ಯಾದಗಿರಿ: ವಕ್ಫ್ ಆಸ್ತಿ ಸೇರಿದಂತೆ ಇನ್ನಾವುದೋ ವಿಷಯಗಳಿಗೆ ಸಂಬಂಧಿಸಿದಂತೆ ರೈತರಿಗೆ ಕಿರುಕುಳ ನೀಡಲು ಮುಂದಾದರೆ ಸಹಿಸಲಾಗದು. ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಹೋರಾಟಕ್ಕೆ ಮುಂದಾಗುವುದಾಗಿ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ (ವಾಸುದೇವ ಮೇಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಹಗರಟಗಿ ಸರ್ಕಾರಕ್ಕೆ ಎಚ್ಚರಿಸಿದರು.
ನಗರದ ಹಳೆಯ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ(ವಾಸುದೇವ ಮೇಟಿ ಬಣ)ಯ ಹತ್ತಿಕುಣಿ ಹೋಬಳಿ ಘಟಕ ಮತ್ತು ಹೊನಗೇರಾ ಗ್ರಾಮ ಘಟಕಗಳ ಅಧ್ಯಕ್ಷರ ನೇಮಕಾತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಭಾರತೀಯ ಹತ್ತಿ ನಿಗಮದಿಂದ ಹತ್ತಿ ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಅವುಗಳಿಂದ ರೈತರಿಗೆ ಮಾರಾಟ ಮಾಡಲು ತೊಂದರೆಯಾಗುತ್ತಿದೆ. ಸದ್ಯ ಚಳಿಗಾಲವಾದ್ದರಿಂದ ಮಂಜು ಬೀಳುವುದು ಸಹಜ. ಆದರೆ, ಅಧಿಕಾರಿಗಳು ‘ಹೆಚ್ಚು ತೇವಾಂಶವಿದೆ, ನೀರು ಮಿಶ್ರಣ ಮಾಡಿದ್ದೀರಿ’ ಎಂದು ಹೇಳಿ ಕೆಲ ರೈತರ ಹತ್ತಿಯನ್ನು ಖರೀದಿಸುತ್ತಿಲ್ಲ. ಜತೆಗೆ ಹತ್ತಿ ಬೆಲೆಯನ್ನು ಕಡಿಮೆ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಮತ್ತು ಷರತ್ತುಗಳನ್ನು ಸಡಿಲಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲೆಯ ಹಲವೆಡೆ ಪರವಾನಗಿ ಇಲ್ಲದೆ ರಸ್ತೆ ಬದಿ ಹತ್ತಿ ಹಾಗೂ ಭತ್ತ ಖರೀದಿ ಮಾಡುತ್ತಿರುವ ಕೆಲವರು ‘ಹೆಚ್ಚಿನ ಬೆಲೆಗೆ ತೆಗೆದುಕೊಳ್ಳುವ’ ಆಸೆ ತೋರಿ, ತೂಕದಲ್ಲಿ ಮೋಸ ಮಾಡುತ್ತಿದ್ದಾರೆ. ರೈತರಿಂದ ಖರೀದಿ ಮಾಡಿದ ಬೆಳೆಗೆ ಸಂಪೂರ್ಣ ಹಣ ನೀಡದೆ ತಲೆಮರೆಸಿಕೊಂಡಿದ್ದಾರೆ. ಅಂತವರ ವಿರುದ್ಧ ತೂಕ ಮತ್ತು ಮಾಪನ ಇಲಾಖೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪದಾಧಿಕಾರಿಗಳ ನೇಮಕ: ರಾಜ್ಯ ರೈತ ಸಂಘ, ಹಸಿರು ಸೇನೆಯ ಹತ್ತಿಕುಣಿ ಹೋಬಳಿ ಘಟಕಕ್ಕೆ ಭೀಮರಾಯ ಎಮ್ಮೆನೊರ್(ಅಧ್ಯಕ್ಷ), ಹೊನಗೇರಾ ಗ್ರಾಮ ಘಟಕಕ್ಕೆ ಮಲ್ಲಿಕಾರ್ಜುನ(ಅಧ್ಯಕ್ಷ) ಅವರನ್ನು ನೇಮಕ ಮಾಡಲಾಯಿತು.
ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ವೆಂಕೋಬ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹುಕಾರ, ತಾಲ್ಲೂಕು ಘಟಕದ ಅಧ್ಯಕ್ಷ ಮೈಪಾಲರೆಡ್ಡಿ ಕಟಿಗಿಶಹಾಪುರ, ರೈತ ಮುಖಂಡ ಮಲ್ಲಣ್ಣ ಹುಂಡೆಕಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.