಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸಿಪಿಐ(ಎಂ)ನ 4ನೇ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ದೇಶದ ಅಭಿವೃದ್ಧಿಯಲ್ಲಿ ಶೇ 70ರಷ್ಟು ರೈತರು ಹಗಲಿರುಳು ದುಡಿದು ದೇಶಕ್ಕೆ ಅನ್ನ ಹಾಕುತ್ತಿದ್ದಾರೆ. ಋಣಮುಕ್ತ ಕಾಯ್ದೆ ಜಾರಿ ಮಾಡಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಎಲ್ಲ ಬಡವರಿಗೆ ಆಶ್ರಯ ಮನೆಗಳನ್ನು ಮಂಜೂರು ಮಾಡಬೇಕು. ಅಂಗನವಾಡಿ ಕಾರ್ಯಕರ್ತರ, ಗ್ರಾಮ ಪಂಚಾಯಿತಿ ನೌಕರರಿಗೆ ಬಿಸಿಯೂಟ ಕಾರ್ಯಕರ್ತರಿಗೆ ಕನಿಷ್ಠ ವೇತನ ₹30 ಸಾವಿರ ಜಾರಿ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಚೆನ್ನಪ್ಪ ಆನೆಗುಂದಿ ಮಾತನಾಡಿ,‘ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಹೆಚ್ಚು ಕಾಳಜಿ ವಹಿಸಬೇಕು, ಕೃಷಿಕೂಲಿಕಾರರ ವಲಸೆ ತಡೆದು ನರೇಗಾ ಸಮರ್ಪಕ ಜಾರಿಯಾಗಬೇಕು. ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಯುವಕರಿಗೆ ಉದ್ಯೋಗ ನೀಡಬೇಕು. ಹಲವಾರು ವರ್ಷದಿಂದ ನನೆಗುದಿಗೆ ಬಿದ್ದಿರುವ ಶಹಾಪುರ ಕಂದಾಯ ಉಪವಿಭಾಗ ಕಚೇರಿ ಸ್ಥಾಪಿಸಬೇಕು. ಎಪಿಎಂಸಿಯಲ್ಲಿ ಮೆಣಸಿನಕಾಯಿ ಶೈತ್ಯಾಗಾರ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮೊದಲು ನಗರದ ಚರಬಸವೇಶ್ವರ ಕಮಾನ್‌ನಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತು.

ಸಿಪಿಐ(ಎಂ) ರಾಜ್ಯ ಸಮಿತಿ ಮುಖಂಡ ಚಂದ್ರಪ್ಪ ಹೊಸಕೇರಿ, ಎಸ್.ಎಂ. ಸಾಗರ, ದಾವಲಸಾಬ ನದಾಫ್, ಜೈಲಾಲ್ ತೋಟದಮನಿ, ಧರ್ಮಣ್ಣ ದೊರಿ, ಭೀಮರಾಯ ತಿಪ್ಪನಹಳ್ಳಿ, ಬಸಲಿಂಗಮ್ಮ ನಾಟೇಕಾರ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.

ಶಹಾಪುರದ ನಗರದ ಚರಬಸವೇಶ್ವರ ಕಮಾನ್ನಿಂದ ಬಸವೇಶ್ವರ ವೃತ್ತದ ವರೆಗೆ ಸಿಪಿಐ(ಎಂ) ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.