ಗುರುಮಠಕಲ್: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.
‘ಹೆಸರು ಬಿಡಿಸುವ ಕೆಲಸ ಅರ್ಧವಾಗಿತ್ತು. ಮಳೆ ಬಾರದಿದ್ದರೆ ಸಂಪೂರ್ಣ ಬಿಡಿಸಿ ರಾಶಿ ಮಾಡಬಹುದಿತ್ತು. ಆದರೆ, ಈಗ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಮೀನಿಗೆ ನುಗ್ಗಿದ ನೀರು ಬಸಿದ ನಂತರವೇ ಕೆಲಸ ಮುಂದುವರಿಸಲು ಸಾಧ್ಯ. ಮಳೆಯಿಂದಾಗಿ ಕನಿಷ್ಟ ಒಂದು ವಾರ ಕೆಲಸಕ್ಕೆ ಹಿನ್ನಡೆಯಾಗುತ್ತಿದೆ’ ಎಂದು ಕೃಷಿಕರು ವಿವರಿಸಿದರು.
ಜತೆಗೆ ಹತ್ತಿ ಮತ್ತು ತೊಗರಿ ಬೆಳೆಗಳಿಗೂ ತೊಂದರೆಯಾಗುವ ಭೀತಿ ಎದುರಾಗಿದ್ದು, ಹತ್ತಿ ಕಾಯಿಗಳು ಒಡೆಯಬಹುದು ಮತ್ತು ಎಲೆ ಕೆಂಬಣ್ಣಕ್ಕೆ ತಿರುಗುವ ಸಾಧ್ಯತೆಯಿದೆ. ಮಳೆ ಹೆಚ್ಚಾದರೆ ತೊಗರಿ ಬೆಳೆಯೂ ನಾಶವಾಗಲಿದೆ. ಮಸಾರಿ ಮಣ್ಣಿನ ಜಮೀನಿನಲ್ಲಿ ಸಮಸ್ಯೆಯಿಲ್ಲ. ಆದರೆ, ರೇಗಡಿ ಮಣ್ಣಿದ್ದರೆ ಬೇರು ಕೊಳೆಯಬಹುದು ಎಂದು ಹಿರಿಯ ರೈತರು ವಿವರಿಸಿದರು.
ನೀರಿನ ಮಟ್ಟ ಹೆಚ್ಚಳ: ಶುಕ್ರವಾರ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ತಾಲ್ಲೂಕಿನ ಕಾಕಲವಾರ, ಚಂಡ್ರಿಕಿ ಗ್ರಾಮಗಳ ಕೆರೆಗಳು ತುಂಬಿದ್ದು, ಉಳಿದಂತೆ ಕೆರೆಗಳಲ್ಲಿನ ನೀರಿನ ಮಟ್ಟದಲ್ಲಿ ಭಾರೀ ಹೆಚ್ಚಳವಾಗಿದೆ. ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಭಾನುವಾರ ಸಂಜೆಯವರೆಗೂ ಮಳೆ ಹನಿಸಿದೆ. ಇದು ಇನ್ನೆರಡು ದಿನ ಮುಂದುವರಿದರೆ ತಾಲ್ಲೂಕಿನ ಎಲ್ಲ ಕೆರೆಗಳೂ ಭರ್ತಿಯಾಗಲಿವೆ.
ಬಿಸಿಬಿಸಿ ತಿಂಡಿಗೆ ಬೇಡಿಕೆ: ಸತತ ಮಳೆಯಿಂದಾಗಿ ವಾತಾವರಣದಲ್ಲಿ ಶೀತಗಾಳಿ ಹೆಚ್ಚಿದ್ದು, ಮಳೆ ಮತ್ತು ಶೀತದ ವೇಳೆ ಬಿಸಿಬಿಸಿ ಬಜ್ಜಿ, ಸಮೋಸ ಸೇರಿದಂತೆ ಕುರುಚಲು ತಿಂಡಿಗೆ ಬೇಡಿಕೆ ಹೆಚ್ಚಿದೆ.
ಮಳೆ ಸುರಿಯುವಾಗ ನಡುವೆ ಸಿಗುವ ಅಲ್ಪ ಸಮಯದ ಬಿಡುವಿನ ವೇಳೆ ಜನರು ಕುರುಚಲು ತಿಂಡಿ ಸವಿಯಲು ಹೋಟೆಲ್‌ಗಳತ್ತ ಧಾವಿಸುತ್ತಿದ್ದರು.
