ಶಹಾಪುರ: ತಾಲ್ಲೂಕಿನ ಕನ್ಯಾಕೊಳ್ಳುರ ಗ್ರಾಮದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಹನುಮ ದೇವರಿಗೆ ಗ್ರಾಮದ ಮುಸ್ಲಿಂ ಸಮುದಾಯದವರು ವಿಶೇಷ ಪೂಜೆ ಸಲ್ಲಿಸಿದರು. ಇದನ್ನು ಹಲವು ವರ್ಷಗಳಿಂದ ಸಂಪ್ರದಾಯ ಹಾಗೂ ವ್ರತದಂತೆ ಪಾಲಿಸಿಕೊಂಡು ಬರುತ್ತಿದ್ದಾರೆ.
‘ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಾರ್ತಿಕ ಮಾಸವನ್ನು ಸಂಭ್ರಮದಿಂದ ಆಚರಿಸುತ್ತಾ ಬರುತ್ತಾರೆ. ಅದರಲ್ಲಿ ಪ್ರತಿ ಶನಿವಾರ ಹನುಮ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಕಾರ್ತಿಕ ಮಾಸದಲ್ಲಿ ಬರುವ ಐದು ಶನಿವಾರಗಳಲ್ಲಿ ಪ್ರತಿ ಶನಿವಾರ ಒಂದೊಂದು ಸಮದಾಯದವರು ದೇವರಿಗೆ ಪೂಜೆ ಹಾಗೂ ಹರಕೆ ಸಲ್ಲಿಸುತ್ತಾರೆ’ ಎನ್ನುತ್ತಾರೆ ಗ್ರಾಮದ ಮುಖಂಡ ಮಲ್ಲಿಕಾರ್ಜುನ ಸಾಹು.
‘ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಅಂದಾಜು 100 ಕುಟುಂಬಗಳಿವೆ. ಶನಿವಾರ ನಾವೆಲ್ಲರೂ ಕೂಡಿ ದೇವರ ಪೂಜೆಗೆ ಬೇಕಾಗುವ ಹೂ, ಹಣ್ಣು, ಕಾಯಿ, ಕರ್ಪೂರ, ವೀಳ್ಯದ ಎಲೆ ಸೇರಿದಂತೆ ಅಗತ್ಯ ಪೂಜಾ ಸಾಮಗ್ರಿಗಳನ್ನು ಖರೀದಿಸಲು ದೇವಸ್ಥಾನದ ಪೂಜಾರಿಗೆ ಕಾಣಿಕೆ ಅರ್ಪಿಸುತ್ತೇವೆ. ಸಂಜೆ ಸಮಯದಲ್ಲಿ ಡೊಳ್ಳು ವಾದ್ಯದೊಂದಿಗೆ ವಿಶೇಷ ಎಲೆಪೂಜೆ ನೆರವೆರಿಸುತ್ತೇವೆ. ಆಗ ನಮ್ಮ ಎಲ್ಲಾ ಮುಸ್ಲಿಂ ಸಮುದಾಯದವರು ಭಾಗವಹಿಸಿ ದೇವರಿಗೆ ದೀಪ ಬೆಳಗಿಸುತ್ತೇವೆ. ನಂತರ ಶಿರಾ ಪ್ರಸಾದ ವ್ಯವಸ್ಥೆ ಇರುತ್ತದೆ. ಇದು ಹಲವು ವರ್ಷಗಳಿಂದ ನಾವೆಲ್ಲರೂ ಕೂಡಿ ಮಾಡುತ್ತಿರುವ ಸಂಪ್ರದಾಯವಾಗಿದೆ. ನಮ್ಮಲ್ಲಿ ಯಾವುದೇ ಜಾತಿ ಮತ್ತು ಧರ್ಮದ ಭೇದಭಾವ ಇಲ್ಲ’ ಎನ್ನುತ್ತಾರೆ ಮುಸ್ಲಿಂ ಸಮುದಾಯದ ಶಕ್ಮೀರ ಗಂಗಾವತಿ, ಕಾಶಿಂಸಾಬ್, ಹುಸೇನ ಪಟೇಲ್, ಸೋಫಿಸಾಬ್ ರಸ್ತಾಪುರ, ಅಜೀಮ ಅವರು.
***
ಸಗರನಾಡು ಮುಸ್ಲಿಂ ಹಾಗೂ ಹಿಂದೂ ಸಮುದಾಯದವರ ಭಾವೈಕ್ಯತೆಯ ತಾಣವಾಗಿದೆ. ಇಂತಹ ಸಂಪ್ರದಾಯ ದೇಶದ ಎಲ್ಲೆಡೆ ಪಸರಿಸಬೇಕು
- ಮಲ್ಲಿಕಾರ್ಜುನ ಕನ್ಯಾಕೊಳ್ಳುರ ಗ್ರಾಮದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.