ಯಾದಗಿರಿ: ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಹೆಸರು ಆಕರ್ಷಕವಾಗಿದೆ. ಆದರೆ, ಹೊರಗೆ ಬಣ್ಣ ಒಳಗೆ ಸುಣ್ಣ ಎನ್ನುವಂತೆ ಆಗಿದೆ. ರೋಗಿಯ ಮನೆ ಬಾಗಿಲಿಗೆ ಔಷಧಿ ನೀಡುವ ಕೇಂದ್ರ ಇದಾಗಿದೆ. 4ರಿಂದ 5 ಸಾವಿರ ಜನರಿಗೆ ಒಂದು ಕೇಂದ್ರ ಇರುತ್ತದೆ.
ಯಾದಗಿರಿ–ಗುರುಮಠಕಲ್ ತಾಲ್ಲೂಕಿನಲ್ಲಿ 52, ಶಹಾಪುರ–ವಡಗೇರಾ ತಾಲ್ಲೂಕಿನಲ್ಲಿ 54, ಸುರಪುರ–ಹುಣಸಗಿ ತಾಲ್ಲೂಕಿನಲ್ಲಿ 44 ಸೇರಿದಂತೆ ಜಿಲ್ಲೆಯಲ್ಲಿ 150 ಕೇಂದ್ರಗಳಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರತಿ ಗ್ರಾಮದಲ್ಲೂ ಸರ್ಕಾರಿ ಆಸ್ಪತ್ರೆಯ ಸೇವೆ ಸಿಗಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾದ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿದ್ದು, ಸಮಪರ್ಕವಾಗಿ ಸೇವೆ ಸಿಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಕ್ಷೇತ್ರ ಶಹಾಪುರ ತಾಲ್ಲೂಕಿನಲ್ಲೇ ಬಾಡಿಗೆ ಕಟ್ಟಡದಲ್ಲಿ ಕ್ಷೇಮ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಗ್ರಾಮೀಣ ಭಾಗದಲ್ಲಿ ₹1,500ರಿಂದ ₹5,000 ರ ತನಕ ಕಟ್ಟಡಕ್ಕೆ ಬಾಡಿಗೆ ಪಾವತಿಸಲಾಗುತ್ತಿದೆ. ಯಾದಗಿರಿ–ಗುರುಮಠಕಲ್ ತಾಲ್ಲೂಕಿನಲ್ಲಿ 10, ಶಹಾಪುರ–ವಡಗೇರಾ ತಾಲ್ಲೂಕಿನಲ್ಲಿ 6, ಸುರಪುರ–ಹುಣಸಗಿ ತಾಲ್ಲೂಕಿನಲ್ಲಿ 6 ಬಾಡಿಗೆ ಕಟ್ಟಡಗಳಿವೆ.
ಕಳೆದ 6 ವರ್ಷಗಳಿಂದ ಆರೋಗ್ಯ ಮತ್ತು ಸೌಖ್ಯ ಕೇಂದ್ರ ಎಂದು ಮೊದಲು ಇತ್ತು. ಅದನ್ನು ಈಗ ಬದಲಾವಣೆ ಮಾಡಲಾಗಿದೆ. 15 ಅಂಶಗಳನ್ನು ಕ್ಷೇಮ ಕೇಂದ್ರದಲ್ಲಿ ನಿರ್ವಹಿಸಬೇಕು. ಅದರ ಜೊತೆಗೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು. ಇವುಗಳಲ್ಲಿ ಕೆಲವು ತಮ್ಮ ಊರಿನಲ್ಲಿರುವ ಕೇಂದ್ರ ಇರುವ ಬಗ್ಗೆಯೇ ಜನರಿಗೆ ಮಾಹಿತಿ ಇಲ್ಲದಂತೆ ಕಾರ್ಯನಿರ್ವಹಿಸುತ್ತಿವೆ. ಗ್ರಾಮದ ಮೂಲೆಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿದ್ದು, ಅಲ್ಲಿಗೆ ತೆರಳಲು ಸರಿಯಾದ ರಸ್ತೆಯೂ ಇಲ್ಲ.
