ಯಾದಗಿರಿ: ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳೂ ₹2,000 ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ಜಿಲ್ಲೆಯ ಸಾವಿರಾರು ಜನರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಆಗದ ಕಾರಣ ಹಣ ಬಂದಿಲ್ಲ. ಇದರಿಂದ ಫಲಾನುಭವಿಗಳು ಬ್ಯಾಂಕ್, ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.
ಜಿಲ್ಲೆಯಲ್ಲಿ 2.87 ಲಕ್ಷ ಫಲಾನುಭವಿಗಳಿದ್ದು, ಆಗಸ್ಟ್ ತಿಂಗಳ ಹಣ ಮಾತ್ರ ಸಂದಾಯವಾಗಿದೆ. ಸೆಪ್ಟೆಂಬರ್ ತಿಂಗಳ ಹಣ ಇನ್ನೂ ಬಂದಿಲ್ಲ. ಕಚೇರಿಗಳಲ್ಲಿ ಮಹಿಳೆಯರು ಹಣ ಬಂದಿಲ್ಲದ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ.
‘ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಣಿಯಾದ ಫಲಾನುಭವಿಗಳಿಗೆ ಈಗಾಗಲೇ ಆಗಸ್ಟ್ ತಿಂಗಳ ₹2,000 ಸಹಾಯಧನ ಪಾವತಿಸಲಾಗಿದೆ’ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಹಿತಿಯಾಗಿದೆ.
ಎಲ್ಲ ಮಹಿಳೆಯರಿಗೆ ಹಣ ಸಂದಾಯವಾಗಿಲ್ಲ. ಹಲವರಿಗೆ ಹಣ ಜಮಾ ಆಗಿರುವ ಬಗ್ಗೆ ಸಂದೇಶ ಬಂದಿದ್ದು, ಆದರೆ, ಖಾತೆಯಲ್ಲಿ ಮಾತ್ರ ಜಮಾ ಆಗಿಲ್ಲ.
12 ಸಾವಿರ ಫಲಾನುಭವಿಗಳು ಪರದಾಟ: ಜಿಲ್ಲೆಯಲ್ಲಿ 12,789 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಸಿಡಿಂಗ್ ಆಗದೇ ಇರುವ ಕಾರಣ ಗೃಹಲಕ್ಷ್ಮಿ ಯೋಜನೆಯ ₹2,000 ಸಹಾಯಧನ ಪಾವತಿಯಾಗಿಲ್ಲ.
‘ಅರ್ಜಿ ಸಲ್ಲಿಸುವಾಗಲೇ ಎಲ್ಲ ದಾಖಲೆಗಳನ್ನು ಕೊಡಲಾಗಿದೆ. ಆಧಾರ್ ಸಿಡಿಂಗ್ ಮಾಡಿಸಲಾಗಿದೆ. ಆದರೆ, ಹಣ ಬಂದಿಲ್ಲ. ಮತ್ತೊಮ್ಮೆ ಆಧಾರ್ ಜೋಡಣೆ ಮಾಡಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಬ್ಯಾಂಕ್, ಕಚೇರಿಗಳಿಗೆ ಅಲೆದಾಡುವಂತಾಗಿದೆ’ ಎನ್ನುತ್ತಾರೆ ಗೃಹಿಣಿ ಲಲಿತಾ.
‘ಮೊದಲು ತಿಂಗಳು ಮಾತ್ರ ಹಣ ಬಂದಿದೆ. ಎರಡನೇ ತಿಂಗಳಿಗೆ ಇನ್ನೂ ಜಮಾ ಆಗಿಲ್ಲ. ಪ್ರತಿ ತಿಂಗಳು ಹಣ ಬರುತ್ತದೆ ಎಂದು ಸರ್ಕಾರವರು ಹೇಳಿದ್ದರು. ಆದರೆ, ಇನ್ನೂ ಹಣ ಜಮಾ ಆಗಿಲ್ಲ’ ಎನ್ನುತ್ತಾರೆ ನಗರ ನಿವಾಸಿಗಳಾದ ರಶ್ಮಿ, ಲಕ್ಷ್ಮೀ ಗುತ್ತೇದಾರ.
‘ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡ ಸಹಾಯಧನ ಪಡೆಯದ ಇರುವ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಸಲ್ಲಿಸಿದ ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆ ಜೋಡಣೆ ಮಾಡಿಸಿದ ಮಾಹಿತಿಯನ್ನು ತಮ್ಮ ಸಮೀಪದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಒದಗಿಸಿದಲ್ಲಿ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಪಾವತಿಸಲು ಕ್ರಮ ವಹಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಸೂಚನೆಯನ್ನು ನೀಡಿದ್ದಾರೆ.
ಪ್ರತಿದಿನವೂ ಗೃಹಲಕ್ಷ್ಮಿ ಯೋಜನೆಗೆ ಅಪ್ಡೇಡ್ ಮಾಡಲಾಗುತ್ತಿದೆ. ಸೆಪ್ಟೆಂಬರ್ ಬಜೆಟ್ ಬಂದಿದೆ. ಆದರೆ, ಎಷ್ಟು ಫಲಾನುಭವಿಗಳು ಎಂದು ರಾಜ್ಯದಿಂದ ಸೂಚನೆ ಬರಬೇಕಿದೆ. ಆದರೆ, ಯಜಮಾನಿಗೆ ಹಣ ಜಮಾ ಆಗಿರುವ ಮಾಹಿತಿ ಬರುತ್ತದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಶೇ 86ರಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆಧಾರ್ ಕಾರ್ಡ್ ಜೋಡಣೆ ಶೇ 47ರಷ್ಟಾಗಿದೆ. ಸಿಡಿಂಗ್ ಮಾಡದವರಿಗೆ ಕರೆ ಮಾಡಿ ಮಾಹಿತಿ ತಿಳಿಸಲಾಗುತ್ತಿದೆ–ವೀರಣ್ಣಗೌಡ, ಉಪ ನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಮೊದಲ ತಿಂಗಳಲ್ಲಿ ಗೃಹಲಕ್ಷ್ಮಿ ಹಣ ಬೇಗ ಬಂದಿತ್ತು. ಆದರೆ ಎರಡನೇ ತಿಂಗಳ ಹಣ ಇಲ್ಲಿಯವರಿಗೂ ಬಂದಿಲ್ಲ. ಹಣ ಉಪಯೋಗಕ್ಕೆ ಬಂದಿದೆ. ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಹಣ ಜಮಾ ಮಾಡಬೇಕು-ಸಂಗೀತಾ ಸ್ವಾಮಿ, ಕಕ್ಕೇರಾ ಗೃಹಿಣಿ
ನಮ್ಮಂತ ದುಡಿದು ಬದುಕುವರಿಗೆ ಗೃಹಲಕ್ಷ್ಮಿ ಹಣ ಆಸರೆಯಾಗಿದೆ. ಆದರೆ ಹಣ ಇನ್ನೂ ಬಂದಿಲ್ಲ. ಸೇವಾ ಕೇಂದ್ರದಲ್ಲಿ ಕೇಳಿದರೆ ಇನ್ನೂ ಜಮಾ ಆಗಿಲ್ಲ. ಬರುತ್ತದೆ ಎಂದು ಹೇಳುತ್ತಾರೆ. ಯಾವಾಗ ಬರುತ್ತದೆ ಎನ್ನುವುದು ತಿಳಿದಿಲ್ಲ-ಶಾಂತಮ್ಮ ಮಡ್ಡಿ ಕಕ್ಕೇರಾ ಗೃಹಿಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.