ಸತತ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಎರಡೂ ದಿನ ಸುರಿದ ಮಳೆಯಿಂದಾಗಿ ಜಮೀನುಗಳಿಗೆ ನುಗ್ಗಿದ ನೀರು ಬಸಿಯಲು ಕನಿಷ್ಟ ಐದು ದಿನ ಬೇಕಾಗಬಹುದು
–ಡಿ.ವಿ.ಪ್ರಸಾದ ಯುವ ಕೃಷಿಕ
ನಾವು ಇದೇ ಮೊದಲು ಇಲ್ಲಿಗೆ ಬಂದದ್ದು. ಈ ಮೊದಲು ಪತ್ರಿಕೆ ವಾಹಿನಿ ಮತ್ತು ಸ್ನೇಹಿತರಿಂದ ಜಲಪಾತದ ಬಗ್ಗೆ ಕೇಳಿದ್ದೆವು. ಆದರೆ ಕೇಳಿದ್ದಕ್ಕಿಂತಲೂ ಇಲ್ಲಿ ಇನ್ನೂ ಸುಂದರವಾಗಿದೆ
- ಮುಜಾಫರ್ ಬಶೀರಾಬಾದ್ ತೆಲಂಗಾಣದ ಪ್ರವಾಸಿಗ
ನೆರೆ ಜಿಲ್ಲೆ ಮತ್ತು ರಾಜ್ಯಗಳ ಪ್ರವಾಸಿಗರನ್ನು ಧಬ್ ಧಬಿ ಆಕರ್ಷಿಸುತ್ತಿದೆ. ಆದ್ದರಿಂದ ಸಂಬಂಧಿತ ಇಲಾಖೆಗಳು ಸಮನ್ವಯತೆಯಲ್ಲಿ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸಲಿ ಮತ್ತು ಪ್ರವಾಸಿಗರ ಸುರಕ್ಷತೆಗೆ ಕ್ರಮವಹಿಸಲಿ
– ಲಕ್ಷ್ಮಣ ಕುಂಬಾರ ಸ್ಥಳೀಯರು
ಧಬ್ ಧಬಿಯತ್ತ ಪ್ರವಾಸಿಗರು
ಸತತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿರದ ನಜರಾಪುರ ಗ್ರಾಮದ ಹೊರವಲಯದ ಧಬ್ ದಬಿ ಜಲಪಾತದಲ್ಲಿ ನೀರಿನ ಪ್ರವಾಹದಲ್ಲಿ ಭಾರಿ ಹೆಚ್ಚಳವಾಗಿದ್ದು ಭಾನುವಾರ ಜಲಪಾತಕ್ಕೆ ಬರುವ ಪ್ರವಾಸಿಗರ ಪ್ರವಾಹವೂ ಹೆಚ್ಚಳವಾಗಿದೆ. ಜಲಪಾತಕ್ಕೆ ಬರುತ್ತಿದ್ದ ಪ್ರವಾಸಿಗರು ಸಾವನ್ನಪ್ಪುತ್ತಿದ್ದ ಘಟನೆಗಳು ಕಳೆದ ಕೆಲ ವರ್ಷಗಳಿಂದ ಮರುಕಳಿಸುತ್ತಿದ್ದವು. ಆದ್ದರಿಂದಾಗಿ ಜಲಪಾತದ ಸುತ್ತಲೂ ತಂತಿ ಬೇಲಿ ಅಳವಿಡಿಸಲಾಗಿದೆ. ಆದರೆ ಭಾನುವಾರ ಬೇಲಿಯನ್ನು ದಾಟಿ ಜಲಪಾತದತ್ತ ನುಗ್ಗಿ ಫೊಟೋ ಮತ್ತು ಸೆಲ್ಫಿಗೆ ಮುಗಿ ಬೀಳುತ್ತಿದ್ದ ಜನರನ್ನು ನಿಯಂತ್ರಿಸಲು ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಹರ ಸಾಹಸ ಪಡುವ ದೃಶ್ಯ ಕಂಡು ಬಂದಿತು.
ಮಕ್ಕಳು, ವೃದ್ಧರ ಕುರಿತು ಎಚ್ಚರವಹಿಸಿ
ಸತತ ಮಳೆಯಿಂದಾಗಿ ವಾತಾವರಣದಲ್ಲಿ ಶೀತ ಗಾಳಿ ಹೆಚ್ಚಿದೆ. ಇದರಿಂದಾಗಿ ಶೀತ ಕೆಮ್ಮು ಜ್ವರ ಮತ್ತು ವೈರಲ್ ಫೀವರ್ ಹೆಚ್ಚುವ ಸಾಧ್ಯತೆ ಇದೆ. ಮಕ್ಕಳು ಮತ್ತು ವೃದ್ಧರಲ್ಲಿ ಪ್ರತಿರೋಧಕ ಶಕ್ತಿ ಕಡಿಮೆಯಿರುವ ಕಾರಣ ಅವರ ಕುರಿತು ಹೆಚ್ಚು ಕಾಳಜಿ ಅವಶ್ಯ ಎನ್ನುತ್ತಾರೆ ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿ ಡಾ.ಭಾಗರೆಡ್ಡಿ ಬಿಸಿಯಾಗಿ ಊಟ ಮಾಡುವುದು ನೀರನ್ನು ಕಾಯಿಸಿ ಆರಿಸಿದ ನಂತರ ಕುಡಿಯುವುದು ಎಣ್ಣೆಯಲ್ಲಿ ಖರಿದ ತಿಂಡಿ ಮಿತವಾಗಿರಲಿ ಅಥವಾ ಬೇಡ. ಜತೆಗೆ ಬಿಸಿಯಾದ ಉಣ್ಣೆ ಉಡುಪುಗಳನ್ನು ಧರಿಸಬೇಕು ಮತ್ತು ಮಳೆಯಲ್ಲಿ ನೆನೆಯುವುದನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳಿ ಯಾವುದೇ ಕಾರಣಕ್ಕೂ ರಸ್ತೆ ಬದಿಯ ತಿಂಡಿ ಸೇವಿಸದಿರಿ ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.