‘ಗ್ರಾಮಾಂತರ ಪ್ರದೇಶಗಳ ಜನರ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೂ ಒಳಪಡುವ ಹಳ್ಳಿಗಳಿಗೆ ಉಪಕೇಂದ್ರ ಸ್ಥಾಪಿಸಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆದರೆ, ನೇಮಕ ಮಾಡಿದ ಸಿಬ್ಬಂದಿ ಅಲ್ಲಿ ಕೆಲಸ ಮಾಡಲು ಅವಕಾಶ ನೀಡದೇ ಕೆಲವು ಕಡೆ ತಾಲ್ಲೂಕು ಆಸ್ಪತ್ರೆಗೆ ನಿಯೋಜನೆ ಮಾಡಿರುವ ಪ್ರಕರಣಗಳು ನಡೆದಿವೆ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಯೋಗಾಸನ ಕೇಂದ್ರಗಳಿಲ್ಲ
150 ಕೇಂದ್ರಗಳ ಪೈಕಿ 128 ಕಡೆ ಸರ್ಕಾರಿ ಕಟ್ಟಡದಲ್ಲಿವೆ. 22 ಬಾಡಿಗೆ ಕಟ್ಟಡದಲ್ಲಿವೆ. ಪ್ರತಿ ಶನಿವಾರ ಬೆಳಿಗ್ಗೆ ರೋಗಿಗಳಿಗೆ ಯೋಗಾಭ್ಯಾಸ ಮಾಡಿಸಬೇಕು ಎಂದು ಸರ್ಕಾರದ ಸೂಚನೆಯಿದೆ. ಬಹುತೇಕ ಕಡೆ ಯೋಗಾಭ್ಯಾಸ ಮಾಡಲು ಸ್ಥಳಾವಕಾಶವಿಲ್ಲ. ಹೀಗಾಗಿ ಯೋಗ ಹೇಳಿ ಕೊಡುವ ಯೋಗಗುರುಗಳು ನೇಮಕವಾಗಿಲ್ಲ. ಇಲ್ಲಿ ಸರ್ಕಾರದ ಸೂಚನೆ ಪಾಲನೆಯಾಗುತ್ತಿಲ್ಲ. ಕೆಲವು ಕಡೆ ಪ್ರತಿ ಶನಿವಾರ ಯೋಗಭ್ಯಾಸವನ್ನು ಯೋಗಗುರುಗಳ ಜೊತೆ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ.
ಕೇಂದ್ರದಲ್ಲಿ ಸರಿಯಾದ ಸೌಲಭ್ಯ ಇಲ್ಲ. ಯೋಗಭ್ಯಾಸ ಮಾಡಿಸುವುದು ದೂರದ ಮಾತು ಆಗಿದೆ. ಸಿಬ್ಬಂದಿ ಸರಿಯಾಗಿ ಕರ್ತವ್ಯಕ್ಕೆ ಬರುವುದಿಲ್ಲ ಎನ್ನುವ ಆರೋಪಗಳಿವೆ.
‘ಗರ್ಭಿಣಿಯರ ತಪಾಸಣೆ, ಟಿ.ಬಿ., ಲಸಿಕೆ, ಆರೋಗ್ಯ ತಪಾಸಣೆ, ರಕ್ತ ತಪಾಸಣೆ ಸೇರಿ ಪ್ರತಿ ನಿತ್ಯ ಇಲಾಖೆ ನಿಗದಿಪಡಿಸಿದ 15 ಇಂಡಿಕೇಟರ್‌ಗಳನ್ನು ಭರ್ತಿ ಮಾಡಿ ವರದಿ ಸಲ್ಲಿಸಬೇಕು. 15 ಅಂಶಗಳನ್ನು ಸರಿಯಾಗಿ ಮಾಡಿದರೆ ₹ 8 ಸಾವಿರ ಇನ್ಸೆಂಟಿವ್ ನೀಡಲಾಗುತ್ತಿದೆ. ಶೇ 60ರಿಂದ 70 ಮಾಡಿದರೆ ₹ 6ರಿಂದ 7 ಸಾವಿರ ನೀಡಲಾಗುತ್ತಿದೆ. ಇದು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡುತ್ತಾರೆ.
‘ಶಹಾಪುರ ಮತ್ತು ವಡಗೇರಾ ತಾಲ್ಲೂಕು ಸೇರಿ ನಾಲ್ಕು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಾಲ್ಕು ವರ್ಷದ ಹಿಂದೆ ಸ್ಥಾಪಿಸಿದೆ. ಅಲ್ಲಿ ಕನಿಷ್ಠ ಮೂಲ ಸೌಲಭ್ಯಗಳಿಲ್ಲ. ಇನ್ನೂ ಆರೋಗ್ಯ ಚಿಕಿತ್ಸೆ ಎಂಬುವುದು ಮರೀಚಿಕೆಯಾಗಿದೆ’ ಎಂಬ ಆರೋಪವು ಕೇಳಿ ಬರುತ್ತಲಿದೆ.
‘ಬಡ ಜನತೆಗೆ ಆರೋಗ್ಯ ಭಾಗ್ಯ ಕಲ್ಪಿಸುವ ಯೋಜನೆ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕಾದರೆ ಕೇಂದ್ರಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲದೆ ಅನವಶ್ಯಕವಾಗಿ ಸಾರ್ವಜನಿಕ ಹಣ ಪೋಲಾಗುತ್ತದೆ. ಇದರ ಬಗ್ಗೆ ಹಿರಿಯ ಆರೋಗ್ಯ ಅಧಿಕಾರಿಗಳು ಗಮನಹರಿಸಬೇಕು’ ಎಂಬುವುದು ಜನತೆಯ ಮನವಿಯಾಗಿದೆ.
37 ಉಪ ಆರೋಗ್ಯ ಕೇಂದ್ರಗಳು
ಸುರಪುರ: ತಾಲ್ಲೂಕಿನಲ್ಲಿ 37 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿವೆ. ಅವುಗಳಲ್ಲಿ ಕುಂಬಾರಪೇಟ ಆಲ್ದಾಳ ಕಕ್ಕೇರಾ ಕೆಂಭಾವಿ-ಎ ಕೆಂಭಾವಿ-ಬಿ ಕೆಂಭಾವಿ ಗ್ರಾಮೀಣ ಮತ್ತು ಯಾಳಗಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಗುತ್ತಿಬಸವೇಶ್ವರ ಎಂ.ಬೊಮ್ಮನಳ್ಳಿ ಖಾನಾಪುರ ಎಸ್.ಕೆ. ಶೆಳ್ಳಗಿ ಏವೂರ ಮಾಲಗತ್ತಿ ಕನ್ನಳ್ಳಿ ದೇವಾಪುರ ಕೇಂದ್ರಗಳ ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ದೇವರಗೋನಾಲ ಹಸನಾಪುರ ಲಕ್ಷ್ಮೀಪುರ ಬೈಚಬಾಳ ಮಲ್ಲಾ ಬಿ. ಕೇಂದ್ರಗಳಿಗೆ ಹೊಸ ಕಟ್ಟಡ ಇದೆ. ಇನ್ನು ಕೆಲವು ಕೇಂದ್ರಗಳ ಕಟ್ಟಡಗಳಿಗೆ ದುರಸ್ತಿಯ ಅಗತ್ಯವಿದೆ. ಒಂದು ಉಪಕೇಂದ್ರದಲ್ಲಿ ಒಂದು ನರ್ಸಿಂಗ್ ಹುದ್ದೆ ಒಂದು ಎಎನ್‌ಎಂ ಒಂದು ಆರೋಗ್ಯ ಕಾರ್ಯಕರ್ತೆ ಹುದ್ದೆ ಇವೆ. ಕೆಲ ಕಡೆಗಳಲ್ಲಿ ನರ್ಸಿಂಗ್ ಸಿಬ್ಬಂದಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ.
‘ಸಿಎಚ್‌ಒಗಳ ವಿರುದ್ಧ ದಾವೆ’
ನಾನು ಬರುವುದಕ್ಕಿಂತ ಮುಂಚೆ 5–6 ಸಮುದಾಯ ಆರೋಗ್ಯದ ಅಧಿಕಾರಿ (ಸಿಎಚ್‌ಒ)ಗಳ ಕುರಿತು ನ್ಯಾಯಾಲಯದಲ್ಲಿ ದಾವೆಗಳಿವೆ. ಕೆಲಸ ಮಾಡದ ಕಾರಣ ಅವರನ್ನು ತೆಗೆದು ಹಾಕಲಾಗಿತ್ತು. ನಾನು ಬಂದ ನಂತರ ಇಂಥ ಪ್ರಕರಣಗಳಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭುಲಿಂಗ ಮಾನಕರ ಹೇಳುತ್ತಾರೆ. ಸರ್ಕಾರಿ ಕಟ್ಟಡ ಆಗುವ ತನಕ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಯೋಗಭ್ಯಾಸಕ್ಕೆ ಸಂಬಂಧಿಸಿದಂತೆ ಕೆಲವು ಕಡೆ ಹಾಲ್‌ಗಳಿವೆ. ಇನ್ನೂ ಕೆಲವು ಕಡೆ ಇಲ್ಲ. ಸಿಬ್ಬಂದಿ ಆಶಾ ಕಾರ್ಯಕರ್ತೆಯರಿಂದ ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಕೆಲವು ಕಡೆ ರೋಗಿಗಳು ಬರುತ್ತಿಲ್ಲ ಎಂದು ಹೇಳಿದರು.
ಶಹಾಪುರ ಮತ್ತು ವಡಗೇರಾ ತಾಲ್ಲೂಕಿನ ನಾಲ್ಕು ಕೇಂದ್ರಗಳು ಬಾಡಿಗೆ ಮನೆಯಲ್ಲಿ ನಡೆಯುತ್ತವೆ. ಜಾಗದ ಸಮಸ್ಯೆ ಬಗೆಹರಿಸಿದೆ. ತ್ವರಿತವಾಗಿ ಕಟ್ಟಡ ನಿರ್ಮಿಸಲಾಗುವುದುಡಾ.ರಮೇಶ ಗುತ್ತೆದಾರ, ತಾಲ್ಲೂಕು ವೈದ್ಯಾಧಿಕಾರಿ
ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರೆಯನ್ನು ಕಡಿಮೆ ಮಾಡುತ್ತವೆ. ಕಟ್ಟಡ ಇಲ್ಲದ ಕೇಂದ್ರಗಳಿಗೆ ದುರಸ್ತಿ ಇರುವ ಕಟ್ಟಡಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆಡಾ. ರಾಜಾ ವೆಂಕಟಪ್ಪನಾಯಕ, ಟಿಎಚ್‌ಒ, ಸುರಪುರ
ಕೆಲ ಆರೋಗ್ಯ ಉಪಕೇಂದ್ರಗಳು ಸಿಬ್ಬಂದಿಯ ಮನೆಗಳಾಗಿವೆ. ಅಲ್ಲಿ ಸಮರ್ಪಕ ಚಿಕಿತ್ಸೆ ದೊರೆಯುವುದಿಲ್ಲ. ಹೀಗಾಗಿ ಈ ಯೋಜನೆ ಸಫಲವಾಗುತ್ತಿಲ್ಲ.ವೆಂಕಟೇಶನಾಯಕ ಭೈರಿಮಡ್ಡಿ, ಕರವೇ ತಾಲ್ಲೂಕು ಸಮಿತಿ ಅಧ್ಯಕ್ಷ
ಸಿಎಚ್‌ಒ ಹುದ್ದೆಗಳ ಮಾಹಿತಿ
ಭರ್ತಿ;144 ಖಾಲಿ: 06 ಒಟ್ಟು;150
ಯಾದಗಿರಿ;52 ಭರ್ತಿ; 50 ಖಾಲಿ: 02
ಶಹಾಪುರ: 54 ಹುದ್ದೆ;53 ಖಾಲಿ;01
ಸುರಪುರ; 44 ಭರ್ತಿ;41 ಖಾಲಿ:03
ತಾಲ್ಲೂಕುವಾರು ಬಾಡಿಗೆ ಕಟ್ಟಡ
ಯಾದಗಿರಿ;10
ಶಹಾಪುರ; 06
ಸುರಪುರ;06
ಒಟ್ಟು ಸರ್ಕಾರಿ ಕಟ್ಟಡ:128
ಒಟ್ಟು ಬಾಡಿಗೆ ಕಟ್ಟಡ; 22
ಆಧಾರ: ಆರೋಗ್ಯ ಇಲಾಖೆ
ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.